ಕನ್ನಡ ಸುದ್ದಿ  /  Nation And-world  /  Sc Agrees To Hear Plea By Uddhav Thackeray To Restrain Eknath Shinde Camp

SC agrees to hear plea by Thackeray: ಶಿವಸೇನೆ, ಬಿಲ್ಲು-ಬಾಣ ವಿಚಾರ; ಉದ್ಧವ್ ಠಾಕ್ರೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ಮಹಾರಾಷ್ಟ್ರ ಸಿಎಂ ಶಿಂಧೆ ಅವರ ಬಣಕ್ಕೆ ಶಿವಸೇನೆ ಹೆಸರು, ಪಕ್ಷದ ಚಿಹ್ನೆ ನೀಡಿರುವುದನ್ನ ಪ್ರಶ್ನಿಸಿ ಉದ್ಧವ್ ಠಾಕ್ರೆ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.

ಸುಪ್ರೀಂ ಕೋರ್ಟ್ (ಫೋಟೋ-ಫೈಲ್)
ಸುಪ್ರೀಂ ಕೋರ್ಟ್ (ಫೋಟೋ-ಫೈಲ್)

ಮುಂಬೈ: ಮಹಾರಾಷ್ಟ್ರದಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಸಿಎಂ ಏಕನಾಥ್ ಶಿಂಧೆ ಬಣಗಳ ನಡುವಿನ ಸಮರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಕೇಂದ್ರ ಚುನಾವಣಾ ಆಯೋಗ ನೀಡಿದ ಆಘಾತದಿಂದ ಉದ್ಧವ್ ಠಾಕ್ರೆ ಬಣ ತೀವ್ರ ನಿರಾಸೆ ಅನುಭವಿಸಿದ್ದು, ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಬಣ ಇದೀಗ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದೆ. ಠಾಕ್ರೆ ಬಣದ ಅರ್ಜಿ ವಿಚಾರಣೆಗೆ ಸುಪೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ತುರ್ತ ವಿಚಾರಣೆಗೆ ನಿರಾಕರಿಸಿದೆ.

ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಬಂಡಾಯವೆದ್ದು ನಂತರ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು. ನಂತರದ ಬೆಳವಣಿಗೆಗಳಲ್ಲಿ ಶಿವಸೇನೆ ಪಕ್ಷ ಮತ್ತು ಬಂಡಾಯ ಗುಂಪು ತೀವ್ರ ಹೋರಾಟಕ್ಕೆ ಇಳಿದಿದ್ದವು.

ಎರಡೂ ಬಣಗಳು ಪಕ್ಷದ ಹೆಸರು, ಚಿಹ್ನೆ ಪಡೆಯಲು ಕಾನೂನಾತ್ಮಕವಾಗಿ ಕಸರತ್ತು ಆರಂಭಿಸಿದ್ದರು. ಕೇಂದ್ರ ಚುನಾವಣಾ ಆಯೋಗ ಇತ್ತೀಚೆಗೆ ಏಕನಾಥ್ ಶಿಂಧೆ ಬಣಕ್ಕೆ ಮೂಲ ಶಿವಸೇನೆ ಪಕ್ಷ ಹಾಗೂ ಚಿಹ್ನೆಯಾದ ಬಿಲ್ಲು-ಬಾಣದ ಗುರುತನ್ನು ನೀಡಿ ಆದೇಶ ನೀಡಿತ್ತು.

ಇದಕ್ಕೂ ಮುನ್ನ ವಿಧಾನಸಭಾ ಉಪಚುನಾವಣೆ ಮುಗಿಯುವವರೆಗೂ ಠಾಕ್ರೆ ಬಣಕ್ಕೆ ಸುಡುವ ಜ್ಯೋತಿಯ ಚಿಹ್ನೆಯನ್ನು ನಿಗದಿಪಡಿಸಲಾಗಿತ್ತು. 2019ರ ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ ಪಕ್ಷದಿಂದ 55 ಶಾಸಕರು ಗೆದ್ದು ಬಂದಿದ್ದರು. ಈ ಪೈಕಿ ಶೇ.75ರಷ್ಟು ಮತಗಳನ್ನು ಶಿಂಧೆ ಬಣದ ಶಾಸಕರಿಗೆ ಹಾಗೂ ಶೇ.23.5ರಷ್ಟು ಠಾಕ್ರೆ ಬಣದ ಶಾಸಕರಿಗೆ ಬಂದಿವೆ ಎಂದು ಮೂವರು ಸದಸ್ಯರನ್ನ ಒಳಗೊಂಡ ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು.

ಆದರೆ ಕೇಂದ್ರ ಚುನಾವಣಾ ಆಯೋಗ ನೀಡಿದ ಆದೇಶದ ವಿರುದ್ಧ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಉದ್ಧವ್ ಠಾಕ್ರೆ ಪರವಾಗಿ ಖ್ಯಾತ ವಕೀಲ ಅಭಿಷೇಕ್ ಮನು ಸಿಂಘ್ವಿ ಅರ್ಜಿ ಸಲ್ಲಿಸಿದ್ದಲ್ಲದೆ, ಪ್ರಾಥಮಿಕ ಪಟ್ಟಿಯಾಗಿ ಅಧಿಸೂಚನೆಯನ್ನೂ ಕೋರಿದ್ದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಪೀಠ ನಿರಾಕರಿಸಿದೆ. ಆದರೆ ಅರ್ಜಿ ವಿಚಾರಣೆಗೆ ಸಮ್ಮಿತಿಸಿದೆ.

ಮುಂಬೈನ ಬಾಂದ್ರಾದಲ್ಲಿರುವ ನಿವಾಸದ ಮುಂದೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಉದ್ಧವ್​ ಠಾಕ್ರೆ, ಪಕ್ಷದ ಬಿಲ್ಲನ್ನು ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸುಬೇಕು. ಈಗಿನಿಂದಲೇ ಚುನಾವಣೆಗೆ ತಯಾರಿ ನಡೆಸಿ. ಕೆಲವರು ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಅವರಿಗೆ ಆ ಹುಳುವಿನ ಕಡಿತದ ಅನುಭವವಿಲ್ಲ. ಈ ಬಾರಿ ಅದರ ಅನುಭವ ಸಿಗಬೇಕು ಎಂದು ಮುಖ್ಯಮಂತ್ರಿ ಏಕನಾಥ್​ ಶಿಂಧೆ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪಕ್ಷದ ಚಿಹ್ನೆ ಕೈತಪ್ಪಿದ ಬಗ್ಗೆ ನನಗೆ ಯಾವುದೇ ನೋವಿಲ್ಲ. ಆದರೆ, ನಿಮಗೆ ಕೊಡಲು ನನ್ನ ಬಳಿ ಏನೂ ಇಲ್ಲ. ಇದು ನನ್ನ ನೋವಿಗೆ ಕಾರಣವಾಗಿದೆ. ಬಾಳಾ ಸಾಹೇಬ ಠಾಕ್ರೆ ಅವರ ಆಶಯದಂತೆ ಪಕ್ಷವನ್ನು ಮುನ್ನಡೆಸೋಣ. ಕಳ್ಳರಿಗೆ ಮುಂದಿನ ಚುನಾವಣೆಗಳಲ್ಲಿ ತಕ್ಕಪಾಠ ಕಲಿಸಬೇಕು ಎಂದು ತಮ್ಮ ಬೆಂಬಲಿಗರಿಗೆ ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ.

ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರದಿಂದ ಉದ್ಧವ್ ಠಾಕ್ರೆ ಬಣವನ್ನು ಕೊಂಚ ವಿಚಲಿತ ಆಗುವಂತೆ ಮಾಡಿದೆ. ಇಂಟರ್‌ನೆಟ್ ಸಮರಕ್ಕೆ ಇಳಿದ ಉದ್ಧವ್‌ ಠಾಕ್ರೆ ಬಣವು, shivsena.in ಎಂಬ ಡೊಮೇನ್ ಹೆಸರಿನೊಂದಿಗೆ ಶಿವಸೇನೆಯ ವೆಬ್‌ಸೈಟ್ ಅನ್ನು ಡಿಲೀಟ್‌ ಮಾಡಿದೆ.

ಅಲ್ಲದೆ, ಟ್ವಿಟರ್ ಪ್ರೊಫೈಲ್ ಹೆಸರನ್ನು ಶಿವಸೇನಾ - ಉದ್ಧವ್ ಬಾಳಾಸಾಹೇಬ್ ಠಾಕ್ರೆ ಎಂದು ಬದಲಾಯಿಸಲಾಗಿದೆ. ಟ್ವಿಟರ್ ಹ್ಯಾಂಡಲ್ ಅನ್ನು ಬದಲಾಯಿಸಿರುವ ಕಾರಣ ಅದು ಅಧಿಕೃತ ಖಾತೆ ಎಂದು ಸೂಚಿಸುವ ʻಬ್ಲೂ ಟಿಕ್‌ʼ ಅನ್ನು ಕಳೆದುಕೊಂಡಿದೆ. ಮುಂದೆ ಈ ಎರಡು ಬಣಗಳ ಸಮರ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದನ್ನು ಕಾದು ನೋಡಬೇಕಿದೆ.