ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tamilnadu Tragedy: ತಮಿಳುನಾಡಿನಲ್ಲಿ ಕಲಬೆರಕೆ ಮದ್ಯ ಸೇವಿಸಿ 29 ಮಂದಿ ಮಂದಿ ಸಾವು, 60 ಮಂದಿ ಅಸ್ವಸ್ಥ

Tamilnadu Tragedy: ತಮಿಳುನಾಡಿನಲ್ಲಿ ಕಲಬೆರಕೆ ಮದ್ಯ ಸೇವಿಸಿ 29 ಮಂದಿ ಮಂದಿ ಸಾವು, 60 ಮಂದಿ ಅಸ್ವಸ್ಥ

Illicit liquor mafia ತಮಿಳುನಾಡಿನಲ್ಲಿ( Tamilnadu liquor tragedy) ಕಳಪೆ ಮದ್ಯ ಸೇವಿಸಿದ ಪ್ರಕರಣದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.

ತಮಿಳುನಾಡಿನಲ್ಲಿ ಅಕ್ರಮ ಮದ್ಯ ಎಗ್ಗಿಲ್ಲದೇ ಸಾಗಿದೆ.
ತಮಿಳುನಾಡಿನಲ್ಲಿ ಅಕ್ರಮ ಮದ್ಯ ಎಗ್ಗಿಲ್ಲದೇ ಸಾಗಿದೆ.

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಕಲಬೆರಕೆ ಮದ್ಯ(illicit liquor) ಸೇವಿಸಿದ 29 ಮಂದಿ ಮೃತಪಟ್ಟಿದ್ದು ಹಲವರ ಸ್ಥಿತಿ ಗಂಭೀರವಾಗಿದೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಲಬೆರಕೆ ಮದ್ಯ ಸೇವಿಸಿ ಬುಧವಾರ ರಾತ್ರಿಯಿಂದಲೇ ಹಲವರು ಜೀವ ಕಳೆದಕೊಂಡಿದ್ದಾರೆ. ಇದರಲ್ಲಿ 60 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಘಟನೆಯಲ್ಲಿ ಮಾರಣಾಂತಿಕ ಮೆಥನಾಲ್ ಹೊಂದಿರುವ ಸುಮಾರು 200 ಲೀಟರ್ ಅಕ್ರಮ ಮದ್ಯವನ್ನು ವಶಪಡಿಸಿಕೊಂಡ ಪೊಲೀಸರು ನಂತರ 49 ವರ್ಷದ ಕೆ ಕಣ್ಣುಕುಟ್ಟಿ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಮಿಳುನಾಡು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಅಕ್ರಮ ಜಾಲವನ್ನು ಬೇಧಿಸಲು ತಮಿಳುನಾಡು ಸರ್ಕಾರ ಆದೇಶ ನೀಡಿದೆ. ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಎಸ್ಪಿ, ಕಲ್ಲಕುರಿಚಿ ಅಬಕಾರಿ ನಿಷೇಧ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರ ಒಂಬತ್ತು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಹಲವರ ವಿರುದ್ದ ಕ್ರಮ ಆಗುವ ಸಾಧ್ಯತೆಗಳಿವೆ.

ಸಮಗ್ರ ತನಿಖೆಗಾಗಿ ಅಪರಾಧ ವಿಭಾಗ-ಅಪರಾಧ ತನಿಖಾ ಇಲಾಖೆ (ಸಿಬಿ-ಸಿಐಡಿ) ತನಿಖೆಗೆ ಸ್ಟಾಲಿನ್ ಆದೇಶಿಸಿದ್ದಾರೆ. ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಟಾವತ್ ಮತ್ತು ಅಮಾನತುಗೊಂಡ ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ತಮಿಳುನಾಡು ಸರ್ಕಾರ ಬದಲಾವಣೆ ಮಾಡಿ ಹೊಸ ಅಧಿಕಾರಿಗಳನ್ನು ನಿಯೋಜಿಸಿದೆ.ಕಲ್ಲಕುರಿಚಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎಂ.ಎಸ್.ಪ್ರಶಾಂತ್ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಭೇಟಿಯಾದರು. ರಜತ್ ಚತುರ್ವೇದಿ ಅವರು ಜಿಲ್ಲೆಯ ಹೊಸ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಸಮಗ್ರ ತನಿಖೆಗೆ ಆದೇಶಿಸಿದ್ದು, ಹಲವಾರು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕು. ಇಂತಹ ದುರಂತ ಮರುಕಳಿಸಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಎಂ.ಕೆ.ಸ್ಟಾಲಿನ್, "ಕಲ್ಲಕುರಿಚಿಯಲ್ಲಿ ಕಲಬೆರಕೆ ಮದ್ಯ ಸೇವಿಸಿದ ಜನರ ಸಾವಿನ ಸುದ್ದಿ ಕೇಳಿ ನನಗೆ ಆಘಾತ ಮತ್ತು ದುಃಖವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಲಾಗಿದೆ. ಇದನ್ನು ತಡೆಗಟ್ಟಲು ವಿಫಲವಾದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಇಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸಮಾಜವನ್ನು ಹಾಳುಮಾಡುವ ಇಂತಹ ಅಪರಾಧಗಳನ್ನು ನಿಗ್ರಹಿಸಲಾಗುವುದು ಎಂದು ಹೇಳಿದ್ದಾರೆ.

ಕಲ್ಲಕುರಚ್ಚಿ ಜಿಲ್ಲಾ ಕೇಂದ್ರದ ಕರುಣಾಪುರಂ ಭಾಗದಲ್ಲಿ ಮದ್ಯ ಸೇವಿಸಿದ ಕೆಲವರು ಬುಧವಾರವೇ ಅಸ್ವಸ್ಥರಾಗಿದ್ದರು. ಈ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಬುಧವಾರ ರಾತ್ರಿ ಹೊತ್ತಿಗೆ ಹತ್ತು ಮಂದಿ ಮೃತಪಟ್ಟು ನೂರಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಬೆಳಗ್ಗೆ ಹೊತ್ತಿಗೆ ಸಾವಿನ ಸಂಖ್ಯೆ ಏರಿಕೆಯಾಗಿದೆ. ಮೃತರಲ್ಲಿ ಬಹುತೇಕರು ಕೂಲಿ ಕಾರ್ಮಿಕರು. ಅಂದಿನ ದುಡಿಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದವರು. ಮದ್ಯದ ದರ ದುಬಾರಿಯಾಗಿದ್ದರಿಂದ ಕಡಿಮೆ ದರದ ಮದ್ಯ ಸೇವಿಸುತ್ತಿದ್ದರು. ಈ ಬಾರಿ ಕಲಬೆರಕೆ ಮದ್ಯ ಅವರ ಜೀವವನ್ನೇ ತೆಗೆದುಕೊಂಡಿದೆ. ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ. ಅಸ್ವಸ್ಥರಾದವರನ್ನು ಕಲ್ಲಕುರುಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದ್ಯ ಸೇವಿಸಿ ಬಂದ ನನ್ನ ಗಂಡನಿಗೆ ಹೊಟ್ಟೆನೋವು ಶುರುವಾಗಿತ್ತು. ಮಧ್ಯರಾತ್ರಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಬದುಕಿ ಉಳಿಯಲಿಲ್ಲ. ಕುಡಿಯಬೇಡ ಎಂದರೂ ಕೇಳುತ್ತಿರಲಿಲ್ಲ. ಕಳಪೆ ಮದ್ಯದಿಂದಲೇ ನನ್ನ ಪತಿ ಸಾವಾಗಿದೆ ಎಂದು ಕರುಣಾಪುರಂ ನಿವಾಸಿ ಮಹಿಳೆ ಕಣ್ಣೀರಿಡುತ್ತಲೇ ಹೇಳಿಕೊಂಡರು.

ಕಳೆದ ವರ್ಷವೂ ವಿಲ್ಲುಪುರಂ ಹಾಘೂ ಚೆಂಗಲಪಟ್ಟು ಜಿಲ್ಲೆಗಳಲ್ಲಿ ಇದೇ ರೀತಿ ಕಳಪೆ ಮದ್ಯ ಸೇವಿಸಿ 22 ಮಂದಿ ಜೀವ ಕಳೆದುಕೊಂಡಿದ್ದಾರೆ. ಈಗ ಮತ್ತೆ ದುರಂತ ನಡೆದಿದ್ದು, ತಮಿಳುನಾಡು ಸರ್ಕಾರದ ನಿರ್ಲಕ್ಷ್ಯತನದಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.