ಭಾರತದ ಈ ರೈಲು ಬಹಳ ವಿಶೇಷ, ಇದರಲ್ಲಿ ಉಪಾಹಾರ, ಊಟ ಉಚಿತ, ಖರ್ಚು ವೆಚ್ಚ ಭರಿಸೋದು ಭಾರತೀಯ ರೈಲ್ವೆ ಅಲ್ಲ, ಇನ್ಯಾರು, ಇಲ್ಲಿದೆ ಆ ವಿವರ
Sachkhand Express: ಭಾರತದ ಈ ರೈಲು ಬಹಳ ವಿಶೇಷ, ನಾಂದೇಡ್ ಮತ್ತು ಅಮೃತಸರ ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುವ ಈ ರೈಲಿನಲ್ಲಿ ಉಪಾಹಾರ, ಊಟ ಉಚಿತವಾಗಿ ಪೂರೈಕೆಯಾಗುತ್ತದೆ. ಖರ್ಚು ವೆಚ್ಚ ಭರಿಸೋದು ಭಾರತೀಯ ರೈಲ್ವೆ ಅಲ್ಲ, ಇನ್ಯಾರು ಎಂಬ ಕುತೂಹಲವೇ. ಇಲ್ಲಿದೆ ನೋಡಿ ವಿವರ.

Sachkhand Express: ಭಾರತದ ರೈಲಿನಲ್ಲಿ ಉಪಾಹಾರ, ಊಟ ಉಚಿತವಾಗಿ ನೀಡಲಾಗುತ್ತಿದೆ ಎಂಬ ವಿಚಾರ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿದೇಶಿಯರೊಬ್ಬರು ಈ ವಿಡಿಯೋ ಹಂಚಿಕೊಂಡ ಕಾರಣ ಇದ್ಯಾವ ರೈಲು ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಅವರು ಈ ವ್ಯವಸ್ಥೆಯಿಂದ ಬಹಳ ಪ್ರಭಾವಿತರಾಗಿ ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಸಚ್‌ಖಂಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಚಾಲ್ತಿಯಲ್ಲಿರುವ ವ್ಯವಸ್ಥೆ. ದರಲ್ಲಿ ಉಪಾಹಾರ, ಊಟ ಉಚಿತ ಎಂಬುದು ಸತ್ಯ. ಆದರೆ ಈ ಉಚಿತ ಊಟೋಪಹಾರ ಪೂರೈಕೆಯ ಖರ್ಚು ವೆಚ್ಚಗಳನ್ನು ಭರಿಸುತ್ತಿರುವುದು ಭಾರತೀಯ ರೈಲ್ವೆ ಅಲ್ಲ. ಇನ್ಯಾರು ಎಂಬ ಕುತೂಹಲ ತಣಿಸುವ ಪ್ರಯತ್ನ ಇದು.
ಭಾರತದ ಈ ರೈಲು ಬಹಳ ವಿಶೇಷ, ಇದರಲ್ಲಿ ಉಪಾಹಾರ, ಊಟ ಉಚಿತ
ಭಾರತೀಯ ರೈಲ್ವೆಯಲ್ಲಿ ಅಗ್ಗದ ದರದಲ್ಲಿ ಉತ್ತಮ ಆಹಾರ ಪೂರೈಸುವ ವ್ಯವಸ್ಥೆ ಇದೆ. ಐಆರ್‌ಸಿಟಿಸಿ ಮತ್ತು ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯವಾಗಿ ಹಾಗೂ ಫುಡ್ ಆಪ್‌ಗಳ ಮೂಲಕ ಆಹಾರ ಪೂರೈಕೆ ಆಗುತ್ತಿರುವುದು ಗೊತ್ತೇ ಇದೆ. ಆದರೆ, ಈ ಒಂದು ರೈಲಿನಲ್ಲಿ ಮಾತ್ರ ಉಚಿತವಾಗಿ ಊಟ, ಉಪಾಹಾರ ಪೂರೈಕೆಯಾಗುತ್ತದೆ.
ಈ ರೈಲಿನ ಹೆಸರು ಸಚ್‌ಖಂಡ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12715). ಈ ರೈಲು ಮಹಾರಾಷ್ಟ್ರದ ನಾಂದೇಡ್ ಮತ್ತು ಪಂಜಾಬ್‌ನ ಅಮೃತಸರ ನಡುವೆ ಚಲಿಸುತ್ತದೆ. ಧಾರ್ಮಿಕ ಪ್ರಾಮುಖ್ಯವನ್ನು ಗಮನಿಸುವುದಾದರೆ ಸಿಖ್ಖರ ಪಾಲಿಗೆ ಇವೆರಡೂ ಪುಣ್ಯ ಕ್ಷೇತ್ರಗಳು. ಈ ರೈಲು ಅಮೃತಸರದ ಶ್ರೀ ಹರ್ಮಂದರ್ ಸಾಹಿಬ್ ಗುರುದ್ವಾರ ಮತ್ತು ನಾಂದೇಡ್ನ ಶ್ರೀ ಹಜೂರ್ ಸಾಹಿಬ್ ಗುರುದ್ವಾರ ನಡುವಿನ ಸಂಪರ್ಕ ಕೊಂಡಿಯಾಗಿ ಸಂಚರಿಸುತ್ತದೆ. 1995ರಲ್ಲಿ ವಾರಕ್ಕೊಮ್ಮೆ ಈ ರೈಲು ಸಂಚರಿಸುತ್ತಿತ್ತು. ನಂತರ ವಾರಕ್ಕೆ ಎರಡು ದಿನ ಆಯಿತು. 1997-98ರಲ್ಲಿ ಇದನ್ನು ಐದು ದಿನಗಳ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲನ್ನಾಗಿ ಬದಲಾಯಿಸಲಾಯಿತು. 2007ರಿಂದೀಚೆಗೆ ನಿತ್ಯ ಸಂಚಾರದ ರೈಲಾಗಿ ಇದು ಮಾರ್ಪಾಡಾಗಿದೆ.
ಸಚ್‌ಖಂಡ್ ಎಕ್ಸ್‌ಪ್ರೆಸ್ : 6 ನಿಲ್ದಾಣಗಳಲ್ಲಿ ಉಚಿತ ಊಟ ಉಪಾಹಾರ
ಈ ರೈಲು ತನ್ನ ಪ್ರಯಾಣದ ನಡುವೆ 39 ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಈ ಪೈಕಿ ಆರು ಪ್ರಮುಖ ನಿಲ್ದಾಣಗಳು. ನವದೆಹಲಿ, ಭೋಪಾಲ್, ಫರ್ಬಾನಿ, ಜಲ್ನಾ, ಔರಂಗಾಬಾದ್, ಮರಾಠಾವಾಡ ನಿಲ್ದಾಣಗಳವು. ಈ ಆರು ನಿಲ್ದಾಣಗಳಲ್ಲಿ ರೈಲು ನಿಂತಾಗ, ತಮ್ಮ ಊಟ, ಉಪಾಹಾರದ ಥಾಲಿಯನ್ನು ತಾವೇ ತೆಗೆದುಕೊಂಡು ಬರುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗುತ್ತದೆ. ಕಳೆದ 30 ವರ್ಷಗಳಿಂದ ಈ ಸೌಲಭ್ಯ ಈ ರೈಲಿನ ಪ್ರಯಾಣಿಕರಿಗೆ ಸಿಗುತ್ತಿದೆ.
ಸಚ್‌ಖಂಡ್ ಎಕ್ಸ್‌ಪ್ರೆಸ್‌ನಲ್ಲಿ ಈ ಉಚಿತ ಊಟ, ಉಪಾಹಾರ ಶುರುವಾದುದು ಹೇಗೆ
ಸಚ್‌ಖಂಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಚಿತ ಊಟ, ಉಪಾಹಾರ ವ್ಯವಸ್ಥೆ ಶುರುವಾದುದು ಹೇಗೆ ಎಂಬ ಕುತೂಹಲ ಸಹಜ. ನಾಂದೇಡ್‌ನ ಸ್ಥಳೀಯ ಸಿಖ್ ಉದ್ಯಮಿ ಈ ಉಚಿತ ಊಟ, ಉಪಾಹಾರ ಪೂರೈಸುವ ವ್ಯವಸ್ಥೆ ಶುರುಮಾಡಿದರು. ನಂತರದಲ್ಲಿ ಗುರುದ್ವಾರವೇ ಸ್ವತಃ ಈ ಸೇವೆಯನ್ನು ತಾನೇ ಶುರುಮಾಡಿತು. ಪ್ರತಿ ನಿತ್ಯ ಸುಮಾರು 2000 ಪ್ರಯಾಣಿಕರಿಗೆ ಊಟ, ಉಪಾಹಾರವನ್ನು ಗುರುದ್ವಾರವೇ ಉಚಿತವಾಗಿ ಪೂರೈಸುತ್ತಿದೆ. ಈ ಊಟ, ಉಪಾಹಾರಗಳು ಸಿಖ್ ಆಹಾರ ಪದ್ಧತಿಯವಾಗಿದ್ದು, ಸಸ್ಯಾಹಾರವಾಗಿರುತ್ತದೆ. ಪಲ್ಯ, ಅನ್ನ, ಬೇಳೆಕಾಳು, ಚಪಾತಿ ಮತ್ತು ತರಕಾರಿ ಭಕ್ಷ್ಯಗಳನ್ನು ಒಳಗೊಂಡಿದೆ. ಹೀಗಾಗಿ, ಭಾರತೀಯ ರೈಲ್ವೆಯ ರೈಲು ಪ್ರಯಾಣಿಕರಿಗೆ ಸಚ್‌ಖಂಡ್ ಎಕ್ಸ್‌ಪ್ರೆಸ್‌ನಲ್ಲಿ ಲಭ್ಯವಿರುವ ಈ ಉಚಿತ ಊಟ, ಉಪಾಹಾರಗಳ ಆಹಾರ ಪೂರೈಕೆ ಸೌಲಭ್ಯ ಕುತೂಹಲದ ವಿಚಾರವಾಗಿದೆ.
