ಬ್ಯಾನ್ ಆಯ್ತು ಚಾಟ್‌ಜಿಪಿಟಿ, ಡೀಪ್‌ಸೀಕ್‌; ವಿತ್ತ ಸಚಿವಾಲಯ ಇಂತಹ ನಿರ್ಧಾರ ಕೈಗೊಂಡಿರುವುದೇಕೆ- ಇಲ್ಲಿದೆ ವಿವರಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬ್ಯಾನ್ ಆಯ್ತು ಚಾಟ್‌ಜಿಪಿಟಿ, ಡೀಪ್‌ಸೀಕ್‌; ವಿತ್ತ ಸಚಿವಾಲಯ ಇಂತಹ ನಿರ್ಧಾರ ಕೈಗೊಂಡಿರುವುದೇಕೆ- ಇಲ್ಲಿದೆ ವಿವರಣೆ

ಬ್ಯಾನ್ ಆಯ್ತು ಚಾಟ್‌ಜಿಪಿಟಿ, ಡೀಪ್‌ಸೀಕ್‌; ವಿತ್ತ ಸಚಿವಾಲಯ ಇಂತಹ ನಿರ್ಧಾರ ಕೈಗೊಂಡಿರುವುದೇಕೆ- ಇಲ್ಲಿದೆ ವಿವರಣೆ

ChatGPT, DeepSeek Ban: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರ ಪ್ರವೇಶಿಸಿದ ಕೂಡಲೇ ಸಂಚಲನ ಮೂಡಿಸಿರುವ ಚೀನಾ ಮೂಲದ ಡೀಪ್‌ಸೀಕ್‌ ಬಳಕೆ ಮಾಡದಂತೆ ವಿತ್ತ ಸಚಿವಾಲಯ ಎಚ್ಚರಿಕೆ ನೀಡಿದೆ. ಇದಕ್ಕೂ ಮೊದಲು, ಡೀಪ್‌ಸೀಕ್‌ ಮಾತ್ರವಲ್ಲ ಚಾಟ್‌ಜಿಪಿಟಿ ಕೂಡ ಬಳಸದಂತೆ ವಿಶ್ವದ ಅನೇಕ ದೇಶಗಳು ಎಚ್ಚರಿಸಿರುವುದು ಯಾಕೆ, ಇಲ್ಲಿದೆ ಕಾರಣ ಮತ್ತು ವಿವರಣೆ.

ಸರ್ಕಾರಿ ಕಂಪ್ಯೂಟರ್‌, ಡಿವೈಸ್‌ಗಳಲ್ಲಿ ಬ್ಯಾನ್ ಆಯ್ತು ಚಾಟ್‌ಜಿಪಿಟಿ, ಡೀಪ್‌ಸೀಕ್‌. ವಿತ್ತ ಸಚಿವಾಲಯ ಇಂತಹ ನಿರ್ಧಾರ ಕೈಗೊಂಡು ತನ್ನ ಸಿಬ್ಬಂದಿಯನ್ನು ಎಚ್ಚರಿಸಿದೆ. (ಸಾಂಕೇತಿಕ ಚಿತ್ರ)
ಸರ್ಕಾರಿ ಕಂಪ್ಯೂಟರ್‌, ಡಿವೈಸ್‌ಗಳಲ್ಲಿ ಬ್ಯಾನ್ ಆಯ್ತು ಚಾಟ್‌ಜಿಪಿಟಿ, ಡೀಪ್‌ಸೀಕ್‌. ವಿತ್ತ ಸಚಿವಾಲಯ ಇಂತಹ ನಿರ್ಧಾರ ಕೈಗೊಂಡು ತನ್ನ ಸಿಬ್ಬಂದಿಯನ್ನು ಎಚ್ಚರಿಸಿದೆ. (ಸಾಂಕೇತಿಕ ಚಿತ್ರ) (LM)

ChatGPT, DeepSeek Ban: ಚೀನಾ ಮೂಲದ ಆರ್ಟಿಫಿ‍ಷಿಯಲ್ ಟೂಲ್ ಡೀಪ್‌ಸೀಕ್‌ ವಿಶ್ವದೆಲ್ಲೆಡೆ ಜನಪ್ರಿಯವಾಗುತ್ತಿದೆ. ಕಳೆದ ತಿಂಗಳು ಇದು ಶುರುವಾದ ಬಳಿಕ ಅನೇಕರು ಇದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಲಾರಂಭಿಸಿದ್ದಾರೆ. ಇದು ಜನಪ್ರಿಯತೆ ಹಾಗೂ ಬಳಕೆ ದೃಷ್ಟಿಯಿಂದ ಚಾಟ್‌ಜಿಪಿಟಿಯನ್ನು ಹಿಂದಿಕ್ಕುವ ಸಾಧ್ಯತೆ ಗೋಚರಿಸಿದೆ. ಆದಾಗ್ಯೂ, ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳು ಚೀನಾದ ಈ ಕಂಪನಿ ಬಗ್ಗೆ ವಿಶ್ವಾಸ ಹೊಂದಿಲ್ಲ. ಹೀಗಾಗಿ, ಡೀಪ್‌ಸೀಕ್ ಮತ್ತು ಚಾಟ್‌ಜಿಪಿಟಿ ಬಳಕೆ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಭಾರತ ಸರ್ಕಾರ ಕೂಡ ನಿನ್ನೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಚಾಟ್‌ಜಿಪಿಟಿ ಮತ್ತು ಡೀಪ್‌ಸೀಕ್ (ChatGPT, DeepSeek) ಬಳಸಬೇಡಿ ಎಂದು ಕೇಂದ್ರ ಹಣಕಾಸು ಸಚಿವಾಲಯವು ತನ್ನ ಸಿಬ್ಬಂದಿಗೆ ತಾಕೀತು ಮಾಡಿದೆ.

ಕಚೇರಿ ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಎಐ ಅಪ್ಲಿಕೇಶನ್‌, ಟೂಲ್‌ ಬಳಸಬೇಡಿ

ಕಚೇರಿ ಕಂಪ್ಯೂಟರ್‌, ಮೊಬೈಲ್‌ಗಳಲ್ಲಿ ಎಐ ಅಪ್ಲಿಕೇಶನ್ ಮತ್ತು ಎಐ ಟೂಲ್‌ಗಳನ್ನು ಡೌನ್‌ಲೋಡ್ ಮಾಡುವುದಾಗಲೀ, ಬಳಸುವುದಾಗಲೀ ಮಾಡಬೇಡಿ. ಇವು ಸರ್ಕಾರಿ ದಾಖಲೆಗಳ ಗೌಪ್ಯತೆ ಬಹಿರಂಗಪಡಿಸುವ ಅಪಾಯವನ್ನು ಉಂಟುಮಾಡುತ್ತದೆ ಎಂದು ಕೇಂದ್ರ ವಿತ್ತ ಸಚಿವಾಲಯವು ತನ್ನ ಸಿಬ್ಬಂದಿಗಳನ್ನು ಎಚ್ಚರಿಸಿರುವುದಾಗಿ ರಾಯಿಟರ್ಸ್‌ ಸುದ್ದಿ ಸಂಸ್ಥೆ, ವಿತ್ತ ಸಚಿವಾಲಯದ ಆಂತರಿಕ ಸಲಹೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಆದಾಗ್ಯೂ, ಕೇಂದ್ರ ಸರ್ಕಾರದ ಇತರ ಸಚಿವಾಲಯಗಳು ಸಹ ಇದೇ ರೀತಿಯ ಸೂಚನೆಗಳನ್ನು ನೀಡಿವೆಯೇ ಎಂಬುದು ಸ್ಪಷ್ಟವಾಗಿಲ್ಲ.

ಕೇಂದ್ರ ವಿತ್ತ ಸಚಿವಾಲಯದ ಆಂತರಿಕ ಮಾಹಿತಿ ಪತ್ರದಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ. "ಕಚೇರಿ ಉಪಕರಣಗಳಲ್ಲಿ ಎಐ ಟೂಲ್ಸ್‌/ಆಪ್ಸ್‌ ಬಳಕೆ ತಪ್ಪಿಸಿ (Avoiding the Use of AI Tools/Apps in Office Devices)” ಎಂಬ ಶೀರ್ಷಿಕೆಯೊಂದಿಗೆ ಪತ್ರ ಶುರುವಾಗಿದೆ. ಜನವರಿ 29 ರಂದು ಇದು ಕಚೇರಿ ಸಿಬ್ಬಂದಿಗೆ ತಲುಪಿದೆ. ಮಂಗಳವಾರ (ಫೆ4) ಈ ಪತ್ರ ಸೋಷಿಯಲ್ ಮೀಡಿಯಾಗಳಲ್ಲಿ ಬಹಿರಂಗವಾಗಿದೆ ಎಂದು ರಾಯಿಟರ್ಸ್‌ ವರದಿ ಹೇಳಿದೆ.

ಕೇಂದ್ರ ಬಜೆಟ್ 2025ರ ಮಂಡನೆಗೆ ಸ್ವಲ್ಪ ಮೊದಲು ಈ ಸಲಹೆ ಎಲ್ಲರಿಗೂ ತಲುಪಿದೆ. “ಕಚೇರಿಗಳ ಕಂಪ್ಯೂಟರ್ ಮತ್ತು ಇತರ ಸಾಧನಗಳಲ್ಲಿನ ಎಐ ಪರಿಕರಗಳು ಮತ್ತು ಎಐ ಅಪ್ಲಿಕೇಶನ್‌ಗಳು (ಚಾಟ್‌ಜಿಪಿಟಿ, ಡೀಪ್‌ಸೀಕ್‌ ಇತ್ಯಾದಿ) ಮತ್ತು ದಾಖಲೆಗಳ ಗೌಪ್ಯತೆಯ ಬಗ್ಗೆ ಅಪಾಯವನ್ನುಂಟುಮಾಡುತ್ತವೆ. ಆದ್ದರಿಂದ ಅವುಗಳನ್ನು ಬಳಸದೇ ಇರುವುದು ಉತ್ತಮ ಎಂಬುದನ್ನು ಎಲ್ಲ ಸಿಬ್ಬಂದಿಯ ಗಮನಕ್ಕೆ ತರಲಾಗುತ್ತಿದೆ” ಎಂಬ ಒಕ್ಕಣೆ ಪತ್ರದಲ್ಲಿದೆ ಎಂದು ವರದಿ ವಿವರಿಸಿದೆ.

ಜಾಗತಿಕ ಮಟ್ಟದಲ್ಲೂ ಡೀಪ್‌ಸೀಕ್‌ ಬಳಕಗೆ ನಿರ್ಬಂಧ

ಇದಕ್ಕೂ ಮೊದಲು, ವಿಶ್ವದ ಅನೇಕ ದೇಶಗಳು ಡೀಪ್‌ಸೀಕ್‌ ಬಳಕೆಯ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿವೆ. ದತ್ತಾಂಶ ಸುರಕ್ಷತೆಯ ಅಪಾಯಗಳನ್ನು ಉಲ್ಲೇಖಿಸಿ ಮತ್ತು ಅದರ ಬಗ್ಗೆ ಎಚ್ಚರಿಕೆ ನೀಡಿದೆ. ಕಳೆದ ವಾರ, ತೈವಾನ್ ತನ್ನ ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ, ಚೀನಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಟೂಲ್ ಡೀಪ್‌ಸೀಕ್‌ ಅಪ್ಲಿಕೇಶನ್‌ ಬಳಸದಂತೆ ಆದೇಶಿಸಿತು. ಅದೇ ಸಮಯದಲ್ಲಿ, ಯುಎಸ್ ಕಾಂಗ್ರೆಸ್ ಕೂಡ ಸರ್ಕಾರಿ ಕಚೇರಿಗಳಲ್ಲಿ ಚೀನಾ ಮೂಲದ ಎಐ ಅಪ್ಲಿಕೇಶನ್ ಡೀಪ್‌ಸೀಕ್ ಡೌನ್‌ಲೋಡ್ ಮಾಡಿ ಬಳಸದಂತೆ ಎಚ್ಚರಿಸಿದೆ. ಬ್ರಿಟನ್ ಕೂಡ ತನ್ನ ನಾಗರಿಕರಿಗೆ ಇಂತಹ ಎಚ್ಚರಿಕೆ ನೀಡಿರುವುದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹೀಗಾಗಿ, ಕೇಂದ್ರ ಹಣಕಾಸು ಸಚಿವಾಲಯವು ತನ್ನ ಸಿಬ್ಬಂದಿಗೆ ನೀಡಿರುವ ಎಚ್ಚರಿಕೆ ಸಂದೇಶ ಈಗ ಸಾಮಾಜಿಕ ತಾಣಗಳಲ್ಲೂ ಚಾಟ್‌ಜಿಪಿಟಿ, ಡೀಪ್‌ಸೀಕ್‌ ಬ್ಯಾನ್‌ ವಿಚಾರ ವ್ಯಾಪಕ ಚರ್ಚೆಗೆ ಒಳಗಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.