ಕನ್ನಡ ಸುದ್ದಿ  /  Nation And-world  /  Supreme Court Orders Panel Consisting Of Prime Minister And Lop And Cji For Selecting Election Commissioners

Election Commissioner: ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಗೆ ಕ್ರಾಂತಿಕಾರಕ ಬದಲಾವಣೆ ತಂದ ಸುಪ್ರೀಂಕೋರ್ಟ್‌

ಚುನಾವಣೆಗಳ ಪರಿಶುದ್ಧತೆಯನ್ನು ಕಾಪಾಡುವ ಮಹತ್ವದ ತೀರ್ಪಿನಲ್ಲಿ, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು, ಚುನಾವಣಾ ಆಯುಕ್ತರನ್ನು ನೇಮಿಸುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಈ ಕ್ರಾಂತಿಕಾರಕ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ಚುನಾವಣೆಗಳ ಪರಿಶುದ್ಧತೆಯನ್ನು ಕಾಪಾಡುವ ಮಹತ್ವದ ತೀರ್ಪಿನಲ್ಲಿ, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು, ಚುನಾವಣಾ ಆಯುಕ್ತರನ್ನು ನೇಮಿಸುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ದೇಶಾದ್ಯಂತ ಚುನಾವಣಾ ಉಸ್ತುವಾರಿ ವಹಿಸುವ ಇಬ್ಬರು ಚುನಾವಣಾ ಆಯುಕ್ತರನ್ನು, ಸಮಿತಿಯ ಸಲಹೆಯ ಮೇರೆಗೆ ನೇಮಕ ಮಾಡಲಾಗುವುದು. ಅದು ಪ್ರತಿಪಕ್ಷಗಳು ಮತ್ತು ನ್ಯಾಯಾಂಗವನ್ನೂ ಒಳಗೊಂಡಿರುತ್ತದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

"ಚುನಾವಣೆಗಳು ನಿಸ್ಸಂದೇಹವಾಗಿ ನ್ಯಾಯಯುತವಾಗಿರಬೇಕು. ಚುನಾವಣೆಗಳು ಶುದ್ಧತೆಯನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಸರ್ವೋಚ್ಛ ನ್ಯಾಯಾಲಯವು ಭಾರತದ ಚುನಾವಣಾ ಆಯೋಗದೊಂದಿಗೆ ಅತ್ಯಂತ ಗಟ್ಟಿಯಾಗಿ ನಿಲ್ಲುತ್ತದೆ.." ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ಹೇಳಿದೆ.

"ಪ್ರಜಾಪ್ರಭುತ್ವದಲ್ಲಿ, ಚುನಾವಣೆಗಳ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಅದು ವಿನಾಶಕಾರಿ ಪರಿಣಾಮಗಳಿಗೆ ಕಾರಣವಾಗುತ್ತದೆ.." ಎಂದು ಸರ್ವಾನುಮತದ ತೀರ್ಪು ಹೇಳಿದೆ. ಚುನಾವಣಾ ಆಯೋಗವು ಸ್ವತಂತ್ರ ಕಾರ್ಯದರ್ಶಿ, ನಿಯಮ ರೂಪಿಸುವ ಅಧಿಕಾರ, ಸ್ವತಂತ್ರ ಬಜೆಟ್ ಮತ್ತು ದೋಷಾರೋಪಣೆಯಿಂದ ಸಮಾನ ರಕ್ಷಣೆಯನ್ನು ಹೊಂದಿರುತ್ತದೆ ಎಂದೂ ತೀರ್ಪು ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗವು ಈಗ ನಿಧಿ ಮತ್ತು ಅನುಮೋದನೆಗಳಿಗಾಗಿ ಪ್ರಧಾನಮಂತ್ರಿ ಮತ್ತು ಕಾನೂನು ಸಚಿವಾಲಯದ ಬಳಿಗೆ ಹೋಗುವ ಬದಲು, ನೇರವಾಗಿ ಭಾರತದ ಏಕೀಕೃತ ನಿಧಿಯಿಂದ ಹಣವನ್ನು ಪಡೆಯಬಹುದು. ಸುಪ್ರೀಂಕೋರ್ಟ್ ಹಿಂದಿನ ವಿಚಾರಣೆಗಳಲ್ಲಿ ನ್ಯಾಯಯುತ ಮತ್ತು ಪಾರದರ್ಶಕ ಕಾರ್ಯವಿಧಾನಕ್ಕೆ ಒತ್ತು ನೀಡಿತ್ತು, ಇದರಿಂದಾಗಿ ಉತ್ತಮ ವ್ಯಕ್ತಿ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡರು ಎಂದು ನ್ಯಾಯಾಲಯವು ಉಲ್ಲೇಖಿಸಿದೆ.

ಪ್ರಸ್ತುತ, ಪ್ರಧಾನಮಂತ್ರಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರನ್ನು ತಲಾ ಆರು ವರ್ಷಗಳ ಅವಧಿಗೆ ನೇಮಿಸುತ್ತಾರೆ. ಸಾಮಾನ್ಯವಾಗಿ ಮಾಜಿ ಅಧಿಕಾರಶಾಹಿಗಳು ಚುನಾವಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರೆ.

ದೇಶದಲ್ಲಿ ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು, ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ತರಹದ ವ್ಯವಸ್ಥೆಯನ್ನು ಕೋರಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅಸ್ತಿತ್ವದಲ್ಲಿರುವ ಪ್ರಕ್ರಿಯೆಯು ಕಾರ್ಯಾಂಗದ ಹುಚ್ಚಾಟಿಕೆಗಳಿಗೆ ಅನುವು ಮಾಡಿಕೊಡುತ್ತದೆ ಎಂದೂ ಅರ್ಜಿದಾರರು ಆಪಾದಿಸಿದ್ದರು.

ಸಿಬಿಐ ನಿರ್ದೇಶಕರು ಅಥವಾ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ ಅವರ ನೇಮಕಕ್ಕೆ ಭಿನ್ನವಾಗಿ, ವಿರೋಧ ಪಕ್ಷದ ನಾಯಕ ಮತ್ತು ನ್ಯಾಯಾಂಗದ ಹೇಳಿಕೆಗೆ ಭಿನ್ನವಾಗಿ, ಕೇಂದ್ರವು ಏಕಪಕ್ಷೀಯವಾಗಿ ಚುನಾವಣಾ ಆಯೋಗದ ಸದಸ್ಯರನ್ನು ನೇಮಿಸಿದೆ ಎಂದು ಅರ್ಜಿಗಳಲ್ಲಿ ದೂರಲಾಗಿತ್ತು.

ಮಿಂಚಿನ ವೇಗದಲ್ಲಿ ಮಾಜಿ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವ ಕುರಿತು ಕೇಂದ್ರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್, 24 ಗಂಟೆಗಳ ಒಳಗೆ ನೇಮಕಾತಿಗೆ ಸಂಬಂಧಿಸಿದ ಮೂಲ ಕಡತಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.

1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು, ಕಳೆದ ವರ್ಷದ ನವೆಂಬರ್ 18ರಂದು ತಮ್ಮ ಹಿಂದಿನ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ನವೆಂಬರ್ 19ರಂದು ಕೇಂದ್ರ ಸರ್ಕಾರ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಿಸಿತು. ಗೋಯೆಲ್ ನವೆಂಬರ್ 21ರಂದು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ಮುಖ್ಯ ಚುನಾವಣಾ ಆಯುಕ್ತರ ನೇಮಕದ ಕಡತಗಳನ್ನು ಪರಿಶೀಲಿಸಿದ ಸುಪ್ರೀಂಕೋರ್ಟ್‌, ಕಾನೂನು ಮತ್ತು ನ್ಯಾಯ ಸಚಿವಾಲಯವು ಚುನಾವಣಾ ಆಯುಕ್ತರ ನೇಮಕಕ್ಕೆ ನಾಲ್ಕು ಹೆಸರುಗಳನ್ನು ಹೇಗೆ ಶಾರ್ಟ್‌ಲಿಸ್ಟ್ ಮಾಡಿತು ಎಂದು ಕೇಳಿದೆ. ಒಟ್ಟಿನಲ್ಲಿ ಚುನಾವಣಾ ಆಯುಕ್ತರ ನೇಮಕದ ವಿಚಾರವಾಗಿ ಸುಪ್ರೀಂಕೋರ್ಟ್‌ ಇಂದು ನೀಡಿರುವ ತೀರ್ಪನ್ನು ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಲಾಗಿದೆ.

IPL_Entry_Point

ವಿಭಾಗ