ಬಾಹ್ಯಾಕಾಶದಲ್ಲಿ ಸಮೋಸಾ: ಸುನಿತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಸಮೋಸಾ ಕೊಂಡೊಯ್ದಿದ್ದರು, ಕಲ್ಪನಾ ಚಾವ್ಲಾ ಹಿಂಜರಿದುದೇಕೆ
Samosas in Space: ಗಗನಯಾನಕ್ಕೆ ಹೋಗುವ ಗಗನಯಾತ್ರಿಗಳು ಕೆಲವು ತಿಂಗಳು ಬಾಹ್ಯಾಕಾಶದಲ್ಲಿ ಉಳಿಯುವ ಕಾರಣ ಆಹಾರ ಕೊಂಡೊಯ್ಯಬೇಕಾಗುತ್ತದೆ. ಸುನಿತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಸಮೋಸಾ ಕೊಂಡೊಯ್ದಿದ್ದರು. ಆದರೆ ಈ ಹಿಂದೆ ಕಲ್ಪನಾ ಚಾವ್ಲಾ ಕೊಂಡೊಯ್ದಿರಲಿಲ್ಲ. ಕಾರಣ ಮತ್ತು ವಿವರ ಇಲ್ಲಿದೆ.

Samosas in Space: ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬ್ಯಾರಿ 'ಬುಚ್' ಇ. ವಿಲ್ಮೋರ್ ಅವರು ಭೂಮಿಗೆ ಮರುಳುವುದನ್ನೇ ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಎರಡು ದಿನದ ಮಟ್ಟಿಗೆ ಮುಂದೂಡಲ್ಪಟ್ಟ ಅವರ ಪ್ರಯಾಣ ಇಂದು (ಮಾರ್ಚ್ 14) ಶುರುವಾಗಲಿದ್ದು ಮಾರ್ಚ್ 19 ರಂದು ಭೂಮಿಗೆ ತಲುಪಲಿದ್ದಾರೆ. ಹೀಗಾಗಿ ಈ ಹೊತ್ತು ಬಹಳ ಮಹತ್ವದ್ದು. ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತೀಯ ಮೂಲದವರ ಸಾಧನೆ ಗಮನಾರ್ಹ. ಸುನೀತಾ ವಿಲಿಯಮ್ಸ್ ಅವರಂತೆಯೇ ಕಲ್ಪನಾ ಚಾವ್ಲಾ ಅವರು ಕೂಡ ಗಗನಯಾನ ಮಾಡಿದ್ದರು. ಸುನೀತಾ ವಿಲಿಯಮ್ಸ್ ಹಾಗೂ ಕಲ್ಪನಾ ಚಾವ್ಲಾ ಅವರ ನಡುವೆ ಒಂದು ಸಾಮ್ಯತೆ ಇದೆ. ಇಬ್ಬರೂ ಭಾರತೀಯ ಆಹಾರ ಪ್ರಿಯರು ಎಂಬುದು.
ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಒಲವು ನಿಲುವು
ಕಲ್ಪನಾ ಚಾವ್ಲಾ ಅವರು ತಮ್ಮ ಜೀವಮಾನದ ಕನಸನ್ನು 1997ರಲ್ಲಿ ನನಸು ಮಾಡಿಕೊಂಡು, ಬಾಹ್ಯಾಕಾಶ ಯಾನ ಕೈಗೊಂಡ ಭಾರತೀಯ ಸಂಜಾತೆ ಎಂಬ ಕೀರ್ತಿಗೆ ಭಾಜನರಾದರು. ಒಂದು ವರ್ಷದ ಬಳಿಕ 1998ರಲ್ಲಿ ಸುನೀತಾ ವಿಲಿಯಮ್ಸ್ ಕೂಡ ನಾಸಾ ಗಗನಯಾನಿಯಾಗಿ ಆಯ್ಕೆಯಾದರು. ಹಲವು ಬಾರಿ ಗಗನಯಾನ ಕೈಗೊಂಡರು. ಇವರಿಬ್ಬರ ನಡುವೆ ಸಾಮ್ಯತೆಗಳೂ ವೈರುಧ್ಯಗಳೂ ಇವೆ. ವಿಶೇಷವಾಗಿ ಅವರ ಬಾಹ್ಯಾಕಾಶಾ ವೃತ್ತಿಜೀವನವನ್ನು ಮೀರಿ, ಸುನೀತಾ ವಿಲಿಯಮ್ಸ್ ಮತ್ತು ಕಲ್ಪನಾ ಚಾವ್ಲಾ ಆಹಾರದ ವಿಚಾರದಲ್ಲಿ ಸಮಾನ ಆಸಕ್ತಿ ಹೊಂದಿದ್ದರು. ಇಬ್ಬರಿಗೂ ಸಮೋಸಾ ಇಷ್ಟ.
ಬಾಹ್ಯಾಕಾಶಕ್ಕೂ ತಲುಪಿತು ಸುನಿತಾ ವಿಲಿಯಮ್ಸ್ ಅವರ ಸಮೋಸಾ ಪ್ರೀತಿ
ಸದ್ಯ, ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭೂಮಿಗೆ ಹಿಂದಿರುಗುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಹೇಳಿದಂತೆ ಈ ಹಂತದಲ್ಲಿ ನೆನಪಾದ ವಿಷಯಗಳ ಪೈಕಿ ಸಮೋಸಾ ಮುಖ್ಯವಾದುದು. ಸುನಿತಾ ವಿಲಿಯಮ್ಸ್ ಅವರು ತಮ್ಮ ಮೊದಲ ಗಗನಯಾನ (2006) ಮುಗಿಸಿ ಬಂದ ವೇಳೆ, ಭಾರತೀಯ ಆಹಾರ ಕುರಿತಾದ ಒಲವನ್ನು ವ್ಯಕ್ತಪಡಿಸಿದ್ದರು. ಮುಂದೆ ಗಗನಯಾನಕ್ಕೆ ಸಮೋಸಾ ಕೊಂಡೊಯ್ಯುವುದನ್ನು ಖಾತರಿ ಮಾಡಿಕೊಳ್ಳುವೆ ಎಂದು ಹೇಳಿದ್ದರು. ಅದರಂತೆ 2024ರಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ಹೊರಟಾಗ ಸಮೋಸಾ, ಫಿಶ್ ಕರಿ ಮತ್ತು ಇತರೆ ಭಾರತೀಯ ಆಹಾರಗಳನ್ನು ಕೊಂಡೊಯ್ದಿದ್ದರು.
ಕಲ್ಪನಾ ಚಾವ್ಲಾಗೆ ಸಮೋಸಾ ಇಷ್ಟ ಆಗಿತ್ತು, ಆದರೆ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿಲ್ಲ
ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರಿಗೆ ಸಮೋಸಾ ಬಹಳ ಇಷ್ಟದ ತಿನಿಸಾಗಿತ್ತು. ಆದರೆ ಅವರು ಅದನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿಲ್ಲ ಎಂಬ ವಿಷಯವನ್ನು ಅವರ ಪತಿ ಜೀನ್ ಪ್ರೀಯರೆ ಹ್ಯಾರಿಸನ್ ಅವರು ಕಲ್ಪನಾ ಚಾವ್ಲಾ ಅವರ ಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ. ದ ಎಡ್ಜ್ ಆಫ್ ಟೈಮ್ - ದ ಅಥಾರಿಟೇಟಿವ್ ಬಯೋಗ್ರಫಿ ಆಫ್ ಕಲ್ಪನಾ ಚಾವ್ಲಾ ಎಂಬ ಪುಸ್ತಕದಲ್ಲಿ ಹ್ಯಾರಿಸನ್ ಈ ವಿಷಯ ಪ್ರಸ್ತಾಪಿಸಿದ್ದು, ಬಾಹ್ಯಾಕಾಶಕ್ಕೆ ಸಮೋಸಾಗಳನ್ನು ಕಲ್ಪನಾ ಕೊಂಡೊಯ್ಯಲಿಲ್ಲ. ಭಾರತೀಯ ಆಹಾರ ಅವರಿಗೆ ಇಷ್ಟವಾಗಿತ್ತು. ಆದರೆ, ನ್ಯುಟ್ರಿಷಿಯನಿಸ್ಟ್‌ಗಳಿಗೆ ಅವುಗಳ ಕ್ಯಾಲೊರಿ ತಿಳಿಯುವ ಹಾಗೂ ಅವುಗಳನ್ನು ಪ್ಯಾಕ್ ಮಾಡುವ ಕಷ್ಟ ಕೊಡುವುದು ಬೇಡ ಎಂಬ ತೀರ್ಮಾನಕ್ಕೆ ಕಲ್ಪನಾ ಬಂದಿದ್ದರು ಎಂದು ಬರೆದಿದ್ದಾರೆ.
