ತ್ರಿಭಾಷಾ ಸೂತ್ರ ವಿವಾದ: ಬಜೆಟ್ ಪುಸ್ತಕದಲ್ಲಿ ರೂಪಾಯಿ ಚಿಹ್ನೆ ತಮಿಳಿಗೆ ಬದಲಿಸಿದ ತಮಿಳು ನಾಡು ಸರ್ಕಾರ
ಕೇಂದ್ರ ಸರ್ಕಾರ ಹಾಗೂ ತಮಿಳು ನಾಡು ಸರ್ಕಾರಗಳ ನಡುವೆ, ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿ ಭಾಷಾ ಸೂತ್ರಕ್ಕೆ ಸಂಬಂಧಿಸಿದ ಸಮರ ತೀವ್ರಗೊಂಡಿದೆ. ತಮಿಳುನಾಡು ಬಜೆಟ್ ಪುಸ್ತಕದಲ್ಲಿ ರೂಪಾಯಿ ಚಿಹ್ನೆ ತಮಿಳಿಗೆ ಬದಲಿಸಿದ ತಮಿಳುನಾಡು ಸರ್ಕಾರದ ನಡೆ ಟೀಕೆಗೆ ಗುರಿಯಾಗಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಚಾಲ್ತಿಯಲ್ಲಿರುವ ಕೇಂದ್ರ ಸರ್ಕಾರ ಹಾಗೂ ತಮಿಳು ನಾಡು ಸರ್ಕಾರಗಳ ನಡುವಿನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ತ್ರಿಭಾಷಾ ಸೂತ್ರದ ಸಮರದ ನಡುವೆಯೇ ತಮಿಳುನಾಡಿನ ಎಂಕೆ ಸ್ಟಾಲಿನ್ ಸರ್ಕಾರವು ತನ್ನ ಈ ಸಲದ ಬಜೆಟ್ ಪುಸ್ತಕದಲ್ಲಿ ರೂಪಾಯಿ ಚಿಹ್ನೆ ಬದಲು ತಮಿಳು ಭಾಷೆಯ ‘ರು’ ಅಕ್ಷರಕ್ಕೆ ಬದಲಿಸಿದೆ. ಈ ವಿಚಾರ ಸಂಸತ್ತಿನಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ತಮಿಳುನಾಡು ಸರ್ಕಾರದ ನಡೆ ದೇಶದ ಹಿತಕ್ಕೆ ಮಾರಕವಾದುದು ಎಂಬ ಟೀಕೆ, ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರದ ಬದಲು ಈಗಾಗಲೇ ಚಾಲ್ತಿಯಲ್ಲಿರುವ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಪಟ್ಟು ಹಿಡಿದು ತಮಿಳುನಾಡು ಸರ್ಕಾರ ಮುಂದುವರಿದಿದೆ.
ತಮಿಳುನಾಡು ಬಜೆಟ್ ಪುಸ್ತಕದಲ್ಲಿ ರೂಪಾಯಿ ಚಿಹ್ನೆ ತಮಿಳಿಗೆ ಬದಲಿಸಿದ ಸರ್ಕಾರ
ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಇಂದು (ಮಾರ್ಚ್ 14) ತನ್ನ ‘ತಮಿಳುನಾಡು ಬಜೆಟ್ 2025-26’ ಅನ್ನು ಮಂಡಿಸಲಿದೆ. ಇದುವರೆಗೂ ಬಳಕೆಯಾಗುತ್ತಿದ್ದ ದೇವನಾಗರಿ ಲಿಪಿಯ ರೂಪಾಯಿ ಚಿಹ್ನೆಯನ್ನು ಈ ಸಲದ ಬಜೆಟ್ ಪುಸ್ತಕದಲ್ಲಿ ತಮಿಳು ಭಾಷೆಯ ‘ರು’ ಅಕ್ಷರಕ್ಕೆ ಬದಲಿಸಿದೆ. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಕಚೇರಿ ಬಿಡುಗಡೆ ಮಾಡಿರುವ ಬಜೆಟ್ ಪುಸ್ತಕದ ಲೋಗೋದಲ್ಲಿ ಎಲ್ಲೋರುಕ್ಕುಂ ಎಲ್ಲಾಂ (ಎಲ್ಲರಿಗೂ ಎಲ್ಲವೂ) ಎಂಬ ಶೀರ್ಷಿಕೆ ಜತೆಗೆ ತಮಿಳು ಭಾಷೆಯ ರುಬಾಯಿ ಪದದ ‘ರು’ ಅಕ್ಷರ ರೂಪಾಯಿ ಚಿಹ್ನೆ ಜಾಗದಲ್ಲಿ ಕಾಣಿಸಿಕೊಂಡಿದೆ.
ಇದನ್ನು ಗಮನಿಸಿದ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮೂಲದವರೇ ಆದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದು ಭಾಷೆ ಮತ್ತು ಪ್ರಾದೇಶಿಕ ಕೋಮುವಾದವಾಗಿದ್ದು, ಈ ವರ್ತನೆ ಬೇಕಾಗಿರಲಿಲ್ಲ. ತಪ್ಪಿಸಬಹುದಾಗಿತ್ತು. ಇದು ಭಾರತದ ಏಕತೆಯನ್ನು ದುರ್ಬಲಗೊಳಿಸುವ ಅಪಾಯಕಾರಿ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಾದೇಶಿಕ ಹೆಮ್ಮೆಯ ನೆಪದಲ್ಲಿ ಪ್ರತ್ಯೇಕತಾವಾದಿ ಭಾವನೆಗಳನ್ನು ಉತ್ತೇಜಿಸುತ್ತದೆ ಎಂದು ತೀವ್ರ ಅಸಮಾಧಾನದೊಂದಿಗೆ ಟೀಕಿಸಿದರು.
ಎಂಕೆ ಸ್ಟಾಲಿನ್ ಅವರ ಎಕ್ಸ್ ಖಾತೆಯಲ್ಲಿ ದ್ರವಿಡಿಯನ್ ಮಾಡೆಲ್, ಟಿಎನ್‌ಬಜೆಟ್ 2025 ಹ್ಯಾಷ್ ಟ್ಯಾಗ್ ಜತೆಗೆ ಶೇರ್ ಮಾಡಿದ ವಿಡಿಯೋ ಇಲ್ಲಿದೆ.
ತಮಿಳುನಾಡು ಬಜೆಟ್ 2025-26 ಮಂಡನೆ ಇಂದು
ತಮಿಳುನಾಡು ಹಣಕಾಸು ಸಚಿವ ತಂಗಂ ತೇನ್ನರಸು ಅವರು ಇಂದು (ಮಾರ್ಚ್ 14) ತಮಿಳುನಾಡು ಬಜೆಟ್ 2025-26 ಅನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ತಮಿಳುನಾಡು ಬಜೆಟ್‌ನ ಲಾಂಛನದಲ್ಲಿ ರೂಪಾಯಿ ಚಿಹ್ನೆ ತಮಿಳಿಗೆ ಬದಲಾಗಿದ್ದು, ಎಲ್ಲೋರುಕ್ಕು ಎಲ್ಲಾಮ್ (ಎಲ್ಲರಿಗೂ ಎಲ್ಲವೂ) ಘೋಷವಾಕ್ಯವಿದೆ. ಇದು ದ್ರವಿಡಿಯನ್ ಮೋಡೆಲ್ ಎಂದು ತಮಿಳುನಾಡು ಸರ್ಕಾರ ಹೇಳಿಕೊಂಡಿದ್ದು, ಈ ವರ್ಷ ತಮಿಳು ಭಾಷೆಗೆ ಆದ್ಯತೆ ನೀಡುತ್ತಿರುವ ಕಾರಣ ಈ ರೀತಿ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದೆ.
ತಮಿಳರೇ ವಿನ್ಯಾಸಗೊಳಿಸಿದ ರೂಪಾಯಿ ಸಂಕೇತವನ್ನು ಬದಲಿಸಿದಿರಲ್ಲ ಏನು ಹುಚ್ಚುತನ ಎಂದ ಅಣ್ಣಾಮಲೈ
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಡಿಎಂಕೆ ಸರ್ಕಾರದ ನಡೆಯನ್ನು ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಣ್ಣಾಮಲೈ, ತಮಿಳರೊಬ್ಬರು ವಿನ್ಯಾಸ ಮಾಡಿ ಕೊಟ್ಟ ರೂಪಾಯಿ ಚಿಹ್ನೆಯನ್ನು ಈ ಸಲದ ಬಜೆಟ್‌ನಲ್ಲಿ ಬದಲಾಯಿಸಲಾಗಿದೆ. ಇಡೀ ಭಾರತವೇ ತಮಿಳರೊಬ್ಬರು ಮಾಡಿಕೊಟ್ಟ ಸಂಕೇತವನ್ನು ಅಂಗೀಕರಿಸಿ ಚಲಾವಣೆಗೆ ತಂದಿದೆ. ರೂಪಾಯಿ ಕರೆನ್ಸಿಗಳಲ್ಲೂ ಅದು ಛಾಪಿಸಲ್ಪಟ್ಟಿದೆ. ಇನ್ನು ಆ ವಿನ್ಯಾಸಕಾರ ಉದಯ ಕುಮಾರ್ ಅವರು ಡಿಎಂಕೆ ಮಾಜಿ ಶಾಸಕರೊಬ್ಬರ ಪುತ್ರ. ಇದೇನು ಹುಚ್ಚುತನ ತೋರಿಸಿದಿರಿ ಸ್ಟಾಲಿನ್ ಅವರೇ ಎಂದು ಪ್ರಶ್ನಿಸಿದ್ದಾರೆ. ಅಣ್ಣಾಮಲೈ ಅವರು 2024-25ರ ಬಜೆಟ್ ಪುಸ್ತಕದ ಲಾಂಛನವನ್ನೂ ಹಂಚಿಕೊಂಡಿದ್ದಾರೆ.
