Sanjay Raut targets PM: 'ರಷ್ಯಾ-ಉಕ್ರೇನ್ ಯುದ್ಧದ ಮಧ್ಯಸ್ಥಿಕೆಗೆ ಪ್ರಧಾನಿ ಸಿದ್ಧರಿದ್ದಾರೆ, ಅವರಿಗೆ ಆಂತರಿಕ ಸಮಸ್ಯೆಗಳು ಬೇಕಿಲ್ಲ'
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sanjay Raut Targets Pm: 'ರಷ್ಯಾ-ಉಕ್ರೇನ್ ಯುದ್ಧದ ಮಧ್ಯಸ್ಥಿಕೆಗೆ ಪ್ರಧಾನಿ ಸಿದ್ಧರಿದ್ದಾರೆ, ಅವರಿಗೆ ಆಂತರಿಕ ಸಮಸ್ಯೆಗಳು ಬೇಕಿಲ್ಲ'

Sanjay Raut targets PM: 'ರಷ್ಯಾ-ಉಕ್ರೇನ್ ಯುದ್ಧದ ಮಧ್ಯಸ್ಥಿಕೆಗೆ ಪ್ರಧಾನಿ ಸಿದ್ಧರಿದ್ದಾರೆ, ಅವರಿಗೆ ಆಂತರಿಕ ಸಮಸ್ಯೆಗಳು ಬೇಕಿಲ್ಲ'

"ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ ಜನರ ಇಚ್ಛೆಗೆ ವಿರುದ್ಧವಾಗಿ ಕರ್ನಾಟಕಕ್ಕೆ ಸೇರ್ಪಡೆಗೊಂಡ ಬೆಳಗಾವಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಮರಾಠಿ ಮಾತನಾಡುವ ಜನರ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ರಾವತ್ ಅವರು ರಾಜ್ಯಗಳ ನಡುವಿನ ಗಡಿ ವಿವಾದವನ್ನು ವಿವರಿಸಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವತ್
ಶಿವಸೇನೆ ನಾಯಕ ಸಂಜಯ್ ರಾವತ್ (PTI)

ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದಾರೆ.

ಶಿವಸೇನೆಯ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮುಖವಾಣಿ ಸಾಮ್ನಾದಲ್ಲಿ ತಮ್ಮ ಸಾಪ್ತಾಹಿಕ ಅಂಕಣ 'ರೋಖ್ಥೋಕ್'ನಲ್ಲಿ ರಾವತ್ ಅವರು "ರಷ್ಯಾ-ಉಕ್ರೇನ್ ಸಂಘರ್ಷದ ಮಧ್ಯಸ್ಥಿಕೆ ವಹಿಸಲು ಪ್ರಧಾನಿ ಸಿದ್ಧರಿದ್ದಾರೆ, ಆದರೆ ಆಂತರಿಕ ಸಮಸ್ಯೆಗಳು ಅವರಿಗೆ ಬೇಕಿಲ್ಲ" ಎಂದು ಕಿಡಿ ಕಾರಿದ್ದಾರೆ. ಅಲ್ಲದೆ ಇದು ಉತ್ತಮ ನಾಯಕನ ಲಕ್ಷಣವಲ್ಲ ಎಂದು ಹೇಳಿದ್ದಾರೆ. "ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ಗಡಿ ವಿವಾದವು ಮಾನವೀಯತೆಯ ಹೋರಾಟವಾಗಿದೆ. ಎರಡು ರಾಜ್ಯಗಳ ಜನರು ಮತ್ತು ಸರ್ಕಾರಗಳ ನಡುವಿನ ಹೋರಾಟವಲ್ಲ" ಎಂದು ರಾವತ್ ಹೇಳಿಕೆಯನ್ನು ಸುದ್ದಿಸಂಸ್ಥೆ ಪಿಟಿಐ ಉಲ್ಲೇಖಿಸಿದೆ.

"ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ ಜನರ ಇಚ್ಛೆಗೆ ವಿರುದ್ಧವಾಗಿ ಕರ್ನಾಟಕಕ್ಕೆ ಸೇರ್ಪಡೆಗೊಂಡ ಬೆಳಗಾವಿ ಮತ್ತು ಹತ್ತಿರದ ಪ್ರದೇಶಗಳಲ್ಲಿನ ಮರಾಠಿ ಮಾತನಾಡುವ ಜನರ ಹೋರಾಟವನ್ನು ಕ್ರೂರವಾಗಿ ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ರಾವತ್ ಅವರು ರಾಜ್ಯಗಳ ನಡುವಿನ ಗಡಿ ವಿವಾದವನ್ನು ವಿವರಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಾರದ ಆರಂಭದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಭೆ ನಡೆಸಿದ್ದರು.‌ ಅಲ್ಲದೆ ಆರು ಸಚಿವರ ತಂಡವು ಈ ವಿಷಯದ ಕುರಿತು ಮೇಲ್ವಿಚಾರಣೆ ಮಾಡುತ್ತದೆ ಎಂದು ಹೇಳಿದರು. ಈ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾವನೆ ಅಂಗೀಕರಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದ್ದರೂ, ಪ್ರತಿಪಕ್ಷಗಳ ದಾಳಿ ನಿರಂತರವಾಗಿ ಮುಂದುವರೆದಿದೆ.

ಸಿಎಂಗಳಾದ ಬೊಮ್ಮಾಯಿ ಮತ್ತು ಶಿಂಧೆ (ಮಹಾರಾಷ್ಟ್ರ) ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿರುವುದು ಉತ್ತಮ ಸ್ವಾಗತಾರ್ಹ ಬೆಳವಣಿಗೆ. ಆದರೆ ಈ ವಿಷಯದ ಬಗ್ಗೆ ಕೇಂದ್ರವು "ತಟಸ್ಥ ನಿಲುವು" ತೆಗೆದುಕೊಳ್ಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರವು ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಸುತ್ತಮುತ್ತಲಿನ ಕೆಲ ಪ್ರದೇಶಗಳನ್ನು ತನ್ನ ಭಾಗಗಳೆಂದು ಹೇಳಿಕೊಂಡಿದೆ. ಇದಕ್ಕೆ ಕಾರಣ ಇಲ್ಲಿರುವ ಮರಾಠಿ ಭಾಷಿಕ ಜನಸಂಖ್ಯೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೆಲವು ಗ್ರಾಮಗಳು ಮೂಲ ಸೌಕರ್ಯಗಳ ಕೊರತೆಯಿಂದಾಗಿ ಕರ್ನಾಟಕಕ್ಕೆ ಸೇರುವ ನಿರ್ಣಯವನ್ನು ಅಂಗೀಕರಿಸಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಹೇಳಿಕೆ ನೀಡಿದ ಬೆನ್ನಲ್ಲೇ, ದಶಕಗಳಷ್ಟು ಹಳೆಯದಾದ ಗಡಿ ವಿವಾದ ಮತ್ತೆ ಎದ್ದಿದೆ.

ಶನಿವಾರ, ಮಹಾರಾಷ್ಟ್ರದ ಪ್ರತಿಪಕ್ಷವಾದ ಮಹಾ ವಿಕಾಸ್ ಅಘಾಡಿ (MVA), ಶಿವಸೇನೆ (ಉದ್ಧವ್ ಬಣ), ಎನ್‌ಸಿಪಿ(NCP) ಮತ್ತು ಕಾಂಗ್ರೆಸ್, ಮುಂಬೈನಲ್ಲಿ "ಹಲ್ಲಾ ಬೋಲ್" ಎಂಬ ಸಾಮೂಹಿಕ ಪಾದಯಾತ್ರೆಯನ್ನು ನಡೆಸಿತು. ಇದರಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರಂತಹ ಉನ್ನತ ನಾಯಕರು ಭಾಗವಹಿಸಿದ್ದರು. ಗಡಿ ವಿವಾದ ಹಾಗೂ ರಾಜ್ಯಕ್ಕೆ ಬರಬೇಕಾದ ಯೋಜನೆಗಳು ಬೇರೆ ರಾಜ್ಯಗಳ ಪಾಲಾಗುತ್ತಿರುವುದರ ಬಗ್ಗೆ ಗಮನ ಸೆಳೆಯಲು ಏಕನಾಥ್ ಶಿಂಧೆ ಸರ್ಕಾರವನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ವಾರದ ಆರಂಭದಲ್ಲಿ ಉಭಯ ರಾಜ್ಯಗಳ ಸಿಎಂಗಳ ಜತೆಗೆ ನಡೆಸಿದ ಸಭೆಯ ಬಳಿಕ ಮಾತನಾಡಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿಚಾರವಾಗಿ ಇಂದು ನಡೆದ ಸಭೆ ಸಕಾರಾತ್ಮಕ ವಾತಾವರಣದಲ್ಲಿ ನಡೆದಿದೆ. ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಂಡು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಸಾಂವಿಧಾನಿಕ ರೀತಿಯಲ್ಲಿ ನಿರ್ಣಯವನ್ನು ತಲುಪಲು ಒಪ್ಪಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.