Karman Line: ಭೂಮಿಗೆ ಅಂತರಿಕ್ಷದಲ್ಲಿ ಗಡಿರೇಖೆ ಇದೆಯೇ, ಏನಿದು ಕಾರ್ಮನ್ ಲೈನ್; ವೈಎನ್ ಮಧು ಬರಹ
ಸಮುದ್ರ ಮಟ್ಟದಿಂದ ಸರಿಯಾಗಿ ನೂರು ಕಿಲೋಮೀಟರ್ ಎತ್ತರದಲ್ಲಿ ಈ ಕಾಲ್ಪನಿಕ ರೇಖೆಯನ್ನು ಎಳೆಯಲಾಗಿದೆ. ಭೌತಿಕವಾಗಿ ಈ ರೇಖೆಯ ಬಳಿ ಭೂಮಿಯ ವಾಯುಮಂಡಲ ಕೊನೆಗೊಳ್ಳುತ್ತದೆ ಎಂಬ ಅರ್ಥ ಇದೆ. ಅಂದರೆ- ಈ ರೇಖೆಯ ಆಚೆಗೆ ‘ಅಂತರಿಕ್ಷ’ ಶುರುವಾಗುತ್ತದೆ. ಹಾಗಂದರೇನು? ವೈಎನ್ ಮಧು ಅವರ ಬರಹ ಇಲ್ಲಿದೆ.
ಭೂಮಿ ಎಲ್ಲಿಗೆ ಅಂತ್ಯವಾಗುತ್ತದೆ, ಭೂಮಿಯ ಗಡಿ ರೇಖೆ ಯಾವುದು, ಕಾರ್ಮನ್ ಲೈನ್ ಎಂದರೇನು, ಭೂಮಿಯ ವಾಯುಮಂಡಲ ಕೊನೆಗೊಳ್ಳುವುದು ಯಾವ ಪಾಯಿಂಟ್‌ನಲ್ಲಿ, ಅಂತರಿಕ್ಷ ಶುರುವಾಗುವುದು ಎಲ್ಲಿಂದ ಹೀಗೆ ಹಲವು ಪ್ರಶ್ನೆಗಳು ಭೂಮಿ ಹಾಗೂ ಅದರಾಚೆಗಿನ ಜಗತ್ತಿನ ಬಗ್ಗೆ ಮೂಡುವುದು ಸಹಜ. ಸ್ಪೇಸ್ ಲಾ ಕುರಿತು ಹಲವು ಗೊಂದಲಗಳು ನಿಮ್ಮಲ್ಲಿ ಇರಬಹುದು. ಈ ಎಲ್ಲಾ ಪ್ರಶ್ನೆಗಳಿಗೆ ತಮ್ಮ ಫೇಸ್‌ಬುಕ್ ಬರಹದ ಮೂಲಕ ಉತ್ತರಿಸಿದ್ದಾರೆ ವೈಎನ್ ಮಧು.
ಮಧು ಅವರ ಬರಹ ಇಲ್ಲಿದೆ
ಭೂಮಿಗೆಂದು ಅಂತರಿಕ್ಷದಲ್ಲಿ ಗಡಿರೇಖೆ ಇದೆಯೇ?
ನಮ್ಮಗಳ ಊರುಗಳಿಗೆ ರಾಜ್ಯಗಳಿಗೆ ದೇಶಗಳಿಗೆ ಗಡಿರೇಖೆ ಇದೆ. ಇದು ನನ್ನ ಊರು ಇದು ನಿನ್ನ ಊರು ಎಂಬಂತಹ ರಾಜಕೀಯ ರೇಖೆ. ಇಡೀ ಭೂಮಿಗೇ ಅಂತಹ ಗಡಿರೇಖೆ ಇದೆಯೇ?
ನಿರ್ದಿಷ್ಟ ರಾಜಕೀಯ ಗಡಿರೇಖೆ ಇಲ್ಲದಿದ್ದರೂ, ಅರ್ಥ ಮತ್ತು ಬಳಕೆಯಲ್ಲಿ ಅದಕ್ಕೆ ಹತ್ತಿರವಾದ ಒಂದು ಗೆರೆ ಇದೆ. ಅದನ್ನು ಕಾರ್ಮನ್ ಲೈನ್ ಎಂದು ಕರೆಯುತ್ತಾರೆ. ಸಮುದ್ರ ಮಟ್ಟದಿಂದ ಸರಿಯಾಗಿ ನೂರು ಕಿಲೋಮೀಟರ್ ಎತ್ತರದಲ್ಲಿ ಈ ಕಾಲ್ಪನಿಕ ರೇಖೆಯನ್ನು ಎಳೆಯಲಾಗಿದೆ. ಭೌತಿಕವಾಗಿ ಈ ರೇಖೆಯ ಬಳಿ ಭೂಮಿಯ ವಾಯುಮಂಡಲ ಕೊನೆಗೊಳ್ಳುತ್ತದೆ ಎಂಬ ಅರ್ಥ ಇದೆ. ಅಂದರೆ- ಈ ರೇಖೆಯ ಆಚೆಗೆ ‘ಅಂತರಿಕ್ಷ’ ಶುರುವಾಗುತ್ತದೆ. ಹಾಗಂದರೇನು?
ಈ ವಿಮಾನಗಳು ಇದಾವಲ್ಲ, ಅಷ್ಟು ದಢೂತಿ ವಿಮಾನಗಳು ಕೇವಲ ಎರಡು ಮೋಟರುಗಳನ್ನಿಟ್ಟುಕೊಂಡು ಡರ್ರ್ ಅನಿಸಿಕೊಂಡು ಅದು ಹೇಗೆ ಗಾಳಿಯಲ್ಲಿ ಹಾರಬಲ್ಲವು ಯೋಚಿಸಿದ್ದೀರಾ? ಒಳಗೆ ಬಲೂನಿನಂತೆ ಗಾಳಿಯಿಲ್ಲ, ಹೆಲಿಕ್ಯಾಪ್ಟರಿನಂತೆ ರೆಕ್ಕೆಗಳಿಲ್ಲ. ಆದಾಗ್ಯೂ. ವಿಮಾನಗಳು ಹಾರುವುದು ಏರೋಡೈನಮಿಕ್ ಲಿಫ್ಟ್ ಎಂಬ ವಿಸ್ಮಯದಿಂದ. ಅವನ್ನು ಮೇಲೆತ್ತಲು ಲಿಫ್ಟ್ ಮತ್ತು ಮುಂದೆ ತಳ್ಳಲು ಥ್ರಸ್ಟ್ ಬೇಕಿರುತ್ತದೆ. ಈ ಲಿಫ್ಟ್ ಎಂಬ ಶಕ್ತಿ ವಿಮಾನದ ತೂಕವನ್ನು ಮೀರಿಸಬೇಕು, ಥ್ರಸ್ಟ್ ಎಂಬ ಶಕ್ತಿ ವಿಮಾನವನ್ನು ಹಿಂದೆ ತಳ್ಳುವ ಡ್ರಾಗ್ ಅನ್ನು ಸೋಲಿಸಬೇಕು. ವಿಮಾನದ ಎಂಜಿನ್ನುಗಳು ಆನ್ ಆದಾಗ ವಿಮಾನಕ್ಕೆ ಥ್ರಸ್ಟ್ ಶಕ್ತಿಯನ್ನು ತುಂಬುತ್ತವೆ. ವಿಮಾನ ಮುಂದೆ ಚಲಿಸುತ್ತದೆ. ಎಂಜಿನ್ ಜೋರಾಗ್ತವೆ. ವೇಗ ಹೆಚ್ಚುತ್ತದೆ. ವೇಗ ಹೆಚ್ಚಾದಂತೆಲ್ಲ ಎದುರಿನ ಗಾಳಿ ವಿಮಾನದ ರೆಕ್ಕಗಳ ಮೇಲೆ ಕೆಳಗೆ ನುಗ್ಗಲಾರಂಭಿಸುತ್ತದೆ. ಯಾವಾಗ ರೆಕ್ಕೆಯ ಕೆಳಗಿನ ಗಾಳಿಯ ಒತ್ತಡ ರೆಕ್ಕೆಯ ಮೇಲಿನದಕ್ಕಿಂತ ಜಾಸ್ತಿ ಆಗುತ್ತೋ ಆಗ ವಿಮಾನ ನೆಲದಿಂದ ಮೇಲೆ ಎದ್ದೇಳುತ್ತೆ.
ನೀವು ಕಿಟಿಕಿ ಹತ್ತಿರ ಕೂತಿದ್ದರೆ ರೆಕ್ಕೆಗಳ ಮುಂಭಾಗದಲ್ಲಿರುವ flaps ಗಳನ್ನು ಗಮನಿಸಿರುತ್ತೀರಿ. ಮೇಲೆ ಕೆಳಗೆ ಆಡ್ತವಲ್ಲ ಅವು. ಅವೇ ರೆಕ್ಕೆಯ ಕೆಳಗಿನ ಗಾಳಿಯ ಒತ್ತಡವನ್ನು ಹೆಚ್ಚಿಸಿ ವಿಮಾನವನ್ನು ಮೇಲೆಬ್ಬಿಸುವುದು. ಅದೇ ಟೇಕಾಫ್. ನೋಡಿರ್ತೀರಿ, ಟೇಕಾಫ್ ಆದ ನಂತರ ಪೈಲಟ್ ಅವನ್ನು ಒಳಗೆ ಎಳ್ಕೊತಾನೆ. ಹಾಗೆ ಇಳಿವಾಗ ರೆಕ್ಕೆಯ ಅಂಚಿನಲ್ಲಿ ಹಿಂಭಾಗದಲ್ಲಿರುವ slats ಗಳನ್ನು ಹೊರಗೆಳೆಯುತ್ತಾನೆ. ರೆಕ್ಕೆಯ ಕೆಳಗಿನ ಒತ್ತಡ ಇಳಿಸಿ ರೆಕ್ಕೆಯ ಮೇಲಿನ ಒತ್ತಡ ಹೆಚ್ಚಿಸಲು.
ಎಲ್ಲಿವರಗೆ ಈ ಲಿಫ್ಟ್ ಮತ್ತು ಥ್ರಸ್ಟ್ ಸಮನಾಗಿ ವಿಮಾನದ ತೂಕ ಮತ್ತು ಡ್ರಾಗ್ ಅನ್ನು ಬ್ಯಾಲೆನ್ಸ್ ಮಾಡುತ್ತಿರುತ್ತವೋ ಅಲ್ಲಿವರೆಗೆ ವಿಮಾನ ಗಾಳಿಯಲ್ಲಿರುತ್ತೆ. ಬ್ಯಾಲನ್ಸ್ ತಪ್ಪಿದರೆ ಧಡ್ ಅಂತ ನೆಲಕ್ಕೆ ಅಪ್ಪಳಿಸುತ್ತೆ. ಹೆಲಿಕ್ಯಾಪ್ಟರು ನಿಂತಲ್ಲಿಂದಲೇ ಹಾರಬಲ್ಲದು ಏರೋಪ್ಲೇನಿಗೆ ಯಾಕೆ ಅಷ್ಟುದ್ದ ರನ್ ವೇ ಬೇಕು ಅಂದರೆ ಇದಕ್ಕೇ. ಇಳಿಯುವಾಗಲೂ ಯಾಕೆ ತಕ್ಕನಾದ ವೇಗ ಇರಬೇಕು ಅಂದರೆ ಇದಕ್ಕೇ.
ಕಾರ್ಮನ್ ಲೈನ್ ಎಂದರೆ ಆ ರೇಖೆಯ ಆಚೆಗೆ ನೀವು ತಿಪ್ಪರಲಾಗ ಹಾಕಿದರೂ ಏರೋಡೈನಮಿಕ್ ಲಿಫ್ಟ್ ಸಿಗಲ್ಲ. ರೇಖೆಯ ಆಚೆಗೆ ಹೋಗ್ತಾ ಗುರುತ್ವದ ಸೆಳೆತ ತಪ್ಪಿಸಿಕೊಂಡು ನೀವು ಸ್ಯಾಟಲೈಟಿನ ರೀತಿ ನಿಮ್ಮದೇ ಆರ್ಬಿಟ್(ಕಕ್ಷೆ) ತಲುಪಿಬಿಡುತ್ತೀರಿ. ಗ್ರಹಗಳ ತರಹ ಭೂಮಿ ಸುತ್ತ ತಿರುಗಲಾರಂಭಿಸುತ್ತೀರಿ. ಗುರುತ್ವ ತಪ್ಪಿಸಿಕೊಳ್ಳುವುದು ಎಂದರೆ ಗುರುತ್ವಕ್ಕೆ ವಿರುದ್ಧವಾದ ಶಕ್ತಿ ಇರತ್ತೆ, ಸೆಂಟ್ರಿಪಿಟಲ್ ಫೋರ್ಸ್ ಎಂದು. ಅದು ವಾಹನವನ್ನು ಭೂಮಿಗೆ ವಿರುದ್ಧವಾಗಿ ಎಳೆಯುತ್ತಿರುತ್ತೆ. ಒಂದು ಕಲ್ಲಿಗೆ ದಾರ ಕಟ್ಟಿ ದಾರವನ್ನು ತಿರುಗಿಸಿದರೆ ಕಲ್ಲು ನಿಮ್ಮಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಲ್ಲ ಅದೇ. ಅದು ಗುರುತ್ವಕ್ಕೆ ಸೆಡ್ಡು ಹೊಡೆಯುತ್ತೆ. ಗುರುತ್ವ ಮತ್ತು ಸೆಂಟ್ರಿಪಿಟಲ್ ಶಕ್ತಿ ಸಮ ಸಮ ಆದಾಗ ವಾಹನ ಕೆಳಗೂ ಬೀಳದೆ ಹೊರಗೂ ಹೋಗದೇ ತ್ರಿಶಂಕು ಸ್ಥಿತಿಯಲ್ಲಿರತ್ತೆ. ಆಗ ಅದು ಕಂಗೆಟ್ಟ ರೀತಿ ಭೂಮಿ ಸುತ್ತ ತಿರಗತ್ತೆ.
ಹಂಗಾಗಿ ಕಾರ್ಮನ್ ಲೈನ್ ಒಳಗಿರೋದು ಭೂಮಿ, ಹೊರಗಿರೋದು ಅಂತರಿಕ್ಷ! ಇದರ ಅರ್ಥ ನಮ್ಮ ವಿಮಾನಗಳು ಅಷ್ಟು ಎತ್ತರ ಹೋಗಬಲ್ಲವು ಎಂದೂ ಅಲ್ಲ. ವಿಮಾನ ಹಾರಬಲ್ಲ ಶಕ್ತಿ ಅಲ್ಲಿಗೆ ಕೊನೆಗೊಳ್ಳುತ್ತದೆ ಅಂತಷ್ಟೇ. ನಮ್ಮ ವಿಮಾನಗಳು ಹತ್ತನ್ನೆರಡು ಕಿಲೋಮೀಟರು ಆಚೆ ಏರಲಾರವು.
ಯಾಕೆ “ರೇಖೆಯನ್ನು ಎಳೆಯಲಾಗಿದೆ” ಎಂದು ಹೇಳಿದೆನಂದರೆ ವಾಯುಮಂಡಲ ಹಾಗೆ ಒಂದು ರೇಖೆಯ ಬಳಿ ಟಕ್ ಅಂತ ಕೊನೆಗೊಳ್ಳುವುದಿಲ್ಲ. ನಿಧಾನವಾಗಿ ಕರಗುತ್ತದೆ. ವಿಜ್ಞಾನಿಗಳ ಭಾಷೆಯಲ್ಲಿ ಎಲ್ಲೊ ಒಂದು ಕಡೆ ನಿಲ್ಲುತ್ತದೆ ಎಂದು ಹೇಳಬೇಕಲ್ಲ ಹಂಗಾಗಿ ಈ ಕಾಲ್ಪನಿಕ ರೇಖೆಯನ್ನು ಎಳೆದಿದ್ದಾರೆ. ಇದನ್ನು ಹೆಚ್ಚಾಗಿ ಪೊಲಿಟಿಕಲ್ ಬಾರ್ಡರ್ ಆಗಿ ಸಹ ಬಳಸ್ತಾರೆ. ಹೇಗಂದರೆ - ಎಫ್ಎಐ(Fédération Aéronautique Internationale) ನಂತರ ಜಾಗತಿಕ ಸಂಸ್ಥೆಗಳು ಇದರಾಚೆ ಹೋದವರನ್ನಷ್ಟೇ ಗಗನಯಾತ್ರಿ ಎಂದು ಕರೆಯುವುದು. ಕಾರ್ಮನ್ ಗೆರೆಯ ಆಚೆಗೆ ಯಾವ ದೇಶವೂ ಈ ಜಾಗ ನನ್ನದು ಎನ್ನುವ ಹಾಗಿಲ್ಲ. ಈ ರೇಖೆಯ ಒಳಗೆ ಹಾರುವ ವಾಹನಗಳಿಗೆ ಸಿವಿಲ್ ಏವಿಯೇಶನ್ ಕಾನೂನು ಅನ್ವಯಿಸುತ್ತದೆ. ಇದರಾಚೆ ಹಾರುವ ವಾಹನಗಳಿಗೆ ಸ್ಪೇಸ್ ಲಾ ಅನ್ವಯಿಸುತ್ತದೆ.
ಯಾವುದೇ ದೇಶ ತನ್ನ ನೆಲದಿಂದ ರಾಕೆಟ್ ಹಾರಿಸಬಹುದು. ಅದು ಅಂತರಿಕ್ಷ ತಲುಪಿ ಏನೆಲ್ಲ ಆಟ ಆಡಬಹುದು. ಸ್ಪೇಸ್ ಲಾ ಪ್ರಕಾರ. ಅಂದರೆ ನ್ಯೂಕ್ಲಿಯರ್ ಬಾಂಬ್ ನೆಲ್ಲ ಅಂತರಿಕ್ಷದಲ್ಲಿ ಇಡಂಗಿಲ್ಲ. ಅದು ತಿರಗ ಭೂಮಿಗೆ ಮರಳುವಾಗ ಆಯಾ ದೇಶಗಳ ಸಿವಿಲ್ ಕಾನೂನು ಪಾಲಿಸಬೇಕಾಗುತ್ತದೆ. ಅದರ ಪ್ರಕಾರ ಒಂದು ದೇಶ ಇನ್ನೊಂದು ದೇಶದ ಗಡಿಯೊಳಗೆ ರಾಕೆಟ್ ಬೀಳಿಸುವಂತಿಲ್ಲ.
ಮಧು ಅವರ ಈ ಬರಹಕ್ಕೆ ಹಲವರು ಲೈಕ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲವರು ತಮ್ಮ ಕಾಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
ಅನಿಲ್ ವಡಗೇರಿ ಅವರ ಕಾಮೆಂಟ್ ಹೀಗಿತ್ತು ʼಅಂತರಿಕ್ಷಕ್ಕೆ ಸಂಬಂಧಿಸಿದ ವಿಷಯ ಓದುವುದೆ ಚಂದ.. ಧನ್ಯವಾದಗಳು ಸರ್ʼ ಎಂದು ಬರೆದಿದ್ದಾರೆ.
ʼಉತ್ತಮ ಮಾಹಿತಿ ನೀಡಿದ್ದೀರಿ,, ಗುಡ್. ಎಷ್ಟು ಚೆಂದ ನಮ್ಮ ಭೂಮಿ,, ಆಕಾಶ,, ಅಂತರಿಕ್ಷ,,, ಅದರ ವಲಯಗಳುʼ ಎಂದು ಶೋಭಾ ಮಣಿ ಎನ್ನುವವರು ಕಾಮೆಂಟ್ ಮಾಡಿದ್ದಾರೆ.
ʼಇತ್ತೀಚೆಗೆ ನಾನು fb ಯಲ್ಲಿ ಓದಿದ ಹೆಚ್ಚಿನ ಬರಹ ನಿಮ್ಮದೇ ವೈಜ್ಞಾನಿಕ ಬರಹಗಾರರು ಆಗೋದ್ರಿʼ ಎಂದು ಮೆಚ್ಚುಗೆ ಮಾತನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ ಮದನ್ ಕುಮಾರ್.
ಎಚ್.ಕೆ. ವಾದಿರಾಜ್ ಕಾಮೆಂಟ್ ಮಾಡಿದ್ದು ಹೀಗೆ: ʼಬಹಳ ವರ್ಷಗಳಿಂದ ಇದ್ದ ಒಂದು ಅನುಮಾನ. ದಯವಿಟ್ಟು ಉತ್ತರಿಸಿ. ವಿಮಾನವು ಕಾರ್ಮನ್ ಲೈನ್ (ಈ ಪದ ಈಗ ಗೊತ್ತಾಗಿದ್ದು) ದಾಟಿ ಮೇಲೆ ಹೋಗಿ ನಂತರ ಗಮ್ಯದ ಕಡೆಗೆ ಪ್ರಯಾಣ ಮಾಡಿದರೆ ಸಮಯವನ್ನು ಉಳಿಸಬಹುದೇ?? ಉದಾಹರಣೆಗೆ ಬೆಂಗಳೂರಿನಿಂದ ಅಮೆರಿಕಕ್ಕೆ ಹದಿನಾರು/ ಹದಿನೆಂಟು ಗಂಟೆಗಳ ಪ್ರಯಾಣ. ಆದರೆ ಸಮಯದಲ್ಲಿ ಹನ್ನೆರಡು ಗಂಟೆ ವ್ಯತ್ಯಾಸʼ ಎಂದು ಅವರು ಕಾಮೆಂಟ್ ಮಾಡಿದ್ದರು.
ಇವರ ಈ ಪ್ರಶ್ನೆಗೆ ಮಧು ʼಕಾರ್ಮನ್ ಲೈನ್ ಇರುವುದು ನೂರು ಕಿಲೋಮೀಟರು ಎತ್ತರದಲ್ಲಿ. ನಮ್ಮ ವಿಮಾನಗಳು ಹತ್ಗನ್ನೆರಡು ಕಿಲೋಮೀಟರು ಆಚೆ ಏರಲಾರವು. pacecraft ಅಂದರೆ ಅವೇ. ಆದರೆ ಅವನ್ನು ಪ್ರಯಾಣಕ್ಕೆ ಬಳಸಕ್ಕಾಗಲ್ಲವಲ್ಲ. ಅಷ್ಟು ಮೇಲೆ ಹೋಗಿ ಕೆಳಗಿಳಿಯಬೇಕು. ಅದಕ್ಕಾಗಿ ರಾಕೆಟ್ ಪ್ರೊಪಲ್ಶನ್ ಬೇಕುʼ ಎಂದು ಉತ್ತರಿಸಿದ್ದಾರೆ.
ವಿಭಾಗ