ಚೆನ್ನೈ ಏರ್ ಶೋ ದುರಂತದಲ್ಲಿ ಐವರು ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು; ಅಸಲಿಗೆ ಆಗಿದ್ದೇನು?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಚೆನ್ನೈ ಏರ್ ಶೋ ದುರಂತದಲ್ಲಿ ಐವರು ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು; ಅಸಲಿಗೆ ಆಗಿದ್ದೇನು?

ಚೆನ್ನೈ ಏರ್ ಶೋ ದುರಂತದಲ್ಲಿ ಐವರು ಸಾವು, 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು; ಅಸಲಿಗೆ ಆಗಿದ್ದೇನು?

Chennai Air Show: ಚೆನ್ನೈನ ಮರೀನಾ ಬೀಚ್​ ಬಳಿ ನಡೆದ ಐಎಎಫ್​ ಏರ್​ಶೋನಲ್ಲಿ ಒಟ್ಟು 5 ಮಂದಿ ಮೃತಪಪಟ್ಟಿದ್ದಾರೆ. ಜೊತೆಗೆ 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚೆನ್ನೈನ ಮರೀನಾ ಬೀಚ್​ ಬಳಿ ನಡೆದ ಏರ್​​ಶೋನಲ್ಲಿ ನೆರದಿದ್ದ ಜನಸಂದಣಿ.
ಚೆನ್ನೈನ ಮರೀನಾ ಬೀಚ್​ ಬಳಿ ನಡೆದ ಏರ್​​ಶೋನಲ್ಲಿ ನೆರದಿದ್ದ ಜನಸಂದಣಿ.

ಚೆನ್ನೈ: ಭಾರತೀಯ ವಾಯುಪಡೆಯ (Indian Air Force) ವೈಮಾನಿಕ ಪ್ರದರ್ಶನ (Air Show) ಕಣ್ತುಂಬಿಕೊಳ್ಳಲು ಅಕ್ಟೋಬರ್ 6ರ ಭಾನುವಾರ ಚೆನ್ನೈನ ಮರೀನಾ ಬೀಚ್​​ನಲ್ಲಿ ನೆರೆದಿದ್ದ ಪ್ರೇಕ್ಷಕರ ಸಮುದ್ರದಲ್ಲಿ ಘೋರ ದುರಂತವೊಂದು ನಡೆದಿದೆ. ಐವರು ಸಾವನ್ನಪ್ಪಿದ್ದು, 200ಕ್ಕೂ (ಕುಸಿದು ಬಿದ್ದವರು, ಅಸ್ವಸ್ಥರಾದವರು, ಗಾಯಗೊಂಡವರು) ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಆಯಾಸದಿಂದ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಕಳಪೆ ಯೋಜನೆ, ಸಂಚಾರ ಯೋಜನೆ ಕೊರತೆ, ಅಸಮರ್ಪಕ ಸಾರ್ವಜನಿಕ ಸಾರಿಗೆಯಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಏರ್ ಶೋಗೆ ಸಾಕ್ಷಿಯಾಗಲು ಕಿಲೋಮೀಟರ್​​​ಗಟ್ಟಲ್ಲೇ ಕಡಲತೀರದಲ್ಲಿ ಜಮಾಯಿಸಿದ ಸಾವಿರಾರು ಜನರು ಜಮಾಯಿಸಿದ್ದರು. ಆದರೆ ಕಾರ್ಯಕ್ರಮದಲ್ಲಿ ಕಾಲ್ತುಳಿತ, ಬಿಸಿಲಿನ ತಾಪಮಾನ ಮತ್ತು ಉಸಿರುಗಟ್ಟಿ ಐವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ತೆರೆದ ಸ್ಥಳದಲ್ಲಿ ನಡೆದ ಈ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಯ ತನಕ ನಡೆಯಿತು. ಈ ದೃಶ್ಯವನ್ನು ವೀಕ್ಷಿಸಲು ನೆರೆದಿದ್ದ ಸಾವಿರಾರು ಜನರು ಕನಿಷ್ಠ 2 ರಿಂದ 3 ಗಂಟೆಗಳ ಕಾಲ ಸುಡುವ ಬಿಸಿಲಿನಲ್ಲಿ ನಿಂತಿದ್ದರು.

ತೀವ್ರ ಬಿಸಿಲಿದ್ದ ಕಾರಣ ಸಾಕಷ್ಟು ಮಂದಿ ಛತ್ರಿಗಳನ್ನು ಹಿಡಿದಿದ್ದರು. ಆದರೆ ಛತ್ರಿ ಇಲ್ಲದವರು ಬಿಸಿಲಿನ ಝಳಕ್ಕೆ ತತ್ತರಿಸಿದರು. ನಿರ್ಜಲೀಕರಣ (ಡಿಹೈಡ್ರೇಶನ್ - ಬಿಸಿಲ ಝಳ ಹೆಚ್ಚಿದಂತೆ ಕಾಣಿಸಿಕೊಳ್ಳುವ ಸಮಸ್ಯೆ) ಮತ್ತು ಆಯಾಸದಿಂದ ಕುಸಿದ ಬಿದ್ದ 50ಕ್ಕೂ ಹೆಚ್ಚು ಜನರನ್ನು ವಿವಿಧ ಆಸ್ಪ್ರತೆಗಳಿಗೆ ದಾಖಲಿಸಲಾಯಿತು. ಅವರೀಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯೋಜನೆಯ ಕೊರತೆಯ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ.

ಜನಸಂದಣಿ ನಿಯಂತ್ರಣಕ್ಕೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ವೈಮಾನಿಕ ಪ್ರದರ್ಶನ ಕೊನೆಗೊಂಡ ಬಳಿಕ ಜನರು ಅಲ್ಲಿಂದ ತೆರಳುವ ಅವಸರವು ಮತ್ತಷ್ಟು ಅವ್ಯವಸ್ಥೆಗೆ ಕಾರಣವಾಯಿತು. ನೂರಾರು ಜನರು ರಸ್ತೆಗಳಲ್ಲಿ, ರೈಲ್ವೆ ನಿಲ್ದಾಣಗಳ ಹೊರಗೆ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಿಲುಕಿಕೊಂಡರು. ಇದರಿಂದ ಕೆಲವೊಂದಿಷ್ಟು ಮಂದಿಗೆ ಆಯಾಸ ಹೆಚ್ಚಾಗಿ ಕುಸಿದು ಬಿದ್ದರು. ಇನ್ನೂ ಒಂದಷ್ಟು ಮಂದಿಗೆ ಉಸಿರುಗಟ್ಟಿತು.

ವೈಮಾನಿಕ ಪ್ರದರ್ಶನ ನಡೆದ ಸ್ಥಳ
ವೈಮಾನಿಕ ಪ್ರದರ್ಶನ ನಡೆದ ಸ್ಥಳ

ಮೆಟ್ರೋ, ರೈಲು, ಬಸ್ ನಿಲ್ದಾಣಗಳಲ್ಲಿ ನೂಕುನುಗ್ಗಲು

ಏರ್​ಶೋ ಮುಕ್ತಾಯಗೊಂಡ ಬೆನ್ನಲ್ಲೇ ನೂಕು ನುಗ್ಗಲು ಹೆಚ್ಚಾಯಿತು. ಮೆಟ್ರೊ ಸ್ಟೇಷನ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಏಕಾಏಕಿ ನುಗ್ಗಿದರು. ಕೆಲವೇ ಕ್ಷಣಗಳಲ್ಲಿ ನಿಲ್ದಾಣಗಳು ದಟ್ಟಣೆಯಿಂದ ಕೂಡಿದವು. ಹೀಗಾಗಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಯಿತು. ಆದರೆ, ಜನಸಂದಣಿಯನ್ನು ನಿರ್ವಹಿಸಲು ಸಾಧ್ಯವಾಗದ ಕಾರಣ ಸ್ಥಳೀಯ ಅಧಿಕಾರಿಗಳು ಈಗ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮೆಟ್ರೋ ಮಾತ್ರವಲ್ಲ, ಲೋಕಲ್ ಟ್ರೈನ್​​ಗಳು ಮತ್ತು ಬಸ್​ಗಳು ದಟ್ಟಣೆಯಿಂದ ಕೂಡಿದ್ದವು.

ಏರ್​ಶೋ ಸ್ಥಳಕ್ಕೆ ಹತ್ತಿರವಿರುವ ಅಣ್ಣಾ ಚೌಕದ ಬಸ್ ನಿಲ್ದಾಣವು ಜನರಿಂದ ತುಂಬಿ ತುಳುಕುತ್ತಿತ್ತು. ಸಂಚಾರ ನಿರ್ಬಂಧಗಳ ದೃಷ್ಟಿಯಿಂದ, ಜನರು ಬಸ್ಸುಗಳನ್ನು ಹಿಡಿಯಲು ಅಥವಾ ರೈಲು ನಿಲ್ದಾಣಗಳನ್ನು ತಲುಪಲು ಸಾಕಷ್ಟು ದೂರ ನಡೆಯಬೇಕಾಗಿತ್ತು. ಈ ವೇಳೆ ಕಾಲ್ತುಳಿತದಂತಹ ಪರಿಸ್ಥಿತಿ ಉದ್ಭವಿಸಿತು. ಇದರ ನಡುವೆಯೂ ಪೊಲೀಸರು ಜನಸಂದಣಿಯನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ಆಂಬ್ಯುಲೆನ್ಸ್​​ಗಳು ಸಾಗಲು ಅವಕಾಶ ಮಾಡಿಕೊಟ್ಟರು.

ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಜನರು.
ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಜನರು. (PTI)

ಡಿಎಂಕೆ ವಿರುದ್ಧ ಬಿಜೆಪಿ ಆರೋಪ

ರಾಜ್ಯ ಆರೋಗ್ಯ ಸಚಿವ ಎಂ ಸುಬ್ರಮಣಿಯನ್ ಅವರು ಈ ಘಟನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಾಕಷ್ಟು ವೈದ್ಯಕೀಯ ಸಿಬ್ಬಂದಿಯೊಂದಿಗೆ ಎರಡು ಆರೋಗ್ಯ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಅರೆವೈದ್ಯಕೀಯ ತಂಡಗಳೊಂದಿಗೆ ನಲವತ್ತು ಆಂಬ್ಯುಲೆನ್ಸ್​​ ನಿಯೋಜಿಸಲಾಗಿದೆ ಎಂದರು. ಆದಾಗ್ಯೂ, ದುರಂತ ಘಟನೆ ವೇಳೆ ತೆಗೆದುಕೊಂಡ ಕ್ರಮಗಳ ಸಮರ್ಪಕತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಬಿಜೆಪಿ ಕೂಡ ಸರ್ಕಾರವನ್ನು ದೂಷಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನರಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ, ಡಿಎಂಕೆ ಸರ್ಕಾರವನ್ನು ದೂಷಿಸಿದ್ದಾರೆ.

ಚೆನ್ನೈ ಮರೀನಾ ಬೀಚ್​​​ನಲ್ಲಿ ನಡೆದ ‘ಏರ್ ಶೋ’ ಕಾರ್ಯಕ್ರಮದ ಸಮಯದಲ್ಲಿ ಜನಸಂದಣಿಯಿಂದ 5 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೇಳಿ ನನಗೆ ಆಘಾತವಾಯಿತು. ಐಎಎಫ್ ಏರ್ ಶೋ ವೀಕ್ಷಿಸಲು ಬಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಮತ್ತು ಸಾಕಷ್ಟು ಸಾರಿಗೆ ವ್ಯವಸ್ಥೆಗಳನ್ನು ಒದಗಿಸದೆ ಡಿಎಂಕೆ ಸರ್ಕಾರ ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದಿರುವುದೇ ಇದಕ್ಕೆ ಏಕೈಕ ಕಾರಣ ಎಂದು ಅಣ್ಣಾಮಲೈ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ವೈಮಾನಿಕ ಪ್ರದರ್ಶನದ ನೊಟ
ವೈಮಾನಿಕ ಪ್ರದರ್ಶನದ ನೊಟ
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.