ವೈವಾಹಿಕ ಹಕ್ಕು ಪಾಲಿಸದೇ ಇದ್ದರೂ ಪತ್ನಿಗೆ ಜೀವನಾಂಶ ಕೊಡುವುದು ಪತಿಯ ಹೊಣೆಗಾರಿಕೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Supreme Court: ವೈವಾಹಿಕ ಹಕ್ಕು ಮರುಸ್ಥಾಪನೆ ಬಳಿಕ ಪತ್ನಿ ತನ್ನ ಪತಿಯೊಂದಿಗೆ ವಾಸಿಸಲು ನಿರಾಕರಿಸಿದರೆ, ಅಂತಹ ಸನ್ನಿವೇಶದಲ್ಲಿ ಪತ್ನಿಗೆ ಜೀವನಾಂಶ ಕೊಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Supreme Court: ವೈವಾಹಿಕ ಹಕ್ಕು ಮರುಸ್ಥಾಪನೆ ಬಳಿಕ ಪತ್ನಿ ತನ್ನ ಪತಿಯೊಂದಿಗೆ ವಾಸಿಸಲು ನಿರಾಕರಿಸಿದರೆ, ಅಂತಹ ಸನ್ನಿವೇಶದಲ್ಲಿ ಪತ್ನಿಗೆ ಜೀವನಾಂಶ ಕೊಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಳೆದ ಶುಕ್ರವಾರ (ಜನವರಿ 10) ಭಾರತದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿರುವುದಾಗಿ ಲೈವ್ ಲಾ ವರದಿ ಮಾಡಿದ್ದು, ಪತ್ನಿಯು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125 ರ ಪ್ರಕಾರ ಜೀವನಾಂಶ ಕೇಳಬಹುದು ಎಂದು ಕೋರ್ಟ್ ಹೇಳಿರುವುದಾಗಿ ತಿಳಿಸಿದೆ. ಇಲ್ಲಿ ವೈವಾಹಿಕ ಹಕ್ಕುಗಳು ಎಂದರೆ ಪತಿ ಮತ್ತು ಪತ್ನಿ ಒಟ್ಟಿಗೆ ಇರುವ ಹಕ್ಕು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಈ ತೀರ್ಪು ಬರೆದ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು, 1955ರ ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 9ರ ಪ್ರಕಾರ ನ್ಯಾಯಯುತ ಕಾರಣಕ್ಕಾಗಿ ವೈವಾಹಿಕ ಹಕ್ಕುಗಳಿಗೆ ಸಂಬಂಧಿಸಿದ ತೀರ್ಪು ಪಾಲಿಸಲು ಪತ್ನಿ ನಿರಾಕರಿಸಿದರೆ, ಅಂತಹ ಸನ್ನಿವೇಶದಲ್ಲಿ ಆಕೆಯು ತನ್ನ ಪತಿಯಿಂದ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125 ರ ಪ್ರಕಾರ ಜೀವನಾಂಶ ಕೇಳಬಹುದು ಎಂದು ಹೇಳಿದ್ದಾರೆ.
ವೈವಾಹಿಕ ಹಕ್ಕು ಪಾಲಿಸದೇ ಇದ್ದರೂ ಪತ್ನಿಗೆ ಜೀವನಾಂಶ; ಏನಿದು ಕೇಸ್?
ಛತ್ತೀಸ್‌ಗಢದ ದಿನೇಶ್ (ಪತಿ) ಮತ್ತು ರೀನಾ (ಪತ್ನಿ) ದಂಪತಿಯ ಕೇಸ್ ಇದು. ದಿನೇಶ್ ಮತ್ತು ಮನೆಯವರ ನಡವಳಿಕೆ ಕಾರಣ, ರೀನಾ ತುಂಬಾ ನೊಂದುಕೊಂಡಿದ್ದರು. ಆಕೆಗೆ ಗರ್ಭಪಾತವೂ ಆಗಿತ್ತು. ಇದರ ಪರಿಣಾಮವಾಗಿ ಆಕೆ ಪತಿಯ ಮನೆಗೆ ಹೋಗಲು ನಿರಾಕರಿಸಿದ್ದರು. ಆದಾಗ್ಯೂ, ರೀನಾ ವಿರುದ್ಧ ವೈವಾಹಿಕ ಹಕ್ಕು ಸ್ಥಾಪನೆಗಾಗಿ ದಿನೇಶ್ ದಾವೆ ಹೂಡುತ್ತಾರೆ. ದಿನೇಶ್ ಪರವಾಗಿ ತೀರ್ಪು ಬರುತ್ತದೆ. ಆದಾಗ್ಯೂ, ಆ ತೀರ್ಪನ್ನು ಅನುಸರಿಸಲು ರೀನಾ ಒಪ್ಪಿಕೊಳ್ಳುವುದಿಲ್ಲ. ಜೀವನಾಂಶ ಕೋರಿ ದಾವೆ ಹೂಡುತ್ತಾರೆ. ಈ ದಾವೆಯಲ್ಲಿ ರೀನಾ ವಾದಿಯಾಗಿದ್ದು, ದಿನೇಶ್ ಪ್ರತಿವಾದಿ. ಅದರ ವಿಚಾರಣೆ ವೇಳೆ ರೀನಾ ನ್ಯಾಯಾಲಯದ ತೀರ್ಪು ಅನುಸರಿಸಿಲ್ಲ ಎಂಬ ಅಂಶದ ಉಲ್ಲೇಖವಾಗುತ್ತದೆ.
1955ರ ಹಿಂದೂ ವಿವಾಹ ಕಾಯ್ದೆ ಪ್ರಕಾರ ನೀಡಿದ ತೀರ್ಪನ್ನು ರೀನಾ ಅನುಸರಿಸದೇ ಇರುವಾಗ, ಆಕೆಗೆ ದಿನೇಶ್ ಯಾಕೆ ಜೀವನಾಂಶ ಕೊಡಬೇಕು ಎಂಬುದು ಪ್ರತಿವಾದವಾಗಿತ್ತು. ಈ ದಾವೆಯ ವಿಚಾರಣೆ ನಡೆಸಿದ ನ್ಯಾಯಪೀಠ, ವಿಸ್ತೃತ ತೀರ್ಪು ನೀಡಿದೆ.
ವೈವಾಹಿಕ ಹಕ್ಕು ಪಾಲಿಸದೇ ಇದ್ದರೂ ಪತ್ನಿಗೆ ಜೀವನಾಂಶ; ಕೋರ್ಟ್ ಗಮನಿಸಿದ ಅಂಶಗಳಿವು
ರೀನಾ ಸಲ್ಲಿಸಿದ್ದ ಜೀವನಾಂಶ ಕೋರಿಕೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, ದಿನೇಶ್ ಅವರು ರೀನಾ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಆಕೆ ಗರ್ಭಪಾತ ಅನುಭವಿಸಿದ ಬಳಿಕ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ಹೀಗಾಗಿ ಪತಿಯ ಮನೆಗೆ ಹೋಗದಿರಲು ಆಕೆ ನಿರ್ಧರಿಸಿದ್ದಾರೆ. ಪತಿ ಮನೆಗೆ ಹೋಗದೇ ಇರುವುದಕ್ಕೆ ರೀನಾ ಸಾಕಷ್ಟು ಕಾರಣಗಳನ್ನು ಹೊಂದಿದ್ದಾರೆ ಎಂಬುದನ್ನು ದಾಖಲಿಸಿಕೊಂಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ರೀನಾ ಜೀವನಾಂಶ ಕೋರಿದ ಕಾರಣ, ಅದನ್ನು ಕೊಡದೇ ತಪ್ಪಿಸಿಕೊಳ್ಳುವುದಕ್ಕೆ ದಿನೇಶ್ ಪ್ರಯತ್ನಿಸಿದ್ದಾರೆ. ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ತೀರ್ಪನ್ನು ಈ ದಾವೆಯಿಂದ ಬಚಾವ್ ಆಗಲು ರಕ್ಷಣೆಯ ಗುರಾಣಿಯನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು. ಇದು ದಿನೇಶ್ ಮೇಲಿನ ಉತ್ತಮ ನಂಬಿಕೆಗೆ ಘಾಸಿ ಉಂಟುಮಾಡಿದೆ. ರೀನಾ ಬಗ್ಗೆ ಆತನಿಗೆ ಇರಬೇಕಾದ ಹೊಣೆಗಾರಿಕೆಯನ್ನು ತಿರಸ್ಕರಿಸುವ ಪ್ರಯತ್ನವನ್ನು ಸ್ಪಷ್ಟವಾಗಿ ಬಿಂಬಿಸಿದೆ. ಆದ್ದರಿಂದ ರೀನಾ ಜೀವನಾಂಶ ಕೇಳಿದ್ದರಲ್ಲಿ ತಪ್ಪೇನೂ ಇಲ್ಲ. ಆತನ ಜತೆಗೆ ಇರಬೇಕು ಎಂಬ ವೈವಾಹಿಕ ಹಕ್ಕು ಮರುಸ್ಥಾಪನೆಯ ತೀರ್ಪು ಉಲ್ಲಂಘಿಸಿದ್ದರಲೂ ವಿಶೇಷವಿಲ್ಲ ಎಂದು ಹೇಳಿದೆ.
ಹಾಗಾಗಿ, ವೈವಾಹಿಕ ಹಕ್ಕುಗಳ ಮರುಸ್ಥಾಪನೆಯ ತೀರ್ಪನ್ನು ಪಾಲಿಸದಿದ್ದರೂ ಸಹ, ಪತಿ ತನ್ನ ಹೆಂಡತಿಗೆ ಜೀವನಾಂಶವನ್ನು ಕೊಡುವ ಹೊಣೆಗಾರಿಕೆಯಿಂದ ಮುಕ್ತನಾಗಲು ಸಾಧ್ಯವಿಲ್ಲ. ಜೀವನಾಂಶವಾಗಿ ತಿಂಗಳಿಗೆ 10,000 ರೂಪಾಯಿ ಪಾವತಿಸಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
