ಕನ್ನಡ ಸುದ್ದಿ  /  Nation And-world  /  Shraddha Murder: Men With Swords Attack Van Carrying Accused Aaftab

Shraddha murder: ಶ್ರದ್ಧಾ ಹತ್ಯೆ ಆರೋಪಿ ಅಫ್ತಾಬ್​​ನನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ತನ್ನ ಪ್ರಿಯತಮೆ ಶ್ರದ್ಧಾ ವಾಕರ್​ಳನ್ನು ಭೀಕರವಾಗಿ ಕೊಲೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾ ಮೇಲೆ ದಾಳಿ ನಡೆಸಲು ಕೆಲವರು ಮುಂದಾಗಿದ್ದಾರೆ. ಇಂದು ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.

ಅಫ್ತಾಬ್​​ನನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಅಫ್ತಾಬ್​​ನನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ನವದೆಹಲಿ: ತನ್ನ ಪ್ರಿಯತಮೆ ಶ್ರದ್ಧಾ ವಾಕರ್​ಳನ್ನು ಭೀಕರವಾಗಿ ಕೊಲೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾ ಮೇಲೆ ದಾಳಿ ನಡೆಸಲು ಕೆಲವರು ಮುಂದಾಗಿದ್ದಾರೆ. ಇಂದು ಅಫ್ತಾಬ್ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ವ್ಯಾನ್ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ.

ದಾಳಿ ನಡೆಸಿದವರನ್ನು ಹಿಂದೂ ಸೇನೆಯವರು ಎಂದು ಹೇಳಲಾಗಿದೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಹೊರಗೆ ಘಟನೆ ನಡೆದಿದ್ದು, ಕನಿಷ್ಠ ಐವರು ಪೊಲೀಸ್ ಸಿಬ್ಬಂದಿ ಪೂನಾವಾಲಾ ಅವರನ್ನು ಕಾವಲು ಕಾಯುತ್ತಿದ್ದರು. ಅಫ್ತಾಬ್ ಪೂನಾವಾಲಾನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿ ಕರೆತರುವಾಗ ಘಟನೆ ನಡೆದಿದೆ. ಇಬ್ಬರು ದಾಳಿಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರದ್ಧಾ ವಾಕರ್ ಹತ್ಯೆ ಪ್ರಕರಣ

ಮಹಾರಾಷ್ಟ್ರದ ಪಾಲ್ಘರ್‌ ಮೂಲದ ಶ್ರದ್ಧಾ ವಾಕರ್ (27) ಮುಂಬೈನಲ್ಲಿ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಡೇಟಿಂಗ್ ಅಪ್ಲಿಕೇಶನ್ ಮೂಲಕ ಅಫ್ತಾಬ್ ಅಮೀನ್ ಪೂನಾವಲ್ಲಾ (28) ಹಾಗೂ ಶ್ರದ್ಧಾಗೆ ಪರಿಚಯವಾಗಿದೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇಬ್ಬರೂ ಮುಂಬೈನಲ್ಲಿ ಲಿವಿಂಗ್​ ರಿಲೇಶನ್​ಶಿಪ್​ನಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ. ಈ ವಿಚಾರ ತಿಳಿದ ಶ್ರದ್ಧಾ ಪೋಷಕರು ವಿರೋಧ ವ್ಯಕ್ತಪಡಿಸಿ ಜಗಳವಾಡಿದ್ದಾರೆ. ಹೀಗಾಗಿ ಅಫ್ತಾಬ್ ಹಾಗೂ ಶ್ರದ್ಧಾ ಮುಂಬೈ ತೊರೆದು ದೆಹಲಿಯಲ್ಲಿ ವಾಸಿಸುತ್ತಿದ್ದರು.

ಒಟ್ಟು ಮೂರು ವರ್ಷಗಳಿಂದ ಇಬ್ಬರು ಲಿವಿಂಗ್​ ಟುಗೆದರ್​ನಲ್ಲಿದ್ದರು. ಇಬ್ಬರೂ ದೆಹಲಿಗೆ ಸ್ಥಳಾಂತರಗೊಂಡ ನಂತರ, ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲು ಶುರು ಮಾಡಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. 2022ರ ಮೇ 18 ರಂದು ಇದೇ ವಿಚಾರಕ್ಕೆ ನಡೆದ ಜಗಳ ತಾರಕಕ್ಕೇರಿದೆ. ಆಕೆಯ ಕತ್ತು ಹಿಸುಕಿದ ಅಫ್ತಾಬ್, ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಹೊಸ ಫ್ರಿಡ್ಜ್​ ಖರೀದಿಸಿ ಅವಳ ದೇಹದ ಭಾಗಗಳನ್ನು ಅದರಲ್ಲಿ ಸಂಗ್ರಹಿಸಿಟ್ಟಿದ್ದಾನೆ. 18 ದಿನಗಳ ನಂತರ ರಾತ್ರಿ ಸಮಯದಲ್ಲಿ ಅದನ್ನು ಕಾಡು ಪ್ರದೇಶ ಸೇರಿದಂತೆ ಇತರೆಡೆ ಎಸೆದಿದ್ದಾನೆ ಎಂದು ದಕ್ಷಿಣ ದೆಹಲಿಯ ಹೆಚ್ಚುವರಿ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ.

ಶ್ರದ್ಧಾ ಹತ್ಯೆ ಮಾಡುವ ಮೊದಲು ಡೆಕ್ಸ್ಟರ್ ಸೇರಿದಂತೆ ಹಲವು ಕ್ರೈಂ ಸಿನಿಮಾಗಳು ಮತ್ತು ಕ್ರೈಂ ವೆಬ್ ಸೀರೀಸ್‌ಗಳನ್ನು ಆರೋಪಿ ವೀಕ್ಷಿಸಿದ್ದ. ಶ್ರದ್ಧಾಗಿಂತ ಮುಂಚೆಯೇ ಅಫ್ತಾಬ್ ಅನೇಕ ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದ ಎಂದು ದೆಹಲಿ ಪೊಲೀಸ್ ಮೂಲಗಳು ಬಹಿರಂಗಪಡಿಸಿವೆ.

ಕಳೆದ ಎರಡೂವರೆ ತಿಂಗಳಿನಿಂದ ಶ್ರದ್ಧಾಳೊಂದಿಗೆ ಯಾವುದೇ ಸಂಪರ್ಕವಿಲ್ಲ ಮತ್ತು ಆಕೆಯ ಮೊಬೈಲ್ ಸಂಖ್ಯೆಯೂ ಸ್ವಿಚ್ ಆಫ್ ಆಗಿದೆ ಎಂದು ಸಂತ್ರಸ್ತೆಯ ಸ್ನೇಹಿತೆ ಸೆಪ್ಟೆಂಬರ್‌ನಲ್ಲಿ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆಕೆಯ ಕುಟುಂಬವು ಆಕೆಯ ಸೋಷಿಯಲ್​ ಮೀಡಿಯಾವನ್ನು ಪರಿಶೀಲಿಸಿದಾಗ ಆಕೆಯಿಂದ ಯಾವುದೇ ಅಪ್​ಡೇಟ್​ ಇಲ್ಲದಿದ್ದನ್ನು ಗಮನಿಸಿದ್ದಾರೆ. ಶ್ರದ್ಧಾ ತಂದೆ ವಿಕಾಶ್ ಮದನ್ ವಾಕರ್ ಮುಂಬೈ ಪೊಲೀಸರನ್ನು ಸಂಪರ್ಕಿಸಿ ಮಗಳು ಕಾಣೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು.

ಅಫ್ತಾಬ್ ನನ್ನ ಕೊಲ್ಲುತ್ತಾನೆ, ತುಂಡು-ತುಂಡುಗಳಾಗಿ ಕತ್ತರಿಸಿ ಎಸೆಯುತ್ತಾನೆ ಎಂದು 2020ರಲ್ಲೇ ಹೇಳಿದ್ದ ಶ್ರದ್ಧಾ

"ಅಫ್ತಾಬ್ ನನ್ನ ಕೊಲ್ಲುತ್ತಾನೆ, ತುಂಡು-ತುಂಡುಗಳಾಗಿ ಕತ್ತರಿಸಿ ಎಸೆಯುತ್ತಾನೆ" ಎಂದು 2020ರಲ್ಲೇ ಶ್ರದ್ಧಾ ಮಹಾರಾಷ್ಟ್ರದ ಪಾಲ್ಘರ್‌ನ ತುಳಿಂಜ್ ಠಾಣಾ ಪೊಲೀಸರಿಗೆ ಪತ್ರವೊಂದರ ಮೂಲಕ ತಿಳಿಸಿದ್ದಳು ಎಂಬುದು ಬಯಲಾಗಿದೆ. "ಅಫ್ತಾಬ್ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ಪೊಲೀಸರ ಬಳಿ ಹೋಗಲು ನನಗೆ ಧೈರ್ಯವಿಲ್ಲ. ಪತ್ರವನ್ನು ಬರೆಯುವ ದಿನವೇ ಅಫ್ತಾಬ್ ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದನು. ತುಂಡು ತುಂಡುಗಳಾಗಿ ಕತ್ತರಿಸಿ ಎಸೆಯುವ ಬೆದರಿಕೆ ಹಾಕಿದ್ದನು. ಆರು ತಿಂಗಳಿನಿಂದ ಅವನು ನನ್ನನ್ನು ಹೊಡೆಯುತ್ತಿದ್ದಾನೆ. ಅಫ್ತಾಬ್ ನನ್ನನ್ನು ಥಳಿಸಿರುವುದು ಮತ್ತು ನನ್ನನ್ನು ಕೊಲ್ಲಲು ಯತ್ನಿಸಿರುವುದು ಆತನ ಪೋಷಕರಿಗೆ ತಿಳಿದಿತ್ತು. ನಾನು ಶೀಘ್ರದಲ್ಲೇ ಮದುವೆಯಾಗಬೇಕು ಮತ್ತು ಅವನ ಕುಟುಂಬದ ಆಶೀರ್ವಾದವನ್ನು ಪಡೆಯಬೇಕೆಂದು ನಾನು ಅವನೊಂದಿಗೆ ವಾಸಿಸುತ್ತಿದ್ದೆ. ಇನ್ನು ಮುಂದೆ, ನಾನು ಅವನೊಂದಿಗೆ ವಾಸಿಸಲು ಸಿದ್ಧಳಿಲ್ಲ" ಎಂದು ಶ್ರದ್ಧಾ ದೂರು ಪತ್ರದಲ್ಲಿ ಬರೆದಿದ್ದಳು.

IPL_Entry_Point

ವಿಭಾಗ