Sikkim Flood: ಸಿಕ್ಕಿಂ ಪ್ರವಾಹಕ್ಕೆ ಸೇತುವೆಯೇ ಕೊಚ್ಚಿ ಹೋಯ್ತು, ಎಂಟು ಸೇನಾ ಸಿಬ್ಬಂದಿ ಸೇರಿ 53 ಮಂದಿ ಸಾವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sikkim Flood: ಸಿಕ್ಕಿಂ ಪ್ರವಾಹಕ್ಕೆ ಸೇತುವೆಯೇ ಕೊಚ್ಚಿ ಹೋಯ್ತು, ಎಂಟು ಸೇನಾ ಸಿಬ್ಬಂದಿ ಸೇರಿ 53 ಮಂದಿ ಸಾವು

Sikkim Flood: ಸಿಕ್ಕಿಂ ಪ್ರವಾಹಕ್ಕೆ ಸೇತುವೆಯೇ ಕೊಚ್ಚಿ ಹೋಯ್ತು, ಎಂಟು ಸೇನಾ ಸಿಬ್ಬಂದಿ ಸೇರಿ 53 ಮಂದಿ ಸಾವು

Sikkim Flood updates ಸಿಕ್ಕಿಂ ರಾಜ್ಯದಲ್ಲಿ ಪ್ರವಾಹದಿಂದ ಚುಂಗ್‌ ತಾಂಗ್‌ ಪಟ್ಟಣ ಸೇರಿದಂತೆ ಹಲವು ಕಡೆ ಭಾರೀ ಅನಾಹುತವಾಗಿವೆ. ಸೇತುವೆಗಳು, ಜಲವಿದ್ಯುತ್‌ ಘಟಕಗಳು ಕೊಚ್ಚಿಕೊಂಡು ಹೋಗಿವೆ. 53 ಮಂದಿ ಮೃತಪಟ್ಟಿದ್ದಾರೆ. ಕಾಣೆಯಾದವರ ಪತ್ತೆಯೂ ಮುಂದುವರಿದಿದೆ.

ಸಿಕ್ಕಿಂ ರಾಜ್ಯ ಚುಂಗ್‌ ತಾಂಗ್‌ ಪಟ್ಟಣದ ಬಹುತೇಕ ಭಾಗ ಪ್ರವಾಹದಿಂದ ಕೊಚ್ಚಿ ಹೋಗಿದೆ.
ಸಿಕ್ಕಿಂ ರಾಜ್ಯ ಚುಂಗ್‌ ತಾಂಗ್‌ ಪಟ್ಟಣದ ಬಹುತೇಕ ಭಾಗ ಪ್ರವಾಹದಿಂದ ಕೊಚ್ಚಿ ಹೋಗಿದೆ.

ಗ್ಯಾಂಗ್ಟಕ್‌: ನಾಲ್ಕು ದಿನದ ಹಿಂದಿನ ಮೇಘಸ್ಪೋಟದ ನಂತರ ಪ್ರವಾಹದಿಂದ ನಲುಗಿರುವ ಸಿಕ್ಕಿಂ ರಾಜ್ಯದಲ್ಲಿ ಸೇತುವೆಯೇ ಕೊಚ್ಚಿ ಹೋಗಿದೆ.

ಈವರೆಗೂ ಎಂಟು ಸೇನಾ ಸಿಬ್ಬಂದಿ ಸೇರಿ 53 ಮಂದಿ ಮೃತಪಟ್ಟಿದ್ದಾರೆ. ಇನ್ನೂ 140 ಮಂದಿ ಪ್ರವಾಹದಲ್ಲಿ ಕಣ್ಮರೆಯಾಗಿದ್ದು ಅವರ ಹುಡುಕಾಟ ನಡೆದಿದೆ.

ಚುಂಗ್‌ತಾಂಗ್‌ ಜಿಲ್ಲೆಯಲ್ಲಿ ಲೋಹ್ನಾಕ್‌ ಸರೋವರ ಒಡೆದು ಅಲ್ಲಿಂದ ನೀರು ಕೆಳ ಭಾಗಕ್ಕೆ ಈಗಲೂ ಹರಿಯುತ್ತಿದೆ. ಇದರಿಂದ ಸರೋವರದ ಕೆಳ ಭಾಗದಲ್ಲಿಯೇ ಭಾರೀ ಅನಾಹುತ ಉಂಟಾಗಿದೆ. ಅದರಲ್ಲೂ ಚುಂಗ್‌ತಾಂಗ್‌ ಪಟ್ಟಣದ ಬಹುಭಾಗ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಜಲಾಶಯವೂ ಹಾಳಾಗಿದ್ದು, ವಿದ್ಯುತ್‌ ಘಟಕ ಕೊಚ್ಚಿಕೊಂಡು ಹೋಗಿದೆ. ಸಮೀಪದಲ್ಲಿಯೇ ಸೇತುವೆಯೊಂದು ಕೂಡ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿದ್ದು. ಅವಶೇಷ ಮಾತ್ರ ಅಲ್ಲಲ್ಲಿ ಉಳಿದಿದೆ.

ಮುಖ್ಯವಾಗಿ ಚುಂಗ್‌ ತಾಂಗ್‌ ಪಟ್ಟಣದ ಸಮೀಪದಲ್ಲಿಯೇ ಇರುವ ಲಾಚೆನ್‌ ಹಾಗೂ ಲಾಚುಂಗ್‌ ಗ್ರಾಮಗಳು ಸಂಪೂರ್ಣ ಪ್ರವಾಹಕ್ಕೆ ಹಾನಿಯಾಗಿದೆ. ಇವು ಪ್ರವಾಸಿ ಗ್ರಾಮಗಳೂ ಹೌದು. ಇಲ್ಲಿಗೆ ಬಂದಿದ್ದ ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿದ್ದರು ಅವರನ್ನು ರಕ್ಷಿಸಲಾಗಿದೆ. ಆದರೂ ಎರಡು ದಿನದಿಂದ ಸಮರ್ಪಕ ರಕ್ಷಣಾ ಕಾರ್ಯವಿಲ್ಲದೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.

ಸಿಕ್ಕಿಂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ನಾಲ್ಕು ದಿನದಲ್ಲಿ ಪ್ರವಾಹದ ಸುಳಿಗೆ 53 ಮಂದಿ ಸಿಲುಕಿದ್ದು, ಎಂಟು ಮಂದಿ ಸೇನಾ ಸಿಬ್ಬಂದಿಯೂ ಬಲಿಯಾಗಿದ್ದಾರೆ, ಕೆಲವರನ್ನು ರಕ್ಷಿಸಲಾಗಿದೆ. ಈವರೆಗೂ 140 ಮಂದಿ ಕಣ್ಮರೆಯಾಗಿದ್ದು, ಅವರ ನಿರಂತರ ಹುಡುಕಾಟ ಸಾಗಿದೆ.

ಈವರೆಗೂ 1,173 ಮನೆಗಳು ಹಾಳಾಗಿದ್ದು, 2,000 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಈವರೆಗೂ 14 ಸೇತುವೆಗಳು ಹಾಳಾಗಿ ಹೋಗಿದ್ದು, ಉತ್ತರ ಸಿಕ್ಕಿಂನ ಸಂಪರ್ಕವನ್ನು ಸರಿಪಡಿಸುವ ಕಾರ್ಯ ಮುಂದುವರಿದಿದೆ.

ಈಗಾಗಲೇ ಚುಂಗ್‌ತಾಂಗ್‌ನ ಸಂಪರ್ಕವನ್ನು ಮರು ಸ್ಥಾಪಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ರಸ್ತೆಗಳನ್ನು ಸರಿಪಡಿಸುವ ಕಾರ್ಯವೂ ನಡೆದಿದೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂ.ಗಳ ನೆರವನ್ನು ಸಿಎಂ ಪ್ರೇಮ್‌ ಸಿಂಗ್‌ ತಮಂಗ್‌ ಅಧಿಕಾರಿಗಳ ಸಭೆ ನಡೆಸಿ ಪ್ರಕಟಿಸಿದ್ದಾರೆ.

ಶಾಸಕನ ಸಾಹಸ

ಈ ನಡುವೆ ಪ್ರವಾಹದಿಂದ ಆಗಿರುವ ಅನಾಹುತ ಅಧ್ಯಯನಕ್ಕೆ ಆಗಮಿಸಿದ್ದ ತಂಡದೊಂದಿಗೆ ಬಂದ ಲಂಚೇನ್‌ ಮಂಗನ್‌ ಕ್ಷೇತ್ರದ ಶಾಸಕ ಸಂಡುಪ್‌ ಲೇಪ್ಚಾ ಅವರು ಅನಾಹುತದ ಸ್ಥಳವನ್ನು ಜಿಪ್‌ ಲೈನ್‌ ನಲ್ಲಿ ವೀಕ್ಷಿಸಿ ಗಮನ ಸೆಳೆದಿದ್ದಾರೆ.

ಶನಿವಾರ ಪೆಗಾಂಗ್‌ ಗ್ರಾಮಕ್ಕೆ ತಂಡ ಆಗಮಿಸಿತ್ತು. ಈ ವೇಳೆ ಟೀಸ್ತಾ ನದಿಗೆ ನಿರ್ಮಿಸಿರುವ ಜಲಾಶಯದ ಜಲ ವಿದ್ಯುತ್‌ ಘಟಕವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಇದರ ವೀಕ್ಷಣೆಗೆ ಜಿಪ್‌ಲೈನ್‌ ಮೂಲಕ ಹೊರಟರು. ಬೆನ್ನಿಗೆ ಹಗ್ಗ ಕಟ್ಟಿಕೊಂಡು ರಕ್ಷಣಾ ಸಿಬ್ಬಂದಿ ಸಹಕಾರದಿಂದ ಧೈರ್ಯದಿಂದಲೇ ಹೊರಟ ಲೇಪ್ಚಾ ಒಂದು ಸುತ್ತು ಹಾಕಿ ಬಂದರು. ಸ್ಥಳೀಯರಿಗೆ ಪರ್ಯಾಯ ಮಾರ್ಗ ಕಲ್ಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮಾಹಿತಿಯನ್ನು ಖುದ್ದು ಪಡೆದುಕೊಂಡ ಶಾಸಕ ನಂತರ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.