Cyclone Fengal: ಫೆಂಗಲ್ ಚಂಡಮಾರುತದಿಂದ ತಮಿಳುನಾಡು ತತ್ತರ, ರೆಡ್ ಅಲರ್ಟ್ ಘೋಷಣೆ; ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಭಾರೀ ಮಳೆ
Cyclone Fengal: ಬಂಗಾಳಕೊಲ್ಲಿಯಲ್ಲಿ ವಾಯುಭಾರತ ಕುಸಿತದಿಂದ ಉಂಟಾದ ಫೆಂಗಲ್ ಚಂಡಮಾರುತ ತಮಿಳುನಾಡಿಗೆ ಎಂಟ್ರಿ ಕೊಟ್ಟಿದೆ. ಕಳೆದ 2 ದಿನಗಳಿಂದ ನೆರೆ ರಾಜ್ಯದಲ್ಲಿ ಭಾರೀ ಮಳೆ ಸುರಿಯುತ್ತಿದ್ದ ಕೆಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೂಡಾ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತಕ್ಕೆ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ. ಫೆಂಗಲ್ ಸೈಕ್ಲೋನ್ ನೆರೆ ರಾಜ್ಯ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದು ಮೈಲಾಡುತುರೈ, ಕಡಲೂರು ಮತ್ತು ಕಾರೈಕಲ್ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಕಳೆದ 2 ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆ ಆಗುತ್ತಿದ್ದು ಇದೀಗ ಹೊಸ ಸೈಕ್ಲೋನ್ ಅಪ್ಪಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಬೀಡುಬಿಟ್ಟ ಎನ್‌ಡಿಆರ್‌ಎಫ್ ಪಡೆ
ತಮಿಳುನಾಡು ಮಾತ್ರವಲ್ಲದೆ ಫೆಂಗಲ್ ಸೈಕ್ಲೋನ್‌ನಿಂದ ದಕ್ಷಿಣದ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ವರದಿ ಎಚ್ಚರಿಕೆ ನೀಡಿದೆ. ಬುಧವಾರ ತಮಿಳುನಾಡಿನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ . ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಉತ್ತರದ ರಾಜ್ಯಗಳಲ್ಲಿ ಮಂಜು ಮತ್ತು ಚಳಿ ಹೆಚ್ಚಾಗಬಹುದು ಎಂದು ಹವಾಮಾನ ವರದಿ ಮಾಹಿತಿ ನೀಡಿದೆ. ನವೆಂಬರ್ 27ರಿಂದ 28ರವರೆಗೆ ತಮಿಳುನಾಡು ಮತ್ತು ಪುದುಚೇರಿಯ ಹಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತದ ಹಿನ್ನೆಲೆ ಕರಾವಳಿ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್‌ನ 4ನೇ ಬೆಟಾಲಿಯನ್‌ನ 7 ತಂಡಗಳನ್ನು ನಿಯೋಜಿಸಲಾಗಿದೆ. ಕಾರೈಕಲ್, ತಂಜಾವೂರು, ತಿರುವರೂರು, ಕಡಲೂರು, ನಾಗಪಟ್ಟಣಂ ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಕ್ಕೆ ತಂಡಗಳು ಸಿದ್ಧವಾಗಿವೆ ಎಂದು ಎನ್‌ಡಿಆರ್‌ಎಫ್ ತಿಳಿಸಿದೆ.
ತಮಿಳುನಾಡಿನಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ
ನೈಋತ್ಯ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಆರ್‌ಎಂಸಿ ಚೆನ್ನೈ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಬಿರುಗಾಳಿಯಿಂದ ಚೆನ್ನೈ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ನವೆಂಬರ್ 27 ರಿಂದ 30 ರವರೆಗೆ ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟು ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚೆನ್ನೈ, ನಾಗಪಟ್ಟಣಂ, ಮೈಲಾಡುತುರೈ ಮತ್ತು ತಿರುವಾರೂರ್ ಸೇರಿದಂತೆ 9 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ನ ಹಲವು ಭಾಗಗಳಲ್ಲಿ ನವೆಂಬರ್ 27 ರಂದು ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ನವೆಂಬರ್ 28 ರಂದು ಕೂಡ ತಮಿಳುನಾಡಿನ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದಲ್ಲೂ ಭಾರೀ ಮಳೆ ಸಾಧ್ಯತೆ
ಫೆಂಗಲ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಕಳೆದ 2 ದಿನಗಳಿಗಿಂದ ಇಂದು (ನ.27) ಚಳಿ ಹೆಚ್ಚಾಗಿದ್ದು ಮುಂದಿನ 3 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕೆಲವೆಡೆ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಫೆಂಗಲ್ ಎಂಬ ಪದ ಬಂದಿದ್ದು ಹೇಗೆ?
ಫೆಂಗಲ್ ಚಂಡಮಾರುತವು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲೆ ರೂಪುಗೊಂಡ ಉಷ್ಣವಲಯದ ಹವಾಮಾನ ವ್ಯವಸ್ಥೆಯಾಗಿದೆ. ವಿಶ್ವ ಹವಾಮಾನ ಸಂಸ್ಥೆಯ ಹೆಸರನ್ನು ಇಡುವ ಮಾನದಂಡಗಳನ್ನು ಅನುಸರಿಸಿ ಸೈಕ್ಲೋನ್‌ಗಳಿಗೆ ಹೆಸರನ್ನು ಇಡಲಾಗುವುದು. ಫೆಂಗಲ್ ಎನ್ನುವುದು ಅರೇಬಿಕ್ ಪದ. ಖಿನ್ನತೆಯು ಚಂಡಮಾರುತವಾಗಿ ಬದಲಾಗುವುದನ್ನು ಅರೇಬಿಕ್ ಭಾಷೆಯಲ್ಲಿ ಫೆಂಗಲ್ ಎಂದು ಕರೆಯುತ್ತಾರೆ. ವಿಶ್ವ ಹವಾಮಾನ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಸೈಕ್ಲೋನ್ ಹೆಸರನ್ನು ಸೂಚಿಸುತ್ತವೆ. ಇದರಲ್ಲಿ ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮಯನ್ಮಾರ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮನ್ ಸೇರಿದಂತೆ 13 ದೇಶಗಳಿವೆ.