Bilkis Bano Rape Case: ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳ ಬಿಡುಗಡೆ ಆದೇಶ ಮರುಪರಿಶೀಲನೆಗೆ ಕೋರಿ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿ ವಜಾ
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಮರುಪರಿಶೀಲನೆಗೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಮರುಪರಿಶೀಲನೆಗೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಈ ಅಪರಾಧಿಗಳನ್ನು ಆಗಸ್ಟ್ 15ರಂದು ಗುಜರಾತ್‌ನ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು. 2022ರ ಮೇ ತಿಂಗಳಿನಲ್ಲಿ ಅಪರಾಧಿಗಳ ಬಿಡುಗಡೆಗೊಳಿಸುವಂತೆ ಗುಜರಾತ್ ಸರ್ಕಾರ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹಾಗೂ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ಬಿಲ್ಕಿಸ್ ಬಾನು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
2002ರ ಗೋಧ್ರಾ ಗಲಭೆಯ ನಂತರ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಎಂಬವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಈ ವೇಳೆ ಬಿಲ್ಕಿಸ್ ಬಾನು ಗರ್ಭಿಣಿಯಾಗಿದ್ದರು. ಅಷ್ಟೇ ಅಲ್ಲದೇ ಬಿಲ್ಕಿಸ್ ಬಾನು ಕುಟುಂಬದ 7 ಮಂದಿಯನ್ನು ಕೊಲ್ಲಲಾಗಿತ್ತು. ಸಾವೀಗೀಡಾದವರಲ್ಲಿ ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗಳು ಸಹ ಇದ್ದಾಳೆ.
ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಿದ್ದರು. ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ನೀಡಿತ್ತು. ಪ್ರಕರಣ ಸಂಬಂಧ ಜನವರಿ 21, 2008 ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2017 ಮೇ ತಿಂಗಳಲ್ಲಿ ಬಾಂಬೈ ಹೈಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.
ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಗಳು 14 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಗೆ ಒಳಗಾದವರು 14 ವರ್ಷಗಳ ನಂತರ ಕ್ಷಮಾಪಣೆಗಾಗಿ ಅರ್ಜಿ ಸಲ್ಲಿಸಬಹುದು. ನಂತರ ಅರ್ಜಿಯನ್ನು ಪರಿಗಣಿಸುವುದು ಸರ್ಕಾರದ ನಿರ್ಧಾರವಾಗಿದೆ. ಇದರಂತೆ ಅಪರಾಧಿಗಳಲ್ಲಿ ಓರ್ವ ತನ್ನನ್ನು ಶೀಘ್ರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಗುಜರಾತ್ ಸರ್ಕಾರ ಪಂಚಮಹಲ್ ನ ಜಿಲ್ಲಾಧಿಕಾರಿ ಸುಜಲ್ ಮೇತ್ರಾ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಈ ಎಲ್ಲ 11 ಆರೋಪಿಗಳಿಗೆ ಕ್ಷಮಾದಾನ ನೀಡಲು ಸರ್ವಾನುಮತದಿಂದ ನಿರ್ಧರಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ತಿಳಿಸಿತ್ತು. ಹೀಗಾಗಿ ಈ ವರ್ಷ (2022) ಸ್ವಾತಂತ್ರ್ಯ ದಿನದಂದು ಇವರನ್ನು ಬಿಡುಗಡೆಗೊಳಿಸಲಾಗಿತ್ತು.
ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು 'ಸಂಸ್ಕಾರಿ' ಎಂದು ಕರೆದ ಶಾಸಕನಿಗೆ ಟಿಕೆಟ್ ನೀಡಿದ್ದ ಬಿಜೆಪಿ
ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು 'ಸಂಸ್ಕಾರಿ ಬ್ರಾಹ್ಮಣರು' ಎಂದು ಕರೆದಿದ್ದ ಗೋಧ್ರಾ ಶಾಸಕ ಚಂದ್ರಸಿನ್ಹ ರೌಲ್ಜಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿಬಿಜೆಪಿ ಟಿಕೆಟ್ ನೀಡಿತ್ತು. ಕೊನೆಗೆ ಚುನಾವಣೆಯಲ್ಲಿ ಜನರು ಇವರನ್ನು ಗೆಲ್ಲಿಸಿದ್ದರು.
ಬಿಜೆಪಿ ಶಾಸಕ ಚಂದ್ರಸಿನ್ಹ ರೌಲ್ಜಿ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅತ್ಯಾಚಾರಿಗಳು ಒಳ್ಳೆಯ ಜನರು - ಬ್ರಾಹ್ಮಣರು. ಬ್ರಾಹ್ಮಣರು ಒಳ್ಳೆಯ 'ಸಂಸ್ಕಾರ' ಹೊಂದಿರುತ್ತಾರೆ. ಅವರನ್ನು ಮೂಲೆಗುಂಪು ಮಾಡುವುದು ಮತ್ತು ಶಿಕ್ಷಿಸುವುದು ಯಾರೊಬ್ಬರ ಕೆಟ್ಟ ಉದ್ದೇಶವಾಗಿರಬಹುದು ಎಂದು ಹೇಳಿ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡಿದ್ದರು. ಚಂದ್ರಸಿನ್ಹ ರೌಲ್ಜಿ ಅವರು ಅಪರಾಧಿಗಳಿಗೆ ವಿನಾಯಿತಿ ನೀಡಿದ ಗುಜರಾತ್ ಸರ್ಕಾರದ ಸಮಿತಿಯ ಭಾಗವಾಗಿದ್ದರು. ಇವರ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, "ಬಿಲ್ಕಿಸ್ ಪ್ರಕರಣದ ಅತ್ಯಾಚಾರಿಗಳು ಮತ್ತು ಹಂತಕರನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕರೆದ ಗೋಧ್ರಾ ಶಾಸಕ ಬಿಜೆಪಿಯಿಂದ ಮರು ನಾಮನಿರ್ದೇಶನಗೊಂಡಿದ್ದಾರೆ. ದ್ವೇಷಿಸುವುದು ಮತ್ತು ಕೊಲ್ಲುವುದು, ನಂತರ ಹಬ್ಬ ಆಚರಿಸಿ ಕೊಂದವರಿಗೆ ಬಹುಮಾನ ಕೊಡುವುದು, ಇದೇ ಗುಜರಾತ್ ಮಾದರಿ" ಎಂದು ಕಿಡಿಕಾರಿದ್ದರು.