ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಂಧ್ರದ ಪ್ರಸಿದ್ಧ ಶೈವ ದೇವಾಲಯದ ಹುಂಡಿ ಎಣಿಕೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 2 ಕೋಟಿ 81 ಲಕ್ಷ ರೂಪಾಯಿ, ಯಾವುದು ಈ ದೇವಾಲಯ?

ಆಂಧ್ರದ ಪ್ರಸಿದ್ಧ ಶೈವ ದೇವಾಲಯದ ಹುಂಡಿ ಎಣಿಕೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 2 ಕೋಟಿ 81 ಲಕ್ಷ ರೂಪಾಯಿ, ಯಾವುದು ಈ ದೇವಾಲಯ?

ನೆರೆಯ ರಾಜ್ಯ ಆಂಧ್ರಪ್ರದೇಶದ ಪ್ರಸಿದ್ಧ ಶೈವ ದೇವಾಲಯವಾದ ಶ್ರೀಶೈಲಂ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಈ ದೇಗುಲದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಅಪಾರ ಪ್ರಮಾಣದ ಮೊತ್ತ, ವಿದೇಶಿ ಕರೆನ್ಸಿ, ಚಿನ್ನ-ಬೆಳ್ಳಿ ದೊರೆತಿದೆ. ಈ ದೇಗುಲದ ವೈಶಿಷ್ಟ್ಯ ಹೀಗಿದೆ. (ಬರಹ: ಪ್ರಿಯಾಂಕ ಗೌಡ)

ಆಂಧ್ರದ ಪ್ರಸಿದ್ಧ ಶೈವ ದೇವಾಲಯದ ಹುಂಡಿ ಎಣಿಕೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 2 ಕೋಟಿ 81 ಲಕ್ಷ ರೂಪಾಯಿ
ಆಂಧ್ರದ ಪ್ರಸಿದ್ಧ ಶೈವ ದೇವಾಲಯದ ಹುಂಡಿ ಎಣಿಕೆಯಲ್ಲಿ ಸಿಕ್ಕಿದ್ದು ಬರೋಬ್ಬರಿ 2 ಕೋಟಿ 81 ಲಕ್ಷ ರೂಪಾಯಿ

ನೆರೆಯ ರಾಜ್ಯ ಆಂಧ್ರಪ್ರದೇಶದ ಪ್ರಸಿದ್ಧ ಶೈವ ದೇವಾಲಯವಾದ ಶ್ರೀಶೈಲಂ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಜೂನ್ 17ರ ಸೋಮವಾರದಂದು ಸಾವಿರಾರು ಭಕ್ತರು ಹರಿದು ಬಂದರು. ಭಾನುವಾರ ವಾರದ ರಜಾ ಹಾಗೂ ಸೋಮವಾರ ಇಸ್ಲಾಂ ಧರ್ಮೀಯರ ಹಬ್ಬಕ್ಕೆ ರಜೆ ಇದ್ದ ಕಾರಣ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದರು. ಹೀಗಾಗಿ ದೇವರ ದರ್ಶನ ಮಾಡಲು 4 ಗಂಟೆಗಳ ಕಾಲ ತೆಗೆದುಕೊಳ್ಳುವಂತಾಯ್ತು.

ಶ್ರೀಶೈಲಂ ದೇವಾಲಯವು ಶಿವ ಮತ್ತು ಪಾರ್ವತಿ ದೇವತೆಗಳಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಆಂಧ್ರಪ್ರದೇಶದ ಶ್ರೀಶೈಲದ ನಂದ್ಯಾಲ್ ಜಿಲ್ಲೆಯಲ್ಲಿದೆ. ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆಲಂಗಾಣ, ಆಂಧ್ರಪ್ರದೇಶದವರು ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರಿಗೆ ಅರ್ಚಕರು ಪ್ರಸಾದ ವಿತರಿಸಿದರು. ಮಕ್ಕಳು ಮತ್ತು ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ದೇವರ ದರ್ಶನ ಪಡೆದು ಪುನೀತರಾದರು.

ಟ್ರೆಂಡಿಂಗ್​ ಸುದ್ದಿ

ದೇವರ ಹುಂಡಿ ಎಣಿಕೆ ವೇಳೆ ದೊರೆತ ಕಾಣಿಕೆ ಮೊತ್ತ ಬರೋಬ್ಬರಿ 2,81,51,743 ರೂ

ಒಂದು ತಿಂಗಳ ಹಿಂದೆ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹಲವು ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಎಣಿಕೆ ನಡೆದಿತ್ತು. ವರದಿಗಳ ಪ್ರಕಾರ, ಹುಂಡಿಯಲ್ಲಿ ಒಟ್ಟು 2,81,51,743 ರೂ ದೊರೆತಿದೆ. ಹೆಚ್ಚುವರಿಯಾಗಿ, ಈ ಹುಂಡಿಗಳಲ್ಲಿ 212.600 ಗ್ರಾಂ ಚಿನ್ನ, 3.770 ಕೆ.ಜಿ ಬೆಳ್ಳಿ ಕೂಡ ಪತ್ತೆಯಾಗಿದೆ.

ಹುಂಡಿಯಲ್ಲಿತ್ತು 10ಕ್ಕೂ ಹೆಚ್ಚು ವಿದೇಶಿ ಕರೆನ್ಸಿ

ವಿದೇಶಿ ಕರೆನ್ಸಿಗಳಲ್ಲಿ 644 ಯುಎಸ್ ಡಾಲರ್, 56 ಮಲೇಷಿಯಾದ ರಿಂಗಿಟ್‌, 149 ಸೌದಿ ಅರೇಬಿಯನ್ ರಿಯಾಲ್‌, 715 ಯುಕೆ ಪೌಂಡ್‌, 20 ಯುರೋಗಳು ಮತ್ತು 12 ಸಿಂಗಾಪುರ್ ಡಾಲರ್‌ಗಳು ಸೇರಿವೆ. ಈ ಹುಂಡಿಗಳಲ್ಲಿ 20 ಕೆನಡಿಯನ್ ಡಾಲರ್, 60 ಆಸ್ಟ್ರೇಲಿಯನ್ ಡಾಲರ್, 115 ಯುಎಇ ದಿರ್ಹಾಮ್, 17 ಕತಾರ್ ರಿಯಾಲ್ ಮತ್ತು 20 ಥಾಯ್ ಬಹ್ತ್‌ಗಳು ಪತ್ತೆಯಾಗಿವೆ. ದೇವಾಲಯದ ಅಧಿಕಾರಿಗಳು ಈ ವಿದೇಶಿ ಕರೆನ್ಸಿಗಳನ್ನು ಪ್ರತ್ಯೇಕವಾಗಿ ಎಣಿಸಿದ್ದಾರೆ.

ದೇವರ ಹುಂಡಿ ಎಣಿಕೆ ವೇಳೆ ಉಪ ಕಾರ್ಯನಿರ್ವಾಹಣಾ ಅಧಿಕಾರಿ ರವಣಮ್ಮ ಮತ್ತು ವಸತಿ ಇಲಾಖೆ ಕಾರ್ಯನಿರ್ವಾಹಣ ಅಧಿಕಾರಿ ಎ.ಎನ್.ವಿ.ಮೋಹನ್ ಭಾಗಿಯಾಗಿದ್ದರು. ಕಂದಾಯ ಇಲಾಖೆ ಸಹಾಯಕ ಕಾರ್ಯನಿರ್ವಾಹಣ ಅಧಿಕಾರಿ ಬಿ ಮಲ್ಲಿಕಾರ್ಜುನ ರೆಡ್ಡಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಟಿ. ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು. ಎಲ್ಲಾ ಇಲಾಖೆಗಳ ಘಟಕದ ಅಧಿಕಾರಿಗಳು, ತಹಶೀಲ್ದಾರರು, ವೀಕ್ಷಕರು, ಸ್ವಯಂಸೇವಕರು, ಇತರರು ಈ ವೇಳೆ ಭಾಗವಹಿಸಿದ್ದರು.

ಈ ದೇಗುಲದ ವೈಶಿಷ್ಟ್ಯ

ಪುರಾಣಗಳಲ್ಲಿ ವಿವರಿಸಿದಂತೆ, ಶ್ರೀಶೈಲಂ ದೇವಾಲಯವು ಅಪಾರ ಪ್ರಾಚೀನ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಶಿವ ಮತ್ತು ಪಾರ್ವತಿ ದೇವರಿಗೆ ಸಮರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು ಎಂದು ಹಾಗೂ ಪಾರ್ವತಿ ದೇವಿಯ ಹದಿನೆಂಟು ಶಕ್ತಿ ಪೀಠಗಳಲ್ಲಿ ಒಂದೆಂದು ಉಲ್ಲೇಖಿಸಲಾಗಿದೆ. ಇಲ್ಲಿ ಶಿವನನ್ನು ಮಲ್ಲಿಕಾರ್ಜುನ ಎಂದು ಪೂಜಿಸಲಾಗುತ್ತದೆ. ಈಶ್ವರನ ಪತ್ನಿ ಪಾರ್ವತಿಯನ್ನು ಭ್ರಮರಾಂಬ ಎಂದು ಪೂಜಿಸಲಾಗುತ್ತಿದೆ.

 

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.