ಮಾಲಿನ್ಯವನ್ನು ಯಾವುದೇ ಧರ್ಮ ಬೆಂಬಲಿಸಲ್ಲ, ದೆಹಲಿಯಲ್ಲಿ ಪಟಾಕಿ ನಿಷೇಧ ಜಾರಿಗೊಳಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ದೆಹಲಿಯಲ್ಲಿ ಮಾಲಿನ್ಯ ದೊಡ್ಡ ಸವಾಲಾಗಿದೆ. ಹೀಗಾಗಿ ಪಟಾಕಿ ನಿಷೇಧವನ್ನು ಜಾರಿಗೊಳಿಸಬಹುದು ಎಂದು ಅಲ್ಲಿನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ದೆಹಲಿ ಪೊಲೀಸರು ಈ ಬಗ್ಗೆ ವಿಶೇಷ ಘಟಕ ಸ್ಥಾಪಿಸಬೇಕು ಎಂದೂ ಕೋರ್ಟ್ ಸೂಚನೆ ನೀಡಿದೆ.
ನವದೆಹಲಿ: ವಾಯು ಮಾಲಿನ್ಯವನ್ನು ಪ್ರಚೋದಿಸುವ ಯಾವುದೇ ಚಟುವಟಿಕೆಯನ್ನು ಯಾವುದೇ ಧರ್ಮವು ಪ್ರೋತ್ಸಾಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಅಷ್ಟೇ ಅಲ್ಲ, ನವೆಂಬರ್ 25 ರೊಳಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶಾಶ್ವತವಾಗಿ ಪಟಾಕಿ ನಿಷೇಧ ಜಾರಿಗೊಳಿಸಬೇಕು ಎಂದು ದೆಹಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. “ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕು ಸಂವಿಧಾನದ 21 ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕು. ಮೊದಲ ನೋಟಕ್ಕೆ ಹೇಳುವುದಾದರೆ ಯಾವುದೇ ಧರ್ಮವು ಮಾಲಿನ್ಯವನ್ನು ಉತ್ತೇಜಿಸುವ ಅಥವಾ ಜನರ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ಚಟುವಟಿಕೆಯನ್ನು ಉತ್ತೇಜಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ”ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ನ್ಯಾಯ ಪೀಠವು ಹೇಳಿತು.
ದೆಹಲಿ ಪಟಾಕಿ ನಿಷೇಧ ಅನುಷ್ಠಾನಕ್ಕೆ ವಿಶೇಷ ಘಟಕ ತೆರೆಯಲು ಪೊಲೀಸರಿಗೆ ನಿರ್ದೇಶನ
ದೆಹಲಿ ಸರ್ಕಾರ ಅಕ್ಟೋಬರ್ 14 ರಂದು ಜಾರಿಗೊಳಿಸಿದ ಆದೇಶವನ್ನು ಜಾರಿಗೆ ತರಲು, ಪಟಾಕಿ ನಿಷೇಧವನ್ನು ಜಾರಿಗೊಳಿಸಲು ಮತ್ತು ಎಸ್‌ಎಚ್‌ಒಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸುವುದಕ್ಕಾಗಿ ವಿಶೇಷ ಸೆಲ್ ರಚಿಸಬೇಕು ಎಂದು ದೆಹಲಿ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.
ನಿಷೇಧದ ಬಗ್ಗೆ ಎಲ್ಲಾ ಪಟಾಕಿ ತಯಾರಕರಿಗೆ ನೋಟಿಸ್ ನೀಡಲಾಗಿದೆಯೇ ಎಂಬುದರ ವಿವರ ಇರುವ ಅಫಿಡವಿಟ್ ಅನ್ನು ನವೆಂಬರ್ 25 ರೊಳಗೆ ದೆಹಲಿ ಪೊಲೀಸ್ ಆಯುಕ್ತರು ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅದೇ ರೀತಿ, ಆನ್‌ಲೈನ್‌ನಲ್ಲಿ ಪಟಾಕಿ ಮಾರಾಟಕ್ಕೆ ಕಡಿವಾಣ ಹಾಕಲು ತೆಗೆದುಕೊಂಡ ಕ್ರಮಗಳ ವಿವರಗಳನ್ನು ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ.
ಎನ್‌ಸಿಆರ್ ಪ್ರದೇಶದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ವಾಯು ಮಾಲಿನ್ಯವನ್ನು ನಿಯಂತ್ರಿಸಲು ತಾವು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ಎಲ್ಲಾ ರಾಷ್ಟ್ರೀಯ ರಾಜಧಾನಿ ಪ್ರದೇಶದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ದೆಹಲಿ ಪೊಲೀಸರು ಆದೇಶವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
"ಪಟಾಕಿ ನಿಷೇಧದ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ವಿಶೇಷ ಕೋಶವನ್ನು ರಚಿಸುವಂತೆ ನಾವು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸುತ್ತೇವೆ. ನಿಷೇಧವನ್ನು ಜಾರಿಗೊಳಿಸಲು ಅವರು ತೆಗೆದುಕೊಂಡ ಕ್ರಮಗಳನ್ನು ದಾಖಲಿಸುವ ಮೂಲಕ ವೈಯಕ್ತಿಕ ಅಫಿಡವಿಟ್ ಅನ್ನು ದಾಖಲಿಸಲು ನಾವು ದೆಹಲಿ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸುತ್ತೇವೆ" ಎಂದು ಪೀಠವು ಸ್ಪಷ್ಟವಾಗಿ ಹೇಳಿದೆ. ಪಟಾಕಿ ನಿಷೇಧವನ್ನು ಜಾರಿಗೊಳಿಸುವುದಕ್ಕೆ ಆದೇಶ ನೀಡಲು ಅಕ್ಟೋಬರ್ 14 ರವರೆಗೆ ದೆಹಲಿ ಸರ್ಕಾರ ಏಕೆ ವಿಳಂಬ ಮಾಡಿತು ಎಂದು ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
ಸೋಮವಾರ ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ಯಾಗಿತ್ತು. ನಗರದ ಹಲವಾರು ಭಾಗಗಳಲ್ಲಿ ದಟ್ಟವಾದ ಹೊಗೆ ಆವರಿಸಿತ್ತು.