ಕನ್ನಡ ಸುದ್ದಿ  /  Nation And-world  /  Spectacular Aurora Over Us Sky Leaves Internet Mesmerised

Aurora: ಭಾಸ್ಕರನ ಕೋಪವನ್ನು ಬಣ್ಣಗಳಾಗಿ ಪರಿವರ್ತಿಸಿದ ಅವನಿ: ಅಮೆರಿಕದ ಆಗಸದಲ್ಲಿ ಅರೋರಾ 'ಗ್ರೀನ್‌ ಡ್ಯಾನ್ಸ್'

ಅಮೆರಿಕದ ಹಲವು ರಾಜ್ಯಗಳಲ್ಲಿ ಅರೋರಾ ಬೊರಿಯಾಲಿಸ್‌ನ ಹಸಿರು ನೃತ್ಯ ಕಂಡುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಫೋಟೋ ಮತ್ತು ವಿಡಿಯೋಗಳು ಭಾರೀ ಸದ್ದು ಮಾಡುತ್ತಿವೆ. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ..

ಅರೋರಾ
ಅರೋರಾ (Verified Twitter)

ವಾಷಿಂಗ್ಟನ್:‌ ಸೂರ್ಯನ ಕರೋನದಲ್ಲಿನ ದೊಡ್ಡ ರಂಧ್ರವು, ಪ್ರಬಲವಾದ ಭೂಕಾಂತೀಯ ಚಂಡಮಾರುತವನ್ನು ಉಂಟುಮಾಡಿದೆ. ಇದು ಭೂಮಿಯ ಕಾಂತಕ್ಷೇತ್ರವನ್ನು ಗಂಭೀರವಾಗಿ ಹಾನಿಗೊಳಿಸಿದ್ದು, ಇದರಿಂದಾಗಿ ಭವ್ಯವಾದ ನಾರ್ದರ್ನ್ ಲೈಟ್ಸ್(ಅರೋರಾ) ಪ್ರದರ್ಶನಕ್ಕೆ ಅಮೆರಿಕ ಸಾಕ್ಷಿಯಾಗಿದೆ.

ಅಮೆರಿಕದ ಹಲವು ರಾಜ್ಯಗಳಲ್ಲಿ ಅರೋರಾ ಬೊರಿಯಾಲಿಸ್‌ನ ಹಸಿರು ನೃತ್ಯ ಕಂಡುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಫೋಟೋ ಮತ್ತು ವಿಡಿಯೋಗಳು ಭಾರೀ ಸದ್ದು ಮಾಡುತ್ತಿವೆ.

ವಾತಾವರಣದಲ್ಲಿನ ಆಮ್ಲಜನಕ ಮತ್ತು ಸಾರಜನಕದ ಸ್ಥಳವು, ಆಕಾಶದಲ್ಲಿ ಗೋಚರಿಸುವ ಬಣ್ಣಗಳನ್ನು ನಿರ್ಧರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಸಾರಜನಕ ಮತ್ತು ಆಮ್ಲಜನಕ ಕ್ರಮವಾಗಿ ಹಸಿರು, ಕೆಂಪು ಮತ್ತು ನೀಲಿ ಬಣ್ಣಗಳ ಮುಖ್ಯ ಮೂಲಗಳಾಗಿವೆ. ಅರೋರಾ ಬೊರಿಯಾಲಿಸ್‌ನ ವಿದ್ಯಮಾನ ರಾತ್ರಿ ಆಗಸವನ್ನು ಅಕ್ಷರಶ: ಬೆಳಗುತ್ತದೆ.

ಅರೋರಾ ಎಂದರೇನು?

ನಾಸಾದ ಪ್ರಕಾರ, ಭೂಮಿಯ ಉತ್ತರ ಅಥವಾ ದಕ್ಷಿಣ ಧ್ರುವದ ಸಮೀಪ ಹೆಚ್ಚಾಗಿ ಕಂಡುಬರುವ ಅರೋರಾ ವಿದ್ಯಮಾನ, ಆಗಾಗ್ಗೆ ಆಕಾಶದಲ್ಲಿ ಸುಂದರವಾದ ಬೆಳಕಿನ ಪ್ರದರ್ಶನ ಏರ್ಪಡಿಸುತ್ತದೆ. ಉತ್ತರ ಧ್ರುವದಲ್ಲಿ ಘಟಿಸುವ ಈ ವಿದ್ಯಮಾನವನ್ನು ಅರೋರಾ ಬೋರಿಯಾಲಿಸ್ ಅಥವಾ ಉತ್ತರ ದೀಪಗಳು ಎಂದು ಕರೆಯಲಾಗುತ್ತದೆ. ಅದೇ ರೀತಿ ದಕ್ಷಿಣ ಧ್ರುವದಲ್ಲಿ ಘಟಿಸುವ ಈ ವಿದ್ಯಮಾನವನ್ನು ಅರೋರಾ ಆಸ್ಟ್ರೇಲಿಸ್ ಅಥವಾ ದಕ್ಷಿಣದ ದೀಪಗಳು ಎಂದು ಕರೆಯಲಾಗುತ್ತದೆ.

ಅರೋರಾಗಳು ವಾಸ್ತವವಾಗಿ ಸೂರ್ಯನಿಂದ ಉಂಟಾಗುತ್ತವೆ. ಸೂರ್ಯನು ನಮಗೆ ಶಾಖ ಮತ್ತು ಬೆಳಕಿಗಿಂತ ಇನ್ನೂ ಹೆಚ್ಚಿನದನ್ನು ರವಾನಿಸುತ್ಕತಾನೆ. ಸೂರ್ಯನ ಶಕ್ತಿಯ ಕಣಗಳು ಭೂಮಿಯತ್ತ ಧಾವಿಸಿದಾಗ, ಭೂಮಿಯ ಸುತ್ತಲಿನ ರಕ್ಷಣಾತ್ಮಕ ಕಾಂತೀಯ ಕ್ಷೇತ್ರವು, ಹೆಚ್ಚಿನ ಶಕ್ತಿ ಮತ್ತು ಸೂರ್ಯ ಕಣಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದು ನಮ್ಮ ಗಮನಕ್ಕೆ ಬರುವುದಿಲ್ಲವಾದರೂ, ಅರೋರಾ ವಿದ್ಯಮಾನದ ರೂಪದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.

ಆದರೆ ಸೂರ್ಯನು ಎಲ್ಲಾ ಸಮಯದಲ್ಲೂ ಒಂದೇ ಪ್ರಮಾಣದ ಶಕ್ತಿಯನ್ನು ಕಳುಹಿಸುವುದಿಲ್ಲ. ಸೌರ ಮಾರುತ ಮತ್ತು ಸೌರ ಬಿರುಗಾಳಿಗಳು ಕೂಡ ಭೂಮಿಯತ್ತ ನುಗ್ಗಿ ಬರುತ್ತವೆ. ಕರೋನಲ್ ಮಾಸ್ ಎಜೆಕ್ಷನ್ ಎಂದು ಕರೆಯಲ್ಪಡುವ ಈ ಸೌರ ಚಂಡಮಾರುತ, ಹೆಚ್ಚಿನ ವೇಗದಲ್ಲಿ ಬಾಹ್ಯಾಕಾಶದಲ್ಲಿ ಪ್ರಯಾಣಿಸಬಹುದಾದ ವಿದ್ಯುದೀಕೃತ ಅನಿಲವನ್ನು ಒಳಗೊಂಡಿರುತ್ತವೆ.

ಸೌರ ಚಂಡಮಾರುತವು ಭೂಮಿಯ ಕಡೆಗೆ ಬಂದಾಗ, ಕೆಲವು ಶಕ್ತಿ ಮತ್ತು ಸಣ್ಣ ಕಣಗಳು ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿನ ಕಾಂತೀಯ ಕ್ಷೇತ್ರದ ರೇಖೆಗಳ ಕೆಳಗೆ ಚಲಿಸುತ್ತವೆ. ಇವು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿದಾಗ, ಕಣಗಳು ನಮ್ಮ ವಾತಾವರಣದಲ್ಲಿನ ಅನಿಲಗಳೊಂದಿಗೆ ಸಂವಹನ ನಡೆಸುತ್ತವೆ. ಇದರ ಪರಿಣಾಮವಾಗಿ ಆಕಾಶದಲ್ಲಿ ಬೆಳಕಿನ ಸುಂದರವಾದ ಪ್ರದರ್ಶನಗಳು ಕಂಡುಬರುತ್ತವೆ.

ಆಮ್ಲಜನಕವು ಹಸಿರು ಮತ್ತು ಕೆಂಪು ಬೆಳಕನ್ನು ಹೊರಹಾಕಿದರೆ, ಸಾರಜನಕವು ನೀಲಿ ಮತ್ತು ನೇರಳೆ ಬಣ್ಣವನ್ನು ಉತ್ಪಾದಿಸುತ್ತದೆ. ಈ ಸಂದರ್ಭದಲ್ಲಿ ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳು ಸುಂದರವಾದ ಬೆಳಕಿನ ನೃತ್ಯಕ್ಕೆ ಸಾಕ್ಷಿಯಾಗುತ್ತವೆ. ಆದರೆ ಅಮೆರಿಕ ಈ ಬಾರಿ ಈ ಅರೋರಾ ಸೌಂದರ್ಯವನ್ನು ಸವಿಯುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಮಿಸಿಸಿಪ್ಪಿಯಲ್ಲಿ ಬೀಸಿರುವ ಭೀಕರ ಚಂಡಮಾರುತವು, ಇದುವರೆಗೂ ಜನರನ್ನು 23 ಬಲಿ ಪಡೆದಿದ್ದು, ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳಿಗೆ ಮಿಸಿಸಿಪ್ಪಿ ರಾಜ್ಯ ಮುಂದಡಿ ಇಟ್ಟಿದೆ.

ಸಂಬಂಧಿತ ಸುದ್ದಿ

ISS video of aurora: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಂಡ ಭೂರಮೆಯ ಬೆಳಕಿನಾಟ, ವಿಡಿಯೋ ಹಂಚಿಕೊಂಡ ನಾಸಾ ಗಗನಯಾನಿ

ನಾಸಾದ ಗಗನಯಾತ್ರಿ ಜೋಶ್‌ ಕಸ್ಸಾಡ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆಗೆದಿರುವ ಅರೋರಾದ ವಿಡಿಯೋ ಇಲ್ಲಿದೆ. ಇದರೊಂದಿಗೆ ಐಎಸ್‌ಎಸ್‌ ಎಂದರೆ ಏನು? ಎಲ್ಲಿದೆ? ಹೇಗಿದೆ? ಇತ್ಯಾದಿ ಮಾಹಿತಿಗಳನ್ನೂ ನೀಡಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

IPL_Entry_Point

ವಿಭಾಗ