ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ

ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ

ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಏಪ್ರಿಲ್ 16 ರಂದು ಸುಮಾರು 10 ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದೆ.

ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ
ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಅರ್ಜಿಗಳ ವಿಚಾರಣೆ (ಸಂಗ್ರಹ ಚಿತ್ರ)

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಹಲವಾರು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಏಪ್ರಿಲ್ 16ರಂದು ವಿಚಾರಣೆ ನಡೆಸಲಿದೆ. ತಿದ್ದುಪಡಿ ಮಾಡಲಾದ ಕಾನೂನು ಹಲವಾರು ರಾಜಕೀಯ ಮುಖಂಡರು, ಧಾರ್ಮಿಕ ಸಂಸ್ಥೆಗಳು ಮತ್ತು ನಾಗರಿಕ ಹಕ್ಕುಗಳ ಗುಂಪುಗಳಿಂದ ಟೀಕೆಗೆ ಗುರಿಯಾಗಿದೆ. ತಿದ್ದುಪಡಿಯು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುತ್ತಿದ್ದಾರೆ. ವಕ್ಫ್ ಆಸ್ತಿಗಳ ಸ್ವರೂಪವನ್ನು ಈ ತಿದ್ದುಪಡಿಯು ಬದಲಾಯಿಸುತ್ತದೆ ಎಂದು ವಾದಿಸುತ್ತಿದ್ದಾರೆ.

10 ಅರ್ಜಿಗಳ ವಿಚಾರಣೆ

ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಏಪ್ರಿಲ್ 16 ರಂದು ಸುಮಾರು 10 ಅರ್ಜಿಗಳನ್ನು ಕೈಗೆತ್ತಿಕೊಳ್ಳಲಿದೆ. ಅರ್ಜಿದಾರರಲ್ಲಿ ಲೋಕಸಭೆ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ದೆಹಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್, ನಾಗರಿಕ ಹಕ್ಕುಗಳ ರಕ್ಷಣೆಯ ಸಂಘ (ಎಪಿಸಿಆರ್), ಮೌಲಾನಾ ಅರ್ಷದ್ ಮದನಿ, ಸಮಸ್ತ ಕೇರಳ ಜಮೀಯತುಲ್ ಉಲೇಮಾ, ಅಂಜುಮ್ ಕದ್ರಿ ಮತ್ತು ಇತರರು ಸೇರಿದ್ದಾರೆ.

ಈ ಬದಲಾವಣೆಗಳು ದೇಶಾದ್ಯಂತ ಮುಸ್ಲಿಂ ದತ್ತಿಗಳ ಆಡಳಿತದ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತವೆ ಎಂದು ಹೇಳಲಾಗುತ್ತಿದೆ. ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದು, ತನ್ನ ಕಡೆಯ ವಾದ ಆಲಿಸದೆ ಯಾವುದೇ ಮಧ್ಯಂತರ ಆದೇಶ ಹೊರಡಿಸಬಾರದು ಎಂದು ವಿನಂತಿಸಿದೆ. ಹೆಚ್ಚಿನ ಅರ್ಜಿದಾರರು ಈ ವಿಷಯವು ಸಂಪೂರ್ಣವಾಗಿ ವಿಚಾರಣೆಯಾಗುವವರೆಗೆ ಕಾನೂನಿನ ಅನುಷ್ಠಾನವನ್ನು ತಡೆಹಿಡಿಯಬೇಕೆಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಜಮಿಯತ್ ಉಲೇಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ತಮ್ಮ ಅರ್ಜಿಯಲ್ಲಿ ತಿದ್ದುಪಡಿಗಳು “ಭಾರತದಲ್ಲಿ ವಕ್ಫ್ ನ್ಯಾಯಶಾಸ್ತ್ರದ ಅಡಿಪಾಯವನ್ನೇ ನಾಶಮಾಡುತ್ತವೆ. ಸಮಾಜದಲ್ಲಿ ವಕ್ಫ್ ಸಂಸ್ಥೆಯ ಧಾರ್ಮಿಕ ಪಾತ್ರವನ್ನು ಮರು ವ್ಯಾಖ್ಯಾನಿಸಲು ಪ್ರಯತ್ನಿಸುತ್ತವೆ” ಎಂದು ಹೇಳಿದ್ದಾರೆ. ಆರ್ಟಿಕಲ್ 14 (ಸಮಾನತೆಯ ಹಕ್ಕು), ಆರ್ಟಿಕಲ್ 25 (ಧರ್ಮದ ಸ್ವಾತಂತ್ರ್ಯ), ಆರ್ಟಿಕಲ್ 26 (ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ), ಆರ್ಟಿಕಲ್ 29 (ಅಲ್ಪಸಂಖ್ಯಾತ ಹಕ್ಕುಗಳ ರಕ್ಷಣೆ) ಮತ್ತು ಆರ್ಟಿಕಲ್ 300-ಎ (ಆಸ್ತಿಯ ಹಕ್ಕು) ಸೇರಿದಂತೆ ಹಲವಾರು ಸಾಂವಿಧಾನಿಕ ರಕ್ಷಣೆಗಳನ್ನು ಉಲ್ಲಂಘಿಸುತ್ತದೆ ಎಂಬ ಆಧಾರದ ಮೇಲೆ ಅರ್ಜಿಗಳು ಕಾನೂನನ್ನು ಪ್ರಶ್ನಿಸುತ್ತಿವೆ. ಆರ್‌ಜೆಡಿ ಸಂಸದರಾದ ಮನೋಜ್ ಝಾ ಮತ್ತು ಫಯಾಜ್ ಅಹ್ಮದ್ ಕೂಡ ಅರ್ಜಿಗಳನ್ನು ಸಲ್ಲಿಸಿದ್ದು, ಧಾರ್ಮಿಕ ದತ್ತಿಗಳ ಮೇಲೆ ಸರ್ಕಾರಕ್ಕೆ ಅತಿಯಾದ ನಿಯಂತ್ರಣ ಹೇರಲು ಕಾನೂನು ಅನುವು ಮಾಡಿಕೊಡುತ್ತದೆ ಎಂದು ವಾದಿಸಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಮತ್ತು DMK, ಅದರ ಉಪ ಪ್ರಧಾನ ಕಾರ್ಯದರ್ಶಿ ಎ ರಾಜಾ ಮೂಲಕ ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸುವ ಮೂಲಕ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

Suma Gaonkar

eMail
Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.