ಕನ್ನಡ ಸುದ್ದಿ  /  Nation And-world  /  Supreme Court Reserves Order On Petitions Ban On Hijab In Educational Institutes

Hijab Supreme Court Order: ಶಾಲೆಗಳಲ್ಲಿ ಹಿಜಾಬ್‌ ನಿಷೇಧ, ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್, ವಿವಾದಕ್ಕೆ ಅಂತ್ಯ ದೊರಕುವುದೇ?

ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ವಿವಿಧ ದಾವೆಗಳನ್ನು ಸುಪ್ರೀಂ ಕೋರ್ಟ್‌ ಸತತ ಹತ್ತು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಇಂದು ಈ ವಿಚಾರಣೆಯ ಕುರಿತಾದ ತೀರ್ಪನ್ನು ಕಾಯ್ದಿರಿಸಿದೆ.

ಉಡುಪಿಯ ಎಂಜಿಎಂ ಕ್ಯಾಂಪಸ್‌ ಎದುರು ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು (ಸಾಂದರ್ಭಿಕ ಚಿತ್ರ) (AP Photo/Aijaz Rahi)
ಉಡುಪಿಯ ಎಂಜಿಎಂ ಕ್ಯಾಂಪಸ್‌ ಎದುರು ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು (ಸಾಂದರ್ಭಿಕ ಚಿತ್ರ) (AP Photo/Aijaz Rahi)

ನವದೆಹಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧಿಸಿ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ವಿವಿಧ ದಾವೆಗಳನ್ನು ಸುಪ್ರೀಂ ಕೋರ್ಟ್‌ ಸತತ ಹತ್ತು ದಿನಗಳ ಕಾಲ ವಿಚಾರಣೆ ನಡೆಸಿದ್ದು, ಇಂದು ಈ ವಿಚಾರಣೆಯ ಕುರಿತಾದ ತೀರ್ಪನ್ನು ಕಾಯ್ದಿರಿಸಿದೆ.

ಹಿಜಾಬ್‌ ಪರ ಮತ್ತು ಹಿಜಾಬ್‌ ವಿರುದ್ಧವಿರುವ ಎರಡೂ ಕಡೆಯವರ ಸಮ್ಮುಖದಲ್ಲಿ, ಎಲ್ಲರ ವಾದಗಳನ್ನು ಆಲಿಸಿದ ಬಳಿಕ ಹೇಮಂತ್‌ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠವು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ ಧರಿಸಬೇಕೆ? ಬೇಡವೇ? ಎಂಬ ತೀರ್ಪನ್ನು ಕಾಯ್ದಿರಿಸಿದೆ.

ಹತ್ತು ದಿನಗಳ ಕಾಲ ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ವಿವಾದದ ಕುರಿತು ಸುದೀರ್ಘ ವಾದ ಪ್ರತಿವಾದಗಳು ನಡೆದಿವೆ. ದಾವೆದಾರರ ಕಡೆಯಿಂದ ಸುಮಾರು 21 ವಕೀಲರುಗಳು ವಾದ ಮಂಡಿಸಿದ್ದಾರೆ. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹೆಚ್ಚುವರಿ ಸಾಲಿಟರ್‌ ಜನರಲ್‌ ಕೆಎಂ ನಟರಾಜು, ಕರ್ನಾಟಕ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ್‌ ನವದ್ಗಿಯು ಪ್ರತಿವಾದಿಗಳಾಗಿ ಭಾಗವಹಿಸಿದ್ದಾರೆ.

ಹಿಜಾಬ್‌ ಪರ-ವಿರೋಧ ವಾದಗಳನ್ನು ಆಲಿಸುವ ಸಂದರ್ಭದಲ್ಲಿ "ಹಿಜಾಬ್‌ ಅನ್ನು ಸಾಂಸ್ಕೃತಿಕವಾಗಿ ಸಂವೇದನಾಶಶೀಲರಾಗುವ ಒಂದು ಅವಕಾಶವಾಗಿ ಏಕೆ ನೋಡಬಾರದುʼʼ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಪ್ರಶ್ನಿಸಿತ್ತು. ರಾಜ್ಯ ಸರಕಾರ ಮತ್ತು ಫಾತಮಿಮಾ ಬುಶ್ರಾ ಅವರ ನಡುವಿನ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು. ಧಾರ್ಮಿಕ ಗ್ರಂಥಗಳನ್ನು ಅರ್ಥಮಾಡಿಕೊಳ್ಳಲು ಕೋರ್ಟ್‌ಗಳು ಸಜ್ಜುಗೊಂಡಿಲ್ಲ ಎಂದು ಈ ಹಿಂದೆ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ನೀಡಿದ ತೀರ್ಪಿನ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಹತ್ತು ದಿನಗಳ ಕಾಲ ನಡೆಸಿದೆ. ಅರ್ಜಿದಾರರಲ್ಲಿ ವಿದ್ಯಾರ್ಥಿನಿಯರು, ಮಹಿಳಾ ಹಕ್ಕು ಗುಂಪುಗಳು, ವಕೀಲರು, ಕಾರ್ಯಕರ್ತರು ಮತ್ತು ಇಸ್ಲಾಮಿಕ್ ಸಂಸ್ಥೆಗಳು ಸೇರಿದ್ದಾರೆ.

ಶಾಲಾಕಾಲೇಜುಗಳಲ್ಲಿ ಏಕರೂಪದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರಕಾರವು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. "ಸರಕಾರಿ ಅಧಿಕಾರಿಗಳ ಮಲತಾಯಿ ಧೋರಣೆಯು ವಿದ್ಯಾರ್ಥಿಗಳ ನಂಬಿಕೆಯನ್ನು ಕಸಿದುಕೊಳ್ಳುತ್ತದೆ, ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಮಾಡುತ್ತದೆ, ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆʼʼ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿತ್ತು.

"ಹೈಕೋರ್ಟ್‌ನ ತೀರ್ಪು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ. ಭಾರತದ ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ನೀಡಲಾದ ಅಗತ್ಯ ಧಾರ್ಮಿಕ ಆಚರಣೆಗಳ ಮೂಲಭೂತ ಅಂಶಗಳಿಗೆ ಪೂರಕವಾಗಿಲ್ಲ. ಹಿಜಾಬ್‌ ಧರಿಸುವುದು ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಗತ್ಯವಾಗಿದೆʼʼ ಎಂದು ಮೇಲ್ಮನವಿಯಲ್ಲಿ ಹೇಳಲಾಗಿತ್ತು.