Kannada News  /  Nation And-world  /  Technology News Did You Receive This Emergency Alert On Your Phone Today Here Is What It Means Explainer In Kannada Uks

Emergency Alert: ನಿಮ್ಮ ಮೊಬೈಲ್‌ಗೆ ದೊಡ್ಡ ಬೀಪ್‌ ಸೌಂಡ್ ಜತೆಗೆ ಎಮರ್ಜೆನ್ಸಿ ಅಲರ್ಟ್‌ ಮೆಸೇಜ್‌ ಬಂತಾ

ಕೆಲವು ಮೊಬೈಲ್ ಫೋನ್‌ಗಳಿಗೆ ರವಾನೆಯಾಗಿರುವ ಎಮರ್ಜೆನ್ಸಿ ಅಲರ್ಟ್ ಮೆಸೇಜ್‌ನ ಚಿತ್ರ.
ಕೆಲವು ಮೊಬೈಲ್ ಫೋನ್‌ಗಳಿಗೆ ರವಾನೆಯಾಗಿರುವ ಎಮರ್ಜೆನ್ಸಿ ಅಲರ್ಟ್ ಮೆಸೇಜ್‌ನ ಚಿತ್ರ. (HT News )

ತುರ್ತು ಸನ್ನಿವೇಶಗಳಲ್ಲಿ ಜನರ ಮೊಬೈಲ್‌ಗಳಿಗೆ ತುರ್ತು ಸಂದೇಶ ರವಾನಿಸುವ ವ್ಯವಸ್ಥೆಯ ಪರೀಕ್ಷೆ ನಡೆಯುತ್ತಿದೆ. ಇದರ ಭಾಗವಾಗಿ ಇಂದು ಹಲವರ ಮೊಬೈಲ್‌ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ರವಾನೆಯಾಗಿದೆ. ಇದರ ವಿವರ ಹೀಗಿದೆ.

ನಿಮ್ಮ ಮೊಬೈಲ್‌ ಫೋನ್‌ಗೆ (Mobile Phone) ಶುಕ್ರವಾರ (ಸೆ.15) ದೊಡ್ಡ ಬೀಪ್‌ ಸೌಂಡ್‌ ಜತೆಗೆ “ಎಮರ್ಜೆನ್ಸಿ ಅಲರ್ಟ್‌” (emergency alert) ಮೆಸೇಜ್ ಬಂತಾ..?

ಟ್ರೆಂಡಿಂಗ್​ ಸುದ್ದಿ

ಭಾರತಾದ್ಯಂತ ಹಲವು ಸ್ಮಾರ್ಟ್‌ಫೋನ್‌ ಬಳಕೆದಾರರ ಫೋನ್‌ಗೆ ಶುಕ್ರವಾರ (ಸೆ.15) ಮಧ್ಯಾಹ್ನ ದೊಡ್ಡ ಬೀಪ್ ಸೌಂಡ್ ಜತೆಗೆ “ಎಮರ್ಜೆನ್ಸಿ ಅಲರ್ಟ್‌” (emergency alert) ಮೆಸೇಜ್ ಬಂದಿದೆ. ಅದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಅಭಿವೃದ್ಧಿಪಡಿಸಿದ ಹೊಸ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರಿಶೀಲಿಸುವುದಕ್ಕೆ ದೂರಸಂಪರ್ಕ ಇಲಾಖೆಯು ಕಳುಹಿಸಿರುವ ಪರೀಕ್ಷಾ ಸಂದೇಶದ ಅಧಿಸೂಚನೆಯಾಗಿತ್ತು. ಸಂದೇಶವು ಸ್ವೀಕರಿಸಿದವರಿಗೆ ಇದು ಪರೀಕ್ಷೆ ಮಾಡುವುದಕ್ಕಾಗಿ ಕಳುಹಿಸಿದ ಸಂದೇಶ ಮತ್ತು ಯಾವುದೇ ಮುನ್ನೆಚ್ಚರಿಕೆಯ ಕ್ರಮದ ಅಗತ್ಯವಿಲ್ಲ ಎಂದು ತಿಳಿಸಿತು.

ಈ ಸಂದೇಶವು ಇಂದು ಮಧ್ಯಾಹ್ನ 12 ಗಂಟೆಯಿಂದ 12.45ರ ನಡುವೆ ರವಾನೆಯಾಗಿತ್ತು.

ಎಮರ್ಜೆನ್ಸಿ ಅಲರ್ಟ್‌ ಫ್ಲ್ಯಾಶ್ ಮೆಸೇಜ್‌ನಲ್ಲಿ ಏನಿತ್ತು

"ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ ಏಕೆಂದರೆ ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ಈ ಸಂದೇಶವನ್ನು ಟೆಸ್ಟ್ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಗೆ ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇದನ್ನು ರವಾನಿಸಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ" ಎಂದು ಫ್ಲ್ಯಾಶ್ ಸಂದೇಶದಲ್ಲಿ ಹೇಳಲಾಗಿದೆ.

ಎಚ್ಚರಿಕೆಯ ವ್ಯವಸ್ಥೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಮತ್ತು ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ಎನ್‌ಡಿಎಂಎ ಈ ಪರೀಕ್ಷೆಯನ್ನು ಬಳಸುತ್ತಿದೆ.

"ವಿವಿಧ ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ನ ತುರ್ತು ಎಚ್ಚರಿಕೆ ಪ್ರಸಾರ ಸಾಮರ್ಥ್ಯಗಳ ದಕ್ಷತೆ ಮತ್ತು ಪರಿಣಾಮಕಾರಿ ಕಾರ್ಯನಿರ್ವಹಿಸುವಿಕೆಯನ್ನು ಅಳೆಯಲು ದೇಶಾದ್ಯಂತ ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ" ಎಂದು ದೂರಸಂಪರ್ಕ ಇಲಾಖೆಯ ಜುಲೈ 20ರ ಹೇಳಿಕೆ ತಿಳಿಸಿತ್ತು.

ಸೆಲ್‌ ಬ್ರಾಡ್‌ಕಾಸ್ಟ್‌ ಅಲರ್ಟ್‌ ಸಿಸ್ಟಮ್‌ ಎಂದರೇನು

ಸೆಲ್ ಬ್ರಾಡ್‌ಕಾಸ್ಟ್ ಅನ್ನು ಸಾಮಾನ್ಯವಾಗಿ ತುರ್ತು ಎಚ್ಚರಿಕೆಗಳನ್ನು ನೀಡಲು ಬಳಸಲಾಗುತ್ತದೆ. ಉದಾಹರಣೆಗೆ ಸುನಾಮಿ, ಫ್ಲ್ಯಾಷ್ ಪ್ರವಾಹಗಳು, ಭೂಕಂಪಗಳು ಮುಂತಾದ ತೀವ್ರ ಹವಾಮಾನ ಎಚ್ಚರಿಕೆಗಳನ್ನು ನೀಡಲು ಇದು ಸಹಕಾರಿ.

ಡಿಪಾರ್ಟ್‌ಮೆಂಟ್ ಆಫ್ ಟೆಲಿಕಾಂ ಪ್ರಕಾರ, ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್‌ ಸಿಸ್ಸಮ್‌ ಒಂದು ತಂತ್ರಜ್ಞಾನವಾಗಿದ್ದು, ಸ್ವೀಕರಿಸುವವರು ನಿವಾಸಿಗಳು ಅಥವಾ ಸಂದರ್ಶಕರು ಎಂಬುದನ್ನು ಲೆಕ್ಕಿಸದೆ, ಗೊತ್ತುಪಡಿಸಿದ ಭೌಗೋಳಿಕ ಪ್ರದೇಶದ ಎಲ್ಲ ಮೊಬೈಲ್ ಸಾಧನಗಳಿಗೆ ವಿಪತ್ತು ನಿರ್ವಹಣೆಗಾಗಿ ನಿರ್ಣಾಯಕ ಮತ್ತು ಸಮಯ-ಸೂಕ್ಷ್ಮ ಸಂದೇಶಗಳನ್ನು ಕಳುಹಿಸುವುದಕ್ಕೆ ಸರ್ಕಾರಕ್ಕೆ ಅವಕಾಶ ಮಾಡಿಕೊಡುತ್ತದೆ.

ಸಂಭಾವ್ಯ ಬೆದರಿಕೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಮತ್ತು ಅವರಿಗೆ ಮಾಹಿತಿ ನೀಡಲು ಸರ್ಕಾರಿ ಏಜೆನ್ಸಿಗಳು ಮತ್ತು ತುರ್ತು ಸೇವೆಗಳು ಇದನ್ನು ಬಳಸುತ್ತವೆ. ಅಗತ್ಯ ತುರ್ತು ಮಾಹಿತಿಯು ಸಕಾಲಿಕವಾಗಿ ಗರಿಷ್ಠ ಜನರನ್ನು ತಲುಪುವುದನ್ನು ಅಲರ್ಟ್ ಸಿಸ್ಟಮ್‌ ಖಚಿತಪಡಿಸುತ್ತದೆ ಎಂದು ಸರ್ಕಾರ ಹೇಳಿದೆ.