Sabarimala Revenue: ಶಬರಿಮಲೆ ದೇವಾಲಯದ ಮಂಡಲ, ಮಕರವಿಳಕ್ಕು ಸೀಸನ್ ಆದಾಯ 80 ಕೋಟಿ ರೂಪಾಯಿ ಹೆಚ್ಚಳ
Sabarimala Revenue: ಶಬರಿಮಲೆಯಲ್ಲಿ ಪ್ರಸಕ್ತ ಸಾಲಿನ ಮಂಡಲ-ಮಕರವಿಳಕ್ಕು ಉತ್ಸವ ಸಂಪನ್ನಗೊಂಡಿದ್ದು, ಮಂಡಲ ಪೂಜೆ ಮತ್ತು ಮಕರವಿಳಕ್ಕು ಸೀಸನ್ ಆದಾಯ 80 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಪತ್ತನಂತಿಟ್ಟ: ಕೇರಳದ ಪ್ರಸಿದ್ಧ ಹಿಂದೂ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಪ್ರಸಕ್ತ ಸಾಲಿನ ಮಂಡಲ-ಮಕರವಿಳಕ್ಕು ಉತ್ಸವ ಸಂಪನ್ನಗೊಂಡಿದ್ದು, ದೇಗುಲದ ಬಾಗಿಲು ಮುಚ್ಚಿದೆ. ಈ ಸೀಸನ್‌ನಲ್ಲಿ ಶಬರಿಮಲೆ ದೇವಾಲಯದ ಒಟ್ಟು ಆದಾಯವು ಕಳೆದ ಸೀಸನ್‌ಗಿಂತ 80 ಕೋಟಿ ರೂಪಾಯಿ ಹೆಚ್ಚು ಎಂದು ಕೇರಳದ ದೇವಸ್ವಂ ಸಚಿವ ವಿ ಎನ್ ವಾಸವನ್ ಹೇಳಿದ್ದಾರೆ.
ಶಬರಿಮಲೆ ದೇವಾಲಯದ ಮಂಡಲ, ಮಕರವಿಳಕ್ಕು ಸೀಸನ್ ಆದಾಯ 80 ಕೋಟಿ ರೂಪಾಯಿ ಹೆಚ್ಚಳ
ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ ಮಂಡಲಪೂಜೆ ಮತ್ತು ಮಕರ ವಿಳಕ್ಕು ಉತ್ಸವ ಸಂಪನ್ನಗೊಂಡು ದೇಗುಲದ ಬಾಗಿಲು ಮುಚ್ಚಿದೆ. ಪ್ರಸಕ್ತ ಸಾಲಿನ ಮಂಡಲ, ಮಕರವಿಳಕ್ಕು ಸೀಸನ್ ಅಂದರೆ 2024ರ ನವೆಂಬರ್ 15 ರಿಂದ 2025ರ ಜನವರಿ 20ರ ತನಕದ ಒಟ್ಟು ಆದಾಯ 440 ಕೋಟಿ ರೂಪಾಯಿ. ಇದು ಕಳೆದ ಸೀಸನ್‌ಗಿಂತ 80 ಕೋಟಿ ರೂಪಾಯಿ ಅಧಿಕ ಎಂದು ದೇವಸ್ವಂ ಸಚಿವ ವಿ ಎನ್ ವಾಸವನ್ ತಿಳಿಸಿದ್ದಾರೆ.
ಭಕ್ತರ ಸಂಖ್ಯೆಯೂ ಹೆಚ್ಚಳವಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ 6 ಲಕ್ಷ ಹೆಚ್ಚು ಭಕ್ತರು ಈ ಬಾರಿ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪ ದರ್ಶನ ಪಡೆದಿದ್ದಾರೆ. ನಿತ್ಯವೂ ಸರಾಸರಿ 1 ಲಕ್ಷ ಮೇಲ್ಪಟ್ಟು ಭಕ್ತರು ಬಂದಿದ್ದರು. ಉತ್ಸವ ದಿನಗಳಲ್ಲಿ ಗರಿಷ್ಠ 1.8 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ ಎಂದು ದೇವಸ್ವಂ ಸಚಿವ ವಿ ಎನ್ ವಾಸವನ್ ತಿಳಿಸಿದ್ದಾರೆ.
ನಿಮಿಷಕ್ಕೆ ಹದಿನೆಂಟು ಮೆಟ್ಟಿಲೇರಿದ 80-90 ಭಕ್ತರು
ಶಬರಿಮಲೆ ಅಯ್ಯಪ್ಪ ಸನ್ನಿದಾನ ಪ್ರವೇಶಕ್ಕೆ ಇರುವ ಪವಿತ್ರವಾದ 18 ಮೆಟ್ಟಿಲುಗಳ ನಿರ್ವಹಣೆ ಸುಧಾರಣೆ ಕಂಡಿದೆ. ಕಳೆದ ಬಾರಿ ಪ್ರತಿ ನಿಮಿಷಕ್ಕೆ 65 ಭಕ್ತರು ಮೆಟ್ಟಿಲೇರಿದ್ದರು. ಈ ಬಾರಿ 80 ರಿಂದ 90 ಅಯ್ಯಪ್ಪ ಭಕ್ತರು ಪವಿತ್ರ ಹದಿನೆಂಟು ಮೆಟ್ಟಿಲು ಏರಿದ್ದಾರೆ. ಹಿಂದಿನ ಸಲದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಕಾರ್ಯವಿಧಾನದಲ್ಲಿ ಸುಧಾರಣೆ ತರುವುದಕ್ಕಾಗಿ ಅನುಭವಿ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಅವರು ಸುಗಮ ಮತ್ತು ದೂರು ಮುಕ್ತ ನಿರ್ವಹಣೆ ಮಾಡಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಮಂಡಲ, ಮಕರವಿಳಕ್ಕು ಸೀಸನ್‌ನಲ್ಲಿ ಅತ್ಯುತ್ತಮ ಕಾರ್ಯಸಾಧನೆ ತೋರಿದ ಅಧಿಕಾರಿ, ಸಿಬ್ಬಂದಿಯನ್ನು ಗೌರವಿಸಿತು.
