ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ವಿಲೀನ, 5 ಮುಖ್ಯ ಅಂಶಗಳು ಹಾಗೂ ಪರ್ಯಾಯ ಯಾವುದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ವಿಲೀನ, 5 ಮುಖ್ಯ ಅಂಶಗಳು ಹಾಗೂ ಪರ್ಯಾಯ ಯಾವುದು

ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ವಿಲೀನ, 5 ಮುಖ್ಯ ಅಂಶಗಳು ಹಾಗೂ ಪರ್ಯಾಯ ಯಾವುದು

ಸ್ಕೈಪ್ ಇನ್ನಿಲ್ಲ; ಬಹುಜನಪ್ರಿಯವಾಗಿದ್ದ ವಿಡಿಯೋ ಕರೆ ಆ್ಯಪ್‌ ಇಂದು (ಮೇ 5) ಸ್ಥಗಿತವಾಗಿದೆ. ಇದು ಮೈಕ್ರೋಸಾಫ್ಟ್‌ ಟೀಮ್ಸ್ ಜತೆಗೆ ವಿಲೀನವಾಗಿದೆ. ಈ ವಿದ್ಯಮಾನದ 5 ಮುಖ್ಯ ಅಂಶಗಳು ಹಾಗೂ ಇದಕ್ಕೆ ಪರ್ಯಾಯವಾಗಿ ಬಳಕೆಯಲ್ಲಿರುವ ಆ್ಯಪ್‌ನ ವಿವರ ಇಲ್ಲಿದೆ.

ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ವಿಲೀನ (ಸಾಂಕೇತಿಕ ಚಿತ್ರ)
ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ವಿಲೀನ (ಸಾಂಕೇತಿಕ ಚಿತ್ರ)

ಸ್ಕೈಪ್ ಇನ್ನಿಲ್ಲ; ಮೈಕ್ರೋಸಾಫ್ಟ್ ತನ್ನ ಅಧೀನದ ಸ್ಕೈಪ್‌ ಎಂಬ ಬಹಳ ಜನಪ್ರಿಯ ವಿಡಿಯೋ ಕರೆ ಆ್ಯಪ್‌ ಅನ್ನು ಇಂದು (ಮೇ 5) ಅಧಿಕೃತವಾಗಿ ಸ್ಥಗಿತಗೊಳಿಸುತ್ತಿದೆ. ಇಂಟರ್‌ನೆಟ್ ಯುಗದ ಆರಂಭಿಕ ಆ್ಯಪ್‌ ಇದಾಗಿದ್ದು, ಎರಡು ದಶಕಕ್ಕೂ ಹೆಚ್ಚು ಕಾಲ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತ್ತು. ಈಗ ಸ್ಕೈಪ್ ಬಳಕೆದಾರರನ್ನು ಮೈಕ್ರೋಸಾಫ್ಟ್ ಟೀಮ್ಸ್ (ಫ್ರೀ) ಬಳಸುವಂತೆ ಮೈಕ್ರೋಸಾಫ್ಟ್ ಉತ್ತೇಜಿಸುತ್ತಿದೆ. ಸ್ಕೈಪ್‌ನಲ್ಲಿದ್ದ ಚಾಟ್ಸ್‌ ಮತ್ತು ಸಂಪರ್ಕ ವಿವರಗಳು ಮೈಕ್ರೋಸಾಫ್ಟ್ ಟೀಮ್ಸ್‌ಗೆ ವರ್ಗಾವಣೆಯಾಗಲಿದೆ. ಸ್ಕೈಪ್ ಬಳಕೆದಾರರು ಅದೇ ಲಾಗಿನ್ ಪಾಸ್‌ವರ್ಡ್ ಬಳಸಿಕೊಂಡು ಮೈಕ್ರೋಸಾಫ್ಟ್ ಟೀಮ್ಸ್‌ಗೆ ಲಾಗಿನ್ ಆಗಿ ಬಳಕೆ ಮಾಡಬಹುದು ಎಂದು ಕಂಪನಿ ಹೇಳಿದೆ.

ಸ್ಕೈಪ್ - ಮೈಕ್ರೋಸಾಫ್ಟ್ ಟೀಮ್ಸ್ ವಿಲೀನ, 5 ಮುಖ್ಯ ಅಂಶ

ಸಂವಹನ ಉಪಕರಣಗಳನ್ನು ಒಂದೆಡೆ ಸೇರಿಸಿ ಸಮಗ್ರ ಬಳಕೆದಾರ ಜಾಲವನ್ನು ಬೆಳೆಸಲು ಮೈಕ್ರೋಸಾಫ್ಟ್ ಮುಂದಾಗಿದೆ. ಹೀಗಾಗಿ ಎಲ್ಲರನ್ನೂ ಮೈಕ್ರೋಸಾಫ್ಟ್ ಟೀಮ್ಸ್‌ ಸೇರುವಂತೆ ಕಂಪನಿ ಉತ್ತೇಜಿಸುವುದನ್ನು ಮುಂದುವರಿಸಿದೆ. ಸ್ಕೈಪ್ ಹಳೆಯದಾಗಿದ್ದು, ಅತ್ಯಾಧುನಿಕ ಅಂಶಗಳಿರುವ ಮೈಕ್ರೋಸಾಫ್ಟ್ ಟೀಮ್ಸ್ ಬಳಕೆದಾರ ಸ್ನೇಹಿಯಾಗಿದೆ. ಇದಕ್ಕೆ ಸಂಬಂಧಿಸಿದ ಬ್ಲಾಗ್ ಪೋಸ್ಟ್‌ನಲ್ಲೂ ಇದೇ ವಿಚಾರವನ್ನು ಅದು ಹಂಚಿಕೊಂಡಿದೆ.

1) ಸ್ಕೈಪ್ ಇನ್ನಿಲ್ಲ ಯಾಕೆ?

ಇಂಟರ್‌ನೆಟ್‌ ಯುಗದ ಆರಂಭಿಕ ವಿಡಿಯೋ ಕರೆ ಆ್ಯಪ್‌ ಎರಡು ದಶಕ ಕಾಲ ಜನಪ್ರಿಯವಾಗಿ ಬಳಕೆಯಲ್ಲಿತ್ತು. 2003ರಲ್ಲಿ ಬಿಡುಗಡೆಯಾಗಿದ್ದ ಆ್ಯಪ್‌ ಬಹುತೇಕ ಮನೆಮಾತುಗಳಿಗೂ ವೇದಿಕೆಯೇ ಆಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸುಧಾರಿತ ವಿಡಿಯೋ ಕರೆ ಆ್ಯಪ್‌ಗಳ ಆಗಮನದಿಂದಾಗಿ, ಸ್ಕೈಪ್ ಜನಪ್ರಿಯತೆ ಕಡಿಮೆಯಾಗುತ್ತ ಸಾಗಿತು. ಮೈಕ್ರೋಸಾಫ್ಟ್ ಕೂಡ ಟೀಮ್ಸ್ ಅನ್ನು ಪರಿಚಯಿಸಿದ್ದು, ಅದರ ಕಡೆಗೆ ಹೆಚ್ಚು ಒಲವು ತೋರಿದೆ. ಇದು ಡಿಜಿಟಲ್ ಸಹಭಾಗಿತ್ವದ ಎಲ್ಲ ಅಗತ್ಯಗಳನ್ನು ಪೂರೈಸುವ ಆ್ಯಪ್‌ ಆಗಿದ್ದು, ಜನಪ್ರಿಯತೆ ಗಿಟ್ಟಿಸಿಕೊಳ್ಳತೊಡಗಿದೆ.

2) ಮೈಕ್ರೋಸಾಫ್ಟ್ ಟೀಮ್ಸ್ ಜತೆಗೆ ಸ್ಕೈಪ್ ವಿಲೀನ

ಮೈಕ್ರೋಸಾಫ್ಟ್ ಈಗಾಗಲೇ ಘೋಷಿಸಿದ ಪ್ರಕಾರ, ಸ್ಕೈಪ್ ಇಂದು (ಮೇ 5) ತನ್ನ ಕಾರ್ಯಸ್ಥಗಿತಗೊಳಿಸಲಿದೆ. ಸ್ಕೈಪ್ ಬಳಕೆದಾರರು ಸ್ಕೈಪ್ ಆ್ಯಪ್‌ನ ಲಾಗಿನ್ ಪಾಸ್‌ವರ್ಡ್ ಬಳಸಿಕೊಂಡು ಮೈಕ್ರೋಸಾಫ್ಟ್ ಟೀಮ್ಸ್‌ಗೆ ಲಾಗಿನ್ ಆಗಿ ಅಲ್ಲಿ ಬಳಕೆಯನ್ನು ಮುಂದುವರಿಸಬಹುದು ಎಂದು ಸೂಚಿಸಿದೆ. ಸ್ಕೈಪ್‌ನಲ್ಲಿದ್ದ ಎಲ್ಲ ಅಂಶಗಳಷ್ಟೆ ಅಲ್ಲದೇ ಹೊಸ ಫೀಚರ್‌ಗಳು ಕೂಡ ಟೀಮ್ಸ್‌ನಲ್ಲಿ ಬಳಕೆಗೆ ಸಿಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

3) ಪೇಯ್ಡ್ ಸ್ಕೈಪ್ ಬಳಕೆದಾರರಾ ಹಾಗಾದರೆ ಈ ಅಂಶ ಗಮನಿಸಿ

ಪೇಯ್ಡ್ ಸ್ಕೈಪ್ ಬಳಕೆದಾರರಾ ಹಾಗಾದರೆ ಅದಕ್ಕೆ ಸಂಬಂಧಿಸಿದ ಕ್ರೆಡಿಟ್ ಹಾಗೂ ಪ್ಲಾನ್‌ಗಳು ಸ್ಥಗಿತವಾಗಿವೆ. ಹಾಲಿ ಸ್ಕೈಪ್ ಚಂದಾದಾರರು ಅವರ ಬಿಲ್‌ ಸೈಕಲ್ ಮುಗಿಯುವ ತನಕ ಸ್ಕೈಪ್ ಬಳಸಬಹುದು. ನಂತರ ಪೋರ್ಟ್ ಮಾಡಿಕೊಳ್ಳಬಹುದು. ಸ್ಕೈಪ್‌ ನಂಬರ್‌ಗಳು ಸ್ಕೈಪ್ ವೆಬ್‌ ಅಥವಾ ಟೀಮ್ಸ್‌ನಲ್ಲಿ ಕೂಡ ಸಕ್ರಿಯವಾಗಿರುತ್ತವೆ. ಈ ಕರೆಗಳ ನೋಟಿಫಿಕೇಶನ್ ಟೀಮ್ಸ್‌ನಲ್ಲಿ ಕಾಣುವಂತೆ ಮೈಕ್ರೋಸಾಫ್ಟ್ ಮಾಡಿದೆ.

4) ಸ್ಕೈಪ್‌ನಿಂದ ಮೈಕ್ರೋಸಾಫ್ಟ್ ಟೀಮ್ಸ್‌ಗೆ ಪೋರ್ಟ್ ಆಗುವುದು ಹೇಗೆ

ಸ್ಕೈಪ್‌ನಿಂದ ಮೈಕ್ರೋಸಾಫ್ಟ್ ಟೀಮ್ಸ್‌ಗೆ ಪೋರ್ಟ್ ಆಗುವುದು ಬಹಳ ಸರಳ. ಮೈಕ್ರೋಸಾಫ್ಟ್ ಟೀಮ್ಸ್‌ಗೆ ನಿಮ್ಮ ಸ್ಕೈಪ್ ಕ್ರೆಡೆನ್ಶಿಯಲ್ಸ್ ಬಳಸಿ ಲಾಗಿನ್ ಆಗಿ. ಟೀಮ್ಸ್ ತನ್ನಿಂತಾನೇ ನಿಮ್ಮ ಸ್ಕೈಪ್‌ ಖಾತೆಯ ವಿವರಗಳನ್ನು ಪೋರ್ಟ್ ಮಾಡಿಕೊಳ್ಳುತ್ತದೆ. ಸ್ಕೈಪ್‌ನಲ್ಲಿದ್ದ ಎಲ್ಲ ಫೀಚರ್‌ಗಳೂ ಹಾಗೂ ಅದಕ್ಕೂ ಹೆಚ್ಚಿನ ಅಂಶಗಳು ಟೀಮ್ಸ್‌ನಲ್ಲಿ ಲಭ್ಯವಿದೆ.

5) ಸ್ಕೈಪ್ ಯುಗ ಅಂತ್ಯ

ಸ್ಕೈಪ್‌ ಸ್ಥಗಿತವಾಗುವುದರೊಂದಿಗೆ ಮೈಕ್ರೋಸಾಫ್ಟ್ ಅದರ ಪರಂಪರೆಯನ್ನು ಟೀಮ್ಸ್‌ ಮೂಲಕ ಮುನ್ನಡೆಸಲುಮುಂದಾಗಿದೆ. ವಿಡಿಯೋ ಕರೆಯೊಂದಿಗೆ ಕ್ರಾಂತಿ ಮಾಡಿದ ಸ್ಕೈಪ್‌ ಈಗ ತಾತ್ತ್ವಿಕ ಅಂತ್ಯಕ್ಕೆ ಬಂದಿದ್ದು, ಇಲ್ಲಿಂದ ಮುಂದೆ ಸ್ಕೈಪ್‌ ಬಳಕೆದಾರರ ಸಂಗಾತಿ ಟೀಮ್ಸ್ ಎಂಬುದನ್ನು ಮೈಕ್ರೋಸಾಫ್ಟ್ ಸಾರಿ ಹೇಳುತ್ತಲೇ ಇದೆ.

ಸ್ಕೈಪ್‌ಗೆ ಪರ್ಯಾಯ ಆ್ಯಪ್‌ ಗೂಗಲ್ ಮೀಟ್‌

ಸ್ಕೈಪ್‌ ವಿಡಿಯೋ ಕರೆ ಆ್ಯಪ್‌ ಬಳಕೆಗೆ ಬಂದ ಸಮಯದಲ್ಲಿ ಅದಕ್ಕೆ ಪ್ರತಿಸ್ಪರ್ಧಿಯಾಗಿ ಈಗ ಬಹಳ ಜನಪ್ರಿಯವಾಗಿರುವ ವಿಡಿಯೋ ಕರೆ ಆ್ಯಪ್‌ ಗೂಗಲ್ ಮೀಟ್. ಸಾಮಾನ್ಯ ಗೂಗಲ್ ಅಕೌಂಟ್ ಇದ್ದರೆ ಸಾಕು, ಗೂಗಲ್ ಮೀಟ್ ಅನ್ನು ಉಚಿತವಾಗಿ ಬಳಸಬಹುದಾಗಿದೆ. ಇದಕ್ಕೆ ಪಾವತಿ ಮಾಡಬೇಕಾದ್ದಿಲ್ಲ. ಗೂಗಲ್ ಸೇವೆ ಪಡೆಯುವ ಬಹುತೇಕರು ಗೂಗಲ್ ಮೀಟ್ ಬಳಸುತ್ತಿರುವುದು ಅದರ ಜನಪ್ರಿಯತೆಯನ್ನು ಸಾರಿ ಹೇಳುತ್ತದೆ. ಗೂಗಲ್ ಮೀಟ್‌ನಲ್ಲಿ ಒಂದೇ ಸಲ 100 ಜನ ಭಾಗವಹಿಸಬಹುದಾಗಿದೆ. ಉಚಿತ ಸೇವೆಯನ್ನು ಗರಿಷ್ಠ 60 ನಿಮಿಷ ಅಂದರೆ ಒಂದು ಗಂಟೆ ಮಾತ್ರ ಬಳಸಬಹುದು. ಅದಕ್ಕೂ ಹೆಚ್ಚಾದರೆ, ಮತ್ತೊಮ್ಮೆ ಗೂಗಲ್‌ ಮೀಟ್‌ಗೆ ಲಾಗಿನ್ ಆಗಬೇಕು.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.