ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ, ಚರ್ಚೆಗೆ ಗ್ರಾಸವಾಗಿದೆ ಮೈತ್ರಿ ವಿಚಾರ, ಬಿಜೆಪಿ ಹೇಳಿರುವುದೇನು
ರಾಜಕಾರಣದಲ್ಲಿ ಎಲ್ಲವೂ ಸರಿ. ಅಧಿಕಾರ ಮುಖ್ಯ. ಜಮ್ಮು - ಕಾಶ್ಮೀರದಲ್ಲಿ ಸೈದ್ಧಾಂತಿಕ ಭಿನ್ನಮತದ ಹೊರತಾಗಿಯೂ ಪಿಡಿಪಿ ಜತೆಗೆ ಬಿಜೆಪಿ ಸರ್ಕಾರ ರಚಿಸಿದ ಇತಿಹಾಸವಿದೆ. ಹೀಗಾಗಿ, ಭಾರತದ ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಬಿಜೆಪಿ ಹೇಳಿರುವುದೇನು- ಇಲ್ಲಿದೆ ವಿವರ.

ರಾಜಕಾರಣದ ವಿಚಾರಕ್ಕೆ ಬಂದರೆ ಅಧಿಕಾರವೇ ಮುಖ್ಯ ಎಂಬ ಆಶಯ ಈಗ ಹೆಚ್ಚು ಚಾಲ್ತಿಯಲ್ಲಿದೆ. ಹೀಗಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೈದ್ಧಾಂತಿಕ ಭಿನ್ನಮತ ಇರುವಂತಹ ಪಿಡಿಪಿ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಬಿಜೆಪಿ ಈಶಾನ್ಯ ರಾಜ್ಯದಲ್ಲಿ ಮತ್ತೊಂದು ರಾಜಕೀಯ ಅಚ್ಚರಿಯ ಬೆಳವಣಿಗೆಗೆ ವೇದಿಕೆ ಒದಗಿಸುತ್ತಿದೆಯಾ? ಹೀಗೊಂದು ವದಂತಿ ಹರಡಿದೆ. ಕಳೆದ ಮೂರು ತಿಂಗಳಿಂದ ಈಶಾನ್ಯ ರಾಜ್ಯ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಇದರ ನಡುವೆ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿದೆ.
ಕಳೆದ ಒಂದೂವರೆ ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ ಕೇಂದ್ರದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲು ನಿರ್ಧರಿಸಿತ್ತು. ಹಾಗೆ, ಈ ವರ್ಷದ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು.
ಬಿಜೆಪಿ- ಕಾಂಗ್ರೆಸ್ ನಡುವೆ ಮೈತ್ರಿ ನಡೆಯುತ್ತಾ, ಚರ್ಚೆಗೆ ಗ್ರಾಸವಾಗಿದೆ ಮೈತ್ರಿ ವಿಚಾರ,
ಕಳೆದ 3 ತಿಂಗಳುಗಳಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತದ ಮಧ್ಯೆ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ಈಗ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿದೆ. ಆದರೆ, ಈ ಸುದ್ದಿಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಕಾಂಗ್ರೆಸ್ ಜೊತೆ ಸರ್ಕಾರ ರಚಿಸುವ ಊಹಾಪೋಹಗಳನ್ನು ಬಿಜೆಪಿ ಸ್ಪಷ್ಟವಾಗಿ ತಳ್ಳಿಹಾಕಿದೆ. ಇಂತಹ ವದಂತಿಗಳನ್ನು ಬೇಜವಾಬ್ದಾರಿಯಿಂದ ಕೂಡಿದ ಸುದ್ದಿಗಳು ಎಂದು ಪಕ್ಷವು ಸ್ಪಷ್ಟಪಡಿಸಿದೆ.
ಬಿಜೆಪಿ ನಾಯಕ ಎಲ್ ದೇಬೆನ್ ಸಿಂಗ್ ಗುರುವಾರ ಹೇಳಿಕೆ ನೀಡಿದ್ದು, "ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಭವಿಷ್ಯದಲ್ಲಿ ಇದನ್ನು ಪುನರಾವರ್ತಿಸದಂತೆ ಸುಳ್ಳು ಸುದ್ದಿ ಹರಡುತ್ತಿರುವವರಿಗೆ ಎಚ್ಚರಿಕೆ ನೀಡುತ್ತಿರುವುದಾಗಿ ಹೇಳಿದರು.. ಬಿಜೆಪಿ ಶಾಸಕರು ಪಕ್ಷ ಬಿಟ್ಟು ಹೋಗಿಲ್ಲ. ಯಾವುದೇ ಸಂದರ್ಭದಲ್ಲೂ ಬಿಜೆಪಿ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ
ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಗುಂಪು ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ತಯಾರಿ ನಡೆಸುತ್ತಿದೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಡಿವೆ. ಈ ವಿದ್ಯಮಾನದ ಬೆನ್ನಿಗೆ ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಿದ್ಉದ, ಅಂತಹ ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳ ಬಾರದು ಎಂದು ಪಕ್ಷವು ಮಾಧ್ಯಮ ಸಂಸ್ಥೆಗಳು ಮತ್ತು ಇತರರಿಗೆ ಮನವಿ ಮಾಡಿದೆ. "ಇಂತಹ ವದಂತಿಗಳು ಬೇಜವಾಬ್ದಾರಿಯುತವಾಗಿವೆ ಮತ್ತು ಮಣಿಪುರದ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು" ಎಂದು ಬಿಜೆಪಿ ಹೇಳಿದೆ.
ವದಂತಿ ಹರಡಲು ಕಾರಣವೇನು
ಬಿಜೆಪಿ ಈಶಾನ್ಯ ಉಸ್ತುವಾರಿ ಸಂಬಿತ್ ಪಾತ್ರಾ ಇತ್ತೀಚೆಗೆ ವಿಧಾನಸಭಾ ಸ್ಪೀಕರ್ ಸತ್ಯವರ್ತ್, ಮಾಜಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ನೆಮ್ಚಾ ಕಿಪ್ಗೆನ್ ಸೇರಿದಂತೆ ಹಲವಾರು ಕುಕಿ-ಜೋ ಶಾಸಕರನ್ನು ಭೇಟಿ ಮಾಡಿದ್ದರು. ಇದರ ನಂತರ, ಅಂತಹ ವದಂತಿಗಳು ಹರಡಿಕೊಂಡಿವೆ. ಏತನ್ಮಧ್ಯೆ, ಮಣಿಪುರದ 21 ಶಾಸಕರ ಗುಂಪು ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರವನ್ನು ಸಲ್ಲಿಸಿದ್ದು ಕೂಡ ವದಂತಿಗೆ ಪುಷ್ಟಿ ಒದಗಿಸಿದೆ.