Jallikattu: ತಮಿಳುನಾಡು ಜಲ್ಲಿಕಟ್ಟು, ಮಂಜುವಿರಾಟ್ಟು ಸ್ಪರ್ಧೆಯಲ್ಲಿ 7 ಮಂದಿ ಸಾವು, ನೂರಾರು ಜನರಿಗೆ ಗಾಯ
Jallikattu News: ತಮಿಳುನಾಡಿನ ತಿರುಚಿನಾಪಳ್ಳಿ, ಕರೂರ್ ಮತ್ತು ಪುದುಕೊಟ್ಟೈ ಜಿಲ್ಲೆಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಸ್ಪರ್ಧೆಗಳಲ್ಲಿ 7 ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 400ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತಮಿಳುನಾಡಿನ ವಿವಿಧೆಡೆ ನಡೆದ ಜಲ್ಲಿಕಟ್ಟು ಮತ್ತು ಮಂಜುವಿರಾಟ್ಟು ಸ್ಪರ್ಧೆಗಳಲ್ಲಿ ಒಟ್ಟು ಏಳು ಜನರು ಮೃತಪಟ್ಟ ಘಟನೆ ವರದಿಯಾಗಿದೆ. ಜಲ್ಲಿಕಟ್ಟು ಹೋರಿ ಮಾಲೀಕ ಮತ್ತು ಆರು ಜನರು ಪ್ರೇಕ್ಷಕರು, ಹೋರಿ ಪಳಗಿಸುವವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆಯಲ್ಲಿ 148 ಜನರು ಗಾಯಗೊಂಡಿದ್ದಾರೆ. ಪ್ರತ್ಯೇಕ ಘಟನೆಯಲ್ಲಿ ಎರಡು ಹೋರಿಗಳೂ ಮೃತಪಟ್ಟಿವೆ. ಪುದುಕ್ಕೊಟ್ಟೈನಲ್ಲಿ ನಡೆದ ಕಾರ್ಯಕ್ರಮದ ವೇಳೆ ಒಂದು ಹೋರಿ ಮೃತಪಟ್ಟಿದೆ. ಶಿವಗಂಗೆಯ ಸಿರವಾಯಲ್ ಮಂಜುವಿರಟ್ಟು ಎಂಬಲ್ಲಿ ಹೋರಿ ಮಾಲೀಕ ಮೃತಪಟ್ಟಿದ್ದಾನೆ. ಹೋರಿಯೂ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಶಿವಗಂಗಾ ಜಿಲ್ಲೆಯ ಸಿರವಾಯಲ್‌ನಲ್ಲಿ ನಡೆದ ಮಂಜುವಿರಟ್ಟು ಸ್ಪರ್ಧೆಯಲ್ಲಿ ಭಾಗವಹಿಸಲು ಥನೀಶ್ ರಾಜಾ ತನ್ನ ಹೋರಿ ಜತೆ ಆಗಮಿಸಿದ್ದರು. ಮೈದಾನದಿಂದ ಓಡಿ ಹೋಗುವ ಸಂದರ್ಭದಲ್ಲಿ ಇವರು ಹೋರಿಯೊಂದಿಗೆ ಕೃಷಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ರಾಜನು ತನ್ನ ಹೋರಿಯನ್ನು ಹಿಡಿಯಲು ಬಾವಿಗೆ ಹಾರಿದ್ದ. ಈ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ.ದೇವಕೋಟೈನಲ್ಲಿ ವೀಕ್ಷಣೆಗೆ ಬಂದಿದ್ದ ಸುಬ್ಬಯ್ಯ ಎಂಬವರನ್ನು ಹೋರಿ ತಿವಿದಿದೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಮಧುರೈನ ಅಲಂಗನಲ್ಲೂರಿನಲ್ಲಿ ಕೆರಳಿದ ಗೂಳಿಯು ವಾಡಿಪಟ್ಟಿ ಬಳಿಯ ಮೆಟ್ಟುಪಟ್ಟಿ ಗ್ರಾಮದ 55 ವರ್ಷದ ಪ್ರೇಕ್ಷಕ ಪಿ. ಪೆರಿಯಸಾಮಿಗೆ ತಿವಿದಿದೆ. ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಪೆರಿಯಸಾಮಿ ಮೃತಪಟ್ಟಿದ್ದಾರೆ. ಈ ಸ್ಪರ್ಧೆಯ ಸಮಯದಲ್ಲಿ ಕನಿಷ್ಠ 70 ಜನರು ಗಾಯಗೊಂಡಿದ್ದಾರೆ. ತಿರುಚಿನಾಪಳ್ಳಿ, ಕರೂರ್ ಮತ್ತು ಪುದುಕೊಟ್ಟೈ ಜಿಲ್ಲೆಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಜಲ್ಲಿಕಟ್ಟು ಸ್ಪರ್ಧೆಗಳಲ್ಲಿ 148 ಜನರು ಗಾಯಗೊಂಡಿದ್ದಾರೆ.
ಕರೂರು ಜಿಲ್ಲೆಯ ಕುಜುಮಣಿ ಬಳಿಯ ಸಮುದ್ರಂನ 60 ವರ್ಷದ ಪ್ರೇಕ್ಷಕ ಕುಲಂತೈವೇಲು ಎಂಬುವರು ಆರ್‌ಟಿ ಮಲೈನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. ಪುದುಕೊಟ್ಟೈ ಜಿಲ್ಲೆಯ ಮಹಾದೇವ ಪಟ್ಟಿ ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಕೀರನೂರಿನ ಬಳಿಯ ಒಡುಗಂಪಟ್ಟಿಯ ಸಿ ಪೆರುಮಾಳ್ ಎಂಬ 70 ವರ್ಷದ ಪ್ರೇಕ್ಷಕ ಮೃತಪಟ್ಟಿದ್ದಾರೆ. ಇಲ್ಲೂ ಸಾಕಷ್ಟು ಜನರು ಗಾಯಗೊಂಡಿದ್ದಾರೆ.
ಸಚಿವ ವಿ. ಸೆಂಥಿಲ್‌ಬಾಲಾಜಿ ಉದ್ಘಾಟಿಸಿದ ಆರ್‌ಟಿ ಮಲೈ ಜಲ್ಲಿಕಟ್ಟುವಿನಲ್ಲಿ 52 ಮಂದಿ ಗಾಯಗೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೋರಿಯ ಮಾಲೀಕರಿಗೆ ಕಾರನ್ನು ಬಹುಮಾನವಾಗಿ ನೀಡಿದ್ದಾರೆ. ಹೋರಿ ಪಳಗಿಸಿದವರಿಗೆ ಮೋಟಾರ್ ಸೈಕಲ್ ನೀಡಲಾಯಿತು. ಈ ಎರಡೂ ಬಹುಮಾನಗಳನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಪರವಾಗಿ ನೀಡಲಾಯಿತು.
ಜಲ್ಲಿಕಟ್ಟು ಸ್ಪರ್ಧೆ ಎಂದರೇನು?
ಕನ್ನಡದಲ್ಲಿ ಇದನ್ನು ಜಲ್ಲಿಕಟ್ಟು ಹೋರಿ ಹಬ್ಬ ಎಂದು ಕರೆಯುತ್ತಾರೆ. ಇದು ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ. ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯಾಗಿದೆ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡುವ ಸ್ಪರ್ಧೆ ಇದಾಗಿದೆ. ಬಯಲಲ್ಲಿ ಓಡುವ ಹೋರಿಯನ್ನು ಯುವಕರು ಮತ್ತು ಇತರರು ನಿಲ್ಲಿಸಲು ಯತ್ನಿಸುತ್ತಾರೆ. ಹೋರಿಯ ಭುಜ ಹಿಡಿದುಕೊಂಡು ಒಂದು ಕಡೆ ನಿಲ್ಲಿಸುವ ಪ್ರಯತ್ನ ಮಾಡಲಾಗುತ್ತದೆ. ಈ ರೀತಿ ಹೋರಿಯನ್ನು ನಿಲ್ಲಿಸಲು ಸಾಧ್ಯವಾಗುವ ವ್ಯಕ್ತಿಗೆ ಗೌರವ, ಪ್ರಶಸ್ತಿ ದೊರಕುತ್ತದೆ. ಹೋರಿಯ ಭುಜ ಹಿಡಿದರೂ ಹೋರಿ ನಿಲ್ಲುವುದಿಲ್ಲ. ಮನುಷ್ಯನನ್ನೇ ಹೊತ್ತುಕೊಂಡು ದಿಕ್ಕುಪಾಲಾಗಿ ಓಡುತ್ತದೆ. ಈ ಸ್ಪರ್ಧೆಯಲ್ಲಿ ಇತ್ತೀಚೆಗೆ ಸಾಕಷ್ಟು ಸಾವು ನೋವು ವರದಿಯಾಗುತ್ತಿದೆ.
