Banking News: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ ಶೇ 30 ಬಡ್ಡಿದರ ವಿಧಿಸಲು ಬ್ಯಾಂಕುಗಳಿಗೆ ಸುಪ್ರೀಂಕೋರ್ಟ್ ಆದೇಶ: ಗ್ರಾಹಕ ಆಯೋಗದ ಆದೇಶ ರದ್ದು
Banking News: ಬ್ಯಾಂಕ್‌ಗಳಿಂದ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದವರು ನಿಗದಿತ ಅವಧಿಯೊಳಗೆ ಪಾವತಿ ಮಾಡದೇ ಇದ್ದರೆ ಶೇ 30 ರಷ್ಟು ಬಡ್ಡಿ ದರ ಪಾವತಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ದೆಹಲಿ: ನೀವು ಕ್ರೆಡಿಟ್ ಕಾರ್ಡ್ ಬಳಸುತ್ತೀದ್ದೀರಾ, ಈಗಾಗಲೇ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದು ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸುತ್ತಿಲ್ಲವೇ?. ಹಾಗಿದ್ದರೆ ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ಆದೇಶವನ್ನು ಗಮನಿಸಿ. ಏಕೆಂದರೆ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದು ಸಕಾಲಕ್ಕೆ ಪಾವತಿ ಮಾಡದೇ ಇದ್ದರೆ ಅಂತಹ ಗ್ರಾಹಕರು ಶೇ.30ಕ್ಕಿಂತ ಅಧಿಕ ಪಾವತಿಸಬೇಕಾಗುತ್ತದೆ.ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಬಾಕಿಯ ಮೇಲೆ ಶೇಕಡಾ 30 ಕ್ಕಿಂತ ಅಧಿಕ ಬಡ್ಡಿದರವನ್ನು ವಿಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, ಅಂತಹ ಶುಲ್ಕಗಳನ್ನು ಅನ್ಯಾಯದ ವ್ಯಾಪಾರವೆಂದು ಪರಿಗಣಿಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) 16 ವರ್ಷಗಳ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಾವಳಿಗೆ ವಿರುದ್ದವಾಗಿ ಆದೇಶ ನೀಡಿದೆ. ಹೆಚ್ಚಿನ ಬಡ್ಡಿ ವಿಧಿಸಲು ಬ್ಯಾಂಕ್‌ಗಳಿಗೆ ಅಧಿಕಾರವಿಲ್ಲ ಎಂದು ಆಯೋಗ ಆದೇಶಿಸಿದ್ದು ಸೂಕ್ತವಾಗಿಲ್ಲ. ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಬಾಕಿಗಳ ಮೇಲೆ 30% ಕ್ಕಿಂತ ಹೆಚ್ಚಿನ ಬಡ್ಡಿದರಗಳನ್ನು ಕಾನೂನುಬದ್ಧವಾಗಿ ವಿಧಿಸಬಹುದು ಎಂದು ಹೇಳಿದರು.
ಆಯೋಗ ನೀಡಿದ್ದ ತೀರ್ಪು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಉದ್ದೇಶಕ್ಕೆ ವಿರುದ್ಧವಾಗಿದೆ. ಆರ್‌ಬಿಐ ನಿಗದಿಪಡಿಸಿದ ನಿಯಮದಂತೆಯೇ ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿಕೊಂಡವರಿಗೆ ಬಡ್ಡಿ ವಿಧಿಸಲು ಅವಕಾಶವಿದೆ ಎನ್ನುವ ಮೂಲಕ ಆರ್‌ಬಿಐ ನಿಯಮಾವಳಿಗಳನ್ನು ಎತ್ತಿ ಹಿಡಿಯಲಾಗಿದೆ. ಸುಪ್ರೀಂಕೋರ್ಟ್ ಆದೇಶದಿಂದಾಗಿ ಕ್ರೆಡಿಟ್ ಕಾರ್ಡ್ ಸಾಲ ಉಳಿಸಿಕೊಂಡವರು ಹೆಚ್ಚಿನ ಬಡ್ಡಿ ತೆರಬೇಕಾಗಬಹುದು.
ಒಂದೂವರೆ ದಶಕದ ಹಿಂದೆಯೇ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿಕೊಂಡವರಿಗೆ ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿ ದರ ವಿಧಿಸಬಾರದು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬ್ಯಾಂಕ್‌ಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು. ಸಿಟಿ ಬ್ಯಾಂಕ್, ಎಚ್‌ಎಸ್‌ಬಿಸಿ, ಅಮೆರಿಕನ್ ಎಕ್ಸ್‌ಪ್ರೆಸ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗಳು ಮೇಲ್ಮನವಿ ಸಲ್ಲಿಸಿದ್ದವು. ಆರ್‌ಬಿಐ ನಿಗದಿಪಡಿಸಿದ ನಿಯಮಾವಳಿಗಳ ಪ್ರಕಾರವೇ ಸಾಲ ಮರು ಪಾವತಿಸದ ಕ್ರೆಡಿಟ್ ಕಾರ್ಡ್ ದಾರರಿಗೆ ಅವಧಿ ಆಧರಿಸಿ ಬಡ್ಡಿ ವಿಧಿಸಲಾಗುತ್ತಿದೆ ಎಂದು ವಾದಿಸಿದ್ದವು. ಅಲ್ಲದೇ ಆರ್‌ಬಿಐ ಕೂಡ ಮೇಲ್ಮನವಿ ಸಲ್ಲಿಸಿತ್ತು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳ ಪೀಠವು, ಆರ್‌ಬಿಐ ಸ್ವಾಯತ್ತ ಸಂಸ್ಥೆ, ಆ ಸಂಸ್ಥೆ ನಿಗದಿಪಡಿಸಿರುವ ನಿಯಮಾವಳಿಗಳ ವಿಚಾರದಲ್ಲಿ ಆಯೋಗ ಮಧ್ಯೆ ಪ್ರವೇಶಿಸಲು ಆಗದು. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ ಒಳಗೊಂಡಿರುವ ನಿಬಂಧನೆಗಳು ಮತ್ತು ಹೊರಡಿಸಿದ ಸುತ್ತೋಲೆಗಳು/ನಿರ್ದೇಶನಗಳಿಗೆ ವಿರುದ್ಧವಾಗಿ ಆಯೋಗ ತೀರ್ಪು ನೀಡಿದಂತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಮಾಡಿದ ಸಲ್ಲಿಕೆಗಳನ್ನು ನಾವು ಒಪ್ಪುತ್ತೇವೆ. ಬ್ಯಾಂಕಿಂಗ್ ವಲಯದ ಮೇಲೆ ಅಥವಾ ಯಾವುದೇ ಒಂದು ನಿರ್ದಿಷ್ಟ ಬ್ಯಾಂಕ್‌ಗೆ ಸಂಬಂಧಿಸಿದಂತೆ ಬಡ್ಡಿದರದ ಮೇಲೆ ಯಾವುದೇ ಮಿತಿಯನ್ನು ವಿಧಿಸಲು ಬರುವುದಿಲ್ಲ. ಶೇ. 30 ಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ವಿಧಿಸಬಹುದು ಎಂದು ಸೂಚಿಸಿದರು.
ಬ್ಯಾಂಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ನಡುವೆ ಪರಸ್ಪರ ಒಪ್ಪಿದ ಒಪ್ಪಂದದ ನಿಯಮಗಳನ್ನು ಮಾರ್ಪಡಿಸಲು ಆಯೋಗ ಯಾವುದೇ ಅಧಿಕಾರವನ್ನು ಹೊಂದಿಲ್ಲ. ಕಾರ್ಡ್ ಪಡೆಯುವಾಗಲೇ ಗ್ರಾಹಕರಿಗೆ ಬಡ್ಡಿದರ, ನಿಯಮಗಳು, ಷರತ್ತುಗಳ ಮಾಹಿತಿ ನೀಡಲಾಗಿರುತ್ತದೆ. ಇದನ್ನೆಲ್ಲಾ ತಿಳಿದುಕೊಂಡ ಮೇಲೂ ಸಾಲ ಪಡೆದ ಗ್ರಾಹಕರು ನಿಗದಿತ ಅವಧಿಯೊಳಗೆ ಬಾಕಿ ಪಾವತಿಸದಿದ್ದರೆ ಆರ್‌ಬಿಐ ನಿಯಮಾವಳಿಯಂತೆಯೇ ಬಡ್ಡಿ ಪಾವತಿಸಬೇಕಾಗುತ್ತದೆ ಎನ್ನುವುದು ಕೋರ್ಟ್ ಸೂಚನೆ.