The Sun: ಕಳಚಿ ಬಿತ್ತು ಸೂರ್ಯನ ಬೃಹತ್ ಭಾಗ: ಭಾಸ್ಕರನ ಕೋಪ ಕಂಡು ವಿಜ್ಞಾನಿಗಳ ಎದೆ ನಡುಗಿದಾಗ...!
ಸೂರ್ಯನಲ್ಲಾದ ಹೊಸ ಬೆಳವಣಿಗೆಯೊಂದು ಜಾಗತಿಕ ಖಗೋಳ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಕಳಚಿ ಬಿದ್ದಿದೆ. ಈ ಭಾಗ ಸೂರ್ಯನ ಉತ್ತರ ಧ್ರುವದ ಸುತ್ತ ಬೃಹತ್ ಸುಂಟರಗಾಳಿಯನ್ನು ಸೃಷ್ಟಿಸಿದೆ. ಈ ಆಶ್ಚರ್ಯಕರ ವಿದ್ಯಮಾನ ಹೇಗೆ ಸಂಭವಿಸಿತು ಎಂಬುದನ್ನು ವಿಶ್ಲೇಷಿಸಲು ಖಗೋಳ ವಿಜ್ಞಾನಿಗಳು ಈಗ ಪ್ರಯತ್ನಿಸುತ್ತಿದ್ದಾರೆ.
ವಾಷಿಂಗ್ಟನ್: ಸೂರ್ಯ ನಮ್ಮ ಸೌರಮಂಡಲದ ಅಧಿಪತಿ. ತನ್ನ ಅಗಾಧ ಗುರುತ್ವ ಬಲದ ಶಕ್ತಿಯಿಂದ ಇಡೀ ಸೌರವ್ಯೂಹವನ್ನು ನಿಯಂತ್ರಿಸುವ ಭಾಸ್ಕರ, ಇಲ್ಲಿನ ಸಮಸ್ತ ಆಗುಹೋಗುಗಳಿಗೆ ಕಾರಣೀಭೂತ. ಈ ಕಾರಣಕ್ಕಾಗಿಯೇ ಸೂರ್ಯ ನಮ್ಮ ಧಾರ್ಮಿಕ ಹಾಗೂ ವೈಜ್ಞಾನಿಕ ಜಗತ್ತಿನ ಕೇಂದ್ರಬಿಂದು. ಸೂರ್ಯನಲ್ಲಾಗುವ ಸಣ್ಣ ಬದಲಾವಣೆಯೂ, ಸೌರಮಂಡಲದ ಮೇಲೆ ಅಗಾಧ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.
ಆದರೆ ಇದೀಗ ಸೂರ್ಯನಲ್ಲಾದ ಹೊಸ ಬೆಳವಣಿಗೆಯೊಂದು ಜಾಗತಿಕ ಖಗೋಳ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸಿದೆ. ಸೂರ್ಯನ ಒಂದು ದೊಡ್ಡ ಭಾಗವು ಅದರ ಮೇಲ್ಮೈಯಿಂದ ಕಳಚಿ ಬಿದ್ದಿದೆ. ಈ ಭಾಗ ಸೂರ್ಯನ ಉತ್ತರ ಧ್ರುವದ ಸುತ್ತ ಬೃಹತ್ ಸುಂಟರಗಾಳಿಯನ್ನು ಸೃಷ್ಟಿಸಿದೆ.
ಈ ಆಶ್ಚರ್ಯಕರ ಬೆಳವಣಿಗೆ ಖಗೋಳ ವಿಜ್ಞಾನಿಗಳ ನಿದ್ದೆಗೆಡೆಸಿದ್ದು, ಈ ವಿದ್ಯಮಾನ ಹೇಗೆ ಸಂಭವಿಸಿತು ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಸೂರ್ಯನ ಬೃಹತ್ ಭಾಗವೊಂದು ಕಳಚಿ ಬೀಳುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಜಾಗತಿಕ ಬಾಹ್ಯಾಕಾಶ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.
ಈ ಗಮನಾರ್ಹ ವಿದ್ಯಮಾನವನ್ನು ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಸೆರೆಹಿಡಿದಿದೆ. ಈ ವಿಡಯೋವನ್ನು ಕಳೆದ ವಾರ ಬಾಹ್ಯಾಕಾಶ ಹವಾಮಾನ ಮುನ್ಸೂಚಕರಾದ ಡಾ ತಮಿತಾ ಸ್ಕೋವ್ ಅವರು, ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯನು ಸೌರ ಜ್ವಾಲೆಗಳನ್ನು ಹೊರಸೂಸುತ್ತಲೇ ಇರುತ್ತಾನೆ. ಅದು ಕೆಲವೊಮ್ಮೆ ಭೂಮಿಯ ಮೇಲಿನ ಸಂವಹನ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ವಿಜ್ಞಾನಿಗಳು ಇತ್ತೀಚಿನ ಬೆಳವಣಿಗೆಯ ಬಗ್ಗೆ ಹೆಚ್ಚು ಕಾಳಜಿವಹಿಸಿದ್ದಾರೆ.
ನಾಸಾ ಪ್ರಕಾರ ಸೌರ ಜ್ವಾಲೆಯು ಸೂರ್ಯನ ಮೇಲ್ಮೈಯಿಂದ ಹೊರಕ್ಕೆ ವಿಸ್ತರಿಸುವ ದೊಡ್ಡ ಪ್ರಕಾಶಮಾನವಾದ ಲಕ್ಷಣವಾಗಿದೆ. ಈ ಹಿಂದೆ ಇಂತಹ ಹಲವಾರು ನಿದರ್ಶನಗಳು ಪತ್ತೆಯಾಗಿವೆ. ಅದರೆ ಈ ಬಾರಿ ಈ ಸೌರ ಜ್ವಾಲೆ ಸೂರ್ಯನ ಬೃಹತ್ ಭಾಗವನ್ನೇ ದೂರ ಸರಿಸಿರುವುದು ಖಗೋಳ ವಿಜ್ಞಾನ ಸಮುದಾಯವನ್ನು ದಿಗ್ಭ್ರಮೆಗೊಳಿಸಿದೆ.
"ಸೂರ್ಯನ ಈ ಬೃಹತ್ ಭಾಗವು ಸರಿಸುಮಾರು 60 ಡಿಗ್ರಿ ಅಕ್ಷಾಂಶದಲ್ಲಿ, ಧ್ರುವವನ್ನು ಸುತ್ತಲು ಸರಿಸುಮಾರು 8 ಗಂಟೆಗಳನ್ನು ತೆಗೆದುಕೊಂಡಿತು ಎಂಬುದು ಹೆಚ್ಚಿನ ಅವಲೋಕನದಿಂದ ತಿಳಿದುಬಂದಿದೆ. ಇದರರ್ಥ ಈ ಘಟನೆಯಲ್ಲಿ ಸಮತಲ ಗಾಳಿಯ ವೇಗದ ಅಂದಾಜಿನ ಮೇಲಿನ ಮಿತಿಯು, ಸೆಕೆಂಡಿಗೆ 96 ಕಿಲೋಮೀಟರ್ ಅಥವಾ ಸೆಕೆಂಡಿಗೆ 60 ಮೈಲುಗಳಷ್ಟಿತ್ತು.." ಎಂದು ಡಾ. ಸ್ಕೋವ್ ಮಾಹಿತಿ ನೀಡಿದ್ದಾರೆ.
ಸೌರ ಜ್ವಾಲೆಗಳು ಸಾಮಾನ್ಯ ಸಂಗತಿಯಾಗಿದ್ದರೂ, ಈ ನಿರ್ದಿಷ್ಟ ಸೌರ ಜ್ವಾಲೆ ಅದೆಷ್ಟು ಪ್ರಬಲವಾಗಿತ್ತೆಂದರೆ, ಸೂರ್ಯನ ಬೃಹತ್ ಭಾಗವೊಂದನ್ನೇ ತನ್ನತ್ತ ಸೆಳೆದಿದೆ. ಈ ಅಪರೂಪದ ವಿದ್ಯಮಾನ, ಸೌರ ಜ್ವಾಲೆಗಳ ಕುರಿತು ಹೆಚ್ಚಿನ ಅಧ್ಯಯನಕ್ಕೆ ನಮ್ಮನ್ನು ಪ್ರೋತ್ಸಾಹಿಸಿದೆ ಎಂದು ನಾಸಾ ಹೇಳಿದೆ.
ದಶಕಗಳಿಂದ ಸೂರ್ಯನನ್ನು ಗಮನಿಸುತ್ತಿರುವ ಅಮೆರಿಕದ ನ್ಯಾಷನಲ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರಿಸರ್ಚ್‌ನ ಸೌರ ಭೌತಶಾಸ್ತ್ರಜ್ಞ ಸ್ಕಾಟ್ ಮ್ಯಾಕಿಂತೋಷ್, ಸೌರ ಜ್ವಾಲೆಯ ತುಣುಕು ಮುರಿದುಹೋದಾಗ ಸಂಭವಿಸಿದಂತಹ ಇಂತಹ ಬೃಹತ್ ಸುಂಟರಗಾಳಿಯನ್ನು ನಾನು ಹಿಂದೆಂದೂ ನೀಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶ ವಿಜ್ಞಾನಿಗಳು ಈಗ ಈ ವಿಚಿತ್ರ ಘಟನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಮತ್ತು ಸ್ಪಷ್ಟವಾದ ಚಿತ್ರವನ್ನು ಪ್ರಸ್ತುತಪಡಿಸಲು ಆರಂಭಿಸಿದ್ದಾರೆ. ನಮ್ಮ ಮಾತೃ ನಕ್ಷತ್ರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಈ ತಿಂಗಳು ಭೂಮಿಯ ಮೇಲಿನ ಸಂವಹನ ವ್ಯವಸ್ಥೆಯನ್ನು ಅಡ್ಡಿಪಡಿಸಿದ ಅನೇಕ ಶಕ್ತಿಶಾಲಿ ಸೌರ ಜ್ವಾಲೆಗಳನ್ನು ಸೂರ್ಯ ಹೊರಸೂಸಿದ್ದಾನೆ ಎಂದು ನಾಸಾದ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ವಿಭಾಗ