ಭಾರತಕ್ಕೆ ಬನ್ನಿ, ಭೂಮಿಗೆ ಮರುಪ್ರಯಾಣಿಸಿರುವ ಸುನಿತಾ ವಿಲಿಯಮ್ಸ್‌ಗೆ ಭಾರತದ ಪ್ರಧಾನಿ ಮೋದಿ ಆಹ್ವಾನ; ಹೃದಯಸ್ಪರ್ಶಿ ಪತ್ರ
Sunita Williams: ಐಎಸ್‌ಎಸ್‌ನಿಂದ 9 ತಿಂಗಳ ಬಳಿಕ ಭೂಮಿಗೆ ಮರು ಪ್ರಯಾಣ ಬೆಳೆಸಿರುವ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಭಾರತದ ಪ್ರಧಾನಿ ಮೋದಿ ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

Sunita Williams: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್‌ಎಸ್) 9 ತಿಂಗಳ ವಾಸದ ಬಳಿಕ ಭೂಮಿಗೆ ಮರಳುತ್ತಿರುವ ನಾಸಾದ ಗಗನಯಾತ್ರಿ ಭಾರತೀಯ ಅಮೆರಿಕನ್ ಸುನಿತಾ ವಿಲಿಯಮ್ಸ್ ಅವರಿಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೃದಯಸ್ಪರ್ಶಿ ಪತ್ರ ಬರೆದಿದ್ದಾರೆ. ಭಾರತಕ್ಕೆ ಬನ್ನಿ ಎಂದು ಹೃದ್ಯಭಾವದೊಂದಿಗೆ ಆಹ್ವಾನಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ನಾಸಾ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಹಾಗೂ ಸುನಿತಾ ವಿಲಿಯಮ್ಸ್ ಭಾನುವಾರ ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸೂಲ್ ಮೂಲಕ ಭೂಮಿಗೆ ಮರು ಪ್ರಯಾಣ ಆರಂಭಿಸಿದ್ದು, ಇಂದು (ಮಾರ್ಚ್ 18) ಭೂಸ್ಪರ್ಶ ಮಾಡುವ ನಿರೀಕ್ಷೆ ಇದೆ.
ಪ್ರಧಾನಿ ಮೋದಿಯವರ ಹೃದಯಸ್ಪರ್ಶಿ ಪತ್ರ ಹಂಚಿಕೊಂಡ ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರಿಗೆ ಬರೆದ ಹೃದಯಸ್ಪರ್ಶಿ ಪತ್ರವನ್ನು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ನೀವು ಸಾವಿರಾರು ಮೈಲಿ ದೂರ ಇದ್ದರೂ, ನೀವು ನಮ್ಮ ಹೃದಯಕ್ಕೆ ಹತ್ತಿರವಿದ್ದೀರಿ. ಭಾರತದ ಜನರು ನಿಮ್ಮ ಆರೋಗ್ಯಕ್ಕಾಗಿ, ಯೋಜನೆಯ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಹೇಳಿದ್ದಾರೆ.
ಬೋನಿ ಪಾಂಡ್ಯಾ ಅವರು ನಿಮ್ಮ ಮರಳುವಿಕೆಗಾಗಿ ಕಾಯುತ್ತಿರಬಹುದು. ದಿವಂಗತ ದೀಪಕ್ ಭಾಯ್ ಅವರ ಆಶೀರ್ವಾದವು ನಿಮಗೆ ಸದಾ ಇರಲಿದೆ ಎಂಬುದು ನನಗೆ ಖಾತ್ರಿ ಇದೆ. 2016ರಲ್ಲಿ ಯುನೈಟೆಡ್ ಸ್ಟೇಟ್ಸ್ ಭೇಟಿ ಸಂದರ್ಭದಲ್ಲಿ ನಿಮ್ಮನ್ನು ಭೇಟಿಯಾಗಿದ್ದೆ. ಆ ಕ್ಷಣವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ನೀವು ಹಿಂದಿರುಗಿದ ಬಳಿಕ, ನಿಮ್ಮನ್ನು ಭಾರತಕ್ಕೆ ಬರಮಾಡಿಕೊಳ್ಳುವುದನ್ನು ನಿರೀಕ್ಷಿಸುತ್ತಿದ್ದೇವೆ. ಭಾರತದ ಅತ್ಯಂತ ಪ್ರಸಿದ್ಧ ಹೆಣ್ಣುಮಗಳನ್ನು ಸತ್ಕರಿಸುವುದಕ್ಕೆ ಹೆಮ್ಮೆ, ಸಂತೋಷ ಪಡುತ್ತೇವೆ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ತಿಳಿಸಿದ್ದಾರೆ.
ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಇಂದು ಭೂಮಿಗೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಭಾನುವಾರ ಡ್ರ್ಯಾಗನ್ ಕ್ಯಾಪ್ಸೂಲ್ ಮೂಲಕ ಇನ್ನಿಬ್ಬರು ಕ್ರೂ ಸದಸ್ಯರೊಂದಿಗೆ ಭೂಮಿಗೆ ಮರು ಪ್ರಯಾಣ ಶುರುಮಾಡಿದ್ದು, ನ್ಯೂಯಾರ್ಕ್ ಸಮಯ ಪ್ರಕಾರ ಮಂಗಳವಾರ ನಸುಕಿನ 1.05ರ ಹೊತ್ತಿಗೆ ಭೂಸ್ಪರ್ಶ ಮಾಡಲಿದ್ದಾರೆ. ಫ್ಲೋರಿಡಾ ಕರಾವಳಿಯಲ್ಲಿ ಸಂಜೆ 6 ಗಂಟೆ ಸುಮಾರಿಗೆ ಭೂ ಕಕ್ಷೆಗೆ ಪ್ರವೇಶಿಸುವ ಕ್ಯಾಪ್ಸೂಲ್ ಪ್ಯಾರಚೂಟ್ ಸಹಾಯದೊಂದಿಗೆ ಭೂಸ್ಪರ್ಶ ಮಾಡಲಿದೆ.
ಪ್ರಧಾನಿ ಮೋದಿ ಅವರು ತಮ್ಮ ಪತ್ರದಲ್ಲಿ ಸುನಿತಾ ವಿಲಿಯಮ್ಸ್ ಅವರ ಸಾಧನೆ ಬಗ್ಗೆ ಬಹಳಷ್ಟು ಹೆಮ್ಮೆ ವ್ಯಕ್ತಪಡಿಸಿದ್ದು, 140 ಕೋಟಿ ಭಾರತೀಯರು ಈ ಯಶಸ್ಸನ್ನು ಕೊಂಡಾಡಲಿದ್ದಾರೆ, ಸಂಭ್ರಮಿಸಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗಿನ ಸಭೆಯಲ್ಲಿ, ಸುನಿತಾ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಸುನಿತಾ ಅವರ ಕೆಲಸದ ಬಗ್ಗೆ ಭಾರತದ ಮೆಚ್ಚುಗೆಯನ್ನು ಒತ್ತಿಹೇಳಿದ್ದಾಗಿ ಪ್ರಧಾನಿ ಉಲ್ಲೇಖಿಸಿದ್ದಾರೆ. ಅವರು 2016 ರ ಯುಎಸ್ ಭೇಟಿಯ ಸಮಯದಲ್ಲಿ ಸುನಿತಾ ಅವರ ಕುಟುಂಬವನ್ನು ಭೇಟಿಯಾಗಿದ್ದರು.
ಸುನಿತಾ ವಿಲಿಯಮ್ಸ್ ಅವರ ಭಾರತ ನಂಟು
ಸುನಿತಾ ವಿಲಿಯಮ್ಸ್ ಅವರ ತಂದೆ ದೀಪಕ್ ಪಾಂಡ್ಯ ಅವರು ಗುಜರಾತ್‌ನ ಝುಲ್ಸಾನ ಗ್ರಾಮದಲ್ಲಿ ಜನಿಸಿದ್ದರು. ಕಾಲಾನುಕ್ರಮದಲ್ಲಿ ಅವರು ಅಮೆರಿಕಕ್ಕೆ ಹೋದರು. ಸುನಿತಾ ವಿಲಿಯಮ್ಸ್ ಅಮೆರಿಕದದಲ್ಲೇ ಹುಟ್ಟಿ ಬೆಳೆದರೂ, ಅವರ ಭಾರತೀಯ ಗುರುತು ಯಾವತ್ತಿಗೂ ಇರುವಂಥದ್ದು. ಅವರ ಹಿನ್ನೆಲೆ, ಸಂಪ್ರದಾಯ ವೈಯಕ್ತಿಕ ಅನುಭವಗಳ ನಿರೂಪಣೆಯಲ್ಲಿ ಬರುವಂಥದ್ದು.
ಸುನಿತಾ ವಿಲಿಯಮ್ಸ್ ಮಾತುಗಳಲ್ಲೂ ಅದು ವ್ಯಕ್ತವಾಗುತ್ತದೆ. ಭಾರತದ ಪರಂಪರೆ, ಭಗವದ್ಗೀತೆಯ ಪ್ರತಿ, ಗಣೇಶನ ಪ್ರತಿಮೆ, ಗಂಗಾ ಜಲವನ್ನು ತನ್ನೊಡನೆ ಇಟ್ಟುಕೊಂಡಿರುವುದನ್ನು ಹೇಳಿಕೊಂಡಿದ್ದರು. ಈ ಹಿಂದೆ ಸುನಿತಾ ವಿಲಿಯಮ್ಸ್ ಭಾರತಕ್ಕೆ ಬಂದಾಗ ಅವರಿಗೆ ಬಹಳ ಆತ್ಮೀಯ ಸ್ವಾಗತ ಸಿಕ್ಕಿತ್ತು. ಭಾವನಾತ್ಮಕ ನಂಟು ಅವರನ್ನು ಭಾವುಕರನ್ನಾಗಿ ಮಾಡಿತ್ತು.
ವಿಭಾಗ


