ಕನ್ನಡ ಸುದ್ದಿ  /  Nation And-world  /  Shiv Sena Is Of Shiv Sainiks Who Have Given Their Sweat For It Eknath Shinde Hits Back Uddhav Thackeray

Eknath Shinde: ನಾವು ಗದ್ದಾರ್(ದ್ರೋಹಿ) ಅಲ್ಲ, ಗದ್ದರ್(ಕ್ರಾಂತಿ): ಹೀಗಿತ್ತು ಉದ್ಧವ್‌ಗೆ ಶಿಂಧೆ ನೀಡಿದ ಟಕ್ಕರ್!

ಮುಂಬೈನ ಬಾಂದ್ರಾದಲ್ಲಿರುವ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದಸರಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಭಿನ್ನಮತೀಯ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉದ್ಧವ್‌ ಠಾಕ್ರೆ ನೇತೃತ್ವದ ಬಣವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಕೈಜೋಡಿಸಿದ ಉದ್ಧವ್‌ ಅವರೇ ನಿಜವಾದ ದ್ರೋಹಿ ಎಂದು ಶಿಂಧೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಏಕನಾಥ್‌ ಶಿಂಧೆ ಭಾಷಣ
ಏಕನಾಥ್‌ ಶಿಂಧೆ ಭಾಷಣ (ANI)

ಮುಂಬೈ: ಶಿವಸೇನೆ ಪಕ್ಷ ಸ್ಥಾಪನೆಯಾಗಿ 56 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ, ಪಕ್ಷದ ಎರಡು ಭಿನ್ನ ಬಣಗಳಿಂದ ಪ್ರತ್ಯೇಕ ದಸರಾ ರ‍್ಯಾಲಿ ನಡೆದಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಈ ಬಾರಿ ಪ್ರತ್ಯೇಕ ದಸರಾ ರ‍್ಯಾಲಿಯನ್ನು ಆಯೋಜಿದ್ದವು. ಮಹಾರಾಷ್ಟ್ರ ರಾಜಧಾನಿ ಮುಂಬೈನ ಬಾಂದ್ರಾದಲ್ಲಿರುವ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ದಸರಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಭಿನ್ನಮತೀಯ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉದ್ಧವ್‌ ಠಾಕ್ರೆ ನೇತೃತ್ವದ ಬಣವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಉದ್ಧವ್‌ ಠಾಕ್ರೆ ಅವರು ನಮ್ಮನ್ನು ʼʼಗದ್ದಾರ್ʼʼ (ದ್ರೋಹಿ)" ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕೆ ದ್ರೋಹ ಬಗೆದವರು ಯಾರು ಎಂಬುದನ್ನು ಉದ್ಧವ್‌ ಮೊದಲು ತಿಳಿಸಬೇಕು ಎಂದು ಏಕನಾಥ್‌ ಶಿಂಧೆ ಇದೇ ವೇಳೆ ಸವಾಲು ಎಸೆದರು.

ಶಿವಸೇನೆ ಸಂಸ್ಥಾಪಕ ಬಾಳ್‌ ಸಾಹೇಬ್ ಠಾಕ್ರೆ ಅವರಿಗೆ ಮಾತ್ರವಲ್ಲದೆ, ಪಕ್ಷಕ್ಕಾಗಿ ವರ್ಷಗಳಿಂದ ದುಡಿದ ಸಾಮಾನ್ಯ ಶಿವಸೈನಿಕರಿಗೂ ಉದ್ಧವ್‌ ಠಾಕ್ರೆ ಅವಮಾನ ಮಾಡಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡ ಉದ್ಧವ್‌ ಅವರನ್ನು ನೈಜ ಶಿವಸೈನಿಕ ಎಂದಿಗೂ ಕ್ಷಮಿಸುವುದಿಲ್ಲ ಎಂದು ಏಕನಾಥ್‌ ಶಿಂಧೆ ಕಿಡಿಕಾರಿದರು.

ನಾನು ಶಿವಸೇನೆ ಪಕ್ಷವನ್ನು ವಿಸರ್ಜಿಸುತ್ತೇನೆಯೇ ಹೊರತು ಕಾಂಗ್ರೆಸ್‌ನೊಂದಿಗೆ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭಾಳ್‌ ಸಾಹೇಬ್‌ ಠಾಕ್ರೆ ಹೇಳುತ್ತಿದ್ದರು. ಆದರೆ ಅವರ ಪುತ್ರ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಕುರ್ಚಿಗಾಗಿ ಹಿಂದುತ್ವ ಸಿದ್ಧಾಂತವನ್ನು ಬಲಿಕೊಟ್ಟು ಕಾಂಗ್ರೆಸ್‌ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡರು. ಇದು ಪಕ್ಷಕ್ಕೆ ಬಗೆದ ದ್ರೋಹವಲ್ಲವೇ ಎಂದು ಏಕನಾಥ್‌ ಶಿಂಧೆ ಪ್ರಶ್ನಿಸಿದರು.

ನೀವು ಈಗ ಹಿಂದುತ್ವದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಅವರು ಸ್ವಾತಂತ್ರ್ಯವೀರ ಸಾವರ್ಕರ್ ಅವರನ್ನು ವಿರೋಧಿಸುತ್ತಿದ್ದಾರೆ. ಸಾವರ್ಕರ್ ನಮ್ಮ ದೇವರು ಮತ್ತು ನಾವು ಅವರ ಹೆಸರನ್ನು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ನೀವು ಅಧಿಕಾರಕ್ಕಾಗಿ ಕಾಂಗ್ರೆಸ್‌ನ್ನು ಮೆಚ್ಚಿಸಲು ಸಾವರ್ಕರ್‌ ಬಗ್ಗೆ ಕೀಳಾಗಿ ಮಾತನಾಡಿದಾಗಲೂ ಸುಮ್ಮನಿದ್ದಿರಿ. ಇದೇನಾ ನಿಮ್ಮ ಹಿಂದುತ್ವ ಎಂದು ಏಕನಾಥ್‌ ಶಿಂಧೆ ಉದ್ಧವ್‌ ಠಾಕ್ರೆ ವಿರುದ್ಧ ತೀವ್ರ ಕಿಡಿಕಾರಿದರು.

ಉದ್ಧವ್‌ ಠಾಕ್ರೆ ಪ್ರಧಾನಿ ಮೋದಿ ಅವರನ್ನು ಗೇಲಿ ಮಾಡುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಫ್ಜಲ್ ಖಾನ್ ಎಂದು ಕರೆಯುತ್ತಾರೆ. ಆದರೆ ಈ ಇಬ್ಬರೂ ನಾಯಕರು ಭಾಳ್ ಸಾಹೇಬ್ ಠಾಕ್ರೆಯವರ ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸುವ ಮತ್ತು ಅಯೋಧ್ಯೆಯಲ್ಲಿ ರಾಮ‌ ಮಂದಿರವನ್ನು ನಿರ್ಮಾಣ ಮಾಡುವ ಕನಸನ್ನು ನನಸು ಮಾಡಿದ್ದಾರೆ. ಇಂತಹ ನಾಯಕರ ವಿರುದ್ಧ ಕೀಳಾಗಿ ಮಾತನಾಡುವುದನ್ನು ನೈಜ ಶಿವಸೈನಿಕ ಸಹಿಸುವುದಿಲ್ಲ ಎಂದು ಶಿಂಧೆ ಹರಿಹಾಯ್ದರು.

ನಾವು ಬಂಡಾಯವೇಳುವ ನಿರ್ಧಾರವನ್ನು ಸಂತೋಷದಿಂದ ತೆಗೆದುಕೊಂಡಿಲ್ಲ. ಈ ನಿರ್ಧಾರವನ್ನು ತೆಗೆದುಕೊಳ್ಳುವಾಗ ನಾವು ದುಃಖಿತರಾಗಿದ್ದೆವು. ಆದರೆ ಎರಡುವರೆ ವರ್ಷಗಳಿಂದ ನಾವು ತುಂಬ ಬಳಲುತ್ತಿದ್ದೆವು. ಇದಕ್ಕಾಗಿಯೇ ಬಂಯಾವೇಳುವ ಮೂಲಕ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಮೈತ್ರಿಕೂಟದಿಂದ ಹೊರಬಂದೆವು ಎಂದು ಏಕನಾಥ್‌ ಶಿಂಧೆ ಇದೇ ವೇಳೆ ಸ್ಪಷ್ಟಪಡಿಸಿದರು.

ಪಕ್ಷವನ್ನು ವಿಭಜಿಸುವ ತಮ್ಮ ಕ್ರಮವನ್ನು ʼಗದ್ಧರ್‌ʼ (ದಂಗೆ) ಎಂದು ಕರೆದ ಏಕನಾಥ್‌ ಶಿಂಧೆ, 1857 ರ ಬ್ರಿಟಿಷರ ವಿರುದ್ಧದ ದಂಗೆಗೆ ಹೋಲಿಸಿದರು. "ನನ್ನ ಮಗ ನನ್ನ ಮಗನಾಗುವ ಮೂಲಕ ನನ್ನ ಉತ್ತರಾಧಿಕಾರಿಯಾಗುವುದಿಲ್ಲ, ನನ್ನ ಉತ್ತರಾಧಿಕಾರಿ ಯಾರೇ ಆದರೂ ಆತನ ನನ್ನ ಮಗನಾಗಿರುತ್ತಾನೆ.." ಎಂಬ ಹರಿವಂಶರಾಯ್ ಬಚ್ಚನ್(ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಅವರ ತಂದೆ) ಅವರ ಕವಿತೆಯ ಸಾಲುಗಳನ್ನು ಉಚ್ಛರಿಸುವ ಮೂಲಕ, ಏಕನಾಥ್‌ ಶಿಂಧೆ ಅವರು ಉದ್ಧವ್‌ ಠಾಕ್ರೆ ಅವರಿಗೆ ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಭಾಳ್‌ ಸಾಹೇಬ್‌ ಠಾಕ್ರೆ ಅವರ ಮತ್ತೋರ್ವ ಪುತ್ರ ಜೈದೇವ್‌ ಠಾಕ್ರೆ ಅವರು ಸಿಎಂ ಏಕನಾಥ್‌ ಶಿಂಧೆ ಬಣಕ್ಕೆ ಬೆಂಬಲ ಘೋಷಿಸಿದ್ದು ವಿಶೇಷವಾಗಿತ್ತು.

IPL_Entry_Point

ವಿಭಾಗ