Syria Civil War: ಸಿರಿಯಾ ಸರ್ಕಾರ ಪತನ, ನಾಗರಿಕ ದಂಗೆ ಯಶಸ್ಸು; ಬಶರ್ ಅಸಾದ್ ಕುಟುಂಬದ 50 ವರ್ಷಗಳ ಆಡಳಿತಕ್ಕೆ ತೆರೆ
ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಳ್ಳುವ ಮೂಲಕ ದಂಗೆಕೋರರು ಸರ್ಕಾರವನ್ನು ಪತನಗೊಳಿಸಿದ್ದಾರೆ. ಆ ಮೂಲಕ 50 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಅಸಾದ್ ಕುಟುಂಬದ ಆಡಳಿತಕ್ಕೆ ತೆರೆ ಬಿದ್ದಿದೆ. 2011ರಿಂದ ಸಿರಿಯಾದಲ್ಲಿ ನಡೆಯುತ್ತಿದ್ದ ನಾಗರಿಕ ದಂಗೆಗೆ ಯಶಸ್ಸು ಸಿಕ್ಕಿದ್ದು, ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ.
ಡಮಾಸ್ಕಸ್: ಸಿರಿಯಾದಲ್ಲಿ ಅಸ್ಸಾದ್ ಕುಟುಂಬದ ಆಡಳಿತ ಅಂತ್ಯಗೊಂಡು, ಸರ್ಕಾರ ಪತನವಾಗಿದೆ. ಸಿರಿಯನ್ ಬಂಡುಕೋರರು ರಾಜಧಾನಿ ಡಮಾಸ್ಕಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಸ್ಸಾದ್ ಕುಟುಂಬದ 50 ವರ್ಷಗಳ ಸುದೀರ್ಘ ಆಳ್ವಿಕೆ ಮತ್ತು ಬಶರ್ ಅಲ್-ಅಸ್ಸಾದ್ ಅಧ್ಯಕ್ಷರಾಗಿ 24 ವರ್ಷಗಳ ಆಳ್ವಿಕೆಯನ್ನು ಅಂತ್ಯಗೊಳಿಸಿದ್ದಾರೆ. ಸಿರಿಯಾದಲ್ಲಿ ನಾಗರಿಕ ದಂಗೆಗೆ ಯಶಸ್ಸು ಸಿಕ್ಕಿದೆ. ಕಳೆದ 14 ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷವೀಗ ತಾರ್ಕಿಕ ಅಂತ್ಯ ಕಂಡಿದೆ.
ಸಿರಿಯಾದ ಅತ್ಯಂತ ಶಕ್ತಿಶಾಲಿ ದಂಗೆಕೋರರ ಗುಂಪು ಹಯಾತ್ ತಹ್ರೀರ್ ಅಲ್-ಶಾಮ್ ಅಥವಾ ಎಚ್‌ಟಿಎಸ್ ನೇತ್ರತ್ವದ ದಂಗೆಕೋರರು ಭಾನುವಾರು ಡಮಾಸ್ಕಸ್ ಅನ್ನು ಸುತ್ತುವರಿಯುತ್ತಿದ್ದಂತೆ ಅಧ್ಯಕ್ಷ ಬಶರ್ ಅಸ್ಸಾದ್ ಅಲ್ಲಿಂದ ಪಲಾಯನ ಮಾಡಿ ಅಜ್ಞಾತ ಸ್ಥಳಕ್ಕೆ ತೆರಳುತ್ತಾರೆ. ಈ ನಡುವೆ ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಅಲ್-ಜಲಾಲಿ ಅವರು ಬಂಡುಕೋರರೊಂದಿಗೆ ಸಹಕರಿಸಲು ಒಪ್ಪಿಕೊಂಡರು ಮತ್ತು ಶಾಂತಿಯುತ ಪರಿವರ್ತನೆ ಬಗ್ಗೆ ದಂಗೆಕೋರರಿಗೆ ಮನವಿ ಮಾಡಿದ್ದರು. ಇದರ ನಂತರ HTS ಮುಖ್ಯಸ್ಥ ಅಬು ಮೊಹಮ್ಮದ್ ಅಲ್-ಜುಲಾನಿ ಅವರು ಪ್ರಧಾನಿ ಕಡೆಯಿಂದ ಅಧಿಕೃತ ಹಸ್ತಾಂತರಿಸುವವರೆಗೆ ಸಾರ್ವಜನಿಕ ಸಂವಿಧಾನಗಳಿಂದ ದೂರವಿರಲು ತಮ್ಮ ಪಡೆಗಳಿಗೆ ಆದೇಶಿಸಿದರು.
ಬಶರ್ ಸರ್ಕಾರ ಪತನಗೊಳ್ಳುವ ಜೊತೆಗೆ ಎಲ್ಲಾ ಖೈದಿಗಳನ್ನು ಬಿಡುಗಡೆ ಮಾಡಲಾಗಿದೆ ಗುಂಪೊಂದು ಘೋಷಣೆ ಮಾಡಿದ್ದಾಗಿ ಇಲ್ಲಿನ ಸ್ಥಳೀಯ ಸುದ್ದಿವಾಹಿನಿಯೊಂದು ತಿಳಿಸಿದೆ.
2011ರಿಂದ ಆರಂಭಗೊಂಡಿದ್ದ ಸಿರಿಯಾದ ಅಂತರ್ಯುದ್ಧವು ಹಲವಾರು ಆಡಳಿತಗಳನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗಿತ್ತು. ಆದರೆ ಬಶರ್ ಅಲ್-ಅಸ್ಸಾದ್ ಸರ್ಕಾರಕ್ಕೆ ನೆರೆಯ ರಷ್ಯಾ ಹಾಗೂ ಇರಾನ್ ಬೆಂಬಲ ನೀಡಿತ್ತು. ಆದರೆ ಇದೀಗ ಅಸ್ಸಾದ್ ಆಡಳಿತ ಅಂತ್ಯವಾಗಿದ್ದು ರಷ್ಯಾ, ಇರಾನ್ ಪ್ರಭಾವದ ಮೇಲೂ ಏಟು ಬಿದ್ದಂತಾಗಿದೆ.
ದೀರ್ಘಕಾಲದವರೆಗೆ ರಾಜಧಾನಿಯ ಮೇಲೆ ಕಣ್ಣಿಟ್ಟ ಬಂಡುಕೋರರು ಮೊದಲು 24 ಗಂಟೆಗಳಲ್ಲಿ ದಾರಾ, ಕುನೀತ್ರಾ, ಸುವೈಡಾ ಮತ್ತು ಹೋಮ್ಸ್ ಈ ನಾಲ್ಕು ಪ್ರಮುಖ ನಗರಗಳನ್ನು ವಶಪಡಿಸಿಕೊಂಡರು. ನಂತರ ಅಂತಿಮವಾಗಿ ಡಮಾಸ್ಕಸ್‌ಗೆ ಪ್ರವೇಶಿಸಿ ನಗರವನ್ನು ವಶಪಡಿಸಿಕೊಂಡರು.
ಬಂಡುಕೋರರು ರಾಜಧಾನಿಯನ್ನು ಪ್ರವೇಶಿಸುವವರೆಗೂ ಸಿರಿಯನ್ ಅಧ್ಯಕ್ಷರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಆದಾಗ್ಯೂ, ಅಸ್ಸಾದ್ ವಿಮಾನವನ್ನು ತೆಗೆದುಕೊಂಡು ಡಮಾಸ್ಕಸ್‌ನಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಇಬ್ಬರು ಹಿರಿಯ ಸೇನಾ ಅಧಿಕಾರಿಗಳು ರಾಯಿಟರ್ಸ್‌ಗೆ ಖಚಿತಪಡಿಸಿದ್ದಾರೆ.
ಅಸ್ಸಾದ್‌ನ ನಿರ್ಗಮನದ ನಂತರ, ಸಿರಿಯನ್ನರು ಅವನ ದಬ್ಬಾಳಿಕೆಯ ಆಳ್ವಿಕೆಯ ಅಂತ್ಯವನ್ನು ಆಚರಿಸಿದರು. ‘ನನ್ನ ಸಹೋದರರೇ, ಈ ಗೆಲುವು ಐತಿಹಾಸಿಕವಾಗಿದೆ‘ಎಂದು ಎಚ್‌ಟಿಎಸ್ ಮುಖ್ಯಸ್ಥ ಅಲ್-ಜುಲಾನಿ ಡಮಾಸ್ಕಸ್‌ನ ಹೆಗ್ಗುರುತಾಗಿರುವ ಉಮಯ್ಯದ್ ಮಸೀದಿಯಲ್ಲಿ ಭಾಷಣ ಮಾಡಿದರು. ಸಂಭ್ರಮಾಚರಣೆಯ ಘೋಷಣೆಗಳು, ‘ಸಿರಿಯಾ ನಮ್ಮದು ಮತ್ತು ಅಸ್ಸಾದ್ ಕುಟುಂಬವಲ್ಲ‘ ‘ನಾವು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದೇವೆ‘ ಮತ್ತು ‘ಸಿರಿಯಾಕ್ಕೆ ಹೊಸ ಯುಗದ ಆರಂಭ‘ ಎಂದೆಲ್ಲಾ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
ವಿಭಾಗ