ಕನ್ನಡ ಸುದ್ದಿ  /  Nation And-world  /  Take A Pledge To Work For Society And The Country Urges Mohan Bhagwat

Mohan Bhagwat: ದೇಶಕ್ಕಾಗಿ ನೇಣಿಗೇರಲೂ ಸಿದ್ಧರಾಗೋಣ: ʼಉತ್ತಿಷ್ಠ ಭಾರತʼಕ್ಕಾಗಿ ಭಾಗವತ್‌ ಕರೆ

ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ʼಉತ್ತಿಷ್ಠ ಭಾರತʼ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಮಾಜಕ್ಕಾಗಿ ಮತ್ತು ದೇಶಕ್ಕಾಗಿ ದುಡಿಯುವ ಸಂಕಲ್ಪ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಭಾರತದ ಉಜ್ವಲ ಭವಿಷ್ಯಕ್ಕಾಗಿ ನಾವು ನಮ್ಮ ಜೀವನವನ್ನು ಮುಡಿಪಾಗಿಡೋಣ ಎಂದು ಭಾಗವತ್‌ ಇದೇ ವೇಳೆ ಕರೆ ನೀಡಿದರು.

ಮೋಹನ್‌ ಭಾಗವತ್‌ (ಸಂಗ್ರಹ ಚಿತ್ರ)
ಮೋಹನ್‌ ಭಾಗವತ್‌ (ಸಂಗ್ರಹ ಚಿತ್ರ) (HT_PRINT)

ನಾಗ್ಪುರ್: ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ದುಡಿಯುವ ಸಂಕಲ್ಪ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ʼಉತ್ತಿಷ್ಠ ಭಾರತʼ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಭಾಗವತ್‌, ದೇಶಕ್ಕಾಗಿ ನೇಣಿಗೇರಲೂ ನಾವು ಸಿದ್ಧರಾಗಿರಬೇಕು ಎಂದು ಕರೆ ನೀಡಿದರು.

ಭಾರತಕ್ಕಾಗಿ ನಾವು ನಮ್ಮ ಜೀವನವನ್ನು ಮುಡಿಪಾಗಿಡೋಣ. ದೇಶದ ಒಳಿತಿಗಾಗಿ ದುಡಿಯುವ ಸಂಕಲ್ಪ ಮಾಡೋಣ. ೨೧ನೇ ಶತಮಾನ ಭಾರತದ ಶತಮಾನವಾಗಿದ್ದು, ಭವ್ಯ ಪರಂಪರೆಯುಳ್ಳ ನಮ್ಮ ದೇಶವನ್ನು ವಿಶ್ವಗುರುವನ್ನಾಗಿ ಮಾಡಲು ಶ್ರದ್ಧೆಯಿಂದ ದುಡಿಯೋಣ ಎಂದು ಮೋಹನ್‌ ಭಾಗವತ್‌ ದೇಶವಾಸಿಗಳಿಗೆ ಕರೆ ನೀಡಿದರು.

ನಾವು ಸದೃಢ ಭಾರತ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಬೇಕಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ನಾಗರಿಕತೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ನಾವು ಟೊಂಕ ಕಟ್ಟಿ ನಿಲ್ಲಬೇಕಿದೆ. ನಮ್ಮ ನಡುವಿನ ಎಲ್ಲಾ ಭಿನ್ನತೆಯನ್ನು ಮೀರಿ ನಾವು ಒಂದಾಗಿ ಮುಂದೆ ಸಾಗಬೇಕಿದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ನುಡಿದರು.

ನಮ್ಮಲ್ಲಿ ಅನೇಕ ಭಿನ್ನತೆಗಳಿವೆ. ನಾವು ಪರಸ್ಪರ ಭಿನ್ನವಾಗಿ ಕಾಣುತ್ತೇವೆ. ನಮ್ಮಲ್ಲಿ ಬೇರೆ ಬೇರೆ ಆಹಾರ ಪದ್ದತಿಗಳಿವೆ. ಬೇರೆ ಬೇರೆ ಸಂಪ್ರದಾಯಗಳಿವೆ. ಆದರೆ ಇದೆಲ್ಲಕ್ಕೂ ಮಿಗಿಲಾಗಿ ನಮ್ಮಲ್ಲಿ ಏಕತೆ ಇದೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಪರಿಯನ್ನು ಇಡೀ ಜಗತ್ತು ಭಾರತದಿಂದ ಕಲಿಯಬೇಕಿದೆ ಎಂದು ಮೋಹನ್‌ ಭಾಗವತ್‌ ಹೇಳಿದರು.

ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನ ಎತ್ತರಕ್ಕೆ ಏರಿದೆ. ಜಾಗತಿಕ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸನ್ನಿವೇಶಗಳಲ್ಲಿ ಭಾರತ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿಯನ್ನು ಈಗ ಹಿಂದೆಂದಿಗಿಂತಲೂ ಹೆಚ್ಚು ಆಲಿಸಲಾಗುತ್ತಿದೆ. ನಮ್ಮ ಒಗ್ಗಟ್ಟು ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಮೋಹನ್‌ ಭಾಗವತ್‌ ಹೆಮ್ಮೆ ವ್ಯಕ್ತಪಡಿಸಿದರು.

ಭಾರತದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಭಿನ್ನತೆ ಇದೆ ಎಂಬುದು ಸತ್ಯ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇಲ್ಲಿ ಸ್ವತಂತ್ರರು. ಆದರೆ ದೇಶದ ವಿಚಾರ ಬಂದಾಗ, ನಾವು ಒಂದೇ ಧ್ವನಿ ಮೊಳಗಿಸುತ್ತೇವೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದೂ ಆರ್‌ಎಸ್‌ಎಸ್‌ ಮುಖ್ಯಸ್ಥ ನುಡಿದರು.

ಭಾರತ ಶತಶತಮಾನಗಳಿಂದ ಎಲ್ಲ ರೀತಿಯ ಬಾಹ್ಯ ದಾಳಿಗಳನ್ನು ಮೆಟ್ಟಿ ನಿಂತಿದೆ. ರಾಜಕೀಯ ಹಾಗೂ ಸಾಂಸ್ಕೃತಿಕ ಬದಲಾವಣೆಗಳಿಗೆ ಈ ದಾಳಿಗಳು ಕಾರಣವಾಗಿದ್ದರೂ, ನಮ್ಮ ಮೂಲ ಸಂಸ್ಕೃತಿಯನ್ನು ನಮ್ಮಿಂದ ಕಸಿದುಕೊಳ್ಳಲು ಇದಕ್ಕೆ ಸಾಧ್ಯವಾಗಿಲ್ಲ. ನಮ್ಮ ಸಂಸ್ಕೃತಿಯ ಎಲ್ಲರನ್ನೂ ಒಳಗೊಳ್ಳುವ ಶ್ರೇಷ್ಠ ಗುಣವೇ ಇದಕ್ಕೆ ಕಾರಣ. ಭಾರತದ ಭವಿಷ್ಯವನ್ನೂ ನಮ್ಮ ಸಂಸ್ಕೃತಿಯೇ ಮುನ್ನಡೆಸಲಿದೆ ಎಂದು ಮೋಹನ್‌ ಭಾಗವತ್‌ ಇದೇ ವೇಳೆ ಹೇಳಿದರು.

ಭಾರತ ಈಗ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಈ ಅಮೃತ ಮಹೋತ್ಸವ ಆಚರಣೆ ಅರ್ಥಪೂರ್ಣವಾಗಬೇಕಾದರೆ, ನಾವು ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬದಿಗಿರಿಸಿ ಒಂದಾಗಬೇಕಿದೆ ಎಂದು ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು. ಭಾರತ ಮುಂದಿನ ೨೫ ವರ್ಷಗಳಲ್ಲಿ ಸಾಗಬೇಕಾದ ದಾರಿಯ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು ಎಂದೂ ಮೋಹನ್‌ ಭಾಗವತ್‌ ಇದೇ ವೇಳೆ ಸಲಹೆ ನೀಡಿದರು.

ವಿಭಾಗ