ಅಲ್ಟ್ರಾ-ಸ್ಲಿಮ್ ವಿನ್ಯಾಸ, ಹಲವು ವೈಶಿಷ್ಟ್ಯ; ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಬಿಡುಗಡೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಲ್ಟ್ರಾ-ಸ್ಲಿಮ್ ವಿನ್ಯಾಸ, ಹಲವು ವೈಶಿಷ್ಟ್ಯ; ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಬಿಡುಗಡೆ

ಅಲ್ಟ್ರಾ-ಸ್ಲಿಮ್ ವಿನ್ಯಾಸ, ಹಲವು ವೈಶಿಷ್ಟ್ಯ; ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಬಿಡುಗಡೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಭಾರತದಲ್ಲಿ ಬಿಡುಗಡೆಯಾಗಿದೆ. ಕೇವಲ 163 ಗ್ರಾಂ ತೂಕವಿರುವ ಈ ಫೋನ್‌ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಕ್ಯಾಮೆರಾ ಕೂಡಾ ಉತ್ತಮವಾಗಿದೆ. ಸ್ಮಾರ್ಟ್‌ಫೋನ್‌ ಕುರಿತ ವಿವರ ಇಲ್ಲಿದೆ.

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಬಿಡುಗಡೆ
ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್25 ಎಡ್ಜ್ ಬಿಡುಗಡೆ (Samsung)

ಸ್ಯಾಮ್‌ಸಂಗ್ ಕಂಪನಿಯು ತನ್ನ ಹೊಸ ಅಲ್ಟ್ರಾ-ಸ್ಲಿಮ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್ 25 ಎಡ್ಜ್ (Samsung Galaxy S25 Edge) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ದಕ್ಷಿಣ ಕೊರಿಯಾದ ಪ್ರಸಿದ್ಧ ಕಂಪನಿಯು ಈ ಫೋನ್ ಬಿಡುಗಡೆಯ ಮೂಲಕ ತನ್ನ ಪ್ರಮುಖ ಗ್ಯಾಲಕ್ಸಿ ಎಸ್ ಸೀರೀಸ್‌ಗೆ ಸೇರಿಕೊಂಡಿರುವ ಹೊಸ ವರ್ಗದ ಸ್ಲಿಮ್ ಸ್ಮಾರ್ಟ್‌ಫೋನ್‌ಗಳನ್ನು ತಂದಿದೆ. ಹಲವು ಕಾರಣಗಳಿಂದ ವಿಶೇಷವಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್, ಕೇವಲ 5.8 ಎಂಎಂ ದಪ್ಪ ಮತ್ತು ಕೇವಲ 163 ಗ್ರಾಂ ತೂಕವಿದೆ.

ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಮತ್ತು ಎಸ್ 25 ಎಡ್ಜ್ ನಡುವೆ ಹೋಲಿಕೆ ಮಾಡುವುದಾದರೆ, ಅಲ್ಟ್ರಾ 8.2 ಎಂಎಂ ದಪ್ಪ ಮತ್ತು 218 ಗ್ರಾಂ ತೂಕವಿದೆ. ಇದು ಈ ಎರಡು ಫೋನ್‌ಗಳ ನಡುವಿನ ಗಮನಾರ್ಹ ವ್ಯತ್ಯಾಸ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್ ಫೋನ್‌ನ ಇನ್ನಷ್ಟು ವೈಶಿಷ್ಟ್ಯಗಳನ್ನು ನೋಡೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್ ವೈಶಿಷ್ಟ್ಯಗಳು

ಗ್ಯಾಲಕ್ಸಿ ಎಸ್ 25 ಎಡ್ಜ್ ಮಾದರಿಯನ್ನು ಇದರ ತೆಳು ಮತ್ತು ಬಾಳಿಕೆ ಬರುವ ರಚನೆಗಾಗಿ ಸ್ಯಾಮ್‌ಸಂಗ್ ಕಂಪನಿಯು "ಎಂಜಿನಿಯರಿಂಗ್ ಅಚ್ಚರಿ" ಎಂದೇ ಕರೆಯುತ್ತದೆ. 5.8 ಎಂಎಂ ತೆಳುವಾಗಿರುವ ಈ ಸ್ಮಾರ್ಟ್‌ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಸೆರಾಮಿಕ್ 2ನೊಂದಿಗೆ ಇಂಪ್ಯಾಕ್ಟ್ ರೆಸಿಸ್ಟೆನ್ಸ್ ಮತ್ತು ಸ್ಪಷ್ಟ ದೃಶ್ಯಗಳಿಗಾಗಿ ಮುಂಭಾಗದಲ್ಲಿ ಕೆಲವು ಉತ್ತಮ ಬಾಳಿಕೆಯ ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಫೋನ್‌ 6.7 ಇಂಚಿನ ಡೈನಾಮಿಕ್ ಅಮೋಲೆಡ್ 2 ಎಕ್ಸ್ ಕ್ಯೂಹೆಚ್ಡಿ+ ಡಿಸ್‌ಪ್ಲೇ ಹೊಂದಿದ್ದು, 120 ಹೆರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ.

ಉತ್ತಮ ಕಾರ್ಯಕ್ಷಮತೆಗಾಗಿ ಗ್ಯಾಲಕ್ಸಿ ಎಸ್ 25 ಎಡ್ಜ್ ಸ್ನ್ಯಾಪ್‌ಡ್ರಾಗನ್ 8 ಎಲೈಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಫೋನ್‌ 12GB RAM ಹೊಂದಿದೆ. ಕ್ವಾಲ್ಕಾಮ್‌ನ ಚಿಪ್‌ನೊಂದಿಗೆ, ಈ ಸ್ಮಾರ್ಟ್‌ಫೋನ್‌ ನೌ ಬ್ರೀಫ್, ನೌ ಬಾರ್, ಜೆಮಿನಿ ಲೈವ್, ಎಐ-ಚಾಲಿತ ಎಡಿಟಿಂಗ್ ಉಪಕರಣಗಳು ಮತ್ತು ಇನ್ನೂ ಹಲವು ವೈಶಿಷ್ಟ್ಯಗಳೊಂದಿಗೆ ಗ್ಯಾಲಕ್ಸಿ ಎಐ ಅನುಭವಗಳನ್ನು ನೀಡುತ್ತದೆ. ಈ ಫೋನ್ ಆಂಡ್ರಾಯ್ಡ್ 15 ಆಧಾರಿತ ಒನ್‌ಯುಐ 7ನಲ್ಲಿ ಕಾರ್ಯನಿರ್ವಹಿಸುವ ಮೂಲಕ ಎಲ್ಲಾ ಇತ್ತೀಚಿನ ಯುಐ ವೈಶಿಷ್ಟ್ಯಗಳನ್ನು ನೀಡುತ್ತದೆ.

ಮೂರು ಬಣ್ಣಗಳಲ್ಲಿ ಲಭ್ಯ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 25 ಎಡ್ಜ್ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಟೈಟಾನಿಯಂ ಸಿಲ್ವರ್, ಟೈಟಾನಿಯಂ ಜೆಟ್ಬ್ಲಾಕ್ ಮತ್ತು ಟೈಟಾನಿಯಂ ಐಸೀಬ್ಲೂ. ಇದು 12 ಜಿಬಿ + 256 ಜಿಬಿ ಮತ್ತು 12 ಜಿಬಿ + 512 ಜಿಬಿ ಎಂಬ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಲಭ್ಯವಿದೆ. ಸ್ಮಾರ್ಟ್‌ಫೋನ್‌ ಬೆಲೆ ಇನ್ನೂ ಬಹಿರಂಗಪಡಿಸಲಾಗಿಲ್ಲ.

ಕ್ಯಾಮೆರಾ ಹೀಗಿದೆ

ಫೋಟೊಗ್ರಫಿ ಇಷ್ಟಪಡುವವರಿಗಾಗಿ ಹಲವು ವೈಶಿಷ್ಟ್ಯಗಳಿವೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 25 ಎಡ್ಜ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 2 ಎಕ್ಸ್ ಆಪ್ಟಿಕಲ್ ಗುಣಮಟ್ಟದ ಜೂಮ್ ಹೊಂದಿರುವ 200 ಎಂಪಿ ಮುಖ್ಯ ಕ್ಯಾಮೆರಾ ಮತ್ತು ಆಟೋಫೋಕಸ್‌ನೊಂದಿಗೆ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಒಳಗೊಂಡಿದೆ. ಮುಂಭಾಗದಲ್ಲಿ 12 ಎಂಪಿ ಸೆಲ್ಫಿ ಕ್ಯಾಮೆರಾ ಕೂಡಾ ಇದೆ.

ಆಡಿಯೊ ಎರೇಸರ್ 2 ಮತ್ತು ಡ್ರಾಯಿಂಗ್ ಅಸಿಸ್ಟ್ ಸೇರಿದಂತೆ ಗ್ಯಾಲಕ್ಸಿ ಎಐ ಚಾಲಿತ ಎಡಿಟಿಂಗ್ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಗ್ಯಾಲಕ್ಸಿ ಎಸ್ 25 ಎಡ್ಜ್ 3900 ಎಂಎಎಚ್ ಬ್ಯಾಟರಿಯಿಂದ ಬೆಂಬಲಿತವಾಗಿದೆ. ಇದರಲ್ಲಿ 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸಾಧ್ಯ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.