ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ಪಾಕಿಸ್ತಾನದಲ್ಲಿ ಆರಾಮ ಅಡ್ಡಾಡ್ತಾ ಇದ್ದಾರೆ ಇನ್ನೂ 6 ಭಯೋತ್ಪಾದಕರು
Terrorists Sheltered by Pakistan: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರವಾಗಿದ್ದು, ಮುಂಬಯಿ 26/11 ದಾಳಿಗೆ ಸಂಬಂಧಿಸಿದ ಇನ್ನೂ 6 ಉಗ್ರರು ಪಾಕಿಸ್ತಾನ ಸರ್ಕಾರದ ಆಶ್ರಯದಲ್ಲಿದ್ದಾರೆ. ಅವರು ಯಾರು ಎಂಬುದನ್ನು ತಿಳಿಯೋಣ.

Terrorists Sheltered by Pakistan: 26/11 ಮುಂಬೈ ದಾಳಿಯ ಪ್ರಮುಖ ಸಂಚುಕೋರರ ಪೈಕಿ ಒಬ್ಬನಾದ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಕರೆತರಲಾಗುತ್ತಿದೆ. 2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಸಂಚನ್ನು ರೂಪಿಸುವಲ್ಲಿ ಆತ ಭಾಗಿಯಾಗಿರುವ ಕಾರಣ, ಆತನನ್ನು ಭಾರತದ ಕಾನೂನು ಪ್ರಕಾರ ವಿಚಾರಣೆಗೆ ಒಳಪಡಿಸಲು ಭಾರತ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಗೃಹ ಸಚಿವಾಲಯವು ಹಿರಿಯ ವಕೀಲರ ನರೇಂದರ್ ಮಾನ್ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿದೆ. ರಾಣಾ ಅಲ್ಲದೆ, ಭಾರತದ ಹಿಡಿತಕ್ಕೆ ಸಿಗದೇ ದೂರವಿರುವ ಇನ್ನೂ ಅನೇಕ ಭಯೋತ್ಪಾದಕರು ಜಗತ್ತಿನ ವಿವಿಧೆಡೆ ಇದ್ದಾರೆ. ಭಾರತ ಸರ್ಕಾರ ಅವರನ್ನೆಲ್ಲ ಗಡೀಪಾರು ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅಂತಹ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಪೈಕಿ ಹೆಚ್ಚಿನವರು ಪಾಕಿಸ್ತಾನದ ಸೇನೆ ಅಥವಾ ಐಎಸ್‌ಐ ರಕ್ಷಣೆಯೊಂದಿಗೆ ಪಾಕಿಸ್ತಾನದಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದಾರೆ.
ಪಾಕಿಸ್ತಾನದಲ್ಲಿ ಆರಾಮ ಅಡ್ಡಾಡ್ತಾ ಇದ್ದಾರೆ ಇನ್ನೂ 6 ಭಯೋತ್ಪಾದಕರು
ಮುಂಬಯಿಯ 26/11 ದಾಳಿ ಬಹುದೊಡ್ಡ ಸಂಚು ಆಗಿರುವ ಕಾರಣ, ಅದರಲ್ಲಿ ಪಾಕಿಸ್ತಾನದಲ್ಲಿರುವ ಉಗ್ರರು ಅನೇಕರು ಭಾಗವಹಿಸಿದ್ದರು. ಇದು ಪಾಕಿಸ್ತಾನ ಪ್ರಾಯೋಜಿತ ಕೃತ್ಯ ಎಂಬುದನ್ನು ದೃಢೀಕರಿಸುವ ಕೆಲಸವನ್ನು ಭಾರತ ಸರ್ಕಾರ ಮಾಡುತ್ತಿದೆ. ಈಗಾಗಲೇ ಭಾರತದ ತನಿಖಾ ಸಂಸ್ಥೆಗಳು ನಡೆಸಿದ ವಿಚಾರಣೆಯಲ್ಲಿ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿದ್ದು, ಈಗ ಸಂಚುಕೋರರ ಪೈಕಿ ಒಬ್ಬ ತಹವ್ವುರ್ ಹುಸೇನ್ ರಾಣಾನನ್ನು ಅಮೆರಿಕ ಸರ್ಕಾರ ಭಾರತಕ್ಕೆ ಹಸ್ತಾಂತರಿಸಿದೆ. ಇದೇ ದಾಳಿಯ ಇನ್ನೂ ಆರು ಉಗ್ರರು ಪಾಕಿಸ್ತಾನದಲ್ಲಿದ್ದಾರೆ. ಅವರ ವಿವರ ಹೀಗಿದೆ
1) ಹಫೀಜ್ ಸಯೀದ್ ಲಷ್ಕರ್-ಎ- ತೊಯ್ಬಾ ಸಂಸ್ಥಾಪಕ
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಅಪರಾಧಿ ಎಂದು ಪಾಕಿಸ್ತಾನದಲ್ಲಿ 2020 ರಲ್ಲಿ ಘೋಷಿಸಲಾಗಿದ್ದು, 78 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಹಾಗಿದ್ದಾಗ್ಯೂ, ಸಯೀದ್ ಪಾಕಿಸ್ತಾನದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಾನೆ. ಐಎಸ್ಐ ಮತ್ತು ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುತ್ತಾನೆ. ಭಾರತವು ಸಯೀದ್‌ನನ್ನು ಕಸ್ಟಡಿಗೆ ಮತ್ತು ಕಠಿಣ ಕ್ರಮಕ್ಕೆ ಬಹುಕಾಲದಿಂದ ಒತ್ತಾಯಿಸುತ್ತಿದೆ.
2) ಝಾಕಿ-ಉರ್-ರೆಹಮಾನ್ ಲಖ್ವಿ - ಲಷ್ಕರ್-ಎ- ತೊಯ್ಬಾ ನಾಯಕ
ಪಾಕಿಸ್ಥಾನದಲ್ಲಿ ಲಷ್ಕರ್-ಎ-ತೈಬಾದ ಮತ್ತೊಬ್ಬ ಪ್ರಮುಖ ನಾಯಕ ಝಾಕಿ-ಉರ್-ರೆಹಮಾನ್ ಲಖ್ವಿಗೆ 2021 ರಲ್ಲಿ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆದರೆ, ಗುಪ್ತಚರ ವರದಿಗಳ ಪ್ರಕಾರ, ಅವನು ಇನ್ನೂ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾನೆ. ಅಲ್ಲದೆ ಸಂಘಟನೆಯ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ.
3) ಸಜ್ಜಾದ್ ಮಿರ್ - ಲಷ್ಕರ್-ಎ-ತೊಯ್ಬಾದ ಮತ್ತೊಬ್ಬ ಕಮಾಂಡರ್
ಸಜ್ಜಾದ್ ಮಿರ್ 2005 ರಲ್ಲಿ ಭಾರತಕ್ಕೆ ಬಂದು ದೆಹಲಿಯಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ಸಮಯದಲ್ಲಿ ರಾಷ್ಟ್ರೀಯ ರಕ್ಷಣಾ ಕಾಲೇಜಿಗೆ ಭೇಟಿ ನೀಡಿದ್ದ. ಪಾಕಿಸ್ತಾನದಲ್ಲಿ ಈ ಉಗ್ರನ ಉಪಸ್ಥಿತಿ ಇಂದಿಗೂ ರಹಸ್ಯವಾಗಿ ಉಳಿದಿದೆ. 2023 ರಲ್ಲಿ, ಕೋಟ್ ಲಖ್ಪತ್ ಜೈಲಿನಲ್ಲಿ ಅವರಿಗೆ 'ವಿಷಪ್ರಾಶನ' ಮಾಡಲಾಗಿದೆ ಎಂದು ವರದಿಗಳು ಬಂದವು, ಆದರೆ ತಜ್ಞರು ಇದನ್ನು ಅಂತಾರಾಷ್ಟ್ರೀಯ ಒತ್ತಡವನ್ನು ತಪ್ಪಿಸಲು ಕಾರ್ಯತಂತ್ರದ ತಂತ್ರವೆಂದು ಬಣ್ಣಿಸಿದ್ದಾರೆ.
4) ಮೇಜರ್ ಇಕ್ಬಾಲ್ - ಐಎಸ್‌ಐ ಅಧಿಕಾರಿ
ಮುಂಬಯಿಯ 26/11 ದಾಳಿಯ ಸಂಚಿನಲ್ಲಿ ಭಾಗಿಯಾಗಿರುವ ಇನ್ನೊಬ್ಬ ಆರೋಪಿ ಮೇಜರ್ ಇಕ್ಬಾಲ್ ಇನ್ನೂ ಕಾನೂನು ಚೌಕಟ್ಟಿಗೆ ಸಿಲುಕಿಲ್ಲ. ಯುಎಸ್-ಭಾರತೀಯ ತನಿಖಾ ಸಂಸ್ಥೆಗಳ ಪ್ರಕಾರ, ಮುಂಬೈನಲ್ಲಿ ದಾಳಿ ನಡೆಸಲು ಡೇವಿಡ್ ಹೆಡ್ಲಿಗೆ ಸೂಚನೆ ಮತ್ತು ಹಣಕಾಸು ಒದಗಿಸಿದ್ದರು. ಇಕ್ಬಾಲ್ ನನ್ನು ಐಎಸ್‌ಐ ಅಧಿಕಾರಿ ಎಂದು ಹೆಡ್ಲಿ ಅಮೆರಿಕದ ನ್ಯಾಯಾಲಯದಲ್ಲಿ ಬಣ್ಣಿಸಿದ್ದ.
5) ಅಬ್ದುಲ್ ರೆಹಮಾನ್ ಹಾಶಿಮ್ ಸಯ್ಯದ್
'ಪಾಷಾ' ಎಂದು ಕರೆಯಲ್ಪಡುವ ಅಬ್ದುಲ್ ರೆಹಮಾನ್ ಹಾಶಿಮ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾನೆ. ಭಾರತದಲ್ಲಿ ಸ್ಥಳೀಯ ಯುವಕರನ್ನು ತೀವ್ರಗಾಮಿಗಳನ್ನಾಗಿ ಮಾಡುವ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸುವ ಗುರಿಯನ್ನು ಹೊಂದಿರುವ 'ಕರಾಚಿ ಪ್ರಾಜೆಕ್ಟ್' ನ ಮುಖ್ಯಸ್ಥ ಈತ ಎಂದು ಹೇಳಲಾಗಿದೆ.
6) ಇಲ್ಯಾಸ್ ಕಾಶ್ಮೀರಿ- ಹಿಜ್ಬುಲ್ ಜಿಹಾದ್ ಅಲ್-ಇಸ್ಲಾಮಿ ಮುಖ್ಯಸ್ಥ
ಇಲ್ಯಾಸ್ ಕಾಶ್ಮೀರಿ ಅಲ್-ಖೈದಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದನು. ವಾಯವ್ಯ ಪಾಕಿಸ್ತಾನದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಇಲ್ಯಾಸ್ ಕಾಶ್ಮೀರಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಹೇಳಿಕೊಂಡಿದೆ. ಆದರೆ ಈ ಉಗ್ರನ ಸಾವು ಸಂಭವಿಸಿದ ಬಗ್ಗೆ ದೃಢೀಕರಣ ಸಿಕ್ಕಿಲ್ಲ.
ಇಂಟರ್‌ಪೋಲ್ ಮತ್ತು ಯುಎನ್ ನಿರ್ಬಂಧಗಳ ಹೊರತಾಗಿಯೂ ಈ ಭಯೋತ್ಪಾದಕರಲ್ಲಿ ಅನೇಕರು ಪಾಕಿಸ್ತಾನ ಸರ್ಕಾರದ ಆಶ್ರಯದಲ್ಲಿದ್ದಾರೆ. ಉಗ್ರ ಸಂಘಟನೆಗಳ ಚಟುವಟಿಕೆಗಳಿಗೂ ಅದು ಉತ್ತೇಜನ ನೀಡುತ್ತಿದೆ. ಅವರ ಬಂಧನ ಮತ್ತು ಹಸ್ತಾಂತರಕ್ಕಾಗಿ ಭಾರತವು ಪಾಕಿಸ್ತಾನದ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದೆ, ಆದರೆ ಇಲ್ಲಿಯವರೆಗೆ ಪಾಕಿಸ್ತಾನ ಸರ್ಕಾರವು ಯಾವುದೇ ದೃಢವಾದ ಕ್ರಮ ಕೈಗೊಂಡಿಲ್ಲ.
