ಕನ್ನಡ ಸುದ್ದಿ  /  Nation And-world  /  Sabarimala Pilgrimage 2022: Mandal Puja At Sabarimala From Tomorrow Till December 27; Online Booking Is Mandatory; What Else Is Special

Sabarimala pilgrimage 2022: ಶಬರಿಮಲೆಯಲ್ಲಿ ನಾಳೆಯಿಂದ ಡಿ.27ರ ತನಕ ಮಂಡಲ ಪೂಜೆ; ಆನ್‌ಲೈನ್ ಬುಕ್ಕಿಂಗ್‌ ಕಡ್ಡಾಯ; ಮತ್ತೇನಿದೆ ವಿಶೇಷ?

Sabarimala pilgrimage 2022: ಶಬರಿಮಲೆ ತೀರ್ಥಯಾತ್ರೆಯ ಮತ್ತೊಂದು ಋತು ನಾಳೆಯಿಂದ ಶುರು. ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಬಾಗಿಲು ನಾಳೆ ತೆರೆಯಲಿದೆ.

ಶಬರಿಮಲೆ ಅಯ್ಯಪ್ಪ ಸನ್ನಿಧಾನ
ಶಬರಿಮಲೆ ಅಯ್ಯಪ್ಪ ಸನ್ನಿಧಾನ (PTI)

ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಾನದ ಬಾಗಿಲು ನಾಳೆ ತೆರೆಯಲಿದೆ. ನಾಳೆ ಸಂಜೆ ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ (ತಂತ್ರಿ) ಕಂದರಾರು ರಾಜೀವರು ಉಪಸ್ಥಿತಿಯಲ್ಲಿ ನಿರ್ಗಮಿತ ಪ್ರಧಾನ ಅರ್ಚಕ ಎನ್.ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯನ್ನು ತೆರೆಯುವರು. ಇದರ ನಂತರ ಉಪದೇವತಾ ದೇವಾಲಯಗಳನ್ನು ತೆರೆಯಲಾಗುತ್ತದೆ ಮತ್ತು ಪವಿತ್ರ ಬೆಳಕಿನ ಮೂಲಕ ದೀಪ ಉರಿಸಲಾಗುತ್ತದೆ.

ಮಂಡಲ ಪೂಜೆಯ 41 ದಿನಗಳ ಮಂಡಲ ವ್ರತಾಚರಣೆ ನಾಳೆ ಶುರುವಾಗುತ್ತದೆ. ಮಲಯಾಳ ಕ್ಯಾಲೆಂಡರ್‌ ಪ್ರಕಾರ ಹೇಳುವುದಾದರೆ ವೃಶ್ಚಿಕ ಮಾಸದ ಮೊದಲ ದಿನ ಮಂಡಲ ವ್ರತಾಚರಣೆ ಶುರುವಾದರೆ ಧನು ಮಾಸದ 11ನೇ ದಿನ ವ್ರತಾಚರಣೆ ಸಂಪನ್ನವಾಗುತ್ತದೆ. ಸಾಮಾನ್ಯ ಕ್ಯಾಲೆಂಡರ್‌ ಪ್ರಕಾರ ನ.16ರಿಂದ ಡಿ.27ರ ರಾತ್ರಿ 10ರ ತನಕ ಮಂಡಲ ವ್ರತಾಚರಣೆ. ಬಳಿಕ ಎರಡು ದಿನ ವಿರಾಮ. ಮಕರ ಜ್ಯೋತಿ ಉತ್ಸವಕ್ಕಾಗಿ ಡಿ.30ರಂದು ಮುಂಜಾನೆ ದೇಗುಲದ ಬಾಗಿಲು ತೆರೆದರೆ ಜನವರಿ 20 ತನಕ ಉತ್ಸವ ನಡೆಯಲಿದೆ. ಜನವರಿ 14ರಂದು ಮಕರ ಜ್ಯೋತಿ ಕಾಣಲಿದೆ.

ಎಲ್ಲ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಇದೇ ಮೊದಲ ತೀರ್ಥಯಾತ್ರೆಯ ಋತುವಾಗಿದೆ. ಆದರೆ, ಆನ್‌ಲೈನ್‌ ಮೂಲಕ ಬುಕ್ ಮಾಡದವರಿಗೆ ಈ ಬಾರಿ ಶಬರಿಮಲೆಗೆ ಪ್ರವೇಶವಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬುಕಿಂಗ್ ಅನ್ನು ಆನ್‌ಲೈನ್ ಮತ್ತು ಸ್ಪಾಟ್ ಬುಕಿಂಗ್ ಕೌಂಟರ್‌ಗಳಲ್ಲಿ ಮಾಡಬಹುದು. ಕೆಎಸ್‌ಆರ್‌ಟಿಸಿಯ 500 ಬಸ್‌ಗಳು ಕಾರ್ಯನಿರ್ವಹಿಸಲಿವೆ. ಪಂಪಾ-ನಿಲಕ್ಕಲ್ ಮಾರ್ಗದಲ್ಲಿ ಪ್ರತಿ ನಿಮಿಷಕ್ಕೆ 200 ಬಸ್‌ಗಳು ಸಂಚರಿಸಲಿವೆ.

ಶಬರಿಮಲೆಯಲ್ಲಿ ಭದ್ರತೆಗಾಗಿ ಒಟ್ಟು 13,000 ಪೊಲೀಸರನ್ನು ನಿಯೋಜಿಸಲಾಗುವುದು. ಸನ್ನಿಧಾನಂ, ಪಂಪಾ, ನಿಲಕ್ಕಲ್ ಮತ್ತು ಎರುಮೇಲಿಯಲ್ಲಿ 134 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಿಲ್ದಾಣಗಳಲ್ಲೂ ವಿಶೇಷ ಭದ್ರತಾ ವ್ಯವಸ್ಥೆ ಇರಲಿದೆ. ಪಂಪಾ ಮತ್ತು ಸನ್ನಿಧಾನಂನಲ್ಲಿ 18 ತುರ್ತು ವೈದ್ಯಕೀಯ ಕೇಂದ್ರಗಳನ್ನು (ಇಎಂಸಿ) ಸ್ಥಾಪಿಸಲಾಗುತ್ತಿದೆ. ಪಂಪಾ, ಸನ್ನಿಧಾನಂ ಮತ್ತು ನಿಲಕ್ಕಲ್‌ನಲ್ಲಿ 2445 ಶೌಚಾಲಯಗಳನ್ನು ಸಿದ್ಧಪಡಿಸಲಾಗಿದೆ. 1200 ಪಾವಿತ್ರ್ಯ ಸಿಬ್ಬಂದಿಯಲ್ಲದೆ ಸುಮಾರು 200 ಜನರನ್ನು ಸ್ವಚ್ಛತೆಗೆ ನಿಯೋಜಿಸಲಾಗಿದೆ.

ನೀಲಿಮಲೆ ನವೀಕೃತ ಕಾಲುದಾರಿ ಗುರುವಾರ ಲೋಕಾರ್ಪಣೆ

ಕೇಂದ್ರ ಸರ್ಕಾರದ ತೀರ್ಥಯಾತ್ರೆ ಪ್ರವಾಸೋದ್ಯಮ ಯೋಜನೆಯಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲಿಮಲೆ ಕಾಲುದಾರಿಯನ್ನು ನವೀಕರಿಸಲಾಗಿದೆ. ಏಳು ಮೀಟರ್ ಅಗಲದಲ್ಲಿ 2750 ಮೀಟರ್ ದೂರದಲ್ಲಿ ಕಲ್ಲು ಹಾಕಲಾಗಿದೆ. ಇದನ್ನು ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ಗುರುವಾರ ಉದ್ಘಾಟಿಸಲಿದ್ದಾರೆ.

ನೀಲಿಮಲೆ ಬೆಟ್ಟದ ಸಾಂಪ್ರದಾಯಿಕ ದಾರಿಯಲ್ಲಿ ಸಾಗಿದರೆ ಅಪ್ಪಾಚಿಮೇಡ್, ಶಬರಿಪೀಠ ಮತ್ತು ಸಾರಕುತಿ ನಂತರ ಮರಕೂಟ್ಟಂ ಮೂಲಕ ಸನ್ನಿಧಾನ ಸೇರಬಹುದು. ಕಾಲುದಾರಿ ನವೀಕರಣಕ್ಕೆ ಕರ್ನಾಟಕದ ಸಾದರಹಳ್ಳಿ ಮತ್ತು ಹೊಸೂರಿನಿಂದ ಕಲ್ಲುಗಳನ್ನು ತರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ವರ್ಚುವಲ್ ಕ್ಯೂಗಾಗಿ ಸ್ಪಾಟ್ ಬುಕಿಂಗ್

ಕೇರಳದಲ್ಲಿ ಇನ್ನೂ ಐದು ಜಿಲ್ಲೆಗಳಲ್ಲಿ ಶಬರಿಮಲೆ ಯಾತ್ರಾರ್ಥಿಗಳಿಗೆ ವರ್ಚುವಲ್ ಕ್ಯೂಗಾಗಿ ಸ್ಪಾಟ್ ಬುಕಿಂಗ್ ಲಭ್ಯವಿದೆ. ತ್ರಿಶೂರ್, ಪಾಲಕ್ಕಾಡ್, ಕೋಯಿಕ್ಕೋಡ್, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಈ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗುವುದು ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ ಅನಂತಗೋಪನ್ ತಿಳಿಸಿದ್ದಾರೆ

ಪ್ರಸ್ತುತ, ಶ್ರೀಕಂಠೇಶ್ವರಂ, ಕೊಟ್ಟಾರಕ್ಕರ, ನಿಲಕ್ಕಲ್, ಪಂದಳಂ, ಎರುಮೇಲಿ, ಎಟ್ಟುಮನೂರ್, ವೈಕೋಂ, ಪೆರುಂಬವೂರ್, ಕೀಜಿಲ್ಲಂ, ಕುಮಲಿ, ವಲಿಯನವಟ್ಟಂ, ವಂಡಿಪೆರಿಯಾರ್ ಮತ್ತು ಚೆಂಗನ್ನೂರುಗಳಲ್ಲಿ ಸ್ಪಾಟ್ ಬುಕಿಂಗ್ ಲಭ್ಯವಿದೆ.

ನೀಲಕ್ಕಲ್ ಒಂದರಲ್ಲೇ 10 ಹೊಸ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು. ಆರು ವರ್ಷದೊಳಗಿನ ಮಕ್ಕಳಿಗೆ ಬುಕಿಂಗ್ ಅಗತ್ಯವಿಲ್ಲ. ಭಕ್ತಾದಿಗಳು ತಮ್ಮ ಗುರುತಿನ ಚೀಟಿಯನ್ನು ಬುಕಿಂಗ್‌ಗಾಗಿ ಕೊಂಡೊಯ್ಯಬೇಕು. ಬುಕ್ಕಿಂಗ್ ದಾಖಲೆಗಳನ್ನು ಪಂಪಾ ಆಂಜನೇಯ ಸಭಾಂಗಣದಲ್ಲಿ ಪೊಲೀಸರು ಪರಿಶೀಲಿಸಲಿದ್ದಾರೆ.

IPL_Entry_Point