HDFC Bank Share Price: ಲಾಭವಿದ್ದರೂ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಶೇ 7 ಕುಸಿತಕ್ಕೆ ಇದುವೇ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hdfc Bank Share Price: ಲಾಭವಿದ್ದರೂ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಶೇ 7 ಕುಸಿತಕ್ಕೆ ಇದುವೇ ಕಾರಣ

HDFC Bank Share Price: ಲಾಭವಿದ್ದರೂ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಶೇ 7 ಕುಸಿತಕ್ಕೆ ಇದುವೇ ಕಾರಣ

HDFC Bank Share Price: ಎಚ್‌ಡಿಎಫ್‌ಸಿ ಬ್ಯಾಂಕ್‌ನ 3ನೇ ತ್ರೈಮಾಸಿಕ ವರದಿ ಪ್ರಕಟವಾದ ಬೆನ್ನಿಗೆ, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿದವು. ಅದೇ ರೀತಿ, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ ಶೇಕಡ 7 ಕುಸಿಯಿತು. ಲಾಭಾಂಶ ಪ್ರಕಟಿಸಿದ್ದರೂ, ಹೂಡಿಕೆದಾರರ ಗಮನ ಸೆಳೆದ ವಿಚಾರ ಬೇರೆಯದೇ ಇತ್ತು.

ಬಿಎಸ್‌ಇಯಲ್ಲಿ ಜನವರಿ 17 ರ ಬುಧವಾರದ ಆರಂಭಿಕ ವಹಿವಾಟಿನ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಬೆಲೆ ಸುಮಾರು 7 ಪ್ರತಿಶತದಷ್ಟು ಕುಸಿಯಿತು. (ಸಾಂಕೇತಿಕ ಚಿತ್ರ)
ಬಿಎಸ್‌ಇಯಲ್ಲಿ ಜನವರಿ 17 ರ ಬುಧವಾರದ ಆರಂಭಿಕ ವಹಿವಾಟಿನ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಬೆಲೆ ಸುಮಾರು 7 ಪ್ರತಿಶತದಷ್ಟು ಕುಸಿಯಿತು. (ಸಾಂಕೇತಿಕ ಚಿತ್ರ) (PIxabay)

ಎಚ್‌ಡಿಎಫ್‌ಸಿ ಬ್ಯಾಂಕ್‌ ಬುಧವಾರ (ಜ.17) ಡಿಸೆಂಬರ್‌ಗೆ ಮುಕ್ತಾಯವಾದ ತ್ರೈಮಾಸಿಕ ಅವಧಿಯ ಫಲಿತಾಂಶ ಪ್ರಕಟಿಸುತ್ತಿರುವಂತೆಯೇ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (ಬಿಎಸ್‌ಇ) ನಲ್ಲಿ ಕಂಪನಿಯ ಷೇರು ಮೌಲ್ಯ ದಿಢೀರ್ ಆಗಿ ಶೇಕಡ 7ರಷ್ಟು ಕುಸಿಯಿತು.

ಬಿಎಸ್‌ಇಯಲ್ಲಿ ಬುಧವಾರ ದಿನದ ವಹಿವಾಟು ಶುರುವಾದಾಗ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು 1,583.85 ರೂಪಾಯಿಯಲ್ಲಿ ವಹಿವಾಟು ಆರಂಭಿಸಿತು. ಮಂಗಳವಾರ ದಿನದ ವಹಿವಾಟಿನ ಅಂತ್ಯಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಮೌಲ್ಯ 1,678.95 ರೂಪಾಯಿ ಇತ್ತು. ಬೆಳಗ್ಗೆ ವಹಿವಾಟು ಶುರುವಾಗಿ ಕೆಲವೇ ನಿಮಿಷಕ್ಕೆ ಷೇರು ಮೌಲ್ಯ 1,570 ರೂಪಾಯಿಗೆ ಕುಸಿಯಿತು. ಬೆಳಗ್ಗೆ 9.30ರ ವೇಳೆಗೆ ಬಿಎಸ್‌ಇನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು 1,577 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಇದೇ ವೇಳೆ, ನ್ಯೂಯಾರ್ಕ್‌ನ ಷೇರು ಮಾರುಕಟ್ಟೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಅಮೆರಿಕನ್ ಲಿಸ್ಟೆಡ್ ಷೇರು ಮೌಲ್ಯ ಶೇಕಡ 6.71 ಇಳಿಕೆಯಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಮಂಗಳವಾರ ತನ್ನ ಲಾಭಾಂಶ ವಿವರ ಪ್ರಕಟಿಸಿದ್ದು, ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇಕಡ 33 ಹೆಚ್ಚಳವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದಾಗಿ 12,259 ಕೋಟಿ ರೂಪಾಯಿಯಿಂದ 16,372 ಕೋಟಿ ರೂಪಾಯಿ ಆಗಿದೆ ಎಂದು ಹೇಳಿತ್ತು.

ಕಂಪನಿಯ ನಿವ್ವಳ ಬಡ್ಡಿ ಆದಾಯವು 3ನೇ ತ್ರೈಮಾಸಿಕದಲ್ಲಿ 28,471 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕದಲ್ಲಿ ಅಂದರೆ 2ನೇ ತ್ರೈಮಾಸಿಕದಲ್ಲಿ ಇದು 27,385 ರೂಪಾಯಿ ಇತ್ತು. ನಿಖರ ನಿವ್ವಳ ಬಡ್ಡಿಯ ಅಂಚು ಈ ಅನುಕ್ರಮದಲ್ಲಿ ಬದಲಾಗಿಲ್ಲ. ಇದು ವರ್ಷದಿಂದ ವರ್ಷಕ್ಕೆ ಒಟ್ಟು ಆಸ್ತಿಗಳ ಮೇಲೆ 3.4 ಪ್ರತಿಶತ ಮತ್ತು ಬಡ್ಡಿ-ಗಳಿಕೆಯ ಮೇಲೆ 3.6 ಶೇಕಡಾ ಏರಿಕೆಯಾಗಿದೆ.

ಇದೇ ವೇಳೆ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ಒಟ್ಟು ಅನುತ್ಪಾದಕ ಆಸ್ತಿ(ಎನ್‌ಪಿಎ) ಪ್ರಮಾಣ ಹಣಕಾಸು ವರ್ಷ 2024ರ ಮೂರನೇ ತ್ರೈಮಾಸಿಕದಲ್ಲಿ ಶೇಕಡ 1.26 ಇದೆ ಎಂದು ವರದಿ ಹೇಳಿದೆ. ಈ ಎನ್‌ಪಿಎ ಪ್ರಮಾಣ ಕಳದ ಹಣಕಾಸು ವರ್ಷದಲ್ಲಿ ಶೇಕಡ 1.23 ಇತ್ತು. ಹಿಂದಿನ ವರ್ಷ ಎನ್‌ಪಿಎ ಪ್ರಮಾಣ ಏರಿಕೆ ಪ್ರಮಾಣ ಶೇಕಡ 0.33 ಇದ್ದದ್ದು, ಈ ವರ್ಷಕ್ಕೆ ಶೇಕಡ 0.31 ಆಗಿದೆ. ಇದರಲ್ಲಿ ಕೊಂಚ ಸುಧಾರಣೆ ಕಂಡಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮೂರನೇ ತ್ರೈಮಾಸಿಕ ವರದಿ ಪ್ರಕಟವಾದ ಬಳಿಕ, ಷೇರುಪೇಟೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರಿನ ಬೆಲೆ ಬುಧವಾರ ಕುಸಿದಿದೆ. ತನ್ನ ವರದಿಯಲ್ಲಿ ಬ್ಯಾಂಕ್ ಇನ್-ಲೈನ್ ಕ್ಯೂ3 ವಿವರ ಒದಗಿಸಿತ್ತು. ಸರಳವಾಗಿ ಹೇಳಬೇಕು ಎಂದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ 3ನೇ ತ್ರೈಮಾಸಿಕ ಫಲಿತಾಂಶಗಳನ್ನು ಮರೆಮಾಚಿದ ಮಾರ್ಜಿನ್‌ನೊಂದಿಗೆ ನಿವ್ವಳ ಬಡ್ಡಿ ಆದಾಯ ಶೇಕಡ 4 ಪ್ರತಿಶತ ಏರಿಕೆ ಎಂದು ತೋರಿಸಿತ್ತು. ಆದ್ದರಿಂದ ಹೂಡಿಕೆದಾರರ ಗಮನವು ಲಾಭಾಂಶಕ್ಕಿಂತ ಹೆಚ್ಚಾಗಿ ಕ್ಯೂ3 ಮಾರ್ಜಿನ್‌ ಕಡೆಗೆ ಹೊರಳಿದ್ದು, ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವೇ ಬ್ಯಾಂಕ್‌ನ ಷೇರು ಮೌಲ್ಯ ಕುಸಿಯಲು ಕಾರಣ ಎಂಬುದು ವಿಶ್ಲೇಷಕರ ವಿವರಣೆ.

ಆದಾಗ್ಯೂ, ಹೆಚ್ಚಿನ ಬ್ರೋಕರೇಜ್ ಸಂಸ್ಥೆಗಳು ಡಿಸೆಂಬರ್ ತ್ರೈಮಾಸಿಕ ಗಳಿಕೆಯ ನಂತರವೂ ಎಚ್‌ಡಿಎಫ್‌ಸಿ ಬ್ಯಾಂಕ್‌ನ ವಹಿವಾಟಿನ ಮೇಲೆ ತಮ್ಮ ಸಕಾರಾತ್ಮಕ ದೃಷ್ಟಿಕೋನಗಳನ್ನು ಉಳಿಸಿಕೊಂಡಿವೆ. ಕೆಲವರು ತಮ್ಮ ಅಂದಾಜುಗಳನ್ನು ಅಲ್ಪಾವಧಿಯಿಂದ ಮಧ್ಯಮ ಅವಧಿಗೆ ಇಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.