TCS Jobs: ಟಿಸಿಎಸ್ ಉದ್ಯೋಗಿಗಳ ಸಂಖ್ಯೆ ಇಳಿಕೆ, 1.25 ಲಕ್ಷ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್
TCS Jobs: ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಲು ಮುಂದಾಗಿದೆ. 2024ರ ಆರ್ಥಿಕ ವರ್ಷದಲ್ಲಿ ಸುಮಾರು 1.25 ಲಕ್ಷ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ತಿಳಿಸಿದೆ.
ಮುಂಬಯಿ: ಡಿಸೆಂಬರ್ 2022 ತ್ರೈಮಾಸಿಕದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆ ಇಳಿಕೆ ಕಂಡಿದೆ ಎಂದು ದೇಶದ ಬೃಹತ್ ಸಾಫ್ಟ್‌ವೇರ್ ರಫ್ತುದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ತಿಳಿಸಿದೆ. ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಲು ಮುಂದಾಗಿದೆ. 2024ರ ಆರ್ಥಿಕ ವರ್ಷದಲ್ಲಿ ಸುಮಾರು 1.25 ಲಕ್ಷ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಕಂಪನಿ ತಿಳಿಸಿದೆ.
ಹೀಗಾಗಿ, ಈ ವರ್ಷ ಪದವಿ ಮುಗಿಸುವ ಅಭ್ಯರ್ಥಿಗಳಿಗೆ, ಕೆಲಸ ಬದಲಾಯಿಸಲು ಯೋಜಿಸುವವರಿಗೆ ಮತ್ತು ಟಿಸಿಎಸ್‌ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ 2024ರ ಆರ್ಥಿಕ ವರ್ಷದಲ್ಲಿ ಟಿಸಿಎಸ್‌ನಲ್ಲಿ ಉದ್ಯೋಗಾವಕಾಶ ದೊರಕುವ ಸಾಧ್ಯತೆ ಹೆಚ್ಚಾಗಿದೆ.
2022ರ ಅಕ್ಟೋಬರ್ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 6.13 ಲಕ್ಷಕ್ಕೆ ತಲುಪಿದೆ. ಅಂದರೆ, ಇದಕ್ಕೂ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ 2,197 ಉದ್ಯೋಗಿಗಳು ಕಡಿಮೆಯಾಗಿದ್ದಾರೆ. ಆದರೆ, ಈ ರೀತಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಸ್ಪಷ್ಟ ಕಾರಣವನ್ನೂ ಕಂಪನಿ ನೀಡಿದೆ. ಕಳೆದ 18 ತಿಂಗಳಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೇಮಕ ಕೈಗೊಂಡಿರುವ ಕಾರಣ ಈ ಇಳಿಕೆ ಅಂಕಿಅಂಶ ದಾಖಲಾಗಿದೆ ಎಂದು ಕಂಪನಿ ತಿಳಿಸಿದೆ.
ನೀವು ಒಟ್ಟಾರೆ ನೇಮಕಾತಿ ಟ್ರೆಂಡ್ ಗಮನಿಸುವುದಾದರೆ, ನಾವು ಒಂದೇ ರೀತಿಯಲ್ಲಿ ನೇಮಕ ಕೈಗೊಳ್ಳುತ್ತೇವೆ. ಮುಂದಿನ ವರ್ಷವೂ ನಾವು 1.25 ಲಕ್ಷದಿಂದ 1.50 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಲಿದ್ದೇವೆ ಎಂದು ಟಿಸಿಎಸ್‌ನ ಚೀಫ್ ಎಕ್ಸಿಕ್ಯುಟಿವ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಶ್ ಗೋಪಿನಾಥ್ ಹೇಳಿದ್ದಾರೆ.
"ನಮ್ಮ ಉದ್ದೇಶ ಸಕಾರಾತ್ಮಕವಾಗಿವೆ. ನಮಗೆ ಅಗತ್ಯವಿರುವಷ್ಟು ಉದ್ಯೋಗಿಗಳು ಇದ್ದಾರೆ. ಅವಶ್ಯಕತೆ ಬಿದ್ದಾಗ ಹೊಸ ನೇಮಕಾತಿ ಕೈಗೊಳ್ಳುತ್ತೇವೆ. ಕಳೆದ ವರ್ಷ ನೇಮಕಕ್ಕೆ ಹೆಚ್ಚಿನ ಹೂಡಿಕೆ ಮಾಡಿದ್ದೇವೆ. ಅದಕ್ಕೆ ಹೋಲಿಸಿದರೆ ಈ ಬಾರಿ ಒಂದೆರಡು ಸಾವಿರದಷ್ಟು ನೇಮಕ ಕಡಿಮೆಯಾಗಿರಬಹುದು. ಇದರಿಂದ ಈ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆ ಕಾಣಿಸುತ್ತದೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಂಪನಿಯು 2022ರಲ್ಲಿ 1.03 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು. 2023ರ ಆರ್ಥಿಕ ವರ್ಷದಲ್ಲಿಯೂ ಇಲ್ಲಿಯವರೆಗೆ ಈಗಾಗಲೇ 42 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿದೆ. ಮುಂದಿನ ದಿನಗಳಲ್ಲಿಯೂ ಕಂಪನಿಯು ನೇಮಕ ಮುಂದುವರೆಸಲಿದೆ.
ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿರುವವರು ಸೇರಿದಂತೆ ಟಿಸಿಎಸ್‌ನಲ್ಲಿ ಉದ್ಯೋಗ ಪಡೆಯಲು ಬಯಸುವವರು ಟಿಸಿಎಸ್ ವೆಬ್‌ಸೈಟ್‌ನ ಕರಿಯರ್ ವಿಭಾಗ ಮತ್ತು ಟಿಸಿಎಸ್‌ನ ಫ್ರೆಷರ್ಸ್ ನೇಮಕಾತಿ ವೆಬ್‌ಸೈಟ್, ಟಿಸಿಎಸ್ ಜಾಬ್ ಡ್ರೈವ್ ಸೈಟ್‌ಗಳನ್ನು ನೋಡುತ್ತಿರಬಹುದು.
ಟಿಸಿಎಸ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆಗೆ ಕಳೆದ ವರ್ಷದಲ್ಲಿದ್ದ ಉದ್ಯೋಗ ಬದಲಾವಣೆ ಟ್ರೆಂಡ್ ಕೂಡ ಕಾರಣ ಎನ್ನಲಾಗುತ್ತಿದೆ. ಕಳೆದ ವರ್ಷ ಸಾಕಷ್ಟು ಉದ್ಯೋಗಿಗಳು ಉದ್ಯೋಗ ಬದಲಾವಣೆಗೆ ಗಮನ ಹರಿಸಿದ್ದರು. ಕೊರೊನಾ ಕಳೆದ ಬಳಿಕ ಈ ರೀತಿಯ ಮಹಾ ರಾಜೀನಾಮೆ ಪರ್ವವು ಬಹುತೇಕ ಎಲ್ಲಾ ಕಂಪನಿಗಳಲ್ಲಿತ್ತು.