ನೋಡೋಕೆ ಬ್ಯೂಟಿಫುಲ್, ತಿಂಗಳ ಸಂಪಾದನೆ 3 ಲಕ್ಷ ರೂಪಾಯಿ; ಎಐ ಮಾಡೆಲ್ ಐತನಾಗೆ ಜಾಲತಾಣದಲ್ಲಿ ಲಕ್ಷಗಟ್ಟಲೆ ಫ್ಯಾನ್ಸ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನೋಡೋಕೆ ಬ್ಯೂಟಿಫುಲ್, ತಿಂಗಳ ಸಂಪಾದನೆ 3 ಲಕ್ಷ ರೂಪಾಯಿ; ಎಐ ಮಾಡೆಲ್ ಐತನಾಗೆ ಜಾಲತಾಣದಲ್ಲಿ ಲಕ್ಷಗಟ್ಟಲೆ ಫ್ಯಾನ್ಸ್

ನೋಡೋಕೆ ಬ್ಯೂಟಿಫುಲ್, ತಿಂಗಳ ಸಂಪಾದನೆ 3 ಲಕ್ಷ ರೂಪಾಯಿ; ಎಐ ಮಾಡೆಲ್ ಐತನಾಗೆ ಜಾಲತಾಣದಲ್ಲಿ ಲಕ್ಷಗಟ್ಟಲೆ ಫ್ಯಾನ್ಸ್

Aitana AI: ಈ ಫೋಟೊದಲ್ಲಿ ಕಾಣಿಸುತ್ತಿರುವುದು ಒರ್ವ ಮಾಡೆಲ್. ಆದರೆ ಮಾಡೆಲ್ ಹುಡುಗಿ ಅಲ್ಲ. ಇದು ಎಐ ಮಾಡೆಲ್. ವಿಷ್ಯ ಏನಾಪ್ಪ ಅಂದ್ರೆ ಈ ಮಾಡೆಲ್ ತಿಂಗಳಿಗೆ 3 ಲಕ್ಷ ಸಂಪಾದನೆ ಮಾಡುತ್ತೆ. ಅದು ಹೇಗೆ ಅನ್ನೋದನ್ನ ತಿಳಿಯೋಣ.

ತಿಂಗಳಿಗೆ 3 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರುವ ಎಐ ಐತನಾ
ತಿಂಗಳಿಗೆ 3 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರುವ ಎಐ ಐತನಾ

ದೆಹಲಿ: ಯಾರಪ್ಪ ಈ ಹುಡುಗಿ.. ನೋಡೋಕೆ ತುಂಬಾ ಸುಂದರವಾಗಿದ್ದಾಳೆ, ಸ್ಟೈಲಿಶ್ ಆಗಿ ಮಿರ ಮಿರ ಅಂತ ಮಿಂಚುತ್ತಾ ಇರೋದು. ಈಕೆ ಮಾಡೆಲಿಂಗ್ ಮಾಡ್ತಾಳಾ ಎಂದು ಕೆಲವರು ತಮ್ಮೊಳಗೆ ಹಲವು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿರಬಹುದು. ಇಲ್ಲೊಂದು ಬಿಗ್ ಟ್ವಿಸ್ಟ್ ಇದೆ. ಈಕೆ ಹುಡುಗಿ ಅಲ್ಲ. ಒಂದು ಎಐ ಮಾಡೆಲ್.

ಸ್ಪೇನ್ ದೇಶದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮಾಡೆಲ್. ಇದು ನೋಡೋಕೆ ಥೇಟ್ ಹುಡುಗಿಯಂತೇ ಕಾಣುತ್ತೆ. ಇದರ ಹೆಸರು ಐತನಾ ಲೋಪೆಜ್. ಸ್ಪೇನ್ ದೇಶದ ಕ್ಲೂಲೆಸ್ ಎಂಬ ಕಂಪನಿಯ ರುಬೆನ್ ಕ್ರೂಜ್ ಎಂಬುವರು ಇದನ್ನು ವಿನ್ಯಾಸ ಮಾಡಿದ್ದು, ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ವರ್ಚುವಲ್ ಮಹಿಳೆ ಎಂದು ಸಂಸ್ಥೆ ಮಾಹಿತಿಯನ್ನ ಹಂಚಿಕೊಂಡಿದೆ.

ಇದರಲ್ಲೇನು ವಿಶೇಷ ಅಂದರೆ ಈ ಎಐ ತಿಂಗಳಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ವರೆಗೆ ಸಂಪಾದನೆ ಮಾಡುತ್ತಿದೆ. ಯೂರೋನ್ಯೂಸ್‌ಗೆ ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ರುಬೆನ್ ಕ್ರೂಜ್, ಐತನಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಂಪನಿಯ ಸಮಸ್ಯೆಗಳಿಗೆ ಸಿಕ್ಕ ಪರಿಹಾರವೇ ಎಐ ಐತನಾ

ನಮ್ಮ ಸಂಸ್ಥೆ ಹೆಚ್ಚು ಗ್ರಾಹಕರನ್ನ ಹೊಂದಿರದ ಕಾರಣ ಕೆಲಸ ಸರಿಯಾಗಿ ನಡೆಯುತ್ತಿರಲಿಲ್ಲ. ಕೆಲಸವನ್ನು ಹೇಗೆ ಹೆಚ್ಚಿಸಬೇಕು ಎಂದು ವಿಶ್ಲೇಷಣೆಯನ್ನು ಪ್ರಾರಂಭಿಸಿದಾಗ ನಮ್ಮ ನಿಯಂತ್ರಣಕ್ಕೆ ಮೀರಿದ ಸಮಸ್ಯೆಗಳು ನಮ್ಮಲ್ಲಿರುವುದು ಗೊತ್ತಾಯಿತು. ಈ ಸಮಸ್ಯೆಗಳಿಂದ ಹಲವು ಪ್ರಾಜೆಕ್ಟ್‌ಗಳು ಕೂಡ ರದ್ದು ಮಾಡಿಕೊಂಡಿರುವುದನ್ನ ಅರಿತುಕೊಂಡೆವು. ಆಗ ನಮ್ಮ ಗೊತ್ತಾಗಿದ್ದು, ಇದು ಡಿಸೈನ್ ಸಮಸ್ಯೆಯದ್ದಲ್ಲ ಮಾಡೆಲ್‌ನಲ್ಲಿ ಇದ್ದ ದೋಷಗಳು ಎಂದು ರುಬೆನ್ ತಿಳಿಸಿದ್ದಾರೆ.

ನಮಗೆ ಸಾಕಷ್ಟು ಹಣ ತಂದುಕೊಡುವ ಹಾಗೆ ಇರಬೇಕೆಂದು ಭಾವಿಸಿ ಐತನಾವನ್ನು ಸೃಷ್ಟಿ ಮಾಡಿದ್ದೇವೆ ಎಂದು ಯೂರೋನ್ಯೂಸ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ರುಬೆನ್ ಕ್ರೂಜ್ ಸ್ಪಷ್ಟಪಡಿಸಿದ್ದಾರೆ.

ಇದೇ ವಿಚಾರದ ಬಗ್ಗೆ ದಿ ಕ್ಲೂಲೆಸ್ ಸಂಸ್ಥೆಯ ಸಹ ವ್ಯವಸ್ಥಾಪಕರಾದ ಡಯಾನಾ ನ್ಯೂನೆಜ್ ಮಾತನಾಡಿ, ನಮ್ಮ ಉತ್ಪನ್ನಗಳ ಪ್ರಮೋಷನ್‌ಗಾಗಿ ಮಾಡೆಲ್‌ಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗಿತ್ತು. ಆಗ ನಮಗೆ ಒಂದು ಐಡಿಯಾ ಬಂತು. ನಾವೇ ಒಂದು ಮಾಡೆಲ್ ಅನ್ನು ಸೃಷ್ಟಿಸಿಕೊಂಡರೆ ಹೇಗೆ ಅಂತ ಅನಿಸಿತು. ಆ ಮಾಡೆಲ್ ಸುಂದರವಾಗಿರಬೇಕು ಎಂದು ಯೋಚಿಸಿದೆವು ಅಷ್ಟೇ. ಆಗ ಜನ್ಮತಾಳಿದ್ದೇ ಈ ಐತನಾ. ಎಐ ಮಾಡೆಲ್‌ನಿಂದ ಸಾಕಷ್ಟು ಹಣ ಉಳಿತಾಯವಾಗಿದ್ದು, ಇದರಿಂದ ಒಳ್ಳೆಯ ಆದಾಯವೂ ಬರುತ್ತಿದೆ ಎಂದು ಡಯಾನಾ ವಿವರಿಸಿದ್ದಾರೆ.

ಜಾಹೀರಾತುಗಳಿಂದ ಲಕ್ಷ ಲಕ್ಷ ಸಂಪಾದಿಸುತ್ತಿರುವ ಐತನಾ

ಐತನಾಗೆ 25 ವರ್ಷ ವಯಸ್ಸಾಗಿದ್ದು, ಒಂದು ಜಾಹೀರಾತಿಗೆ 91 ಸಾವಿರ ರೂಪಾಯಿ ಪಡೆಯುತ್ತೆ. ಸರಾಸರಿ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ವರೆಗೆ ಸಂಪಾದನೆ ಮಾಡುತ್ತಿದೆ. ಡ್ರೆಸ್, ಫಿಟ್ನೆಸ್‌ಗೆ ಸಂಬಂಧಿಸಿದ ವಿವಿಧ ಜಾಹೀರಾತುಗಳಲ್ಲಿ ಐತನಾ ಕಾಣಿಸಿಕೊಳ್ಳುತ್ತದೆ.

ಯೂರೋನ್ಯೂಸ್ ವರದಿ ಪ್ರಕಾರ, ಈ ಎಐ ಮಾಡೆಲ್ ಐತನಾ ಹಲವಾರರು ಕಂಪನಿಗಳ ಉತ್ಪನ್ನಗಳನ್ನು ಪ್ರಮೋಟ್ ಮಾಡುವ ಕೆಲಸ ಮಾಡುತ್ತಿದೆ. ಜೊತೆಗೆ ಐತನಾಗೆ ಒಂದು ಇನ್ಸ್ಟಾಗ್ರಾಮ್ ಪೇಜ್ ಕೂಡ ಇಧೆ. ಇನ್‌ಸ್ಟಾದಲ್ಲಿ ತುಂಬಾ ಫೇಮಸ್ ಆಗಿದೆ. ತಾನು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತೆ, ಯಾವ ರೀತಿಯ ಬಟ್ಟೆ ಧರಿಸುತ್ತೆ ಆ ಎಲ್ಲಾ ಫೋಟೊಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಐತನಾ ಈಗಾಗಲೇ 1.21 ಲಕ್ಷ ಮಂದಿ ಫಾಲೋವರ್ಸ್ ಹೊಂದಿದೆ. ದಿನೇ ದಿನ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ತುಂಬಾ ಜನರು ಐತನಾಗೆ ಪರ್ಸನಲ್ ಆಗಿ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ.

ನ್ಯೂಸ್‌ಗೆ ಎಐ ಬಂದ ನಂತರ ಆ್ಯಂಕರ್‌ಗಳಿಗೆ ಕೆಲಸ ಕಡಿಮೆಯಾಗುತ್ತೆ ಎಂಬ ಮಾತುಗಳು ಶುರುವಾಗಿತ್ತು. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಐತನಾ ಲೋಪೆಜ್ ಭಾರಿ ಹವಾ ಸೃಷ್ಟಿಸಿದೆ. ಮುಂದೆ ಯಾವೆಲ್ಲಾ ಕ್ಷೇತ್ರಗಳಿಗೆ ಎಐ ಎಂಟ್ರಿ ಕೊಡುತ್ತೆ, ಅದು ಮಾನವನ ಜೀವನದ ಮೇಲೆ ಹೇಗೆಲ್ಲಾ ಪರಿಣಾಮಗಳನ್ನು ಬೀರುತ್ತೆ ಎಂಬುದನ್ನು ಕಾದು ನೋಡಬೇಕು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.