Plane Crash: ದಕ್ಷಿಣ ಕೊರಿಯಾದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಭೀಕರ ಅಪಘಾತ; ಮೃತರ ಸಂಖ್ಯೆ 179ಕ್ಕೆ ಏರಿಕೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Plane Crash: ದಕ್ಷಿಣ ಕೊರಿಯಾದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಭೀಕರ ಅಪಘಾತ; ಮೃತರ ಸಂಖ್ಯೆ 179ಕ್ಕೆ ಏರಿಕೆ

Plane Crash: ದಕ್ಷಿಣ ಕೊರಿಯಾದಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಭೀಕರ ಅಪಘಾತ; ಮೃತರ ಸಂಖ್ಯೆ 179ಕ್ಕೆ ಏರಿಕೆ

South Korea Plane Crash: ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರ ವಿಮಾನ ಅಪಘಾತದ ದುರಂತದಲ್ಲಿ 181 ಪ್ರಯಾಣಿಕರಲ್ಲಿ 179 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತದಲ್ಲಿ ಸುಟ್ಟು ಕರಕಲಾಗಿರುವ ವಿಮಾನ. ದುರಂತದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತದಲ್ಲಿ ಸುಟ್ಟು ಕರಕಲಾಗಿರುವ ವಿಮಾನ. ದುರಂತದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಭಾನುವಾರ (ಡಿಸೆಂಬರ್ 29) ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಮೃತರ ಸಂಖ್ಯೆ 179ಕ್ಕೆ ಏರಿಕೆಯಾಗಿದೆ. ಪ್ರಯಾಣಿಕರ ವಿಮಾನವು ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಡಿಕ್ಕಿ ಹೊಡೆದಿತ್ತು. ಬ್ಯಾಂಕಾಕ್ ನಿಂದ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಯನ್ನು ಹೊತ್ತ ‘ಜೆಜು ಏರ್’ ‘ವಿಮಾನ 7 ಸಿ 2216’ ಬೆಳಿಗ್ಗೆ 9 ಗಂಟೆ ಸುಮಾರಿಗೆ (ಸ್ಥಳೀಯ ಸಮಯ) ಲ್ಯಾಂಡಿಂಗ್ ಆಗುವ ಸಮಯದಲ್ಲಿ ಈ ದುರಂತ ನಡೆದಿದೆ.

ಜೆಜು ಏರ್ ವಿಮಾನ ಅಪಘಾತಕ್ಕೆ ಹಕ್ಕಿ ದಾಳಿ ಮತ್ತು ಪ್ರತಿಕೂಲ ಹವಾಮಾನ ಕಾರಣ ಎಂದು ಅಂದಾಜಿಸಲಾಗಿದೆ. ಆದರೆ, ದುರಂತದ ಬಗ್ಗೆ ಜಂಟಿ ತನಿಖೆಯ ನಂತರ ನಿಖರವಾದ ಕಾರಣವನ್ನು ಘೋಷಿಸಲಾಗುವುದು" ಎಂದು ಮುವಾನ್ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಲೀ ಜಿಯೊಂಗ್-ಹ್ಯುನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಈ ಭೀಕರ ದುರಂತದಲ್ಲಿ ಓರ್ವ ಪುರುಷ ಮತ್ತು ಓರ್ವ ಮಹಿಳೆ ಜೀವಂತವಾಗಿ ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ವಿಮಾನ ರನ್ ವೇಯಿಂದ ವೇಗವಾಗಿ ಹೋಗಿ ತಡೆ ಗೋಡೆಗೆ ಡಿಕ್ಕಿ ಹೊಡೆದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಸ್ಥಳೀಯ ಮಾಧ್ಯಮಗಳು ಹಂಚಿಕೊಂಡ ವಿಡಿಯೊದಲ್ಲಿ ಅವಳಿ ಎಂಜಿನ್ ವಿಮಾನವು ಯಾವುದೇ ಲ್ಯಾಂಡಿಂಗ್ ಗೇರ್ ಇಲ್ಲದೆ ರನ್ವೇಯಿಂದ ಜಾರಿ ಗೋಡೆಗೆ ಡಿಕ್ಕಿ ಹೊಡೆದು ಫೈರ್ಬಾಲ್ ಆಗಿ ಸ್ಫೋಟಗೊಂಡಿದೆ. ಕ್ಷಣಾರ್ಧಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ವೈರಲ್ ವಿಡಿಯೊದಲ್ಲಿ ಹೊಗೆ ಆವರಿಸಿಕೊಂಡಿರುವುದನ್ನು ಕಾಣಬಹುದು.

ಬೆಂಕಿ ನಿಯಂತ್ರಿಸಲು 32 ಅಗ್ನಿಶಾಮಕ ಟ್ರಕ್‌ಗಳು ಮತ್ತು ಕೆಲವು ಹೆಲಿಕಾಪ್ಟರ್‌ಗಳನ್ನು ಸ್ಥಳದಲ್ಲಿ ನಿಯೋಜಿಸಿರುವುದಾಗಿ ದಕ್ಷಿಣ ಕೊರಿಯಾದ ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ಹೇಳಿದೆ. ಘಟನೆಯ ನಂತರ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ.

ಪಕ್ಷಿ ದಾಳಿ ಎಂದರೇನು? ಇದು ತುಂಬಾ ಅಪಾಯಕಾರಿ ಯಾಕೆ

ಪಕ್ಷಿ ದಾಳಿ ಎಂದರೆ ಹಕ್ಕಿ ಮತ್ತು ಹಾರಾಟದಲ್ಲಿರುವ ಅಥವಾ ಟೇಕ್ ಆಫ್ ಇಲ್ಲವೇ ಲ್ಯಾಂಡಿಂಗ್ ಹಂತದಲ್ಲಿರುವ ವಿಮಾನ ಡಿಕ್ಕಿ ಹೊಡೆಯುವ ವಿದ್ಯಮಾನ. ಹೆಚ್ಚಿನ ಸಂದರ್ಭಗಳಲ್ಲಿ, ಪಕ್ಷಿಗಳು ವಿಮಾನದ ವಿಂಡ್ ಸ್ಕ್ರೀನ್ ಗೆ ಡಿಕ್ಕಿ ಹೊಡೆಯುತ್ತವೆ ಅಥವಾ ಎಂಜಿನ್‌ಗಳಿಗೆ ಸಿಲುಕುತ್ತವೆ. ಇದು ಎಂಜಿನ್ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಕೆಲವೊಮ್ಮೆ ತುರ್ತು ಲ್ಯಾಂಡಿಂಗ್ ಅಥವಾ ಅಪರೂಪದ ಸಂದರ್ಭಗಳಲ್ಲಿ ಅಪಘಾತಕ್ಕೆ ಕಾರಣವಾಗಬಹುದು. ಪಕ್ಷಿಗಳು ಸಾಮಾನ್ಯವಾಗಿ ಹಿಂಡುಗಳಲ್ಲಿ ಹಾರುತ್ತವೆ. ವಿಮಾನ ಹಾರಾಟದ ವೇಳೆ ಇದು ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಪಕ್ಷಿ ದಾಳಿ ಸಾಮಾನ್ಯವೇ?

ಹೌದು, ಪಕ್ಷಿ ದಾಳಿಗಳು ತುಲನಾತ್ಮಕವಾಗಿ ಸಾಮಾನ್ಯವಾಗಿದೆ. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ ಪ್ರತಿವರ್ಷ 14,000 ಕ್ಕೂ ಹೆಚ್ಚು ಪಕ್ಷಿ ದಾಳಿಗಳು ವರದಿಯಾಗುತ್ತವೆ. 2022 ರಲ್ಲಿ, ಯುುಕೆ ನಾಗರಿಕ ವಿಮಾನಯಾನ ಪ್ರಾಧಿಕಾರವು ವರ್ಷದಲ್ಲಿ ಸುಮಾರು 1,500 ಪಕ್ಷಿ ದಾಳಿಗಳನ್ನು ವರದಿ ಮಾಡಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಪ್ರತಿ 10,000 ವಿಮಾನ ಹಾರಾಟಗಳಲ್ಲಿ ಸುಮಾರು ಎಂಟು ಹಕ್ಕಿಗಳ ದಾಳಿಗಳು ನಡೆದಿವೆ. ಇಂಥ ದಾಳಿಗಳು ಬಹಳ ಸಾಮಾನ್ಯವಾಗಿದೆ. ವಿಶೇಷವಾಗಿ ಪಕ್ಷಿಗಳು ಮತ್ತು ವಿಮಾನಗಳು ವಾಯುಪ್ರದೇಶವನ್ನು ಹಂಚಿಕೊಳ್ಳುವ ವಿಮಾನ ನಿಲ್ದಾಣಗಳ ಸಮೀಪವಿರುವ ಪ್ರದೇಶಗಳಲ್ಲಿ ಹೆಚ್ಚಿವೆ. ಪಕ್ಷಿ ದಾಳಿಗಳು ಸಾಮಾನ್ಯವಾಗಿ ವಿಮಾನ ಟೇಕ್ ಆಫ್, ಆರಂಭಿಕ ಹಂತದ ಮೇಲೇರುವಿಕೆ ಅಥವಾ ಲ್ಯಾಂಡಿಂಗ್ ಸಮಯದಲ್ಲಿ ಸಂಭವಿಸುತ್ತವೆ, ಏಕೆಂದರೆ ಇವು ಪಕ್ಷಿಗಳು ಸಾಮಾನ್ಯವಾಗಿ ಕಂಡುಬರುವ ಕಡಿಮೆ ಎತ್ತರದಲ್ಲಿ ಹಾರುವ ಸಮಯವಾಗಿರುತ್ತದೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.