TamilNadu News: ತಮಿಳುನಾಡು ಸಚಿವ ಸೇಂಥಿಲ್ ಬಾಲಾಜಿ ಬಂಧಿಸಿದ ಇಡಿ; ಆಸ್ಪತ್ರೆಗೆ ದಾಖಲು, ಬೆಂಬಲಕ್ಕೆ ನಿಂತ ಡಿಎಂಕೆ
ಹಣವನ್ನು ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದ ಇಡಿ ಸೇಂಥಿಲ್ ಬಾಲಾಜಿ ಅವರ ನಿವಾಸ, ಕಚೇರಿ ಮೇಲೆ ದಾಳಿ ಮಾಡಿತ್ತು. ಆನಂತರ ಬಾಲಾಜಿ ಅವರನ್ನು ವಿಚಾರಣೆಗೂ ಕರೆದೊಯ್ಯಲಾಗಿತ್ತು. ದಿನವಿಡೀ ವಿಚಾರಣೆ ನಡೆಸಿದ್ದ ಇಡಿ ಬುಧವಾರ ಬೆಳಗ್ಗೆ ಅವರನ್ನು ಬಂಧಿಸಿದೆ.
ಚೆನ್ನೈ: ಅಕ್ರಮ ಹಣ ವಹಿವಾಟಿಗೆ ಸಂಬಂಧಿಸಿದಂತೆ ಕೆಲ ದಿನಗಳಿಂದ ತೀವ್ರ ವಿಚಾರಣೆಗೆ ಒಳಪಡಿಸಿದ್ದ ಕೇಂದ್ರ ಜಾರಿ ನಿರ್ದೇಶನಾಲಯ( ಇಡಿ) ಬುಧವಾರ ಬೆಳ್ಳಂಬೆಳಗ್ಗೆ ತಮಿಳುನಾಡು ಸಚಿವ ವಿ. ಸೇಂಥಿಲ್ ಬಾಲಾಜಿ ಅವರನ್ನು ಬಂಧಿಸಿದೆ.
ಹಣವನ್ನು ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ್ದ ಇಡಿ ಸೇಂಥಿಲ್ ಬಾಲಾಜಿ ಅವರ ನಿವಾಸ, ಕಚೇರಿ ಮೇಲೆ ದಾಳಿ ಮಾಡಿತ್ತು. ಆನಂತರ ಬಾಲಾಜಿ ಅವರನ್ನು ವಿಚಾರಣೆಗೂ ಕರೆದೊಯ್ಯಲಾಗಿತ್ತು. ದಿನವಿಡೀ ವಿಚಾರಣೆ ನಡೆಸಿದ್ದ ಇಡಿ ಬುಧವಾರ ಬೆಳಗ್ಗೆ ಅವರನ್ನು ಬಂಧಿಸಿದೆ.
ಬಂಧಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬಾಲಾಜಿ ಅಲ್ಲಿಯೇ ಕುಸಿದುಬಿದ್ದರು. ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಚೆನ್ನೈನ ಒಮಂಡುರಾರ್ ಆಸ್ಪತ್ರೆಗೆ ಕರೆ ತರಲಾಯಿತು. ಈ ವೇಳೆ ಬಾಲಾಜಿ ಕಣ್ಣೀರಿಡುತ್ತಿರುವುದು , ಅವರ ಬೆಂಬಲಿಗರು ಆಸ್ಪತ್ರೆ ಹೊರಾವರಣದಲ್ಲಿ ಘೋಷಣೆ ಕೂಗುತ್ತಿದ್ದು ಹೈಡ್ರಾಮ ಸೃಷ್ಟಿಸಿತು.
ಮಂಗಳವಾರ ರಾತ್ರಿಯೇ ಬಾಲಾಜಿ ಅವರನ್ನು ವಶಕ್ಕೆ ಪಡೆಯಲಾಗಿತ್ತಾದರೂ ಬಂಧನ ಮಾಡಿರುವುದನ್ನು ಇಡಿ ಅಧಿಕೃತವಾಗಿ ತಿಳಿಸಿರಲಿಲ್ಲ. ಈಗ ಆಸ್ಪತ್ರೆಗೆ ಬಾಲಾಜಿ ಅವರನ್ನು ಕರೆದುಕೊಂಡು ಹೋಗಿರುವುದು ಗೊತ್ತಾಗಿದೆ. ಬಂಧನಕ್ಕೆ ಸೂಕ್ತ ಮಾನದಂಡಗಳನ್ನು ಪಾಲಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಿಎಂಕೆ ಸಂಸದ ಹಾಗೂ ಹಿರಿಯ ನ್ಯಾಯವಾದಿ ಎನ್ ಆರ್ ಇಳಂಗೋ ತಿಳಿಸಿದ್ದಾರೆ.
ಬಿಜೆಪಿ ಉದ್ದೇಶಪೂರ್ವವಾಗಿಯೇ ಕೇಂದ್ರದ ಸಂಸ್ಥೆಗಳನ್ನು ಬಳಸಿಕೊಂಡು ಡಿಎಂಕೆ ಸರ್ಕಾರದ ಮೇಲೆ ದಾಳಿ ಮಾಡುತ್ತಿದೆ. ಇದನ್ನು ನಾವು ಎದುರಿಸುತ್ತೇವೆ. ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತೇವೆ. ಸೇಂಥಿಲ್ ಬಾಲಾಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರೊಂದಿಗೆ ನಾವಿದ್ದೇವೆ ಎಂದು ಡಿಎಂಕೆ ಸರ್ಕಾರದ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಸೇಂಥಿಲ್ ಬಾಲಾಜಿ ಅವರ ಆಸ್ತಿಗಳ ತಪಾಸಣೆ ನಡೆಸಿತ್ತು. ಅಲ್ಲದೇ ಅವರ ಹಲವು ಬೆಂಬಲಿಗರ ಮೇಲೂ ದಾಳಿ ಮಾಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಸೇಂಥಿಲ್ ಕಡೆಯವರು ಪ್ರಶ್ನಿಸಿದ್ದರೂ ಇಡಿ ತನಿಖೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಜಯಲಲಿತಾ ಅವಧಿಯಲ್ಲಿ ಸಚಿವರಾಗಿದ್ದ ಬಾಲಾಜಿ ಉದ್ಯೋಗ ನೀಡುವಾಗ ಹಣ ಪಡೆದಿದ್ದ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಸದ್ಯ ಡಿಎಂಕೆಯಲ್ಲಿರುವ ಕರೂರು ಶಾಸಕರೂ ಆಗಿರುವ ಬಾಲಾಜಿ ಇಂಧನ ಹಾಗೂ ಅಬಕಾರಿ ಸಚಿವರು.
===============
ವಿಭಾಗ