Narender Mann: ತಹವ್ವುರ್ ರಾಣಾ ಕೇಸ್‌ನಲ್ಲಿ ಸರ್ಕಾರಿ ವಕೀಲರಾಗಿ ನಿಯೋಜಿತ ನರೇಂದರ್ ಮಾನ್ ಯಾರು, 26/11 ದಾಳಿ ಕೇಸ್ ವಿಚಾರಣೆಗೆ ಸಿದ್ಧತೆ
Narender Mann: ಮುಂಬಯಿ ದಾಳಿ 26/11 ಸಂಚುಕೋರ ತಹವ್ವುರ್ ರಾಣಾನನ್ನು ಎನ್‌ಐಎ ತಂಡ ಭಾರತಕ್ಕೆ ಕರೆತರುತ್ತಿದೆ. ಈ ಕೇಸಲ್ಲಿ ಸರ್ಕಾರಿ ವಕೀಲರಾಗಿ ನಿಯೋಜಿತರಾದ ನರೇಂದರ್ ಮಾನ್ ಯಾರು, ಕೇಸ್ ವಿಚಾರಣೆಗೆ ಸಿದ್ಧತೆ ಹೇಗಿದೆ ಎಂಬಿತ್ಯಾದಿ ವಿವರ ಇಲ್ಲಿದೆ.

Who is Narender Mann: ಮುಂಬಯಿ 26/11 ದಾಳಿ ಪ್ರಕರಣದ ಪ್ರಮುಖ ಸಂಚುಕೋರ ತಹವ್ವುರ್ ಹುಸೇನ್ ರಾಣಾ ಅಲಿಯಾಸ್ ತಹವ್ವುರ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡ ಭಾರತಕ್ಕೆ ಕರೆ ತರಲು ಸಿದ್ಧತೆ ನಡೆಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವಾಲಯವು ಬುಧವಾರ ತಡರಾತ್ರಿ ಪ್ರಕಟಿಸಿದ ಗಜೆಟ್ ಅಧಿಸೂಚನೆಯಲ್ಲಿ ಈ ಕೇಸ್‌ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಹಿರಿಯ ವಕೀಲ ನರೇಂದರ್ ಮಾನ್ ಅವರನ್ನು ನಿಯೋಜಿಸಿದೆ. ಅಧಿಸೂಚನೆಯ ಪ್ರಕಾರ, ಮಾನ್ ಅವರು ಮುಂದಿನ ಮೂರು ವರ್ಷ ಕಾಲ ಮುಂಬೈ ದಾಳಿ ಪ್ರಕರಣದಲ್ಲಿ ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯಗಳು ಹಾಗೂ ವಿವಿಧ ಹೈಕೋರ್ಟ್‌ಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಲಿದ್ದಾರೆ.
ನರೇಂದರ್ ಮಾನ್ ಯಾರು, ಅಧಿಸೂಚನೆಯಲ್ಲಿ ಏನಿದೆ
ದೆಹಲಿಯಲ್ಲಿ ವಕೀಲಿಕೆ ಮಾಡುತ್ತಿರುವ ಹಿರಿಯ ವಕೀಲ ನರೇಂದರ್ ಮಾನ್. ಗೃಹ ಸಚಿವಾಲಯ ಪ್ರಕಟಿಸಿದ ಅಧಿಸೂಚನೆಯಲ್ಲಿ “ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯ್ದೆ, 2008 ರ ಸೆಕ್ಷನ್ 15 (2008 ರ 34) ರ ಉಪ-ವಿಭಾಗ (1) ಮತ್ತು ಭಾರತೀಯ ನಾಗರಿಕ ರಕ್ಷಣಾ ಸಂಹಿತೆ, 2023 (ಬಿಎನ್ಎಸ್ಎಸ್) ನ ಸೆಕ್ಷನ್ 18 ರ ಉಪ-ವಿಭಾಗ (8) ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು, ಕೇಂದ್ರ ಸರ್ಕಾರವು ಈ ಮೂಲಕ ವಕೀಲ ನರೇಂದರ್ ಮಾನ್ ಅವರನ್ನು ಎನ್ಐಎ ಪ್ರಕರಣದ ವಿಚಾರಣೆಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸುತ್ತದೆ. ಈ ನೇಮಕಾತಿಯು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತದೆ ಮತ್ತು ಮೂರು ವರ್ಷಗಳ ಅವಧಿಗೆ ಅಥವಾ ಪ್ರಕರಣದ ವಿಚಾರಣೆಯ ಅಂತ್ಯದವರೆಗೆ ಜಾರಿಯಲ್ಲಿರುತ್ತದೆ” ಎಂಬ ಉಲ್ಲೇಖವಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಗುಪ್ತಚರ ಇಲಾಖೆಯ ಅಧಿಕಾರಿಗಳು ತಹವ್ವುರ್ ರಾಣಾ ಅವರನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆದೊಯ್ದಿದ್ದಾರೆ. ಈ ತಂಡ ಭಾರತಕ್ಕೆ ಯಾವುದೇ ಸಮಯದಲ್ಲೂ ಬಂದಿಳಿಯಬಹುದು. ಗೃಹ ಸಚಿವಾಲಯದ ಮೂಲಗಳ ಪ್ರಕಾರ, ಭದ್ರತಾ ಸಂಸ್ಥೆಗಳು ರಾಣಾ ಬಗ್ಗೆ ಕಠಿಣ ವ್ಯವಸ್ಥೆಗಳನ್ನು ಮಾಡಿವೆ. ರಾಣಾ ಅವರನ್ನು ದೆಹಲಿಗೆ ಕರೆತರುವ ನಿರೀಕ್ಷೆಯಿದೆ.
ತಿಹಾರ ಜೈಲಿಗೆ ತಹವ್ವುರ್ ರಾಣಾ, ಆನ್‌ಲೈನ್ ಮೂಲಕ ವಿಚಾರಣೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಣಾ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ. ರಾಣಾ ಆರಂಭದಲ್ಲಿ ಎನ್ಐಎ ವಶದಲ್ಲಿರಲಿದ್ದು, ಕಾನೂನು ಔಪಚಾರಿಕತೆಗಳು ಪೂರ್ಣಗೊಳಿಸಲಾಗುತ್ತದೆ. ದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಅವರ ವಿರುದ್ಧದ ವಿಚಾರಣೆ ಪ್ರಾರಂಭವಾಗುವ ಸಾಧ್ಯತೆಯಿದೆ.
ಕೋರ್ಟ್‌ಗೆ ಇಂದು ಮಹಾವೀರ ಜಯಂತಿ ರಜಾ ಇರುವ ಕಾರಣ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರ ಎದುರು ಪ್ರಸ್ತುತಪಡಿಸಬಹುದು. ಮುಂಬೈ ದಾಳಿ ಪ್ರಕರಣವನ್ನು ದೆಹಲಿಗೆ ವರ್ಗಾವಣೆ ಮಾಡಿರುವ ಕಾರಣ ವಿಚಾರಣೆ ದೆಹಲಿಯಲ್ಲೇ ನಡೆಯಲಿದೆ. ತಹವ್ವುರ್ ರಾಣಾ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಬಂಧನದಲ್ಲಿದ್ದ. ಅಮೆರಿಕ ಆತನನ್ನು ಗಡೀಪಾರು ಒಪ್ಪಂದ ಪ್ರಕಾರ, ಭಾರತಕ್ಕೆ ಹಸ್ತಾಂತರಿಸಿದೆ.
ಮೂಲಗಳ ಪ್ರಕಾರ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ರಾಣಾನನ್ನು ಎನ್ಐಎ ಅಧಿಕೃತ ಬಂಧನ ದಾಖಲಿಸಲಿದೆ. ಬಳಿಕ ಆತನನ್ನು ತಿಹಾರ್ ಜೈಲಿನಲ್ಲಿಡಲು ಸೆಲ್ ಅನ್ನು ಸಹ ಸಿದ್ಧಪಡಿಸಲಾಗಿದೆ. ತಿಹಾರ್ ಜೈಲಿನ ಸಿಸಿಟಿವಿ ಸೆಲ್ ನಲ್ಲಿ 24 ಗಂಟೆಗಳ ಕಾಲ ನಿಗಾ ಇಡಲಾಗುವುದು. ತಹವ್ವುರ್ ರಾಣಾ ಅವರನ್ನು ವಿಚಾರಣೆಗೆ ಒಳಪಡಿಸಲು ತನಿಖಾ ಸಂಸ್ಥೆಗಳ ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಏಜೆನ್ಸಿಗಳು ದಾಳಿಗೆ ಸಂಬಂಧಿಸಿದ ಪುರಾವೆಗಳನ್ನು ಈಗಾಗಲೇ ಅವರ ಹೇಳಿಕೆಗಳೊಂದಿಗೆ ಹೊಂದಿಸುತ್ತವೆ. ಇದಲ್ಲದೆ, ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಚಿತ್ರಗಳನ್ನು ತೋರಿಸುವ ಮೂಲಕ ಪಾಕಿಸ್ತಾನದ ವಿರುದ್ಧ ಬಲವಾದ ಪುರಾವೆಗಳನ್ನು ಸಂಗ್ರಹಿಸಲು ಪ್ರಯತ್ನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ವಿಭಾಗ