ನಿಫ್ಟಿ 50, ಸೆನ್ಸೆಕ್ಸ್ ಮಹಾಪತನ; ತಿಂಗಳ ಅವಧಿಯಲ್ಲಿ ಒಂದು ದಿನದ ದೊಡ್ಡ ಕುಸಿತ ದಾಖಲು; ಎರಡನೇ ದಿನದ ಕುಸಿತ ಸೇರಿ 10 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನಿಫ್ಟಿ 50, ಸೆನ್ಸೆಕ್ಸ್ ಮಹಾಪತನ; ತಿಂಗಳ ಅವಧಿಯಲ್ಲಿ ಒಂದು ದಿನದ ದೊಡ್ಡ ಕುಸಿತ ದಾಖಲು; ಎರಡನೇ ದಿನದ ಕುಸಿತ ಸೇರಿ 10 ಮುಖ್ಯ ಅಂಶಗಳು

ನಿಫ್ಟಿ 50, ಸೆನ್ಸೆಕ್ಸ್ ಮಹಾಪತನ; ತಿಂಗಳ ಅವಧಿಯಲ್ಲಿ ಒಂದು ದಿನದ ದೊಡ್ಡ ಕುಸಿತ ದಾಖಲು; ಎರಡನೇ ದಿನದ ಕುಸಿತ ಸೇರಿ 10 ಮುಖ್ಯ ಅಂಶಗಳು

Stock market today: ಭಾರತದ ಷೇರುಪೇಟೆಯಲ್ಲಿ ಅಮೆರಿಕದ ಪ್ರತಿ ಸುಂಕದ ಆತಂಕದ ಕರಿಛಾಯೆ ಆವರಿಸಿದೆ. ಹಣಕಾಸು ವರ್ಷದ ಮೊದಲ ದಿನವೇ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಭಾರಿ ಪತನ ದಾಖಲಿಸಿದೆ. 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

ನಿಫ್ಟಿ 50, ಸೆನ್ಸೆಕ್ಸ್ ಮಹಾಪತನ; ತಿಂಗಳ ಅವಧಿಯಲ್ಲಿ ಒಂದು ದಿನದ ದೊಡ್ಡ ಕುಸಿತ ದಾಖಲಾಗಿದೆ. (ಸಾಂಕೇತಿಕ ಚಿತ್ರ)
ನಿಫ್ಟಿ 50, ಸೆನ್ಸೆಕ್ಸ್ ಮಹಾಪತನ; ತಿಂಗಳ ಅವಧಿಯಲ್ಲಿ ಒಂದು ದಿನದ ದೊಡ್ಡ ಕುಸಿತ ದಾಖಲಾಗಿದೆ. (ಸಾಂಕೇತಿಕ ಚಿತ್ರ)

Stock market today: ಭಾರತದ ಷೇರುಪೇಟೆಗಳು 2025-26ನೇ ಹಣಕಾಸು ವರ್ಷದ ಆರಂಭದಲ್ಲಿ ಮುಗ್ಗರಿಸಿ ಬಿದ್ದಿವೆ. ಸೋಮವಾರ ಮತ್ತು ಮಂಗಳವಾರದ ಟ್ರೇಡಿಂಗ್‌ನಲ್ಲಿ ಭಾರಿ ಕುಸಿತ ಅನುಭವಿಸಿರುವ ಷೇರುಪೇಟೆ ಇಂದು (ಏಪ್ರಿಲ್ 1) ಒಂದೇ ದಿನ ಶೇಕಡ 1.5ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಷೇರುಪಟ್ಟಿಯಲ್ಲಿರುವ 196 ಸ್ಟಾಕ್‌ಗಳು 52 ವಾರಗಳ ಕನಿಷ್ಠ ಮಟ್ಟ ತಲುಪಿದರೆ, 76 ಷೇರುಗಳು 52 ವಾರಗಳ ಗರಿಷ್ಠ ಮಟ್ಟ ತಲುಪಿವೆ. ಇದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಪ್ರತಿ ಸುಂಕದ ಆತಂಕ ಮುಖ್ಯ ಕಾರಣ. ಭಾನುವಾರ ಟ್ರಂಪ್ ಅವರು ಪ್ರತಿ ಸುಂಕದ ವಿಚಾರ ಪ್ರಸ್ತಾಪಿಸಿದ ಬಳಿಕ ಅಮೆರಿಕದ ಮಾರುಕಟ್ಟೆಗಳಲ್ಲಿ ಮಾರಾಟ ಪ್ರಮಾಣ ಹೆಚ್ಚಾಗಿದೆ. ಇದರ ಪರಿಣಾಮ ಭಾರತದ ಷೇರುಪೇಟೆ ಮೇಲೆ ನಿನ್ನೆಯಿಂದ ಆಗುತ್ತಿದ್ದು, ಇಂದು ಮುಂದುವರಿದಿದೆ. ಅಮೆರಿಕದ ನಡೆಯು ಜಾಗತಿಕ ವ್ಯಾಪಾರ ಯುದ್ಧಕ್ಕೆ ವೇದಿಕೆ ಒದಗಿಸಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಆತಂಕ ಉದ್ಯಮ ವಲಯದಲ್ಲಿ ಕಂಡುಬಂದಿದೆ.

ಭಾರತದ ಷೇರುಪೇಟೆ ವಹಿವಾಟು; ಇಂದಿನ ಪ್ರಮುಖ 10 ಅಂಶಗಳು

ಅಮೆರಿಕದ ಪ್ರತಿ ಸುಂಕದ ಕಾರಣ ವ್ಯಾಪಾರೋದ್ಯಮ ವಲಯ ಆತಂಕಕ್ಕೆ ಈಡಾಗಿದೆ. ಅಮೆರಿಕದ ಪ್ರತಿಸುಂಕ ಹೇರಿಕೆ ನಾಳೆ (ಏಪ್ರಿಲ್ 2) ಶುರುವಾಗಲಿದ್ದು, ಸೋಮವಾರ ಮತ್ತು ಮಂಗಳವಾರ ಷೇರುಪೇಟೆ ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಇಲ್ಲಿ ಭಾರತದ ಷೇರುಪೇಟೆ ವಹಿವಾಟುಗಳ ಇಂದಿನ ಪ್ರಮುಖ 10 ಅಂಶಗಳ ವಿವರ ನೀಡಲಾಗಿದೆ.

1) ನಿಫ್ಟಿ50, ಸೆನ್ಸೆಕ್ಸ್ ಸತತ 2ನೇ ದಿನ ಕುಸಿತ

ಹೊಸ ಹಣಕಾಸು ವರ್ಷ ಆರಂಭದಲ್ಲೇ ಭಾರತದ ಷೇರುಪೇಟೆ ಮುಗ್ಗರಿಸಿದ್ದು, ಕಳಪೆ ಆರಂಭ ತೋರಿದೆ. ಮಂಗಳವಾರ (ಏಪ್ರಿಲ್ 1) ಮಂಗಳವಾರದ ವಹಿವಾಟಿನಲ್ಲಿ ನಿಫ್ಟಿ50 ಶೇಕಡ 1.5 ಕುಸಿತದೊಂದಿಗೆ 23,165ರಲ್ಲಿ ಸೆನ್ಸೆಕ್ಸ್ ಶೇಕಡ 1.8 ಕುಸಿತದೊಂದಿಗೆ 76,024 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿವೆ. ಇಂದಿನ ಈ ಮಹಾಪತನವು ಫೆಬ್ರವರಿ 28ರ ಬಳಿಕ ಸಂಭವಿಸಿದ ದೊಡ್ಡ ಕುಸಿತ ಎಂದು ಪರಿಗಣಿಸಲ್ಪಟ್ಟಿದೆ. ಅಂದು ಎರಡೂ ಸೂಚ್ಯಂಕಗಳು ಶೇಕಡ 2ರಷ್ಟು ಕುಸಿತ ಕಂಡಿದ್ದವು. ಇಂದಿನ ಕುಸಿತದ ಕಾರಣ ಎರಡೂ ಸೂಚ್ಯಂಕಗಳು ಅವುಗಳ ಮಾರ್ಚ್ 21ರ ಪ್ರಮಾಣಕ್ಕೆ ಎಳೆದು ಬೀಳಿಸಿವೆ.

2) HDFC ಬ್ಯಾಂಕ್ ಸೇರಿ 5 ಷೇರುಗಳು ನಿಫ್ಟಿ50 ಕುಸಿತಕ್ಕೆ ಕಾರಣ

ನಿಫ್ಟಿ 50 ಪಟ್ಟಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್‌, ರಿಲಯನ್ಸ್ ಇಂಡಸ್ಟ್ರೀಸ್‌, ಎಚ್‌ಸಿಎಲ್‌ ಟೆಕ್‌, ಎಲ್ಆಂಡ್‌ಟಿ ಒಟ್ಟು ಸೇರಿ 222 ಅಂಶ (ಶೇಕಡ 62) ಇಳಿಕೆಯಾಗಿದ್ದು, ನಿಫ್ಟಿ 50 ಶೇಕಡ 353 ಅಂಶ ಕುಸಿಯುವಂತೆ ಮಾಡಿದವು. ಎಚ್‌ಡಿಎಫ್‌ಸಿ ಬ್ಯಾಂಕ್ ಒಂದೇ 98 ಅಂಶ ಕುಸಿತ ಕಂಡಿದೆ. ಐಸಿಐಸಿಐ ಬ್ಯಾಂಕ್ 47 ಅಂಶ, ಇನ್ಫೋಸಿಸ್ 32 ಅಂಶ ಕುಸಿತ ಕಂಡಿವೆ.

3) ನಿಫ್ಟಿ ರಿಯಾಲ್ಟಿ ಕೆಟ್ಟ ಪ್ರದರ್ಶನ

ಸೆಕ್ಟರ್ ಪ್ರಕಾರ ನೋಡುವಾಗ ನಿಫ್ಟಿ ರಿಯಾಲ್ಟಿ ಕೆಟ್ಟ ಪ್ರದರ್ಶನ ನೀಡಿದೆ. ಇದು ತನ್ನ ಶೇಕಡ 3.11 ಅಂಶ ಕುಸಿತ ಕಂಡಿದೆ. ಇದರ ಬೆನ್ನಿಗೆ ನಿಫ್ಟಿ ಕನ್ಸ್ಯೂಮರ್‌ ಡ್ಯೂರಬಲ್ಸ್, ನಿಫ್ಟಿ ಐಟಿ, ನಿಫ್ಟಿ ಫಾರ್ಮಾ, ನಿಫ್ಟಿ ಎಫ್‌ಎಂಸಿಜಿಗಳು ತಮ್ಮ ವಹಿವಾಟಿನಲ್ಲಿ ಶೇಕಡ 0.93 ರಿಂದ ಶೇಕಡ 2.5ರಷ್ಟು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ನಿಫ್ಟಿ ಮೀಡಿಯಾ ಷೇರುಗಳು ಶೇಕಡ 2.24 ಏರಿಕೆ ದಾಖಲಿಸಿವೆ.

4) ವಿಸ್ತೃತ ಮಾರುಕಟ್ಟೆಗಳದ್ದು ಉತ್ತಮ ಪ್ರದರ್ಶನ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ತೀಕ್ಷ್ಣವಾದ ಮಾರಾಟದ ಹೊರತಾಗಿಯೂ, ದೊಡ್ಡ-ಕ್ಯಾಪ್ ಸ್ಟಾಕ್‌ಗಳಿಗೆ ಹೋಲಿಸಿದರೆ ಮಿಡ್-ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸ್ಟಾಕ್‌ಗಳು ತುಲನಾತ್ಮಕವಾಗಿ ಸಣ್ಣ ನಷ್ಟವನ್ನಷ್ಟೆ ಕಂಡವು. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.86 ರಷ್ಟು ಕಡಿಮೆಯಾಗಿದ್ದು, 51,229 ಪಾಯಿಂಟ್‌ಗಳು, ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕವು ಶೇಕಡಾ 0.70 ರಷ್ಟು ಕುಸಿದಿದ್ದು, 15,982 ಪಾಯಿಂಟ್‌ಗಳಿಗೆ ತಲುಪಿದೆ.

5) ನಿಫ್ಟಿ 50 ಪಟ್ಟಿಯ 35 ಷೇರುಗಳು ಕೆಂಪಾದವು

ನಿಫ್ಟಿ 50 ಸೂಚ್ಯಂಕದ 50 ಷೇರುಗಳ ಪೈಕಿ, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಬಜಾಜ್ ಫಿನ್‌ಸರ್ವ್‌ ನೇತೃತ್ವದ 35 ಷೇರುಗಳು ನಷ್ಟದಲ್ಲಿ ವಹಿವಾಟು ಮುಗಿಸಿವೆ. ಇದು ಕ್ರಮವಾಗಿ 3.9 ಶೇಕಡಾ ಮತ್ತು 3.5 ಕುಸಿದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್, ಬಿಇಎಲ್, ಶ್ರೀರಾಮ್ ಫೈನಾನ್ಸ್, ಇನ್ಫೋಸಿಸ್, ಮತ್ತು ಬಜಾಜ್ ಫೈನಾನ್ಸ್ ಸೇರಿ ಇತರ ಷೇರುಗಳು ಶೇಕಡಾ 2 ರಿಂದ 3 ರಷ್ಟು ಕುಸಿದಿವೆ. ಇನ್ನೊಂದೆಡೆ, ಇಂಡಸ್ಇಂಡ್ ಬ್ಯಾಂಕ್ 5 ಪ್ರತಿಶತದಷ್ಟು ಲಾಭದೊಂದಿಗೆ ವಹಿವಾಟು ಮುಗಿಸಿದೆ ಟ್ರೆಂಟ್ ಮತ್ತು ಬಜಾಜ್ ಆಟೋ ಷೇರುಗಳ ಮೌಲ್ಯ ಕ್ರಮವಾಗಿ 4.7 ಮತ್ತು 1.5 ಪ್ರತಿಶತದಷ್ಟು ಏರಿಕೆಯಾಗಿದೆ.

6) 265 ಷೇರುಗಳು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿತ

ಟ್ರೆಂಡ್ಲಿನ್ ಡೇಟಾ ಪ್ರಕಾರ, ಷೇರುಪೇಟೆ ಇಂದು ಕುಸಿತ ಕಂಡಾಗ 265 ಷೇರುಗಳು ಅವುಗಳ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಪಂಜಾಬ್‌ ಸಿಂಧ್‌ ಬ್ಯಾಂಕ್‌, ಟಾಟಾ ಎಲಾಕ್ಸಿ, ಟೈಟಾನ್‌ ಕಂಪನಿ, ಹ್ಯಾಪಿಯೆಸ್ಟ್ ಮೈಂಡ್ಸ್‌ ಟೆಕ್ನಾಲಜಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್, ಬಿರ್ಲಾ ಸಾಫ್ಟ್‌ ಮುಂತಾದ ಷೇರುಗಳು ಈ ರೀತಿ ಕುಸಿತ ಕಂಡಿವೆ.

7) 186 ಷೇರುಗಳು ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಭಾರಿ ಕುಸಿತ ಉಂಟಾದುದರ ಹೊರತಾಗಿಯೂ, 186 ಷೇರುಗಳು 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪುವಲ್ಲಿ ಯಶಸ್ವಿಯಾಗಿವೆ, ಆವಾಸ್ ಫೈನಾನ್ಶಿಯರ್ಸ್‌ ಮತ್ತು ಕೋರಮಂಡಲ್ ಇಂಟರ್‌ನ್ಯಾಷನಲ್‌ ಕೂಡ ಈ ಪಟ್ಟಿಯಲ್ಲಿವೆ.

8) 21 ಷೇರುಗಳು ಶೇಕಡ 10 ರಿಂದ ಶೇಕಡ 20ರ ನಡುವೆ ಕುಸಿತ

ಷೇರುಪೇಟೆಯಲ್ಲಿರುವ ಷೇರುಗಳ ಪೈಕಿ 21 ಷೇರುಗಳ ಮೌಲ್ಯ ಶೇಕಡ 10 ರಿಂದ ಶೇಕಡ 20ರಷ್ಟು ಇಳಿಕೆಯಾಗಿದೆ. ಇದರಲ್ಲಿ ಪಂಜಾಬ್‌ ಆಂಡ್ ಸಿಂಧ್ ಬ್ಯಾಂಕ್, ಯುಕೋ ಬ್ಯಾಂಕ್, ಅಶಿಯಾನ ಇಸ್ಪಾತ್‌, ಕೇ ಪವರ್‌ ಆಂಡ್ ಪೇಪರ್ ಕೂಡ ಈ ಪಟ್ಟಿಯಲ್ಲಿವೆ.

9) ಗರಿಷ್ಠ ವಹಿವಾಟು, ವೊಡಾಫೋನ್ ಐಡಿಯಾ, ಯುಕೋ ಬ್ಯಾಂಕ್‌ ಇತ್ಯಾದಿ

ವೊಡಾಫೋನ್ ಐಡಿಯಾ ಇಂದು ಹೆಚ್ಚು ವಹಿವಾಟು ನಡೆಸಿದ್ದು ಒಂದೇ ದಿನ 270 ಕೋಟಿ ಷೇರುಗಳ ವಹಿವಾಟು ನಡೆಸಿದೆ. ಪರಿಣಾಮ ಇಂದಿನ ವಹಿವಾಟಿನಲ್ಲಿ ಷೇರು ಮೌಲ್ಯ 8.10 ರೂಪಾಯಿಗೆ ಏರಿಕೆಯಾಗಿ ಶೇಕಡ 20 ಏರಿಕೆ ದಾಖಲಿಸಿದೆ. ಎರಡನೇ ಸ್ಥಾನದಲ್ಲಿ ಯುಕೋ ಬ್ಯಾಂಕ್ ಇದ್ದು, 47.7 ದಶಲಕ್ಷ ಷೇರುಗಳು ವಹಿವಾಟಾಗಿವೆ. ಇದಲ್ಲದೆ, ಎಚ್‌ಬಿಎಲ್‌ ಪವರ್‌ಸಿಸ್ಟಮ್ಸ್, ಭಾರತ್ ಎಲೆಕ್ಟ್ರಾನಿಕ್ಸ್, ಟಾಟಾ ಟೆಲಿಸರ್ವೀಸಸ್ ಕೂಡ 3 ಕೋಟಿಗೂ ಹೆಚ್ಚು ಷೇರುಗಳ ವಹಿವಾಟು ನಡೆಸಿವೆ.

10) 275 ಷೇರುಗಳು ಅಪ್ಪರ್ ಸರ್ಕೀಟ್ ಮಿತಿಗೆ

ಭಾರತಷೇರುಪೇಟೆಯಲ್ಲಿರುವ ಷೇರುಗಳ ಪೈಕಿ 275 ಷೇರುಗಳ ಅವುಗಳ ಮೌಲ್ಯದ ಅಪ್ಪರ್ ಸರ್ಕೀಟ್ ಮಿತಿ ತಲುಪಿದ್ದು, ಶೇಕಡ 2 ರಿಂದ ಶೇಕಡ 20ರಷ್ಟು ಮೌಲ್ಯ ವೃದ್ಧಿಸಿಕೊಂಡಿವೆ. ಹೆಸ್ಟರ್ ಬಯೋಸೈನ್ಸಸ್ ‍ಷೇರುಗಳು ಶೇಕಡ 20 ಹೆಚ್ಚಳವಾಗಿದ್ದು ಷೇರುಮೌಲ್ಯ 1505 ರೂಪಾಯಿ ತಲುಪಿದೆ. ಇದೇ ರೀತಿ ಬಿರ್ಲಾ ಕೇಬಲ್ ಕೂಡ ಶೇಕಡ 20 ಏರಿದ್ದು ಮೌಲ್ಯ 156 ರೂಪಾಯಿ ಆಗಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.