Tahawwur Rana: ತಹವ್ವುರ್ ರಾಣಾ ಭಾರತಕ್ಕೆ, 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಿದ ವಿಶೇಷ ಕೋರ್ಟ್
Tahawwur Rana: ಸುದೀರ್ಘ 16 ವರ್ಷಗಳ ವಿಚಾರಣೆ ಬಳಿಕ ಅಮೆರಿಕದಿಂದ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದಾನೆ. ಎನ್‌ಐಎ ಆತನನ್ನು ಕೋರ್ಟ್‌ಗೆ ಹಾಜರುಪಡಿಸಿದ್ದು, 18 ದಿನಗಳ ಮಟ್ಟಿಗೆ ಕಸ್ಟಡಿಗೆ ತೆಗೆದುಕೊಂಡಿದೆ.

Tahawwur Rana: ಭಾರತದಲ್ಲಿ 2008ರ 26/11 ಮುಂಬಯಿ ದಾಳಿಯ ಸಂಚುಕೋರರ ಪೈಕಿ ಒಬ್ಬನಾದ ತಹವ್ವುರ್ ರಾಣಾನನ್ನು ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (ಎನ್‌ಐಎ) ತಂಡ ಗುರುವಾರ ರಾತ್ರಿ ವೇಳೆಗೆ ಭಾರತಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಮಾಡಿದೆ. ಕೋರ್ಟ್ ರಾಣಾನನ್ನು 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಿದೆ. ಈ ಸಂದರ್ಭದಲ್ಲಿ ಮುಂಬಯಿ ದಾಳಿಗೆ ಸಂಬಂಧಿಸಿದ ಆತನ ವಿಚಾರಣೆಯನ್ನು ಎನ್‌ಐಎ ಅಧಿಕಾರಿಗಳ ತಂಡ ನಡೆಸಲಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ತಹವ್ವುರ್ ರಾಣಾನನ್ನು 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಿದ ಕೋರ್ಟ್
ತಹವ್ವುರ್ ರಾಣಾನನ್ನು ಕೋರ್ಟ್‌ಗೆ ಹಾಜರುಪಡಿಸಿದ ಎನ್‌ಐಎ, ಆತನನ್ನು 20 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿತು. 2008ರ ಮುಂಬಯಿ ದಾಳಿಗೆ ಸಂಬಂಧಿಸಿ ವಿಚಾರಣೆ ನಡೆಸುವುದಕ್ಕೆ ಅಷ್ಟು ದಿನಗಳ ಕಾಲಾವಕಾಶ ಬೇಕು ಎಂದು ವಾದಿಸಿತು. ನ್ಯಾಯಾಲಯದಲ್ಲಿ ತಡರಾತ್ರಿವರೆಗೂ ವಾದ–ಪ್ರತಿವಾದ ಮುಂದುವರಿದು ಕೊನೆಗೆ, ರಾಣಾನನ್ನು 18 ದಿನ ಎನ್‌ಐಎ ಕಸ್ಟಡಿಗೊಪ್ಪಿಸಲು ನ್ಯಾಯಪೀಠ ತೀರ್ಮಾನಿಸಿತು ಎಂದು ವರದಿ ಹೇಳಿದೆ.
ವಿಶೇಷ ಎನ್‌ಐಎ ಜಡ್ಜ್ ಚಂದರ್‌ಜಿತ್ ಸಿಂಗ್ ಅವರು ಈ ಕೇಸ್‌ನ ವಿಚಾರಣೆ ನಡೆಸಿದ್ದು, ರಾಣಾನನ್ನು ಎನ್‌ಐಎನ ಕೇಂದ್ರ ಕಚೇರಿಯ ಹೈ ಸೆಕ್ಯುರಿಟಿ ಸೆಲ್‌ನಲ್ಲಿ ವಿಚಾರಣೆಗೆ ಒಳಪಡಿಸುವುದಾಗಿ ಎನ್‌ಐಎ ಪರ ವಕೀಲರು ತಿಳಿಸಿದರು. ವಿಚಾರಣೆ ಶುರು ಮಾಡುವ ವೇಳೆ, ನಿಮ್ಮ ಪರವಾಗಿ ವಾದ ಮಂಡಿಸಲು ವಕೀಲರು ಇದ್ದಾರಾ ಎಂದು ರಾಣಾನನ್ನು ನ್ಯಾಯಾಧೀಶರು ಕೇಳಿದರು. ಅದಕ್ಕೆ ಆತ, ಇಲ್ಲ ಎಂದು ಉತ್ತರಿಸಿದ್ದ. ಕೂಡಲೇ, ದೆಹಲಿ ಕಾನೂನು ಸೇವಾ ಪ್ರಾಧಿಕಾರದಿಂದ ನಿಮ್ಮ ಪರವಾಗಿ ವಾದ ಮಂಡಿಸಲು ಒಬ್ಬ ವಕೀಲರನ್ನು ನಿಯೋಜಿಸಲಾಗುವುದು ಎಂದು ರಾಣಾಗೆ ಜಡ್ಜ್ ತಿಳಿಸಿದರು.
ರಾಣಾನನ್ನು ಅಮೆರಿಕದ ಲಾಸ್ ಏಂಜಲೀಸ್‌ನಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ತರಲಾಗಿದೆ. 16 ವರ್ಷಗಳ ವಿಚಾರಣೆ ನಂತರ ಹಸ್ತಾಂತರ ನಡೆದಿದೆ. ರಾಣಾನನ್ನು ಬಿಗಿ ಬಂದೋಬಸ್ತ್ ನಡುವೆ ಪಟಿಯಾಲಾ ಹೌಸ್ ಕೋರ್ಟ್‌ಗೆ ಕರೆ ತರಲಾಗಿತ್ತು. ಕಾರಾಗೃಹದ ವಾಹನ, ಸಶಸ್ತ್ರಗಳಿದ್ದ ಸ್ವಾಟ್ ವಾಹನ, ಆಂಬುಲೆನ್ಸ್ ಕೂಡ ಬೆಂಗಾವಲು ಪಡೆಯಲ್ಲಿತ್ತು.
ಎನ್‌ಐಎ ಪರ ವಾದ ಮಂಡನೆಗೆ ಹಿರಿಯ ವಕೀಲ ದಯಾನ್ ಕೃಷ್ಣನ್ ತಂಡ
ಅಮೆರಿಕದಿಂದ ಭಾರತಕ್ಕೆ ರಾಣಾನನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಅಮೆರಿಕದ ನ್ಯಾಯಾಲಯದಲ್ಲಿ ಭಾರತದ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ದಯಾನ್ ಕೃಷ್ಣನ್ ಅವರು ಎನ್‌ಐಎ ಪರ ವಕೀಲರ ತಂಡದ ನೇತೃತ್ವ ವಹಿಸಲಿದ್ದಾರೆ. ರಾಣಾ ಹಸ್ತಾಂತರ ಪ್ರಕ್ರಿಯೆಗೆ 2010ರಿಂದಲೂ ನೆರವು ನೀಡಿರುವ ಕೃಷ್ಣನ್ ತಂಡದಲ್ಲಿ ಎನ್‌ಐಎ ನ್ಯಾಯವಾದಿ ಅಲ್ಲದೆ ವಕೀಲರಾದ ಸಂಜೀವಿ ಶೇಷಾದ್ರಿ ಮತ್ತು ಶ್ರೀಧರ್ ಕಾಳೆ ಕೂಡ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನರೇಂದರ್ ಮಾನ್ ವಾದದಲ್ಲಿ ಸಹಾಯ ನೀಡಲಿದ್ದಾರೆ.
ತಹವ್ವುರ್ ರಾಣಾ ಯಾರು, ಆತನ ವಿರುದ್ಧ ಆರೋಪಗಳೇನು
ತಹವ್ವುರ್ ರಾಣಾ 64 ವರ್ಷದ ಪಾಕಿಸ್ತಾನಿ-ಮೂಲದ ಕೆನಡಾದ ಉದ್ಯಮಿ. ಆತ 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರರ ಪೈಕಿ ಮುಖ್ಯ ಪಿತೂರಿಗಾರ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹವರ್ತಿ. ಹೆಡ್ಲಿ ಮತ್ತು ಗುರುತಿಸಲಾದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ ತೊಯ್ವಾ (ಎಲ್‌ಇಟಿ) ಮತ್ತು ಹರ್ಕತ್-ಉಲ್-ಜಿಹಾದಿ ಇಸ್ಲಾಮಿ (ಹುಜಿ) ಮತ್ತು ಇತರ ಪಾಕಿಸ್ತಾನ ಮೂಲದ ಸಹ-ಸಂಚುಕೋರರೊಂದಿಗೆ ಪಿತೂರಿ ನಡೆಸಿದ ಆರೋಪವಿದೆ. ಈ ಸಂಚಿನ ಪ್ರಕಾರ 2008ರ ನವೆಂಬರ್ 26 ರಂದು ಭಾರತದ ಮುಂಬಯಿನಲ್ಲಿ ದಾಳಿ ನಡೆಸಿ 160ಕ್ಕೂ ಹೆಚ್ಚು ಜನರ ಸಾವಿಗೆ ಹಾಗೂ ನಾಶನಷ್ಟಕ್ಕೆ ಕಾರಣವಾದ ಆರೋಪ ಇವರ ಮೇಲಿದೆ.
ಹೀಗಾಗಿ ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ತಹವ್ವುರ್ ರಾಣಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಪರಾಧಿಕ ಪಿತೂರಿ (ಸೆಕ್ಷನ್ 120 ಬಿ), ಸಮರ ಸಾರಿದ್ದು (ಸೆಕ್ಷನ್ 121), ಸಮರ ಸಾರುವುದಕ್ಕೆ ಪಿತೂರಿ ನಡೆಸಿದ್ದು (ಸೆಕ್ಷನ್ 121 ಎ), ಹತ್ಯೆ (ಸೆಕ್ಷನ್ 302), ಸೆಕ್ಷನ್ 468, ಸೆಕ್ಷನ್ 471 ಮತ್ತು ಉಗ್ರ ಕೃತ್ಯಗಳಿಗೆ ಸಂಬಂಧಿಸಿದ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಸೆಕ್ಷನ್ 18 ಮತ್ತು 20 ಅನ್ವಯಿಸಲಾಗಿದೆ.
