ತಿರುಪತಿ ಲಡ್ಡು ವಿವಾದ ಪ್ರಕರಣ; ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಬಿಐ ನೇತೃತ್ವದ ತನಿಖಾ ತಂಡ
ತಿರುಪತಿ ಲಡ್ಡು ಪ್ರಸಾದ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖಾ ತಂಡವು ನಾಲ್ವರನ್ನು ಬಂಧಿಸಿದೆ. ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಸಿಬಿಐ ಕಳೆದ ವರ್ಷದ ನವೆಂಬರ್‌ನಲ್ಲಿ ಐದು ಸದಸ್ಯರ ತನಿಖಾ ತಂಡವನ್ನು ರಚಿಸಿತ್ತು.

ನವದೆಹಲಿ: ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಮಾಡಿದ ಆರೋಪದ ಮೇಲೆ, ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು ನಾಲ್ವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತರ ಪೈಕಿ ತಮಿಳುನಾಡಿನ ಎಆರ್ ಡೈರಿ, ಉತ್ತರ ಪ್ರದೇಶದ ಪರಾಗ್ ಡೈರಿ, ಪ್ರೀಮಿಯರ್ ಅಗ್ರಿ ಫುಡ್ಸ್ ಮತ್ತು ಆಲ್ಫಾ ಮಿಲ್ಕ್ ಫುಡ್ಸ್ ಸೇರಿದಂತೆ ಲಡ್ಡು ತಯಾರಿಗೆ ತುಪ್ಪ ಸರಬರಾಜು ಮಾಡುವ ಸಂಸ್ಥೆಗಳ ವ್ಯಕ್ತಿಗಳು ಸೇರಿದ್ದಾರೆ.
ಲಡ್ಡು ತಯಾರಿಗೆ ತುಪ್ಪ ಪೂರೈಕೆ ಸಮಯದಲ್ಲಿ ಕೆಲವು ನಿಯಮಗಳ ಗಂಭೀರ ಉಲ್ಲಂಘನೆಯಾಗಿರುವುದನ್ನು ತನಿಖೆ ಬಹಿರಂಗಪಡಿಸಿದೆ. ತಯಾರಿಯ ಪ್ರತಿ ಹಂತದಲ್ಲೂ ಅಕ್ರಮಗಳಿವೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ವೈಷ್ಣವಿ ಡೈರಿಯ ಪ್ರತಿನಿಧಿಗಳು ತುಪ್ಪ ಪೂರೈಕೆಗಾಗಿ ಎಆರ್ ಡೈರಿಯ ಹೆಸರಿನಲ್ಲಿ ಟೆಂಡರ್ ಪಡೆದುಕೊಂಡರು. ವೈಷ್ಣವಿ ಡೈರಿಯು ಸುಳ್ಳು ದಾಖಲೆ ಮಾತ್ರವಲ್ಲದೆ ಸೀಲ್ ತಯಾರಿಸಿ ವಂಚಿಸಿದೆ. ಅಲ್ಲದೆ ಟೆಂಡರ್ ಪ್ರಕ್ರಿಯೆಯನ್ನು ಸುಲಭವಾಗಿ ನಿರ್ವಹಿಸಲು ಎಆರ್ ಡೈರಿಯ ಹೆಸರನ್ನು ಬಳಸಿಕೊಂಡಿದೆ. ಇದೇ ವೇಳೆ ರೂರ್ಕಿಯಲ್ಲಿರುವ ಭೋಲೆ ಬಾಬಾ ಡೈರಿಯಿಂದ ತುಪ್ಪವನ್ನು ಪಡೆದಿರುವುದಾಗಿ ಹೇಳಿಕೊಂಡು ವೈಷ್ಣವಿ ಡೈರಿ ಕೂಡಾ ನಕಲಿ ದಾಖಲೆಗಳನ್ನು ರಚಿಸಿದೆ ಎಂದು ಟಿಡಿಪಿ ರಾಜ್ಯ ಕಚೇರಿ ಮಾಹಿತಿ ನೀಡಿದೆ.
ಐದು ಸದಸ್ಯರ ತನಿಖಾ ತಂಡದಿಂದ ತನಿಖೆ
ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಸಿಬಿಐ ಕಳೆದ ವರ್ಷದ ನವೆಂಬರ್‌ನಲ್ಲಿ ಐದು ಸದಸ್ಯರ ತನಿಖಾ ತಂಡವನ್ನು ರಚಿಸಿತ್ತು. ಈ ತಂಡದಲ್ಲಿ ಕೇಂದ್ರ ಸಂಸ್ಥೆಯ ಇಬ್ಬರು, ಇಬ್ಬರು ಆಂಧ್ರಪ್ರದೇಶ ಪೊಲೀಸರು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಒಬ್ಬರು ಇದ್ದರು.
ಬಂಧಿತರನ್ನು ಭೋಲೆ ಬಾಬಾ ಡೈರಿಯ ಮಾಜಿ ನಿರ್ದೇಶಕರಾದ ವಿಪಿನ್ ಜೈನ್ ಮತ್ತು ಪೊಮಿಲ್ ಜೈನ್, ವೈಷ್ಣವಿ ಡೈರಿಯ ಅಪೂರ್ವ ಚಾವ್ಡಾ ಮತ್ತು ಎಆರ್ ಡೈರಿಯ ರಾಜು ರಾಜಶೇಖರನ್ ಎಂದು ಗುರುತಿಸಲಾಗಿದೆ. "ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ತುಪ್ಪ ಪೂರೈಕೆಯ ಪ್ರತಿಯೊಂದು ಹಂತದಲ್ಲೂ ಗಂಭೀರ ಉಲ್ಲಂಘನೆಗಳು ಎಸ್ಐಟಿ ತನಿಖೆಯಿಂದ ತಿಳಿದುಬಂದಿದೆ. ಹೀಗಾಗಿ ಅವರನ್ನು ಬಂಧಿಸಲಾಗಿದೆ. ದೇವಾಲಯಕ್ಕೆ ತುಪ್ಪವನ್ನು ಪೂರೈಸಲು ವೈಷ್ಣವಿ ಡೈರಿ ಅಧಿಕಾರಿಗಳು ಎಆರ್ ಡೈರಿ ಹೆಸರಿನಲ್ಲಿ ಟೆಂಡರ್ ಪಡೆದಿದ್ದಾರೆ ಮತ್ತು ಟೆಂಡರ್ ಪ್ರಕ್ರಿಯೆಯನ್ನು ತಿರುಚಲು ನಕಲಿ ದಾಖಲೆಗಳನ್ನು ರಚಿಸುವಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಭೋಲೆ ಬಾಬಾ ಡೈರಿಯಿಂದ ತುಪ್ಪವನ್ನು ಪಡೆಯಲಾಗಿದೆ ಎಂದು ವೈಷ್ಣವಿ ಡೈರಿ ಸುಳ್ಳು ಹೇಳಿಕೊಂಡಿದೆ ಎಂದು ಎಸ್ಐಟಿ ತನಿಖೆಯಲ್ಲಿ ಪತ್ತೆಹಚ್ಚಿದೆ.
ಚಂದ್ರಬಾಬು ನಾಯ್ಡು ಆರೋಪ
ಆಂಧ್ರಪ್ರದೇಶದಲ್ಲಿ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ಆಡಳಿತದ ಅವಧಿಯಲ್ಲಿ, ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ ಬಳಿಕ, ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಯ್ತು.
