ತೆಂಗಿನಕಾಯಿ ವ್ಯಾಪಾರಿ ಮನೆ ಮದುವೆ ಅಂದ್ರೆ ಸುಮ್ನೇನಾ, ತೆಂಗಿನಕಾಯಿ ಚಿಪ್ಪಿನೊಳಗೇ ಕುಳಿತು ಊಟ ಮಾಡಿ ಅಂದ್ರು- ಈ ವೈರಲ್ ವಿಡಿಯೋ ನೋಡಿ
ಮದುವೆ ಎಂಬುದು ಬದುಕಿನ ಅವಿಸ್ಮರಣೀಯ ಘಟನೆಗಳಲ್ಲಿ ಒಂದು. ಅದು ಸದಾ ಒಳ್ಳೆಯ ನೆನಪಾಗಿ ಮನದಲ್ಲಿ ಉಳಿಯಬೇಕು ಎಂದು ಬೇರೆ ಬೇರೆ ರೀತಿ ಪ್ರಯತ್ನಗಳು ನಡೆಯುತ್ತಿರುತ್ತವೆ. ಅಂಥದ್ದೇ ಒಂದು ಇದು. ತೆಂಗಿನಕಾಯಿ ವ್ಯಾಪಾರಿ ಮನೆ ಮದುವೆ ಅಂದ್ರೆ ಸುಮ್ನೇನಾ, ತೆಂಗಿನಕಾಯಿ ಚಿಪ್ಪಿನೊಳಗೇ ಕುಳಿತು ಊಟ ಮಾಡಿ ಅಂದ್ರು. ಈ ವೈರಲ್ ವಿಡಿಯೋ ನೋಡಿ ನಿಮಗೇ ಗೊತ್ತಾಗುತ್ತೆ.
ಚೆನ್ನೈ: ಮದುವೆ ಸಮಾರಂಭ ವಿಶೇಷವಾಗಿರಬೇಕು, ಪಾಲ್ಗೊಂಡರ ನೆನಪಿನಲ್ಲಿ ಉಳಿಯಬೇಕು ಎಂಬುದು ಬಹುತೇಕ ಪ್ರತಿಯೊಬ್ಬ ಮದುವೆ ಮಾಡಿಸುವವರ, ಮದುವೆ ಆಗುವವರ ಆಸೆ ಮತ್ತು ಆಶಯವೂ ಹೌದು. ಅಂತಹ ಮದುವೆ ಸಮಾರಂಭದ ವಿಡಿಯೋ, ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಬಹುಬೇಗ ವೈರಲ್ ಆಗುತ್ತವೆ. ಹಾಗೆಯೇ ವೈರಲ್ ಆಗಿರುವ ಇತ್ತೀಚಿನ ವಿಡಿಯೋ ಇದು. ತಮಿಳುನಾಡಿನ ಪೊಲ್ಲಾಚಿ ಎಂಬಲ್ಲಿ ನಡೆದ ವಿವಾಹ ಸಮಾರಂಭದ ವಿಡಿಯೋ ತುಣಕು ವೈರಲ್ ಆಗಿದೆ. ವಿವಾಹ ಸಮಾರಂಭದಲ್ಲಿ ಮಾಡಿದ ಭೋಜನ ವ್ಯವಸ್ಥೆ ವಿಡಿಯೋದಲ್ಲಿ ಗಮನಸೆಳೆಯುವ ಅಂಶ. ತೆಂಗಿನ ಕಾಯಿ ವ್ಯಾಪಾರಿಯೊಬ್ಬರ ಮನೆ ಮದುವೆ ಕಾರ್ಯಕ್ರಮದ ವಿಡಿಯೋ ಅದು. ಪ್ರತಿ ಮನೆಯಲ್ಲೂ ನಿತ್ಯ ಬಳಕೆಯ ವಸ್ತು ತೆಂಗಿನಕಾಯಿ. ಇದನ್ನು ಸೃಜನಾತ್ಮಕವಾಗಿ ಮದುವೆ ಸಮಾರಂಭದಲ್ಲಿ ಪ್ರಸ್ತುತಿ ಮಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಗೆ ಕಾರಣವಾಗಿದೆ.
ತೆಂಗಿನಕಾಯಿ ವ್ಯಾಪಾರಿ ಮನೆ ಮದುವೆ ಅಂದ್ರೆ ಸುಮ್ನೇನಾ; ಈ ವೈರಲ್ ವಿಡಿಯೋ ನೋಡಿ
ತಮಿಳುನಾಡಿನ ಪೊಲ್ಲಾಚಿಯಲ್ಲಿ ನಡೆದ ಈ ವಿವಾಹ ಭೋಜನದ ವಿಡಿಯೋವನ್ನು ಮಧು ಎಸ್ ಎಂಬುವವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ. ತಮಿಳುನಾಡಿನಲ್ಲಿ ತೆಂಗಿನಕಾಯಿ ವ್ಯಾಪಾರಿಯ ಮದುವೆಯ ಸಂಭ್ರಮ, ಸಡಗರ ನೋಡಿ ಎಂಬ ಶೀರ್ಷಿಕೆಯನ್ನೂ ಕೊಟ್ಟಿದ್ಧಾರೆ.
ವಿಡಿಯೋ ಗಮನಿಸಿದರೆ, ಮದುವೆ ಹಾಲ್‌ನ ಊಟದ ಹಾಲ್‌ನಲ್ಲಿ ಅತಿಥಿಗಳು ಕುಳಿತುಕೊಳ್ಳುವ ಆಸನಗಳೆಲ್ಲವೂ ಅರ್ಧ ಒಡೆದು ತೆರೆದಿಟ್ಟ ತೆಂಗಿನಕಾಯಿಯ ಆಕಾರದಲ್ಲಿವೆ. ಅದರ ಎದುರು ಊಟದ ಟೇಬಲ್. ಇಲ್ಲಿ ಊಟಕ್ಕೆ ಉದ್ದ ಟೇಬಲ್ ಬದಲು ವೈಯಕ್ತಿಕವೆನಿಸುವ ಟೇಬಲ್ ಬಳಸಿದ್ದಾರೆ. ಇಡೀ ಊಟದ ಹಾಲ್ ವಿಶೇಷ ರೀತಿಯಲ್ಲಿ ಅಲಂಕರಿಸಲ್ಪಟ್ಟು ಗಮನಸೆಳೆದಿದೆ. ಈ ಹೊಸ ಮಾದರಿಯ ಪರಿಕಲ್ಪನೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಜನಮನ ಸೆಳೆದಿದೆ.
ಮದುವೆ ಊಟದ ಹಾಲ್‌ನಲ್ಲಿ ಅಸಾಮಾನ್ಯವೆನಿಸುವ ಕಾಲ್ಪನಿಕ ಅಲಂಕಾರಕ್ಕೆ ವ್ಯಾಪಕ ಪ್ರಶಂಸೆ
ಮದುವೆ ಊಟದ ಹಾಲ್ ಅನ್ನು ಮದುವೆಯಾಗುವವರ ವೃತ್ತಿಗೆ ಹೊಂದಿಕೆಯಾಗುವಂತೆ ಅಲಂಕರಿಸಿದ ರೀತಿ ಅಸಾಮಾನ್ಯ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಅದೇ ರೀತಿ, ಕಾಲ್ಪನಿಕ ಪರಿಕಲ್ಪನೆ ಮೆಚ್ಚುಗೆಗೆ ಒಳಗಾಗಿದೆ. ಆದ್ದರಿಂದ ಈ ವಿಡಿಯೋವನ್ನು ಅನೇಕರು ತಮ್ಮ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದು ವೈರಲ್ ಆಗುತ್ತಿದ್ದು, ಇನ್ನಷ್ಟು ಜನರು ಇದರಿಂದ ಪ್ರೇರಣೆ ಪಡೆಯೋದು ಖಚಿತ ಎಂದು ಹಲವರು ಉದ್ಘರಿಸಿದ್ದಾರೆ.
ತೆಂಗಿನಕಾಯಿ ವ್ಯಾಪಾರಿಯ ಮದುವೆ ಸಾಂಪ್ರದಾಯಿಕವಾಗಿ ತನ್ನೂರಿನ, ತನ್ನ ಸಮುದಾಯದ ಸಂಸ್ಕೃತಿಗೆ ಅನುಗುಣವಾಗಿಯೇ ನಡೆಯಿತು. ಅದಕ್ಕೆ ಬೇಕಾದ ಸಿದ್ಧತೆಯನ್ನು ಕುಟುಂಬ ಮಾಡಿಕೊಂಡಿತ್ತು. ಆದರೆ, ತೆಂಗಿನಕಾಯಿ ವ್ಯಾಪಾರದ ವಿಷಯ ಮುನ್ನೆಲೆಗೆ ಬಂದ ಕಾರಣ, ಊಟದ ಹಾಲ್ ಅಲಂಕಾರದ ವಿಚಾರ ಚರ್ಚೆಗೆ ಒಳಗಾಗಿ ತೆಂಗಿನಕಾಯಿ ಥೀಮ್‌ನ ಊಟದ ಹಾಲ್ ಅಲಂಕಾರ ಅಂತಿಮಗೊಂಡಿತ್ತು. ಆ ಹೊಣೆಗಾರಿಕೆ ಹೊತ್ತುಕೊಂಡುವರು ಅದನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟ ಕಾರಣ ಮದುವೆಯೂ, ಮದುವೆ ಊಟದ ಮನೆಯ ಅಲಂಕಾರವೂ ನೆನಪಿನಲ್ಲಿ ಉಳಿಯುವಂತಾಯಿತು.
ಇತ್ತೀಚಿನ ವರ್ಷಗಳಲ್ಲಿ ಥೀಮ್ ಆಧಾರಿತ ಅಲಂಕಾರಗಳು ವಿವಾಹ ಹಾಲ್‌ಗಳ ಮತ್ತು ವೇದಿಕೆಗಳ ಅಲಂಕಾರದಲ್ಲಿ ಮುಂಚೂಣಿಗೆ ಬಂದಿವೆ. ಈಗ ಅದರೊಂದಿಗೆ ಊಟದ ಹಾಲ್‌ಗಳ ಅಲಂಕಾರವೂ ಗಮನಸೆಳೆಯತೊಡಗಿದ್ದು, ಜನ ಇಂತಹ ವಿಶೇಷಗಳನ್ನು ಬಯಸತೊಡಗಿದ್ದಾರೆ.