Naturals: ಹಣ್ಣಿನ ವ್ಯಾಪಾರಿಯ ಮಗ ಆರ್‌ ಎಸ್ ಕಾಮತ್‌ ಕಟ್ಟಿ ಬೆಳೆಸಿದ 300 ಕೋಟಿ ರೂಪಾಯಿ ವಹಿವಾಟಿನ ಐಸ್‌ಕ್ರೀಮ್ ಸಾಮ್ರಾಜ್ಯ ನ್ಯಾಚುರಲ್ಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Naturals: ಹಣ್ಣಿನ ವ್ಯಾಪಾರಿಯ ಮಗ ಆರ್‌ ಎಸ್ ಕಾಮತ್‌ ಕಟ್ಟಿ ಬೆಳೆಸಿದ 300 ಕೋಟಿ ರೂಪಾಯಿ ವಹಿವಾಟಿನ ಐಸ್‌ಕ್ರೀಮ್ ಸಾಮ್ರಾಜ್ಯ ನ್ಯಾಚುರಲ್ಸ್

Naturals: ಹಣ್ಣಿನ ವ್ಯಾಪಾರಿಯ ಮಗ ಆರ್‌ ಎಸ್ ಕಾಮತ್‌ ಕಟ್ಟಿ ಬೆಳೆಸಿದ 300 ಕೋಟಿ ರೂಪಾಯಿ ವಹಿವಾಟಿನ ಐಸ್‌ಕ್ರೀಮ್ ಸಾಮ್ರಾಜ್ಯ ನ್ಯಾಚುರಲ್ಸ್

ಜನಪ್ರಿಯ ನ್ಯಾಚುರಲ್ಸ್ ಐಸ್‌ಕ್ರೀಮ್‌ನ ಸಂಸ್ಥಾಪಕ ಮಂಗಳೂರಿನ ರಘುನಂದನ್ ಶ್ರೀನಿವಾಸ ಕಾಮತ್. ಅವರು ಈ ಬ್ರಾಂಡ್ ಅನ್ನು ಕಟ್ಟಿಬೆಳೆಸಿದ ಯಶೋಗಾಥೆ ಇಲ್ಲಿದೆ.

ರಘುನಂದನ್ ಶ್ರೀನಿವಾಸ ಕಾಮತ್ ಮತ್ತು ನ್ಯಾಚುರಲ್ಸ್ ಐಸ್‌ಕ್ರೀಂ ಬ್ರಾಂಡ್
ರಘುನಂದನ್ ಶ್ರೀನಿವಾಸ ಕಾಮತ್ ಮತ್ತು ನ್ಯಾಚುರಲ್ಸ್ ಐಸ್‌ಕ್ರೀಂ ಬ್ರಾಂಡ್

ಕರ್ನಾಟಕದ ರಾಜಧಾನಿ ಬೆಂಗಳೂರೇ ಇರಬಹುದು, ಕರಾವಳಿಯ ಮಂಗಳೂರು, ಸ್ವಲ್ಪ ದೂರದ ಮುಂಬಯಿಯೇ ಇರಬಹುದು, ತಿಂದರೆ ನ್ಯಾಚುರಲ್ಸ್ ಐಸ್‌ ಕ್ರೀಂ ತಿನ್ನಬೇಕು ಎನ್ನುತ್ತ ಅದನ್ನು ಹುಡುಕಿಕೊಂಡು ಹೋಗುವ ಐಸ್‌ಕ್ರೀಂ ಪ್ರಿಯರನ್ನು ಗಮನಿಸಿರಬಹುದು. ಜನರ ನಡುವೆ ಜನಪ್ರಿಯವಾಗಿರುವ ಈ ಟಾಪ್ ಬ್ರಾಂಡ್ ಐಸ್‌ಕ್ರೀಮ್‌ ನ್ಯಾಚುರಲ್ಸ್ ಹುಟ್ಟಿದ್ದು, ಹುಟ್ಟುಹಾಕಿದ್ದು ಯಾರು?

ಹೀಗೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ ಸಿಗುವ ಉತ್ತರವೇ - ಮಂಗಳೂರಿನ ರಘುನಂದನ್ ಶ್ರೀನಿವಾಸ್ ಕಾಮತ್ ಎಂಬ ಉತ್ತರ. ಹೌದು ಜನಪ್ರಿಯ ನ್ಯಾಚುರಲ್ಸ್ ಐಸ್‌ಕ್ರೀಮ್‌ನ ಸಂಸ್ಥಾಪಕರು ಅವರು. ಸಂಕಷ್ಟಗಳ ನಡುವೆಯೇ ಜನಪ್ರಿಯ ಬ್ರಾಂಡ್ ಒಂದನ್ನು ಕಟ್ಟಿದವರು.

ರಘುನಂದನ್ ಶ್ರೀನಿವಾಸ್ ಕಾಮತ್ ನ್ಯಾಚುರಲ್ಸ್ ಐಸ್‌ಕ್ರೀಂ ಬ್ರಾಂಡ್ ಕಟ್ಟಿ ಬೆಳೆಸುವ ಮುನ್ನ…

ನ್ಯಾಚುರಲ್ಸ್ ಐಸ್‌ಕ್ರೀಂ ಔಟ್‌ಲೆಟ್‌ಗಳು ಈಗ ದೇಶಾದ್ಯಂತ ವ್ಯಾಪಿಸಿವೆ. ನಾಲ್ಕು ದಶಕಗಳ ಹಿಂದೆ ಈ ಐಸ್‌ಕ್ರೀಂ ಬ್ರಾಂಡ್ ಅನ್ನು ಸ್ಥಾಪಿಸುವ ಮೊದಲು ರಘುನಂದನ್ ಶ್ರೀನಿವಾಸ್ ಕಾಮತ್ ಅವರು ಅಪ್ಪನ ಜತೆಗೆ ಮಂಗಳೂರಿನಲ್ಲಿ ಹಣ್ಣಿ ವ್ಯಾಪಾರ ನೋಡಿಕೊಂಡಿದ್ದವರು. ಅಪ್ಪ ಹಣ್ಣಿನ ವ್ಯಾಪಾರಿಯಾಗಿದ್ದ ಕಾರಣ, ಹಣ್ಣುಗಳನ್ನು ಆಯುವುದು, ಅವುಗಳ ಫ್ಲೇವರ್ ಗುರುತಿಸುವುದನ್ನು ಕರಗತ ಮಾಡಿಕೊಂಡರು.

ರಘುನಂದನ್‌ ಅವರು ಹಣ್ಣಿನ ವ್ಯಾಪಾರದ ಗುಟ್ಟು ಕರಗತವಾದ ಕೂಡಲೇ, ಹೋಟೆಲ್‌ ನಡೆಸುತ್ತಿದ್ದ ಸಹೋದರರ ಬಳಿ ಐಸ್‌ಕ್ರೀಂ ಮಾಡುವುದನ್ನು ಕಲಿತುಕೊಂಡರು. ಬಳಿಕ ಮುಂಬಯಿಗೆ ಹೋಗಿ 1984ರ ಫೆಬ್ರವರಿ 14ರಂದು ನ್ಯಾಚುರಲ್ಸ್ ಐಸ್‌ಕ್ರೀಂ ಅನ್ನು ಸ್ಥಾಪಿಸಿದರು. 4 ಸಿಬ್ಬಂದಿಗಳೊಂದಿಗೆ 10 ಫ್ಲೇವರ್‌ಗಳನ್ನು ಐಸ್‌ಕ್ರೀಂ ಪ್ರಿಯರಿಗೆ ಪರಿಚಯಿಸಿದರು.

ರಘುನಂದನ್ ಶ್ರೀನಿವಾಸ್ ಕಾಮತ್ ಅವರು ತಮ್ಮ ಮೂಲ ಐಸ್ ಕ್ರೀಂಗಳನ್ನು ಸವಿಯಲು ಬರುವವರ ಬಗ್ಗೆ ಆರಂಭದಲ್ಲಿ ಖಚಿತವಾಗಿರಲಿಲ್ಲ. ಅವರು ಕೇವಲ ಹಣ್ಣು, ಹಾಲು ಮತ್ತು ಸಕ್ಕರೆಯನ್ನು ಮಾತ್ರ ಐಸ್ ಕ್ರೀಮ್ ಮಾಡಲು ಬಳಸುತ್ತಿದ್ದರು. ಅದೂ ಅಲ್ಲದೆ, ಹೊಸ ಗ್ರಾಹಕರನ್ನು ಆಕರ್ಷಿಸಲು, ರಘುನಂದನ್ ಶ್ರೀನಿವಾಸ್ ಕಾಮತ್ ಅವರು ಪಾವ್ ಭಾಜಿಯನ್ನು ಮುಖ್ಯ ಭಕ್ಷ್ಯವಾಗಿ ಮತ್ತು ಐಸ್ ಕ್ರೀಮ್ ಅನ್ನು ಆಡ್-ಆನ್ ಆಗಿ ಬಡಿಸುವ ಮೂಲಕ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಅಂಗಡಿಯು 12 ರುಚಿಗಳೊಂದಿಗೆ ಪ್ರಾರಂಭವಾಯಿತು ಮತ್ತು ಅದರ ವಿಶಿಷ್ಟ ರುಚಿ ಬಹುಬೇಗ ಜನರಿಗೆ ಇಷ್ಟವಾಯಿತು. ಇದು ಪೂರ್ಣ ಪ್ರಮಾಣದ ಐಸ್ ಕ್ರೀಮ್ ಪಾರ್ಲರ್ ಆಗಿ ಬದಲಾಯಿತು.

200 ಚದರ ಅಡಿ ಅಂಗಡಿಯಲ್ಲಿ ಶುರುವಾದ ನ್ಯಾಚುರಲ್ಸ್

ಜುಹುವಿನ ಕೋಳಿವಾಡ ಸಮೀಪದ ಅವರ ಸಾಧಾರಣ 200 ಚದರ ಅಡಿ ಅಂಗಡಿಯಲ್ಲಿ ಶುರುವಾದ ನ್ಯಾಚುರಲ್ಸ್‌, ಮೊದಲ ವರ್ಷ 5,00,000 ರೂಪಾಯಿ ಆದಾಯ ಗಳಿಸಿತು. ಒಂದು ವರ್ಷದ ನಂತರ, ಅವರು ಸಂಪೂರ್ಣ ಐಸ್ ಕ್ರೀಮ್ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸುವ ಸಲುವಾಗಿ ಪಾವ್ ಭಾಜಿ ಮಾರಾಟವನ್ನು ತೊರೆದರು. ಈಗ ನ್ಯಾಚುರಲ್ಸ್ ಐಸ್ ಕ್ರೀಂನ 135 ಕ್ಕೂ ಹೆಚ್ಚು ಸ್ಥಳಗಳು ಈಗ ರಾಷ್ಟ್ರದಾದ್ಯಂತ ಅಸ್ತಿತ್ವದಲ್ಲಿವೆ. ಕೆಪಿಎಂಜಿ ಸಮೀಕ್ಷೆ ಪ್ರಕಾರ ಗ್ರಾಹಕರ ಅನುಭವಕ್ಕಾಗಿ ಭಾರತದ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ನ್ಯಾಚುರಲ್ಸ್ ಸ್ಥಾನಪಡೆದುಕೊಂಡಿದೆ.

ಈ ಮಳಿಗೆಗಳಲ್ಲಿ ಹಲಸು, ಹಸಿ ತೆಂಗಿನಕಾಯಿ ಒಳಗೊಂಡಂತೆ 20 ವಿವಿಧ ರುಚಿಗಳಲ್ಲಿ ಐಸ್ ಕ್ರೀಮ್ ಮಾರಾಟವಾಗುತ್ತಿವೆ. ನ್ಯಾಚುರಲ್ಸ್ ಐಸ್ ಕ್ರೀಂನ ಚಿಲ್ಲರೆ ವಹಿವಾಟು 2020ರಲ್ಲಿ ಸುಮಾರು 300 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸೋದರ ತಾಣ ದ ಮಿಂಟ್ ಲಾಂಜ್‌ನಲ್ಲಿ ಮತ್ತು ಹಿಂದೂಸ್ತಾನ್ ಟೈಮ್ಸ್‌ನಲ್ಲಿ 2019ರಲ್ಲಿ ಅವರ ಸಂದರ್ಶನ ಪ್ರಕಟವಾಗಿದೆ ಅದರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.