PILs against CAA : ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ಕುರಿತ 200 ಪಿಐಎಲ್‌ಗಳ ವಿಚಾರಣೆ; 10 ಪಾಯಿಂಟ್‌ಗಳ ವಿವರಣೆ ಇಲ್ಲಿದೆ ಗಮನಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pils Against Caa : ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ಕುರಿತ 200 ಪಿಐಎಲ್‌ಗಳ ವಿಚಾರಣೆ; 10 ಪಾಯಿಂಟ್‌ಗಳ ವಿವರಣೆ ಇಲ್ಲಿದೆ ಗಮನಿಸಿ

PILs against CAA : ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ಕುರಿತ 200 ಪಿಐಎಲ್‌ಗಳ ವಿಚಾರಣೆ; 10 ಪಾಯಿಂಟ್‌ಗಳ ವಿವರಣೆ ಇಲ್ಲಿದೆ ಗಮನಿಸಿ

PILs against CAA in Supreme Court of India: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತ 200ಕ್ಕೂ ಹೆಚ್ಚು ಪಿಐಎಲ್‌ಗಳನ್ನು ಒಗ್ಗೂಡಿಸಿದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುರುವಾಗುತ್ತಿದೆ. ಬಹುತೇಕ ಎಲ್ಲ ಪಿಐಎಲ್‌ಗಳು ಕೂಡ ಸಿಎಎಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವಂಥದ್ದೇ ಆಗಿದೆ. ಈ ಕುರಿತ 10 ಪಾಯಿಂಟ್‌ಗಳ ವಿವರಣೆ ಇಲ್ಲಿದೆ.

<p>ಭಾರತದ ಸುಪ್ರೀಂ ಕೋರ್ಟ್‌&nbsp;</p>
ಭಾರತದ ಸುಪ್ರೀಂ ಕೋರ್ಟ್‌&nbsp;

ನವದೆಹಲಿ: ವಿವಾದಿತ ಪೌರತ್ವ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್ ಸೇರಿ 200 ಕ್ಕೂ ಹೆಚ್ಚು ಪಿಐಎಲ್‌ಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇಂದು ನಡೆಸಲಿದೆ. ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠವು ಸಿಎಎಯ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ. ಈ ಕಾಯ್ದೆ ಜಾರಿ ವಿರೋಧಿಸಿ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿವೆ.

ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು, ಸಿಎಎ ವಿರುದ್ಧ ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್‌ನ ಪ್ರಮುಖ ಮನವಿ ಸೇರಿ 220 ಅರ್ಜಿಗಳನ್ನು ವಿಚಾರಣೆಗೆ ಮುಂದೂಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಒಂದೆರಡು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಪಿಐಎಲ್‌ಗಳನ್ನು ಸಹ ಇಂದು ಕೈಗೆತ್ತಿಕೊಳ್ಳಲಾಗುವುದು.

ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿ 2020 ರ ಜನವರಿ ಎರಡನೇ ವಾರದೊಳಗೆ ಪ್ರತಿಕ್ರಿಯೆಯನ್ನು ಕೋರಿತ್ತು. ಆದಾಗ್ಯೂ, ಕೋವಿಡ್ -19-ಪ್ರೇರಿತ ನಿರ್ಬಂಧಗಳಿಂದಾಗಿ, ಹೆಚ್ಚಿನ ಸಂಖ್ಯೆಯ ವಕೀಲರು ಮತ್ತು ದಾವೆದಾರರು ಇರುವ ಕಾರಣ ಈ ವಿಷಯವು ಪೂರ್ಣ ಪ್ರಮಾಣದ ವಿಚಾರಣೆಗೆ ಬಂದಿರಲಿಲ್ಲ.

ಸಿಎಎ ಕುರಿತ ಪಿಐಎಲ್‌ಗಳ ಕುರಿತು ನೀವು ತಿಳಿದುಕೊಳ್ಳಬೇಕಾದ್ದು ಇಷ್ಟು -

1) ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿಸೆಂಬರ್ 31 ಅಥವಾ ಅದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದೇಶಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಅವಕಾಶ ನೀಡುತ್ತದೆ.

2) ಈ ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳದ ಕಾರಣ 2014ರ ಡಿಸೆಂಬರ್ 31 ರವರೆಗೆ ಭಾರತಕ್ಕೆ ಆಗಮಿಸಿದ ಉಲ್ಲೇಖಿಸಲಾದ ಸಮುದಾಯಗಳನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ. ಭಾರತೀಯ ಪೌರತ್ವವನ್ನು ನೀಡಲಾಗುವುದು ಎಂಬ ಅಂಶ ಹೊಸ ತಿದ್ದುಪಡಿಯಲ್ಲಿದೆ.

3) ನಿಕಟಪೂರ್ವ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು 2019ರ ಡಿಸೆಂಬರ್‌ 12ರಂದು ಈ ಕಾಯ್ದೆಗೆ ಅಂಕಿತ ಹಾಕಿದ್ದಾರೆ.

4) ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರು ಸಿಎಎ 2019 ಅನ್ನು ಕೋವಿಡ್‌ 19ರ ಸಂಕಷ್ಟ ಕೊನೆಗೊಂಡ ಬಳಿಕ ಜಾರಿಗೊಳಿಸುವುದಾಗಿ ಹೇಳಿದ್ದರು.

5) ಸಿಜೆಐ ನೇತೃತ್ವದ ಪೀಠವು ವಿ ದ ವುಮೆನ್‌ ಆಫ್‌ ಇಂಡಿಯಾ ಸಂಘಟನೆ ಸಲ್ಲಿಸಿದ ಕೆಲವು ಪಿಐಎಲ್‌ಗಳನ್ನೂ ಹಿಯರಿಂಗ್‌ಗೆ ನಿಗದಿ ಮಾಡಿಕೊಂಡಿದೆ. ಪೀಡಿತರಿಗೆ ಪರಿಣಾಮಕಾರಿ ಕಾನೂನು ನೆರವು ನೀಡಲು ದೇಶಾದ್ಯಂತ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸಾಕಷ್ಟು ಮೂಲಸೌಕರ್ಯಗಳನ್ನು ಸೃಷ್ಟಿಸಲು ನಾವು ಭಾರತೀಯ ಮಹಿಳೆಯರು ಸಲ್ಲಿಸಿದ ಮನವಿ ಸೇರಿದಂತೆ ಇತರ ಕೆಲವು ಪಿಐಎಲ್‌ಗಳು ಇದರಲ್ಲಿವೆ.

6) ದೇಶದಲ್ಲಿ ಕೌಟುಂಬಿಕ ಹಿಂಸಾಚಾರ ಮುಂದುವರಿದಿದ್ದು, ಮಹಿಳೆಯರ ವಿರುದ್ಧ ಸಾಮಾನ್ಯ ಅಪರಾಧ ಇದುವೇ ಆಗಿದೆ. ದೇಶದಲ್ಲಿ 15 ವರ್ಷ ಹಿಂದೆಯೇ ಕಾನೂನು ಜಾರಿಯಾಗಿದ್ದರೂ, ಪರಿಣಾಮಕಾರಿ ಅನುಷ್ಠಾನ ಆಗಿಲ್ಲ ಎಂದು ಅರ್ಜಿ ಹೇಳಿದೆ.

7) ಸುಪ್ರೀಂ ಕೋರ್ಟ್‌ 2019ರ ಡಿಸೆಂಬರ್ 18 ರಂದು ಅರ್ಜಿಗಳ ವಿಚಾರಣೆ ನಡೆಸಿದ ವೇಳೆ, ಪೌರತ್ವ (ತಿದ್ದುಪಡಿ) ಕಾಯ್ದೆಯ (ಸಿಎಎ) ಕಾರ್ಯಾಚರಣೆಯನ್ನು ತಡೆಯಲು ನಿರಾಕರಿಸಿತ್ತು. ಆದರೆ ಕೇಂದ್ರಕ್ಕೆ ನೋಟಿಸ್ ನೀಡಿತ್ತು.

8) ಸಿಎಎಯನ್ನು ಪ್ರಶ್ನಿಸಿದ ಅರ್ಜಿದಾರರಲ್ಲಿ ಒಂದಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ಈ ಕಾಯಿದೆಯು ಸಮಾನತೆಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಧರ್ಮದ ಆಧಾರದ ಮೇಲೆ ಹೊರಗಿಡುವ ಮೂಲಕ ಅಕ್ರಮ ವಲಸಿಗರ ಒಂದು ವಿಭಾಗಕ್ಕೆ ಪೌರತ್ವವನ್ನು ನೀಡಲು ಉದ್ದೇಶಿಸಿದೆ ಎಂದು ಹೇಳಿದೆ.

9) ಪೌರತ್ವ ಕಾನೂನನ್ನು ಸಂಸತ್ತು ಅಂಗೀಕರಿಸಿದ ನಂತರ, ಭಾರತದ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆಗಳಾದವು. ಪರಿಣಾಮ ನಡೆದ ಹಿಂಸಾಚಾರದಲ್ಲಿ ಅಂದಾಜು 100 ಜನ ಸಾವಿಗೀಡಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

10) ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಸೇರಿಕೊಂಡು ಈ ಸಿಎಎ ಕಾನೂನು ದೇಶದ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿದೆ ಎಂಬುದು ಸಿಎಎ ವಿರೋಧಿಗಳ ಬಲವಾದ ನಂಬಿಕೆ.

ಮಾಹಿತಿ - ಏಜೆನ್ಸೀಸ್‌

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.