ಯಶೋಗಾಥೆ: 1 ಕೋಟಿ ರೂ ಉದ್ಯೋಗ ತ್ಯಜಿಸಿ, ತಿಂಗಳಿಗೆ 10 ಸಾವಿರಕ್ಕೆ ಜೀವನ ಸಾಗಿಸುತ್ತಿದ್ದಾಕೆ ಕಟ್ಟಿದ್ದು 4000 ಕೋಟಿ ಸಾಮ್ರಾಜ್ಯ!
Success Story: ಒಂದು ಕೋಟಿ ವೇತನದ ಉದ್ಯೋಗ ತ್ಯಜಿಸಿ 10 ಸಾವಿರಕ್ಕೆ ಜೀವನ ಸಾಗಿಸುತ್ತಿದ್ದ ವಿನೀತಾ ಸಿಂಗ್, ಇದೀಗ 4 ಸಾವಿರ ಕೋಟಿ ಸಾಮ್ರಾಜ್ಯ ನಿರ್ಮಿಸಿದ್ದಾರೆ. ಇವರು ಭಾರತದ ಪ್ರಮುಖ ಸೌಂದರ್ಯವರ್ಧಕ ಕಂಪನಿಯಾದ ಶುಗರ್ ಕಾಸ್ಮೆಟಿಕ್ಸ್ನ ಸಹ-ಸಂಸ್ಥಾಪಕಿ, ಸಿಇಒ.

Vineeta Singh life Story: ಶಾರ್ಕ್ ಟ್ಯಾಂಕ್ ಇಂಡಿಯಾ ಎನ್ನುವ ರಿಯಾಲಿಟಿ ಶೋ ನಾಲ್ಕನೇ ಸೀಸನ್ ಇದೇ ತಿಂಗಳ 6ರಂದು ಪ್ರಾರಂಭವಾಯಿತು. ಈ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರು 4000 ಕೋಟಿ ಸಾಮ್ರಾಜ್ಯದ ಒಡತಿ. ಹೌದು, ಅವರ ಹೆಸರು ವಿನೀತಾ ಸಿಂಗ್. ಇವರು ಕಂಪನಿಯೊಂದಕ್ಕೆ ಸಹ-ಸಂಸ್ಥಾಪಕಿ ಮಾತ್ರವಲ್ಲ, ರಿಯಾಲಿಟಿ ಶೋ ತೀರ್ಪುಗಾರರಾಗಿಯೂ ಪ್ರಸಿದ್ಧರಾಗಿದ್ದಾರೆ. ಒಂದು ಕೋಟಿ ವೇತನದ ಉದ್ಯೋಗ ತ್ಯಜಿಸಿ 10 ಸಾವಿರ ರೂ.ಗೆ ಜೀವನ ಸಾಗಿಸುತ್ತಿದ್ದ ವಿನೀತಾ, ಇಂದು ಕಟ್ಟಿರೋದು 4,000 ಕೋಟಿ ರೂ ಸಾಮ್ರಾಜ್ಯ. ಭಾರತದ ಪ್ರಮುಖ ಸೌಂದರ್ಯವರ್ಧಕ ಕಂಪನಿಯಾದ ಶುಗರ್ ಕಾಸ್ಮೆಟಿಕ್ಸ್ನ ಸಹ-ಸಂಸ್ಥಾಪಕಿ, ಸಿಇಒ ಇವರು.
ಈ ಹಂತಕ್ಕೆ ಬರಲು ಆಕೆಯ ಪ್ರಯಾಣ ಸುಲಭದ್ದಾಗಿರಲಿಲ್ಲ. ವಿನೀತಾ ಅವರ ಯಶಸ್ಸು ಮತ್ತು ಬಹುಕೋಟಿ ವ್ಯವಹಾರ ನೋಡಿದ ಸಾಕಷ್ಟು ಮಂದಿಗೆ ಆಕೆಯ ಸಾಧನೆಗಳ ಹಿಂದಿನ ಹೋರಾಟ, ಕಠಿಣ ದಿನಗಳು ಮತ್ತು ಶ್ರಮ ಕಾಣುತ್ತಿಲ್ಲ. 4000 ಕೋಟಿಯ ಕೋಟೆ ಕಟ್ಟಲು ಆಕೆಯ ಛಲ ಆತ್ಮವಿಶ್ವಾಸ ಮತ್ತು ದೃಢತೆ, ಸಮರ್ಪಣೆ ಮತ್ತು ಗಟ್ಟಿಯಾದ ನಿರ್ಧಾರವೇ ಕಾರಣ. ಆಕೆ ಯಶೋಗಾಥೆ ಸ್ಫೂರ್ತಿದಾಯಕ ಉದಾಹರಣೆಯಾಗಿದೆ. ವಿನೀತಾ ಪ್ರಯಾಣ ಮತ್ತು ಈ ಹಂತಕ್ಕೆ ಹೇಗೆ ತಲುಪಿದರು ಎಂಬುದನ್ನು ನೋಡೋಣ. ತನ್ನ ಜೀವನದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ವಿನೀತಾ ಸಿಂಗ್.
ಗುಜರಾತ್‌ನಿಂದ ಮುಂಬೈಗೆ: ವಿನೀತಾ ಸ್ಪೂರ್ತಿದಾಯಕ ಪ್ರಯಾಣ
ವಿನೀತಾ ಜನಿಸಿದ್ದು ಗುಜರಾತ್‌ನ ಆನಂದ್ ಎಂಬಲ್ಲಿ. ತಮ್ಮ ಬಾಲ್ಯವನ್ನು ಭಾವನಗರದಲ್ಲಿ ತನ್ನ ಅಜ್ಜಿಯೊಂದಿಗೆ ಕಳೆದರು. ಈ ವೇಳೆ ಆಕೆಯ ತಂದೆ ವೈದ್ಯರಾಗಿ ದೆಹಲಿಯ ಏಮ್ಸ್ನಲ್ಲಿ ಕೆಲಸ ಮಾಡುವ ಅವಕಾಶ ಪಡೆದರು. ಆದ್ದರಿಂದ ಇಡೀ ಕುಟುಂಬ ಅಲ್ಲಿಗೆ ಸ್ಥಳಾಂತರಗೊಂಡಿತು. ದೆಹಲಿ ವಿನೀತಾರ ಹೊಸ ಮನೆಯಾಯಿತು. ತನ್ನ ಹೆತ್ತವರಿಗೆ ಒಬ್ಬಳೇ ಮಗಳಾಗಿದ್ದ ವಿನೀತಾ, ಇಲ್ಲಿ ಸ್ನೇಹಿತರನ್ನು ಕಂಡುಕೊಳ್ಳಲು ಕೊಂಚ ಕಷ್ಟಪಟ್ಟರು. ದಿನಗಳು ಉರುಳಿದಂತೆ ಸ್ನೇಹಿತರನ್ನು ಕಂಡುಕೊಂಡರು. ಶಿಕ್ಷಣದ ನಡುವೆಯೇ ಉದ್ಯಮದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ವಿನೀತಾ, ಮುಂಬೈನಲ್ಲಿ ಕಂಪನಿಯೊಂದನ್ನು ಪ್ರಾರಂಭಿಸಿ ಅಲ್ಲಿಗೆ ಸ್ಥಳಾಂತರಗೊಂಡರು. ಮುಂಬೈನಲ್ಲಿ ತನ್ನ ಕಂಪನಿ ಪ್ರಾರಂಭಿಸಿದಾಗ ಮೂವರು ಸಹ-ಸಂಸ್ಥಾಪಕರು ಇದೇ ನಗರದವರಾಗಿದ್ದರು. ಹೀಗಾಗಿ ವಿನೀತಾ ಮುಂಬೈಗೆ ಶಿಫ್ಟ್ ಆದರು.
ಆರಂಭಿಕ ಜೀವನ; 10ನೇ ವಯಸ್ಸಿನಲ್ಲಿ ವಿನೀತಾ ಸಿಂಗ್ ವ್ಯಾಪಾರ ಪ್ರಾರಂಭ
10 ವಯಸ್ಸು ಶಾಲಾ ಹಂತ. ಪ್ರಪಂಚ ಜ್ಞಾನ ಕಡಿಮೆ. ಭವಿಷ್ಯದ ಜೀವನದ ಯಾವುದೇ ತಿಳುವಳಿಕೆ ಇರುವುದಿಲ್ಲ. ಈ ವಯಸ್ಸಿನಲ್ಲಿ ಎಲ್ಲರೂ ಆಟ-ಪಾಠಗಳೊಂದಿಗೆ ನಿರತರಾಗಿದ್ದರೆ, ವಿನೀತಾ ಆಗಲೇ ವ್ಯಾಪಾರದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರಂತೆ. ಆ ಚಿಕ್ಕ ವಯಸ್ಸಿನಲ್ಲಿ ವಿನೀತಾ ಮತ್ತು ತನ್ನ ಸ್ನೇಹಿತನೊಂದಿಗೆ ಸಣ್ಣ ಮ್ಯಾಗ್ಜೈನ್ ಪ್ರಾರಂಭಿಸಿದ್ದರಂತೆ. ಮನೆ ಮನೆಗೆ ಹೋಗಿ 3 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಆದರೆ ಜನರು ಇದು ತುಂಬಾ ದುಬಾರಿ ಪತ್ರಿಕೆ ಎನ್ನುತ್ತಿದ್ದರು. ಉದ್ಯಮ ಲೋಕಕ್ಕೆ ಕಾಲಿಟ್ಟ ವಿನೀತಾಗೆ ಹಣ ಸಂಪಾದಿಸಿದ ಮೊದಲ ಅನುಭವವಾಗಿತ್ತು. ಇದು ಎಷ್ಟು ಮುಖ್ಯ ಮತ್ತು ಮೌಲ್ಯಯುತವಾಗಿದೆ ಎಂಬುದನ್ನು ಅರಿತ ವಿನೀತಾಗೆ ಇದು ಅರ್ಥಮಾಡಿಕೊಳ್ಳದ ಪಾಠವಾಗಿತ್ತು. ಹೀಗಂತ ಆಕೆಯೇ ಹೇಳಿರೋದು.
ಐಐಟಿ-ಐಐಎಂನಿಂದ ಉದ್ಯಮಶೀಲತೆಗೆ: 1 ಕೋಟಿ ರೂ ವೇತನ ರಿಜೆಕ್ಟ್
ವಿನೀತಾ ಸಿಂಗ್ ಓದಿನಲ್ಲೂ ಸದಾ ಮುಂದಿದ್ದರು. ಅವರು ಐಐಟಿ ಮದ್ರಾಸ್ ಮತ್ತು ಐಐಎಂ ಅಹಮದಾಬಾದ್‌ನಲ್ಲಿ ಶಿಕ್ಷಣ ಪೂರ್ಣಗೊಳಿಸಿದರು. ಐಐಟಿಯಲ್ಲಿದ್ದಾಗ ಅವರು ಕಡಿಮೆ ವೈಫಲ್ಯ ಕಾಣುವ ಕ್ರೀಡೆಗಳಿಗೆ ಆದ್ಯತೆ ನೀಡಿದ ಅವರು, ಸುಲಭವಾಗಿ ಮತ್ತು ಬೇಗನೇ ಯಶಸ್ವಿಯಾಗುವುದ ಮೇಲೆಯೇ ತನ್ನ ಗುರಿ ಇಡುತ್ತಿದ್ದರಂತೆ. ಐಐಎಂ ಜಾಬ್ ಪ್ಲೇಸ್ಮೆಂಟ್ಗಾಗಿ ವಿನೀತಾ ಹೂಡಿಕೆ ಬ್ಯಾಂಕಿಂಗ್‌ಗೆ ಅರ್ಜಿ ಸಲ್ಲಿಸಿದ್ದರಂತೆ. ಏಕೆಂದರೆ ಯಶಸ್ಸಿಗೆ ಸುಲಭವಾದ ಮಾರ್ಗ ಎನ್ನುವ ಕಾರಣ ಈ ನಿರ್ಧಾರ ಮಾಡಿದ್ದರು. ತನ್ನ ಅಧ್ಯಯನದ ಉದ್ದಕ್ಕೂ ಅನೇಕ ಪುಸ್ತಕಗಳ ಓದಿದ್ದ ವಿನೀತಾ, ತನ್ನದೇಯಾದ ಕಂಪನಿ ಪ್ರಾರಂಭಿಸುವ ಕನಸು ಕಂಡಿದ್ದರು. ಹಾಗಾಗಿ ಐಐಎಂನಲ್ಲಿ 1 ಕೋಟಿ ರೂ ವೇತನದ ಪ್ಯಾಕೇಜ್ ಸಿಕ್ಕಿದ್ದರೂ ಅದನ್ನು ತಿರಸ್ಕರಿಸಿದ್ದರು. ಆಗ ಆಕೆಗೆ 23 ವರ್ಷ. ಸ್ವಂತ ವ್ಯವಹಾರ ನಿರ್ಮಿಸುವ ಸಲುವಾಗಿ ಈ ಉದ್ಯೋಗವನ್ನು ತಿರಸ್ಕರಿಸಿದ್ದರು.
ಮೊದಲ ವ್ಯವಹಾರದಲ್ಲಿ ದೊಡ್ಡ ವೈಫಲ್ಯ ಎದುರಿಸಿದ ವಿನೀತಾ
23ನೇ ವಯಸ್ಸಿನಲ್ಲಿ ವ್ಯವಹಾರಕ್ಕೆ ಕೈ ಹಾಕಿದ ವಿನೀತಾ, ದೊಡ್ಡ ವೈಫಲ್ಯ ಅನುಭವಿಸಿದರು. ಮಹಿಳೆಯರಿಗಾಗಿ ಒಳ ಉಡುಪುಗಳ ಬ್ರಾಂಡ್ ರಚಿಸುವುದು ಮತ್ತು ಇ-ಕಾಮರ್ಸ್ ಮೂಲಕ ಅದನ್ನು ಬೆಳೆಸುವುದು ಅವರ ಆಲೋಚನೆಯಾಗಿತ್ತು. ದೊಡ್ಡ ವ್ಯಾಪಾರವನ್ನು ನಿರ್ಮಿಸಲು, ಆಕೆಗೆ ಸಾಕಷ್ಟು ಹಣದ ಅಗತ್ಯವಿತ್ತು. ಆದ್ದರಿಂದ ವಿನೀತಾ 10-12 ಹೂಡಿಕೆದಾರರನ್ನು ಸಂಪರ್ಕಿಸಿದ್ದರು. ಆದರೆ ವ್ಯವಹಾರದಲ್ಲಿ ಯಾವುದೇ ಅನುಭವವಿಲ್ಲದ ಕಾರಣ ಯಾರೂ ಹೂಡಿಕೆಗೆ ಮುಂದಾಗಲಿಲ್ಲ. ಇಂದು, ವಿನೀತಾ ಸಿಂಗ್ ನಗರದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾದ ಮುಂಬೈನ ಪೊವೈನಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಆಕೆಯ ಆರಂಭಿಕ ದಿನಗಳಲ್ಲಿ ಅವರು ಪೊವೈನಲ್ಲಿ ಒಂದು ಸಣ್ಣ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಇದು ಒಂದು ಚಿಕ್ಕ 1RK (ಒಂದು ಕೊಠಡಿ ಮತ್ತು ಅಡುಗೆಮನೆ) ಅಪಾರ್ಟ್ಮೆಂಟ್ ಆಗಿದ್ದು, ಮಾಸಿಕ ಬಾಡಿಗೆ 5000 ರೂಪಾಯಿ ಇತ್ತು.
10,000 ಸಂಬಳದಲ್ಲಿ 5 ವರ್ಷ ಸೇವಾ ಸಂಸ್ಥೆ ನಡೆಸಿದ್ದ ವಿನೀತಾ ಸಿಂಗ್
ಮೊದಲ ವ್ಯವಹಾರ ವಿಫಲವಾದ ನಂತರ ವಿನೀತಾ ಸೇವಾ ಕಂಪನಿ ಪ್ರಾರಂಭಿಸಿದರು. ಅಲ್ಲಿ ಗ್ರಾಹಕರಿಗೆ ಹಿನ್ನೆಲೆ ಪರಿಶೀಲನೆ ಸೇವೆಗಳನ್ನು ಒದಗಿಸುತ್ತಿದ್ದರು. ಒಮ್ಮೆ 1 ಕೋಟಿ ರೂಪಾಯಿಯ ಪ್ಯಾಕೇಜ್ ತಿರಸ್ಕರಿಸಿದ್ದ ವಿನೀತಾ, ಕೇವಲ 10,000 ರೂಪಾಯಿ ಪಡೆದು ಜೀವನ ಸಾಗಿಸುತ್ತಿದ್ದರು. ಆದರೆ ಆಕೆಯ ದೃಢಸಂಕಲ್ಪದಿಂದ 5 ವರ್ಷಗಳ ಕಾಲ ಕಂಪನಿ ನಡೆಸಿ ಅದರ ಆದಾಯವನ್ನು 4-5 ಕೋಟಿ ರೂಗೆ ಹೆಚ್ಚಿಸಿದ್ದರು. ಆದರೆ ಇದು ಅವರಿಗೆ ತೃಪ್ತಿದಾಯಕವಾಗಿರಲಿಲ್ಲ. ಇನ್ನೂ ದೊಡ್ಡ ಕನಸು ಹೊಂದಿದ್ದ ವಿನೀತಾ, ದೊಡ್ಡ ಉದ್ಯಮ ಆರಂಭಿಸಲು ಪಣ ತೊಟ್ಟರು. ಹೀಗಾಗಿ, ಸೇವಾ ಕಂಪನಿ ಮುಚ್ಚಲು ದೃಢ ನಿರ್ಧಾರ ಕೈಗೊಂಡರು. ಅದರಂತೆ ಮುಚ್ಚಿದರು. ಈ ಮಧ್ಯೆ ಮದುವೆಯೂ ಆಗಿದ್ದರು.
ಪತಿಯೊಂದಿಗೆ 'ಶುಗರ್ ಕಾಸ್ಮೆಟಿಕ್ಸ್' ಕಂಪನಿ ಪ್ರಾರಂಭ
2012ರಲ್ಲಿ ವಿನೀತಾ ತಮ್ಮ ಪತಿ ಕೌಶಿಕ್ ಮುಖರ್ಜಿ ಅವರೊಂದಿಗೆ ಸೌಂದರ್ಯವರ್ಧಕ ಉತ್ಪನ್ನಗಳನ್ನು ಉತ್ಪಾದಿಸುವ ಶುಗರ್ ಕಾಸ್ಮೆಟಿಕ್ಸ್ ಬ್ರ್ಯಾಂಡ್ ಕಂಪನಿ ಪ್ರಾರಂಭಿಸಿದರು. ಶ್ರೀಮಂತ ಗ್ರಾಹಕರನ್ನು ಮತ್ತು ಯುವ ಜನರನ್ನು ಗುರಿಯಾಗಿಸಿಕೊಂಡು ದುಬಾರಿ ಉತ್ಪನ್ನಗಳನ್ನು ಉತ್ಪಾದಿಸಿದರು. ಮಹಿಳೆಯರ ಮೇಕ್ಅಪ್ ಟ್ರೆಂಡ್ ಅರಿತು ಅದರ ಮೇಲೆಯೇ ಕೇಂದ್ರೀಕರಿಸಿದರು. ಮೇಕ್ಅಪ್ ಎಂಬುದು ಮಹಿಳೆಯರಿಗೆ ಶಕ್ತಿ ಎಂದು ಅರಿತರು. ಹೀಗಾಗಿ, ಬಜೆಟ್ ಸ್ನೇಹಿ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುವ ಮೂಲಕ ಶುಗರ್ ಕಾಸ್ಮೆಟಿಕ್ ಕಂಪನಿ ತ್ವರಿತವಾಗಿ ಜನಪ್ರಿಯತೆ ಗಳಿಸಿತು. ಒಬ್ಬರಿಂದ ಒಬ್ಬರಿಗೆ ಮಾತಿನ ಮೂಲಕವೇ ಪ್ರಸಿದ್ಧಿ ಪಡೆಯಿತು. ಮಾರ್ಕೆಟಿಂಗ್‌ಗೆ ಹೆಚ್ಚು ಖರ್ಚು ಮಾಡದೆ, ವಿನೀತಾ ಅವರ ಕಂಪನಿಯು ವೇಗವಾಗಿ ಬೆಳೆಯಿತು, ಸೌಂದರ್ಯವರ್ಧಕ ಉದ್ಯಮದಲ್ಲಿ ಹೆಚ್ಚು ನಂಬಿಕೆ ಗಳಿಸಿತು.
ಶ್ರೀಮಂತರಾಗುವ ಬಯಕೆ ಹೊಂದಿದ್ದ ವಿನೀತಾ
17 ವಯಸ್ಸಿನಲ್ಲಿದ್ದಾಗ ಅಂದರೆ ಐಐಟಿಗೆ ಹೋಗುತ್ತಿದ್ದ ವೇಳೆ ಪ್ರಾಧ್ಯಾಪಕರೊಬ್ಬರು ವಿನೀತಾ ಸಿಂಗ್ ಜೀವನದ ಗುರಿಯ ಬಗ್ಗೆ ಕೇಳಿದ್ದರು. ಆಗ ಅಚ್ಚರಿಯ ಉತ್ತರ ನೀಡಿದ್ದರು. ನಾನು ಶ್ರೀಮಂತಳಾಗುವ ಬಯಕೆ ಹೊಂದಿರುವುದಾಗಿ ಹೇಳಿದ್ದರು. ಆಗ ಪ್ರಾಧ್ಯಾಪಕರು, 'ಹಾಗಾದರೆ ನೀನು ಉದ್ಯಮಿಯಾಗು' ಎಂದು ಸಲಹೆ ನೀಡಿದ್ದರಂತೆ. ಉದ್ಯಮಿ ಎಂಬ ಪದವನ್ನು ವಿನೀತಾ ಮೊದಲ ಬಾರಿಗೆ ಕೇಳಿದ್ದರು. ಅಹಮದಾಬಾದ್‌ನಲ್ಲಿ ಐಐಎಂ ಓದುತ್ತಿದ್ದಾಗ ವಿನೀತಾ ತನ್ನ ಪತಿಯನ್ನು ಭೇಟಿಯಾಗಿದ್ದರು. ತನ್ನ ಜೂನಿಯರ್ ಆಗಿದ್ದ ತನ್ನ ಪತಿ ಕೌಶಿಕ್ ಮುಖರ್ಜಿ ಕೂಡ ವಿನೀತಾ ಅವರಂತೆಯೇ ಆಲೋಚನೆಗಳನ್ನು ಹೊಂದಿದ್ದರು. ಇಬ್ಬರ ಆಲೋಚನೆಗಳು ಒಂದೇ ರೀತಿ ಇದ್ದ ಕಾರಣ ವಿನೀತಾ-ಕೌಶಿಕ್ ಒಟ್ಟಿಗೆ ಪ್ರಯಾಣ ಬೆಳೆಸಿದರು. ಇಬ್ಬರು ಸೇರಿ 4000 ಕೋಟಿ ರೂಪಾಯಿ ಸಾಮ್ರಾಜ್ಯ ಕಟ್ಟಿದ್ದಾರೆ. ಇವರ ಹಾದಿ ಅದೆಷ್ಟೋ ಮಂದಿಗೆ ಮಾದರಿ.
