ಬಜೆಟ್ ದಿನವೇ 1100 ಅಂಕಗಳ ಕುಸಿತದ ಬಳಿಕ ಸೆನ್ಸೆಕ್ಸ್ ಚೇತರಿಕೆ; ಮುಂಬೈ ಷೇರುಪೇಟೆ ಕುಸಿತಕ್ಕೆ ಕಾರಣವೇನು?
ಕೇಂದ್ರ ಬಜೆಟ್ ಘೋಷಣೆ ಮುಕ್ತಾಯವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 1100 ಅಂಕಗಳ ಕುಸಿತ ಕಂಡಿತು. ತೆರಿಗೆ ಬದಲಾವಣೆಯಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ನಿಫ್ಟಿ ಕುಸಿತವಾಯಿತೇ? ತಜ್ಞರು ಏನು ಹೇಳುತ್ತಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಘೋಷಿಸಿದ ನಂತರ ಷೇರು ಮಾರುಕಟ್ಟೆ ಇಂದು (ಜುಲೈ 23, ಮಂಗಳವಾರ) ತೀವ್ರ ಕುಸಿತ ಕಂಡಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗಮನಾರ್ಹ ನಷ್ಟವನ್ನು ಅನುಭವಿಸಿದವು. ಬಿಎಸ್ಇ ಸೆನ್ಸೆಕ್ಸ್ 80,000 ಕ್ಕಿಂತ ಕೆಳಗಿಳಿದರೆ, ಎನ್ಎಸ್ಇ ನಿಫ್ಟಿ 409 ಪಾಯಿಂಟ್ಸ್ ಕುಸಿದಿದೆ. ಸೀತಾರಾಮನ್ ಅವರು ಬಜೆಟ್ ಮಂಡನೆ ಮುಗಿಸುತ್ತಿದ್ದಂತೆ ಸೆನ್ಸೆಕ್ಸ್ ಬರೋಬ್ಬರಿ 1100 ಅಂಕಗಳ ಕುಸಿತ ಕಂಡಿತು. ನಂತರ ಶರ ವೇಗದಲ್ಲಿ ಅಂದರೆ 5 ರಿಂದ 10 ನಿಮಿಷದಲ್ಲಿ ಚೇತರಿಕೆಯನ್ನು ಕಂಡಿತು. ಷೇರು ಮಾರುಕಟ್ಟೆ ಕುಸಿತಕ್ಕೆ ಮೂರು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಎಸ್‌ಟಿಟಿ ತೆರಿಗೆ, ಎಸ್‌ಟಿಜಿ ಹಾಗೂ ಎಸ್‌ಟಿಸಿಜಿ ತೆರಿಗೆ ಬದಲಾವಣೆ ಮತ್ತು ಷೇರು ಮರುಖರೀದಿ ಮೇಲಿನ ತೆರಿಗೆಯಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಂಡವಾಳ ಲಾಭಗಳ ಮೇಲಿನ ತೆರಿಗೆಯನ್ನು ವಿಶೇಷವಾಗಿ ಈಕ್ವಿಟಿಗಳ ಮೇಲಿನ ದೀರ್ಘಾವಧಿ ಬಂಡವಾಳ ಲಾಭ (ಎಲ್‌ಟಿಸಿಜಿ) ತೆರಿಗೆಯನ್ನು ಹಿಂದಿನ ಶೇಕಡಾ 10 ರಿಂದ ಶೇಕಡಾ 12.5 ಕ್ಕೆ ಹೆಚ್ಚಿಸಿದ್ದಾರೆ. ಅಲ್ಪಾವಧಿ ಬಂಡವಾಳ ಲಾಭ (ಎಸ್‌ಟಿಸಿಜಿ) ತೆರಿಗೆಯನ್ನು ಶೇಕಡಾ 15 ರಿಂದ ಶೇಕಡಾ 20 ಕ್ಕೆ ಹೆಚ್ಚಿಸಲಾಗಿದೆ. ಎಲ್‌ಟಿಸಿಜಿ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂಪಾಯಿಗಳಿಂದ 1.25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆಯನ್ನು ನಿರುತ್ಸಾಹಗೊಳಿಸುವ ಉದ್ದೇಶದಿಂದ ಫ್ಯೂಚರ್ಸ್ ಮತ್ತು ಆಯ್ಕೆಗಳ (ಎಫ್ &ಒ) ವ್ಯಾಪಾರದ ಮೇಲೆ ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್‌ಟಿಟಿ) ದರವನ್ನು ಹೆಚ್ಚಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಸೆಕ್ಯುರಿಟೀಸ್ ವಹಿವಾಟು ತೆರಿಗೆ ಹೆಚ್ಚಳ ಪ್ರಸ್ತಾಪದ ನಂತರ ಸೆನ್ಸೆಕ್ಸ್ 900 ಪಾಯಿಂಟ್ ಗಳಿಗಿಂತ ಹೆಚ್ಚು ಕುಸಿದಿದೆ. ಒಂದು ಹಂತದಲ್ಲಿ 1100 ಅಂಕಗಳ ವರೆಗೆ ಕುಸಿತ ಕಂಡಿತು.
"ಸೆಕ್ಯುರಿಟಿಗಳಲ್ಲಿನ ಆಯ್ಕೆಯ ಮಾರಾಟದ ಮೇಲಿನ ಎಸ್‌ಟಿಟಿ ದರಗಳನ್ನು ಆಯ್ಕೆ ಪ್ರೀಮಿಯಂನ ಶೇಕಡಾ 0.0625 ರಿಂದ 0.1 ಕ್ಕೆ ಮತ್ತು ಸೆಕ್ಯುರಿಟಿಗಳಲ್ಲಿನ ಭವಿಷ್ಯದ ಮಾರಾಟದ ಮೇಲಿನ ಎಸ್‌ಟಿಟಿ ದರಗಳನ್ನು ಅಂತಹ ಭವಿಷ್ಯದ ವ್ಯಾಪಾರದ ಬೆಲೆಯ ಶೇಕಡಾ 0.0125 ರಿಂದ 0.02 ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಉತ್ಪನ್ನ ವ್ಯಾಪಾರದಲ್ಲಿ ಚಿಲ್ಲರೆ ಹೂಡಿಕೆದಾರರ ಆಸಕ್ತಿ ಹೆಚ್ಚುತ್ತಿರುವ ಬಗ್ಗೆ ಆರ್ಥಿಕ ಸಮೀಕ್ಷೆ ಕಳವಳ ವ್ಯಕ್ತಪಡಿಸಿದ ನಂತರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಇದಲ್ಲದೆ, ಷೇರುಗಳ ಮರುಖರೀದಿಯಿಂದ ಬರುವ ಆದಾಯಕ್ಕೆ ಸ್ವೀಕರಿಸುವವರ ಕೈಗೆ ತೆರಿಗೆ ವಿಧಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಅಂತಿಮವಾಗಿ ಮುಂಬೈ ಷೇರುಪೇಟೆಯಲ್ಲಿ ದಿನದಾಂತ್ಯಕ್ಕೆ ಸೆನ್ಸೆಕ್ಸ್ 73 ಅಂಕಗಳ ನಷ್ಟದೊಂದಿಗೆ 80, 429 ರಲ್ಲಿ ಹಾಗೂ ನಿಫ್ಟಿ 30 ಅಂಕಗಳ ಕುಸಿತದ ಬಳಿಕ 24,479 ರಲ್ಲಿ ವಹಿವಾಟು ಮುಗಿಸಿದವು. ಜೆಕೆ ಸಿಮೆಂಟ್, ಟಿವಿಎಸ್ ಮೋಟಾರ್ಸ್, ಎಂಆರ್‌ಎಫ್, ಅದಾನಿ ಗ್ರೀನ್, ಟೈಟಾನ್, ಟಿಸಿಎಸ್, ಪೇಟಿಎಂ, ಇನ್ಫೋಸಿಸ್, ಅದಾನಿ ಪೋರ್ಟ್ಸ್ ಲಾಭದಲ್ಲಿ ವಹಿವಾಟು ಮುಗಿಸಿದವು. ಇನ್ನ ಅದಾನಿ ಎಂಟರ್ಟೈನ್ಮೆಂಟ್, ಆಕ್ಸಿಸ್ ಬ್ಯಾಂಕ್, ವಿಪ್ರೋ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಏಷಿಯ್ ಪೇಂಟ್ಸ್, ರಿಲಯನ್ಸ್ ಎಲ್‌ಐಸಿ, ಐಆರ್‌ಸಿಟಿಸಿ ಹಾಗೂ ಟಾಟಾ ಸ್ಟೀಲ್ ಷೇರುಗಳು ನಷ್ಟದೊಂದಿಗೆ ದಿನದ ವ್ಯಾಪಾರವನ್ನು ಅಂತ್ಯಗೊಳಿಸಿವೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)