WhatsApp video Calls: ವಾಟ್ಸಪ್ ವಿಡಿಯೋ ಕಾಲ್‌ನಲ್ಲಿ ಝೂಮ್, ಗೂಗಲ್ ಮೀಟ್‌ನಲ್ಲಿರುವಂತಹ ಫೀಚರ್, ಸ್ಕ್ರೀನ್ ಷೇರಿಂಗ್ ಮಾಡಬಹುದಂತೆ!
WhatsApp Update: ವಾಟ್ಸಪ್‌ನ ಫೀಚರ್ ಟ್ರ್ಯಾಕರ್ ಆಗಿರುವ WABetaInfo ಪ್ರಕಾರ ಆಂಡ್ರಾಯ್ಡ್ 2.23.11.19 ಬೀಟಾ ಆವೃತ್ತಿಯಲ್ಲಿ ವಾಟ್ಸಪ್‌ನ ನೂತನ ಸ್ಕ್ರೀನ್ ಷೇರಿಂಗ್ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆ.
ಈಗ ವಾಟ್ಸಪ್ ಕೇವಲ ಸಂದೇಶ ವಾಹಕ ಅಪ್ಲಿಕೇಷನ್ ಆಗಿ ಉಳಿದಿಲ್ಲ. ಕಳೆದ ಕೆಲವು ವರ್ಷಗಳಿಂದ ಹಲವು ಫೀಚರ್‌ಗಳು, ಅಪ್‌ಡೇಟ್‌ಗಳಿಂದ ವಾಟ್ಸಪ್ ಬಹುಉಪಯೋಗಿಯಾಗಿದೆ. ಇದರಲ್ಲಿ ವಿಡಿಯೋ ಕಾಲ್ ಮಾಡಬಹುದು. ಪಿಡಿಎಫ್ ಫೈಲ್ ಕಳುಹಿಸಬಹುದು. ಫೋಟೊ ಕಳುಹಿಸಬಹುದು. ವಿಡಿಯೋ ತುಣುಕುಗಳನ್ನು ಕಳುಹಿಸಬಹುದು. ಸ್ಟೇಟಸ್ ಅಪ್‌ಡೇಟ್ ಮಾಡಬಹುದು. ಧ್ವನಿ ಕರೆ ಮಾಡಬಹುದು. ಧ್ವನಿ ಸಂದೇಶ ಕಳುಹಿಸಬಹುದು. ಹೀಗೆ, ಹತ್ತು ಹಲವು ಫೀಚರ್‌ಗಳ ಸಮಾಗಮವಾಗಿರುವ ವಾಟ್ಸಪ್ ಇದೀಗ ಗೂಗಲ್ ಮೀಟ್‌ನಲ್ಲಿರುವಂತಹ ಫೀಚರ್ ಅನ್ನೂ ತನ್ನ ಒಡಲಲ್ಲಿ ಅಳವಡಿಸಿಕೊಳ್ಳುತ್ತಿದೆ.
ಈಗಾಗಲೇ ವಾಟ್ಸಪ್ ವಿಡಿಯೋ ಕಾಲ್ ಆಯ್ಕೆಯಲ್ಲಿ ಹಲವು ಜನರು ಒಟ್ಟಾಗಿ ಗ್ರೂಪ್ ಕಾಲ್ ಮಾಡಬಹುದಾಗಿದೆ. ಇದೀಗ ಮೆಟಾ ಕಂಪನಿಯು ವಾಟ್ಸಪ್‌ಗೆ ಝೂಮ್, ಗೂಗಲ್ ಮೀಟ್, ಮೈಕ್ರೊಸಾಫ್ಟ್ ಟೀಮ್‌ನಲ್ಲಿರುವಂತಹ ವಿಡಿಯೋ ಸ್ಕ್ರೀನ್ ಷೇರಿಂಗ್ ಆಯ್ಕೆಯನ್ನೂ ನೀಡಲಿದೆಯಂತೆ. ವಾಟ್ಸಪ್‌ನ ಫೀಚರ್ ಟ್ರ್ಯಾಕರ್ ಆಗಿರುವ WABetaInfo ಪ್ರಕಾರ ಆಂಡ್ರಾಯ್ಡ್ 2.23.11.19 ಬೀಟಾ ಆವೃತ್ತಿಯಲ್ಲಿ ವಾಟ್ಸಪ್‌ನ ನೂತನ ಸ್ಕ್ರೀನ್ ಷೇರಿಂಗ್ ಫೀಚರ್ ಅನ್ನು ಪರೀಕ್ಷಿಸಲಾಗುತ್ತಿದೆಯಂತೆ.
ಇದು ಹೇಗೆ ಕೆಲಸ ಮಾಡುತ್ತದೆ?
ವಾಟ್ಸಪ್ ಬಳಕೆದಾರರು ವಿಡಿಯೋ ಕಾಲ್ ಮಾಡುತ್ತಿರುವಾಗ ಅವವರು ತಮ್ಮ ವಿಡಿಯೋ ಕಾಲ್‌ನಲ್ಲಿರುವ ಸಂಗಡಿಗರ ಜತೆ ತಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳುವ ಆಯ್ಕೆಯನ್ನು ಪಡೆಯುತ್ತಾರೆ. ಇದಕ್ಕಾಗಿ ಒಂದು ಬಟನ್ ನೀಡಲಾಗುತ್ತದೆ. ಆಯಾತಕಾರದ ಮೊಬೈಲ್ ಪರದೆಯಲ್ಲಿ ಇದಕ್ಕಾಗಿ ಒಂದು ಐಕಾನ್ ನೀಡಲಾಗುತ್ತದೆ. ಈ ಐಕಾನ್ ಅನ್ನು ಕ್ಲಿಕ್ ಮಾಡಿದಾಗ ಒಂದು ಪಾಪಪ್ ನೋಟಿಫಿಕೇಷನ್ ಬರುತ್ತದೆ. ಆ ನೋಟಿಫಿಕೇಷನ್‌ನಲ್ಲಿ ನೀವು ವಾಟ್ಸಪ್ ಸ್ಕ್ರೀನ್ ಷೇರ್ ಮಾಡಲು ಅನುಮತಿ ನೀಡಬೇಕಾಗುತ್ತದೆ ಎಂದು WABetaInfo ತಿಳಿಸಿದೆ.
ಈ ಸ್ಕ್ರೀನ್ ಷೇರಿಂಗ್ ಆಯ್ಕೆ ಸಕ್ರಿಯವಾದ ಬಳಿಕ ನಿಮ್ಮ ಡಿಸ್‌ಪ್ಲೇಯಲ್ಲಿರುವ ಎಲ್ಲಾ ವಿಷಯಗಳು ಉಳಿದವರಿಗೆ ಕಾಣಿಸುತ್ತದೆ. ಆದರೆ, ಈ ಫೀಚರ್ ಹಳೆಯ ಆಂಡ್ರಾಯ್ಡ್ ಆವೃತ್ತಿಗಳಲ್ಲಿ ಲಭ್ಯವಿರುವುದಿಲ್ಲ. ಎಲ್ಲರೂ ಅಪ್ಡೇಡ್ ಮಾಡಿರುವ ವಾಟ್ಸಪ್ ಬಳಸುತ್ತಿರಬೇಕು. ಗ್ರೂಪ್ ಕರೆ ಆಯ್ಕೆಯಲ್ಲಿ ಈ ಸ್ಕ್ರಿನ್ ಷೇರಿಂಗ್ ಆಯ್ಕೆ ಕಾಣಿಸುವುದಿಲ್ಲ.
ಈ ಫೀಚರ್ ಅನ್ನು ಸಂಪೂರ್ಣವಾಗಿ ಮೇಂಟೆನ್ ಮಾಡುವ ಸಾಮರ್ಥ್ಯ ನಿಮಗಿರಲಿದೆ. ಯಾವುದೇ ಸಮಯದಲ್ಲಿ ಬೇಕಾದರೂ ಸ್ಕ್ರೀನ್ ಷೇರಿಂಗ್ ಆಯ್ಕೆಯನ್ನು ಆಫ್ ಮಾಡಬಹುದು. ಸದ್ಯ ಈ ಫೀಚರ್ ಅನ್ನು ಆಯ್ದ ಬೀಟಾ ಟೆಸ್ಟರ್‌ಗಳು ಪರೀಕ್ಷಿಸುತ್ತಿದ್ದಾರೆ. ಎಲ್ಲರ ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಆಯ್ಕೆ ದೊರಕಲು ಇನ್ನೂ ಹಲವು ವಾರಗಳು ಬೇಕಾಗಬಹುದು ಎಂದು ವರದಿಗಳು ತಿಳಿಸಿವೆ.