Planets align: ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ; ಒಂದೇ ಸಾಲಲ್ಲಿ 6 ಗ್ರಹ! ಶುಕ್ರ, ಶನಿ, ಗುರು, ಮಂಗಳವನ್ನು ಬರಿಗಣ್ಣಲ್ಲಿ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Planets Align: ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ; ಒಂದೇ ಸಾಲಲ್ಲಿ 6 ಗ್ರಹ! ಶುಕ್ರ, ಶನಿ, ಗುರು, ಮಂಗಳವನ್ನು ಬರಿಗಣ್ಣಲ್ಲಿ ನೋಡಿ

Planets align: ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ; ಒಂದೇ ಸಾಲಲ್ಲಿ 6 ಗ್ರಹ! ಶುಕ್ರ, ಶನಿ, ಗುರು, ಮಂಗಳವನ್ನು ಬರಿಗಣ್ಣಲ್ಲಿ ನೋಡಿ

Six planets alignment 2025: ಖಗೋಳಾಸಕ್ತರಿಗೆ ಇಂದಿನಿಂದ ದಿಗಂತದಲ್ಲಿ ಅಚ್ಚರಿಯ ಸರಮಾಲೆಯೇ ಕಾದಿದೆ. ಜನವರಿ 21ರಿಂದ 25ರವರೆಗೆ ಅಪರೂಪದ ಖಗೋಳ ವಿದ್ಯಮಾನವನ್ನು ನೋಡಬಹುದು. ಶುಕ್ರ, ಶನಿ, ಗುರು ಮತ್ತು ಮಂಗಳ ಗ್ರಹಗಳನ್ನು ಭೂಮಿಯಲ್ಲಿರುವ ನಾವೆಲ್ಲರೂ ಬರಿಗಣ್ಣಿನಲ್ಲಿ ನೋಡಬಹುದು. ಆರು ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಲಿವೆ.

ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ
ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ

ನೀಲಾಕಾಶವೇ ಒಂದು ಅಚ್ಚರಿ. ಅಲ್ಲಿ ಆಗಾಗ ಅಚ್ಚರಿಗಳು, ಅದ್ಭುತಗಳು ಕಾಣಿಸುತ್ತವೆ. ಜನವರಿ 21ರಿಂದ 25ರವರೆಗೆ ಅಪರೂಪದ ಖಗೋಳ ವಿದ್ಯಮಾನವನ್ನು ಎಲ್ಲರೂ ಬರೀಗಣ್ಣಿನಿಂದ ಕಣ್ತುಂಬಿಕೊಳ್ಬಹುದು. ಶುಕ್ರ, ಶನಿ, ಗುರು ಮತ್ತು ಮಂಗಳ ಗ್ರಹಗಳನ್ನು ಭೂಮಿಯಲ್ಲಿರುವ ನಾವೆಲ್ಲರೂ ಬರಿಗಣ್ಣಿನಲ್ಲಿ ನೋಡಬಹುದು. ಶುಕ್ರ ಮತ್ತು ಶನಿ ಗ್ರಹಗಳು ಪರಸ್ಪರ ಎರಡು ಡಿಗ್ರಿಗಳ ಅಂತರದಲ್ಲಿ ಬರಿಗಣ್ಣಿಗೆ ಕಾಣಿಸಲಿವೆ. ಆರು ಗ್ರಹಗಳನ್ನು ಒಂದೇ ಸಾಲಿನಲ್ಲಿ ನೋಡಬಹುದಾದ ಅಪರೂಪದ ಕ್ಷಣವಿದು. ವಿಶೇಷವಾಗಿ, ಖಗೋಳಾಸಕ್ತರು, ನಕ್ಷತ್ರವೀಕ್ಷಕರು, ಖಗೋಳ ವಿದ್ಯಾರ್ಥಿಗಳು ತಪ್ಪದೇ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಬಹುದು.

ಯಾವಾಗ ಮತ್ತು ಎಲ್ಲಿ ನೋಡಬಹುದು?

ಈ ಅಪರೂಪದ ಖಗೋಳ ವಿದ್ಯಮಾನವನ್ನು ನೋಡಲು ಸೂಕ್ತ ಸಮಯ ಯಾವುದೆಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಸೂರ್ಯಾಸ್ತವಾದ 45 ನಿಮಿಷಗಳ ತರುವಾಯ ಈ ವಿದ್ಯಮಾನ ಅತ್ಯುತ್ತಮವಾಗಿ ಕಾಣಿಸಲಿದೆ. ಶುಕ್ರ ಮತ್ತು ಶನಿ ಗ್ರಹಗಳು ನೈಋತ್ಯದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತವೆ. ಆಗ್ನೇಯದಲ್ಲಿ ಗುರುಗ್ರಹವು ಕಾಣಿಸುತ್ತದೆ. ಮಂಗಳವು ಪೂರ್ವದಲ್ಲಿ ಕಾಣಿಸುತ್ತದೆ. ಶುಕ್ರ ಮತ್ತು ಶನಿ ಗ್ರಹಗಳು ಅಸ್ತಮಿಸುವ ಮೂರು ಗಂಟೆಗಳ ಮೊದಲು ಒಂದೇ ಸಾಲಿನಂತಹ ಜೋಡಣೆ ನೋಡಬಹುದು. ನಿಮಗೆ ಈ ವಿದ್ಯಮಾನವನ್ನು ನೋಡುವ ಅಸಕ್ತಿ ಇದ್ದರೆ ನಗರದ ದೀಪಗಳಿಂದ ದೂರವಿರುವ ಕತ್ತಲೆಯ ಸ್ಥಳವನ್ನು ಹುಡುಕಿ. ನೈಋತ್ಯ ದಿಗಂತದ ಕಡೆಗೆ ನೋಡಿ.

ಶುಕ್ರ ಮತ್ತು ಶನಿ ಸಂಯೋಗ

ಜನವರಿ 18ರ ಶನಿವಾರ ಪ್ರಾರಂಭವಾಗುವ ಶುಕ್ರ-ಶನಿ ಸಂಯೋಗವು ಈ ಖಗೋಳ ವಿದ್ಯಮಾನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಆಕಾಶದಲ್ಲಿ ಎರಡನೇ ಅತ್ಯಂತ ಪ್ರಕಾಶಮಾನವಾದ ಶುಕ್ರವು ಶನಿಗಿಂತ 110 ಪಟ್ಟು ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ. ಈ ಎರಡು ಗ್ರಹಗಳು ಬರೀ ಗಣ್ಣಿಗೆ ತುಂಬಾ ಹತ್ತಿರದಲ್ಲಿದ್ದಂತೆ ಗೋಚರಿಸುತ್ತದೆ. ಬೈನಾಕ್ಯುಲರ್‌ ಮೂಲಕ ನೋಡಿದವರಿಗಂತೂ ಈ ಎರಡು ಗ್ರಹಗಳು ಕಣ್ಣ ಮುಂದೆಯೇ ಇರುವಂತೆ ಕಾಣಿಸಿದೆ. ಆಕಾಶದಲ್ಲಿ ಈ ಖಗೋಳ ವಿದ್ಯಮಾನವನ್ನು ಕೂಡ ನೋಡಲು ಮರೆಯದಿರಿ.

ಆಕಾಶದ ಅದ್ಭುತ ವಿದ್ಯಮಾನಗಳು ಇಷ್ಟಕ್ಕೆ ಸೀಮಿತವಲ್ಲ. ಈ ಸಮಯದಲ್ಲಿ ನೆಪ್ಚೂನ್‌ ಮತ್ತು ಯುರೇನಸ್‌ ಅನ್ನು ದೂರದರ್ಶಕದ ಮೂಲಕ ನೋಡಲು ಸಾಧ್ಯವಾಗುತ್ತದೆ. ಶುಕ್ರ ಮತ್ತು ಶನಿಯ ಬಳಿಯಲ್ಲಿ ನೆಪ್ಚೂನ್‌ ಅನ್ನು ನೋಡಬಹುದು. ಗುರುಗ್ರಹದ ಮೇಲೆ ಯುರೇನಸ್‌ ಅನ್ನು ನೋಡಬಹುದು. ಆದರೆ, ಈ ಖಗೋಳ ಪ್ರದರ್ಶನದಲ್ಲಿ ಬುಧ ಕಾಣಿಸುವುದಿಲ್ಲ. ಸೂರ್ಯನ ಪ್ರಜ್ವಲಿಕೆಯಿಂದಾಗಿ ಬುಧ ಅಸ್ಪಷ್ಟವಾಗಿರುತ್ತದೆ.

ಈ ಜನವರಿ ತಿಂಗಳು ಅನೇಕ ಆಕರ್ಷಕ ಪ್ರದರ್ಶನಗಳಿಗೆ ಆಕಾಶ ಸಾಕ್ಷಿಯಾಗಿದೆ. ಜನವರಿ 12ರಂದು ಮಂಗಳ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ಕಾಣಿಸಿದೆ. ಜನವರಿ 31ರಂದು ಅರ್ಧ ಚಂದ್ರನು ಶನಿಯಿಂದ ಕೇವಲ ಒಂದು ಡಿಗ್ರಿ ಅಂತರದಲ್ಲಿ ಕಾಣಿಸಿಕೊಳ್ಳುತ್ತಾನೆ. ಫೆಬ್ರವರಿ 1ರಂದು ಶುಕ್ರನ ಸಮೀಪದಲ್ಲಿ ಇದು ಕಾಣಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.